ಆಟ

ಬದುಕು ಮತ್ತು ನಿರ್ಧಾರಗಳ ನಡುವೆ…
ಎಲ್ಲರ ಬದುಕಲ್ಲು ನಿರ್ಧಾರಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ಬಂಡ ನಿರ್ಧಾರಗಳು ಬದುಕಿನ ಏಳಿಗೆಗೆ ಸಾಕ್ಷಿಯಾದರೆ ಕೆಲವೊಮ್ಮೆ ಧೃಡ ನಿರ್ಧಾರಗಳು ಬದುಕಿನ ದಿಕ್ಕು ತಪ್ಪಿಸುವುದಕ್ಕೆ ಸಾಕ್ಷಿಯಾಗುತ್ತದೆ. ಬಾಳಿನ ಪಯಣದಲ್ಲಿ ಎರಡು ಕೂಡ ಬಹಳ ಮುಖ್ಯವಾಗುತ್ತದೆ ಆದರೆ ಎರಡರಲ್ಲಿ ಯಾವುದು ಮೊದಲು ಎಂದು ಹೇಳುವುದು ಕಷ್ಟವಾಗುತ್ತದೆ ಬಿಡಿ. ಈ ಎರಡರ ನಡುವೆ ನಡೆಯುವ ಪಂದ್ಯದಲ್ಲಿ ಗೆಲುವು ಯಾರಿಗೆ ಎಂಬ ಹುಡುಕಾಟವೆ ಈ ಆಟ.
ಪಂದ್ಯ…??, ಏನಿದು ಪಂದ್ಯ ಎನ್ನುತ್ತಿದ್ದೇನಲ್ಲ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದೀರ… ಇದು ಎರಡು ಗುಂಪುಗಳ ನಡುವೆ ನಡೆಯುವ ಆಟದ ಪಂದ್ಯ ಅಲ್ಲ ಸ್ವಾಮಿ. ಇದು ಎರಡು ಅತಿ ಸೂಕ್ಷ್ಮ ವಿಚಾರದ ನಡುವೆ ಮೊದಲ ಪ್ರಾಮುಖ್ಯತೆ ಯಾರಿಗೆ ಅನ್ನುವ ಹುಡುಕಾಟ.
ಕೆಲವೊಮ್ಮೆ ನಮ್ಮ ಜೀವನದಲ್ಲಿ ಕಷ್ಟಕರ ಸಂಗತಿಗಳು ಬಂದಾಗ ಅದನ್ನು ಎದುರಿಸುವ ಮನಸ್ಸುಗಳು ಹಾಗು ಮುಂದಾಗುವ ಅನಾಹುತಗಳನ್ನು ನೋಡುವ ಕಣ್ಣುಗಳು ಬಹಳ ಕಡಿಮೆ. ಅದರಲ್ಲೂ ಈ ಕಾಲದ ಜನರಿಗೆ “ರಿಸ್ಕ್ ಫ್ಯಾಕ್ಟರ್” ಬಹಳ ಮುಖ್ಯವಾಗುತ್ತದೆ. ಎಷ್ಟೊ ಬಾರಿ ನಾನು ಕಂಡಂತೆ ನಮ್ಮ ಜನ ನಮಗ್ಯಾಕೆ ಈ ರಿಸ್ಕ್ ಅಂತ ತಪ್ಪುಗಳು ಮತ್ತು ಅನಾಹುತಗಳು ಕಂಡರು ಹಾಗೆ ಸುಮ್ಮನೆ ಹೊರಟು ಹೋಗುತ್ತಾರೆ. ಇದನ್ನ ನೋಡಿದರೆ ಯಾವ ಜನ ಸ್ವಾಮಿ ಇವರು ಒಂದು ಚೂರು ಮನುಷ್ಯತ್ವ ಇಲ್ವಾ ಅಂತ ಬೇಸರವಾಗುತ್ತದೆ ಆದರೆ ಅಂತಹ ಜನಗಳ ನಡುವೆ ನಾವು ಬದುಕುತ್ತಿದ್ದೇವೆ ಎಂಬುದೇ ವಿಪರ್ಯಾಸ.
ಈ “ರಿಸ್ಕ್ ಫ್ಯಾಕ್ಟರ್” ಮತ್ತು “ಮನುಷ್ಯತ್ವ” ಎಂಬ ಪದಗಳನ್ನು ಬಳಸುತ್ತಿದ್ದಂತೆ ನನ್ನ ಜೀವನದಲ್ಲಿ ನಡೆದ ಒಂದು ಘಟನೆಯ ತುಣುಕು ನೆನಪಾಗುತ್ತದೆ.
ಅದೊಂದು ದಿನ ನಾನು ದಿನನಿತ್ಯದಂತೆ ಕೆಲಸಕ್ಕೆ ಹೋಗಿದ್ದೆ . ಬೆಳಗಿನಿಂದ ಸಂಜೆಯವರೆಗೂ ಕೆಲಸದಲ್ಲಿ ದಣಿದು ಸಂಜೆ 5 ಗಂಟೆ ಸುಮಾರಿಗೆ ನನ್ನ ಮೋಬೈಲ್ ಗೆ ಒಂದು ಮೆಸೇಜ್ ಬಂತು. ಅದು ನನ್ನ ಸ್ನೇಹಿತೆಯೊಬ್ಬಳು ಡೆಂಗ್ಯೂ ಜ್ವರದಿಂದ ತೀರಾ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆಂದು ಅವಳೆ ಕಳಿಸಿದ ಮೆಸೇಜ್ ಆಗಿತ್ತು. ಅದನ್ನು ನೋಡಿ ಗಾಬರಿಗೊಂಡ ನಾನು ತಕ್ಷಣವೇ ನನ್ನ ಜೊತೆಯೆ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತನನ್ನು ಕರೆದುಕೊಂಡು ಆಸ್ಪತ್ರೆಗೆ ದಾರಿ ಹಿಡಿದೆ. ಆಕೆ ದಾಖಲಾಗಿದ್ದ ಆಸ್ಪತ್ರೆ ಕೋರಮಂಗಲದ ಸಮೀಪ ತಾವರೆಕೆರೆಯ ಬಳಿ ಇತ್ತು. ನಾನು ಅಲ್ಲಿಗೆ ಹೋಗಬೇಕಾದರೆ ಲಾಲ್ ಬಾಗ್ ಮಾರ್ಗವಾಗಿಯೇ ಹೋಗಬೇಕಿತ್ತು. ಲಾಲ್ ಬಾಗ್ ವೆಸ್ಟ್ ಗೇಟ್ ಮೆಟ್ರೋ ಸ್ಟೇಷನ್ ಬಳಿ ಟ್ರಾಫಿಕ್ ಜಾಮ್ ಆದಕಾರಣ ಸುಮ್ಮನೆ ನಿಂತಿದ್ದೆ, ಹಾಗೆ ಸ್ವಲ್ಪ ಎಡಕ್ಕೆ ತಿರುಗಿ ನೋಡಿದರೆ ಬಹಳಷ್ಟು ಜನ ಒಂದೆಡೆ ಸೇರಿದ್ದರು. ಅಲ್ಲೇನೋ ಅನಾಹುತ ಆಗಿದೆ ಎಂದು ನನಗೆ ಖಚಿತವಾಯಿತು ಆದರೆ ಅಲ್ಲಿದ್ದ ಜನ ಯಾರು ಅದನ್ನು ಪರಿಹರಿಸುವ ಸಲುವಾಗಿ ನಿಂತಿರಲಿಲ್ಲ ಎಂಬುದು ಅರಿವಿಗೆ ಬಂತು. ತಕ್ಷಣವೇ ನನ್ನ ಸ್ನೇಹಿತನಿಗೆ ಮಗ ಏನಾಯ್ತು ನೋಡು ಹೋಗೊ ಅಂತ ಹೇಳಿ ನಾನು ಗಾಡಿ ಪಕ್ಕಕ್ಕೆ ಹಾಕಿ ಹಿಂದೆಯೆ ಹೊರಟೆ.
ಅಲ್ಲಿ ಒಬ್ಬ ವಯಸ್ಸಾದ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ನನ್ನ ಸ್ನೇಹಿತ ಹೇಳಿದ. ಗಾಬರಿಗೊಂಡ ನಾನು ಆ ಗುಂಪಿನ ನಡುವೆ ನುಸುಳಿ ಹೋಗಿ ನೋಡಿದರೆ ಆ ವಯಸ್ಸಾದ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಪಕ್ಕದಲ್ಲೇ ಒಬ್ಬ ಯುವಕ ಮತ್ತು ಒಬ್ಬ ವಯಸ್ಸಾದ ವ್ಯಕ್ತಿಯನ್ನು ನೋಡಿದೆ. ಅವರಿಗಿರುವ ಸಂಬಂಧವನ್ನು ಖಚಿತಪಡಿಸಿಕೊಳ್ಳುತ್ತಿದ್ದಂತೆ ಆಕೆ ಆ ಯುವಕನ ಚಿಕ್ಕಮ್ಮ ಎಂದು ತಿಳಿದುಬಂತು. ಅವನಿಗೆ ಕನ್ನಡ ಮತ್ತು ನನಗೆ ಹಿಂದಿ ಬರದ ಕಾರಣ ನಮ್ಮಿಬ್ಬರ ಸಂಭಾಷಣೆ ಇಂಗ್ಲಿಷ್ ನಲ್ಲೇ ನಡೆಯಿತು. ಆಗ ಆತ ಹೇಳಿದ “ಈಕೆ ನನ್ನ ಚಿಕ್ಕಮ್ಮ ನಾವು ವೆಸ್ಟ್ ಬೆಂಗಾಲ್ ನಿಂದ ಚಿಕಿತ್ಸೆಗೆಂದು ಬಂದಿದ್ದೇವೆ ಎಂದು ಹೇಳುತ್ತಿದ್ದಂತೆ ಯಾವ ಚಿಕಿತ್ಸೆ ಎಂದು ಪ್ರಶ್ನೆ ಮಾಡಿದೆ” ಆಗ ಆತ ತುಂಬಾ ನೋವಿನಿಂದ ಉಸಿರಾಡುಲು ಕಷ್ಟ ಪಡುತ್ತಾ “ಬ್ರೇನ್ ಟ್ಯೂಮರ್” ಎಂದು ಉತ್ತರಿಸಿದ.
ಕೂಡಲೆ ಟ್ಯಾಕ್ಸಿ ಬುಕ್ ಮಾಡಿ ನಿಮ್ಹಾನ್ಸ್ ಆಸ್ಪತ್ರೆ ಕರೆದುಕೊಂಡು ಹೋದೆ. ಅಲ್ಲಿದ್ದ ಸಿಬ್ಬಂದಿಗಳು ಪ್ರತಿ ದಿನ ಇಂತಹ ಕೇಸ್ ಗಳನ್ನು ನೋಡಿ ನೋಡಿ ಬೇಸತ್ತು ಹಾಗೆ ನಟಿಸುತ್ತಾರೊ ಅಥವಾ ನಿಜವಾಗಲು ಮನುಷ್ಯತ್ವ ಕಳೆದುಕೊಂಡಿದ್ದಾರೊ ತಿಳಿದಿಲ್ಲ. ಆದರೆ ಅಲ್ಲಿ ಆ ವಯಸ್ಸಾದ ಮಹಿಳೆಯನ್ನು ನನ್ನ ಎರಡು ಕೈಗಳಿಂದ ಮಗುವಿನಂತೆ ಎತ್ತಿಕೊಂಡು ಒಳಗೆ ಕೊಂಡೊಯ್ದು ಹಾಸಿಗೆ ಮೇಲೆ ಮಲಗಿಸಿದೆ. ನಂತರ ಆ ವೈದ್ಯರನ್ನು ಕರೆತರಲು ನಾನು ಪಟ್ಟಿದ್ದ ಪಾಡು ಆ ದೇವರಿಗೆ ಗೊತ್ತು ಬಿಡಿ. ವೈದ್ಯರು ಬಂದು ಪ್ರಥಮ ಚಿಕಿತ್ಸೆ ಕೊಟ್ಟು ಬೆಳಗ್ಗೆ ಕರೆದುಕೊಂಡು ಬನ್ನಿ ಎಂದರು. ಆಗ ಆಗಲೆ ಸುಮಾರು 8 ಗಂಟೆಯಾಗಿತ್ತು. ಆ ಯುವಕನಿಗೆ ಬೆಂಗಳೂರಿನಲ್ಲಿ ಪರಿಚಯ ಇದ್ದವರು ಇನ್ನು ಬಂದಿರಲಿಲ್ಲ ಹಾಗಾಗಿ ಅವನ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿತ್ತು. ಆತನಿದ್ದ ಪರಿಸ್ಥಿತಿ ನನ್ನ ಯಾವ ಶತ್ರುಗಳಿಗು ಬೇಡ, “ಭಾಷೆ ಬರದ ನಾಡಲ್ಲಿ, ದಾರಿ ತಿಳಿಯದ ಊರಲ್ಲಿ, ಮನುಷ್ಯತ್ವ ಇರದ ಜನರ ನಡುವಲ್ಲಿ ಅವನ ಪರಿಸ್ಥಿತಿ ಆರ್ಭಟದ ಅಲೆಗಳಲ್ಲಿ ಸಿಲುಕಿರುವ ಮೀನಿನಂತಿತ್ತು”.
ಅಲ್ಲಿ ಯಾವಗಲು ರೋಗಿಗಳು ಬಹಳ ಸಂಖ್ಯೆಯಲ್ಲಿ ಬರುವ ಕಾರಣ ರೂಂ ಸಿಗದಂತಾಯಿತು ಅದನ್ನು ನೋಡಲಾಗದೆ ನಾನೆ ಒಂದು ಆಟೋ ಹಿಡಿದು ಆಟೋ ಚಾಲಕನಿಗೆ ಹೋಟೆಲ್ ನಲ್ಲಿ ಅವರಿಗೊಂದು ರೂಂ ಮಾಡಿ ಕೊಡಿ ಅಂತ ಹೇಳಿ ಅವನಿಗೆ ಸಾಂತ್ವನ ಹೇಳಿ ಅಲ್ಲಿಂದ ಹೊರಡಲು ಸಿದ್ದನಾಗುತ್ತಿದಂತೆ ಅವನು ಬಂದು ನನ್ನನ್ನು ಬಾಚಿ ತಬ್ಬಿಕೊಂಡು ನೀನು ಯಾರು, ಏಕೆ ಬಂದೆ ಎಂದು ನನಗೆ ತಿಳಿದಿಲ್ಲ ಆದರು ನನ್ನ ಚಿಕ್ಕಮ್ಮನನ್ನು ಉಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಂತ ಹೇಳಿ ನನ್ನ ಫೋನ್ ನಂಬರ್ ಕೇಳಿ ಪಡೆದ. ನನ್ನ ಕಣ್ಣಲ್ಲಿ ಎರಡು ಹನಿ ನೀರು ಜಾರಿ ಕೆಳಗೆ ಬಿತ್ತು. ಮನಸ್ಸು ಭಾರವಾಯಿತು. ಯೋಚನೆಗಳಲ್ಲಿ ಮುಳುಗತೊಡಗಿದೆನು. ನಂತರ ನನ್ನ ಸ್ನೇಹಿತೆಯನ್ನು ನೋಡಲು ಆಸ್ಪತ್ರೆಗೆ ಹೋದೆ. ಆಕೆಯ ಯೋಗ ಕ್ಷೇಮ ವಿಚಾರಿಸಿಕೊಂಡು ನನ್ನ ಮನೆಗೆ ದಾರಿ ಹಿಡಿದೆ.
ಆ ರಾತ್ರಿ ನನ್ನ ಮನಸ್ಸಿನಲ್ಲಿ ಏನೋ ಒಂದು ರೀತಿಯ ಗೊಂದಲ ಸರಿಯಾಗಿ ನಿದ್ರೆ ಕೂಡ ಬರಲಿಲ್ಲ. ಬೆಳಗಿನ ಜಾವ ಎಂದಿನಂತೆ ನನ್ನ ದಿನ ನಿತ್ಯದ ಕೆಲಸದಲ್ಲಿ ನಿರತನಾಗಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದೆ ನನ್ನ ಮೊಬೈಲ್ ನಲ್ಲಿ ಆ ಯುವಕನ ಮೆಸೇಜ್ ಬಂದಿತ್ತು. ಮೆಸೇಜ್ ನೋಡಿದರೆ “ನಾನು ಈಗಷ್ಟೇ ವೆಸ್ಟ್ ಬೆಂಗಾಲ್ ವಿಮಾನ ನಿಲ್ದಾಣದಿಂದ ಮನೆ ಕಡೆಗೆ ಹೊರಟಿದ್ದೇನೆ ಆದರೆ ದುಃಖದ ಸಂಗತಿ ಏನೆಂದರೆ ನನ್ನ ಚಿಕ್ಕಮ್ಮ ಈಗ 5 ನಿಮಿಷಗಳ ಹಿಂದೆ ವಿಧಿವಶರಾಗಿದ್ದಾರೆ ನಾನು ಅವರನ್ನು ಕಳೆದುಕೊಂಡ ಅನಾಥನಾಗಿದ್ದೇನೆ. ನೀನು ಮಾಡಿದ ಸಹಾಯಕ್ಕೆ ಧನ್ಯವಾದಗಳು, ಮತ್ತೆ ಎಂದಾದರು ವೆಸ್ಟ್ ಬೆಂಗಾಲ್ ಕಡೆ ಬಂದರೆ ತಪ್ಪದೆ ಭೇಟಿಯಾಗಿ ಹೋಗು” ಎಂದು ಹೇಳಿದ. ಇದನ್ನು ನೋಡಿ 10 ನಿಮಿಷಗಳ ಕಾಲ ಸ್ತಬ್ದನಾದೆ, ಕಣ್ಣ ಹನಿ ನೀರು ಆಕೆಯ ನೆನಪಲ್ಲಿ ಜಾರಿ ಹೋಯಿತು. ಮಗುವಿನಂತೆ ಆಕೆಯನ್ನು ಎತ್ತಿಕೊಂಡಿದ್ದ ಎರಡು ಕೈ ಗಳನ್ನ ನೋಡಿ ಮಾತು ಬರದೆ ಮೂಖನಾಗಿ ನಿಂತೆ. ಇಂದಿಗೂ ಅದೊಂದು ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನವಾಗಿ ಉಳಿದಿದೆ.
ಈ ಕಥೆ ಯಾಕೆ ಹೇಳುತ್ತಿದ್ದೇನೆ ಎಂದು ಚಿಂತಿಸುತ್ತಿದ್ದೀರ? ಇದರ ಅರ್ಥ ಆ ದಿನ ನಾನು ಮಾಡಿದ ನಿರ್ಧಾರ ಆ ಜೀವಿಯನ್ನು ಒಂದು ದಿನ ಹೆಚ್ಚಿಗೆ ಉಳಿಸಿತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.
ಪ್ರತಿಯೊಬ್ಬನ ಒಳಗೆ ಒಬ್ಬ ಅನಕ್ಷರಸ್ಥ ಮಗು ಇರುತ್ತಾನೆ. ನಮ್ಮ ಚೌಕಟ್ಟಿನಲ್ಲಿ ಬೆಳೆದಿರುವ ಅಕ್ಷರಸ್ಥ ಬುದ್ಧಿಯನ್ನು ಬಳಸಿಕೊಂಡು ಅನಕ್ಷರಸ್ಥ ಮಗುವಿನ ಮಾತು ಕೇಳಿ ನಿರ್ಧಾರ ಮಾಡಿದರೆ ಅಚ್ಚರಿಗಳು ಮೂಡುವುದರಲ್ಲಿ ಎರಡು ಮಾತಿಲ್ಲ. ನಮ್ಮ ಎಲ್ಲಾ ಸರಿ ಹಾಗು ತಪ್ಪು ನಿರ್ಧಾರಗಳ ಹಿಂದೆ ಆ ಮಗುವಿನ ಕೂಗು ಇದ್ದೇ ಇರುತ್ತದೆ. ಅದನ್ನು ಪಾಲಿಸಿದವನು ಮನುಷ್ಯನಾಗುತ್ತಾನೆ. ನಿರ್ಧಾರಗಳು ತಪ್ಪಾದಾಗ ಮುಂದುವರೆಯಬೇಡ ಎಂಬ ಕೂಗು ಕೇಳಿಸಿದರು ಅದನ್ನು ಬಡಿದು ಮಲಗಿಸಿ ಮುಂದುವರೆದರೆ ಮನುಷ್ಯತ್ವ ಕಳೆದುಕೊಂಡು ಮೃಗನಾಗುತ್ತಾನೆ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆ? ಯೋಚನೆ ಮಾಡಬೇಡಿ.
ಇನ್ನೊಬ್ಬರ ಬಗ್ಗೆ ತಿಳಿಯಬೇಕೆ? ಕೇಳಿ.
ಇನ್ನೊಬ್ಬರಿಗೆ ನಿಮ್ಮ ಬಗ್ಗೆ ತಿಳಿಸಬೇಕೆ? ಹೇಳಿ.
ಹೊಸ ಕಲ್ಪನೆ ಮೂಡಿದೆಯೆ? ಹಂಚಿಕೊಳ್ಳಿ.
ಕಲಿಯಬೇಕೆ ಅಥವಾ ಕಲಿಸಬೇಕೆ? ಹಿಂಜರಿಯದಿರಿ.
ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಸುಂದರವಾದ ಕಾರಣಗಳು ಸುತ್ತಲೂ ಕಾಯುತ್ತಿದೆ, ಅನುಭವಿಸಿ ಸ್ಪಂದಿಸಿ. ಸೂಕ್ಷ್ಮ ನಿರ್ಧಾರಗಳ ಪರಿಣಾಮ ಹೊಸ ಮನಸುಗಳಿಗೆ ನಾಂದಿ ಹಾಡುತ್ತದೆ. ಬದುಕು ಮತ್ತು ನಿರ್ಧಾರಗಳ ನಡುವೆ ಸೋಲು ಗೆಲುವು ಇಲ್ಲ, ಬಳಸಿಕೊಳ್ಳುವ ರೀತಿಯಲ್ಲಿ ಮುಂದಿನ ದಿನಗಳ ಭವಿಷ್ಯ ಅಡಗಿದೆ. ಇವೆರಡರ ನಡುವೆ ಇರುವ ಸಂಬಂಧವನ್ನು ತಿಳಿಸಿಕೊಡುವುದೇ ಈ “ಆಟ”
ಕೃಷ್ಣಮೂರ್ತಿ. ಕೆ
Categories Short Stories

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close