ನೆನಪುಗಳ ಅಂತರಾಳದಿಂದ…

ನಮ್ಮ ಜೀವನದಲ್ಲಿ ಎಷ್ಟೊ ಘಟನೆಗಳು ಸಿಹಿ ಅಥವಾ ಕಹಿಯಾದರು ಸರಿಯೆ, ನೆನಪಿಗೆ ಬಂದ ಕೂಡಲೆ ಅದರ ಅಂಚನ್ನು ಹಿಡಿದು ನೆನಪಿನ ಜಾಡನ್ನು ಬಿಡಿಸುತ್ತಾ ಹೋದಂತೆ ಅದರ ಚಿತ್ರಣವು ಕಣ್ಮುಂದೆ ಬರುತ್ತದೆ. ಅದರಿಂದ ಖುಷಿ ಆಗುತ್ತೊ ಅಥವ ದುಃಖ ಆಗುತ್ತೊ ಗೊತ್ತಿಲ್ಲ ಆದರೆ ಅನುಭವದ ಅರ್ಥ ಅಂತು ಖಂಡಿತ ಮನಸ್ಸಿಗೆ ನಾಟುತ್ತದೆ. ಒಂದು ನೆನಪನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಹೋದಂತೆ ಅದರ ಅಂತರಾಳದ ಅರ್ಥ ಕಣ್ಮುಂದೆ ನಿಲ್ಲುತ್ತದೆ‌.‌‌ 
ಹೀಗೆ ನೆನಪಿನ ಬೆನ್ನತ್ತಿ ಹೋಗುತ್ತಿರುವುದು ನನ್ನ ಕಾಲೇಜಿನ ದಿನಗಳಿಗೆ. ಕಾಲೇಜಿನ ದಿನಗಳು, ಅಲ್ಲಿ ನಡೆದ ತುಂಟಾಟ, ತರ್ಲೆ, ತಮಾಷೆ ಅಂದ್ರೆ ಯಾರಿಗ್ ತಾನೆ ಇಷ್ಟ ಆಗೊಲ್ಲ ಹೇಳಿ??. ಹಾ.. ಈ ಕಥೆ ಕೂಡ ಕಾಲೇಜಿನ ಸ್ನೇಹಿತರೊಡನೆ ಕಳೆದ ಮೂರು ದಿನಗಳ ಸುತ್ತ ಕಟ್ಟಿದ ಬಣ್ಣದ ಗೋಡೆಯ ಸವಿನೆನಪಲ್ಲಿ.
ಕಾಲೇಜಿನ ದಿನಗಳಲ್ಲಿ ಟ್ರಿಪ್ ಗೆ ಹೋಗೋದು ಅಂದ್ರೆ ಯಾರಿಗ್ ತಾನೆ ಇಷ್ಟ ಆಗೊಲ್ಲ ಅಲ್ವಾ?. ಹಾಗೆ ಟ್ರಿಪ್ ಗೆ ಹೋಗಬೇಕಂದ್ರೆ ಪ್ಲಾನ್ ಮಾಡ್ಬೇಕು, ಎಲ್ಲರ ಮನೆಯಲ್ಲೂ ಒಪ್ಪಿಸ್ಬೇಕು, ದುಡ್ಡು ರೆಡಿ ಮಾಡ್ಕೋಬೇಕು, ಅಬ್ಬಬ್ಬಾ ಒಂದಾ ಎರಡಾ. ಆದ್ರು ಟ್ರಿಪ್ ಅನ್ನೋ ಖುಷಿಲಿ ಅದ್ಯಾವುದು ಲೆಕ್ಕ ಅಲ್ಲ ಬಿಡಿ‌. ನಮ್ಮ “ಬಯೋಟೆಕ್ ಕಾಂಬಿನೇಷನ್” ಕ್ಲಾಸ್ ಟ್ರಿಪ್ ಅಂದ್ರೆ ಬೇರೆ ಕಾಂಬಿನೇಷನ್ ಅವರಿಗಂತು ತಡೆಯಲಾರದ ಹೊಟ್ಟೆ ಉರಿ. ಅವರಿಗೆ ಉರಿಸೋದ್ರಲ್ಲಿ ಇರುವ ಖುಷಿ ನಮಗೆ ಸರಿ. ನಮ್ಮ ಡಿಪಾರ್ಟ್ಮೆಂಟ್ ಇಂದ ಎಲ್ಲ ರೀತಿಯ ವ್ಯವಸ್ಥೆ ಮಾಡಿ ಹೊರಡಲು ಸಿದ್ಧರಾದೆವು ಆದರೆ ಕೊನೆಯ ಘಳಿಗೆಯಲ್ಲಿ ಕ್ಲಾಸ್ ನಲ್ಲಿ ಎರಡು ಟೀಮ್ ನಡುವೆ ಕೆಲವೊಂದು ವಿಷಯಗಳ ಬಗ್ಗೆ ಗಲಾಟೆ ಆದ ಕಾರಣ ಅದರ ಪರಿಣಾಮ ಟ್ರಿಪ್ ಮೇಲೆ ನೇರ ಹೊಡೆತ ಬಿತ್ತು. ಕ್ಲಾಸ್ ಅಂದ್ರೆ ಗಲಾಟೆಗಳು ಸಹಜ, ಹಾಗೊ ಹೀಗೊ ಏನೊ ಮಾಡಿ ಕೊನೆಗು ನಮ್ಮ ಡಿಪಾರ್ಟ್ಮೆಂಟ್ ಲೆಚ್ಚರರ್ ಗಳನ್ನು ಒಪ್ಪಿಸಿ ಟ್ರಿಪ್ ಕ್ಯಾನ್ಸಲ್ ಆಗುವ ಸಾಧ್ಯತೆಗಳಿಂದ ಪಾರಾದೆವು.
ಕೊನೆಗು ಟ್ರಿಪ್ ಗೆ ರೆಡಿಯಾದೆವು, ಹುಡುಗಿಯರು “ನಾನ್ ಬರೋಲ್ಲ, ಮನೆಯಲ್ಲಿ ಬಿಡೊಲ್ಲ” ಅಂತ ಹೇಳೋದು ಅವರ ಹುಟ್ಟು ಗುಣ. ಅವರ ಅಪ್ಪ ಅಮ್ಮನ ಒಪ್ಪಿಸಿ ಎರಡು ರಾತ್ರಿ ಮೂರು ದಿನ ಟ್ರಿಪ್ ಗೆ ಸಿದ್ದರಾಗಿ ಒಂದು ಬಸ್ ಬುಕ್ ಮಾಡಿ ಒಟ್ಟು ಐವತ್ತು ಜನ ಹೊರಟೆವು. ನಾವು ಕಾಲೇಜಿನಿಂದ ಬಿಡಲು ಮಧ್ಯಾಹ್ನ ಸುಮಾರು 12 ಗಂಟೆಯಾಗಿತ್ತು. ಹೆಸರಿಗೆ ಮಾತ್ರ ಅದು “ಇಂಡಸ್ಟ್ರಿಯಲ್ ಟ್ರಿಪ್” ಆದರೆ ಅದು ನಮ್ಮ ಕಾಲೇಜಿನ ಕೊನೆಯ ದಿನಗಳ ನೆನಪಿನ ಟ್ರಿಪ್ ಆಗಿತ್ತು. ಬೆಂಗಳೂರಿಂದ ಮಡಿಕೇರಿಗೆ ನಮ್ಮ ಪಯಣ ಬೆಳೆಯಬೇಕಿದೆ.
ಚನ್ನಪಟ್ಟಣ ಸಮೀಪದಲ್ಲಿ “ಹೆರಿಟೇಜ್ ವೈನ್” ಎಂಬ ವೈನ್ ಉತ್ಪಾದನಾ ಘಟಕಕ್ಕೆ ನಮ್ಮ ಮೊದಲ ಭೇಟಿ. ಆಹಾ ಅಲ್ಲಿ ಕಳೆದ ಕ್ಷಣಗಳು ಮರೆಯಲಾಗದು. ಅದೊಂದು ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಆದ ಕಾರಣ ನಾವು ಒಳಗಡೆ ಹೋಗಿ ಅದರ ಇಂಚಿಂಚು ಪರಿಶೀಲಿಸಿ ನೋಡಿ ಕಲಿಯಬೇಕಿತ್ತು. ಆದರೆ ನಾವು ಕಲಿಯಲು ಹೋಗಿರಲಿಲ್ಲ ಬಿಡಿ. ಅದರ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟ ಅಲ್ಲಿನ ಗೈಡ್ ನಂತರ ವೈನ್ ಟೇಸ್ಟ್ ಮಾಡಬೇಕು ಅಂತ ಅವರ ಕ್ಯಾಬಿನ್ ಗೆ ಕರೆದುಕೊಂಡು ಹೋಗಿ ಪ್ರತಿಯೊಬ್ಬರಿಗು ಐದು ರೀತಿಯ ವೈನ್ ಕುಡಿಸಿ ಕಾಕ್ ಟೈಲ್ ಮಾಡಿ ಎಲ್ಲರು ತೇಲಾಡುವಂತೆ ಮಾಡಿದರು. ಎಲ್ಲರಿಗು ತಲೆ ಗಿರ್ ಅನ್ನೊದಕ್ಕೆ ಶುರುವಾಯ್ತು. ನಮ್ಮ ಕ್ಲಾಸ್ಮೇಟ್ ಹುಡುಗಿಯೊಬ್ಬಳು ಕುಡಿದ ಅಮಲಿನಲ್ಲಿ ತೇಲಾಡುತ್ತಾ ನಿಂತ ನಿಂತಲ್ಲೇ ದುಪ್ ಅಂತ ಬಿದ್ದೊಗ್ತಿದ್ಲು. ನೋಡೋರಿಗಂತು ಒಳ್ಳೆ ಮಜಾ. ಇನ್ನ ನಮ್ ಹುಡುಗರ ಬಗ್ಗೆ ಕೇಳ್ಬೇಕಾ, ಅವರ ಪಾರ್ಟಿ ಮೂಡ್ ಆನ್ ಮಾಡೋಕೆ ಅದೊಂದು ನೆಪ. ಎಲ್ಲರು ಅಮಲಿನಲ್ಲಿ ತೇಲಾಡುತ್ತ ಬಸ್ ಹತ್ತಿದರು.
ಬಸ್ ಹೊರಟ ನಂತರ ಹಸಿವಾದ ಕಾರಣ ಮತ್ತೊಂದು ಕಡೆ ಊಟಕ್ಕೆ ಅಂತ ನಿಲ್ಲಿಸಿ ನಶೆಯಲ್ಲಿದ್ದ ಪ್ರತಿಯೊಬ್ಬರು “ಎಲ್ಲಿದ್ದೀವಿ?, ಯಾವ ಹೋಟೆಲ್?, ಯಾಕ್ ಬಂದಿರೋದು” ಅಂತ ಪ್ರಶ್ನೆಗಳನ್ನು ಕೇಳುತ್ತಾ ತೂರಾಡುತ್ತಾ ಊಟ ತಿನ್ನಲು ಬಂದರು. ಆ ಹ್ಯಾಂಗ್ ಓವರ್ ಇಂದ ಸ್ವಲ್ಪ ಜನಕ್ಕೆ ಊಟ ಸೇರಲಿಲ್ಲ, ಇನ್ನು ಕೆಲವರಿಗೆ ಊಟ ಬಿಟ್ಟು ಬೇರೇನು ಬೇಕಾಗಿರಲಿಲ್ಲ. ಈ ಪಾಡನ್ನು ನಮ್ಮ ಲೆಕ್ಚರರ್ ಗಳು ನೋಡುತ್ತಾ ಅವರು ಕೂಡ “ಎಂತಾ ಸ್ಟೂಡೆಂಟ್ಸ್ ನ ಕರ್ಕೊಂಡ್ ಬಂದಿದ್ದೀವಿ, ಬರಿ ವೈನ್ ಗೆ ಟೈಟ್ ಆಗಿದ್ದಾರೆ” ಅಂತ ಹೇಳುತ್ತಾ ತುಸು ನಗೆ ಬೀರಿ ಬನ್ನಿ ಹೋಗೋಣ ಅಂತ ಹೇಳಿ ಎಲ್ಲರು ಬಸ್ಸು ಹತ್ತಿದರು. ಸ್ವಲ್ಪ ದಿನಗಳ ಹಿಂದೆ ಎರಡು ಟೀಂ ಗಳ ನಡುವೆ ನಡೆದ ಗಲಾಟೆಯ ಕಾರಣ ಬಸ್ಸಿನಲ್ಲಿ ಹಾಡು ಹಾಕುವುದರಲ್ಲಿ ಕಾಂಪಿಟೇಶನ್. ಹೀಗೆ ಮಜಾ ಮಾಡುತ್ತಾ ಎಲ್ಲರು ಅಮಲಿನಲ್ಲಿ ಮುಳುಗಿ ಹೋಗಿದ್ದರು. ಹೀಗೆ ಪಯಣ ಬೆಳೆಸಿದಂತೆ ಮೈಸೂರ್ ನ ಕೆ.ಆರ್.ಎಸ್. ರೋಡ್ ಗೆ ಬಂದೆವು. ಅಲ್ಲಿಗೆ ಬರುವಷ್ಟರಲ್ಲಿ ಸಂಜೆಯಾಗಿತ್ತು. ಕಾಫಿ ಟೀ ಗೆ ಅಂತ ನಮ್ಮ ಡ್ರೈವರ್ ಅಣ್ಣ ಬಸ್ ನಿಲ್ಲಿಸಿದ್ರು. ಆಗ ನೋಡಪ್ಪ ಎಲ್ಲರಿಗು ನಶೆ ಇಳಿಯಿತು. ಕುಡಿದ ಪೋಸ್ಟ್ ಎಫೆಕ್ಟ್ ಎಲ್ಲರಿಗು ಅಲ್ಲಿ ಗೊತ್ತಾಯ್ತು. ಕಾಫಿ ಟೀ ಕುಡಿದು ಫ್ರೆಶ್ ಆಗಿ ಮತ್ತೆ ಪಯಣ ಮುಂದುವರಿಸಿದೆವು. ಎಲ್ಲರು ಅವರವರ ಗೆಳೆಯ ಗೆಳತಿಯರ ಜೊತೆ ಕುಳಿತರೆ ಒಂಟಿ ಜೀವಿಗಳು ಬಾಟೆಲ್ ಜೊತೆ ಕುಳಿತರು, ಎರಡರ ಅಭ್ಯಾಸ ಇಲ್ಲದ ನನಂತವರು ಮೊಬೈಲ್ ಯೆ ಪ್ರೇಯಸಿ ಅಂತ ಮೊಬೈಲ್ ನಲ್ಲಿ ಮುಳುಗಿಹೋದರು. ಒಬ್ಬರನೊಬ್ಬರು ಪರಸ್ಪರ ತಿಳಿಯುವುದಕ್ಕೆ ಅವರದ್ದೇ ಆದ ರೀತಿಯಲ್ಲಿ ಇಷ್ಟ ಕಷ್ಟಗಳನ್ನು ಹಂಚಿಕೊಳ್ಳುತ್ತಾ ಖುಷಿ ಖುಷಿಯಾಗಿ ಮಾತನಾಡುತ್ತಿದಂತೆ ಮಡಿಕೇರಿ ತಲುಪಿಬಿಟ್ಟೆವು. ಸಮಯ ಕಳೆದದ್ದು ಯಾರಿಗು ತಿಳಿಯಲಿಲ್ಲ. ಮಡಿಕೇರಿಯಲ್ಲಿ ನಮ್ಮ ಮಾದಪ್ಪ ಸರ್ ಗೆ ಮೊದಲೇ ಪರಿಚಯಸ್ತರಿದ್ದ ರೂಂ ಮಾಲೀಕರಿಗೆ ಹೇಳಿ ರೂಂ ಬುಕ್ ಮಾಡಿಸಿದ್ದರು. ಬಸ್ ಇಳಿಯುತ್ತಿದ್ದಂತೆ ನಮ್ಮ ಸರ್ ಹತ್ತು ರೂಂ ಕೀ ಕೈಗೆ ಕೊಟ್ಟು “ಯಾರು ಎಲ್ಲಿ ಬೇಕಾದ್ರೂ ಇರಿ” ಅಂತ ಹೇಳಿ ಅವರೊಂದು ರೂಂ ಗೆ ಹೋಗಿ ನಮಗೆ ಜವಾಬ್ದಾರಿ ಕೊಡಲು ಆರಂಭಿಸಿದರು. ನಾವು ಹುಡುಗರೆಲ್ಲಾ ಹತ್ತು ಬೆಡ್ ಇದ್ದ ಒಂದು ದೊಡ್ಡ ರೂಂ ಆಯ್ಕೆ ಮಾಡಿ ಎಲ್ಲರು ಅವರವರ ಲಗೇಜ್ ಇಟ್ಟು ಫ್ರೆಶ್ ಅಪ್ ಆಗುತ್ತಿದಂತೆ ನಮ್ಮ ಸರ್ ಬಂದು “ಬನ್ನಿ ಎಲ್ಲಾರು ಕ್ಯಾಂಪ್ ಫಯರ್ ಹಾಕೋಣ” ಅಂದ ಕೂಡಲೇ ಎಲ್ಲರಿಗೂ ಪ್ರಯಾಣದ ಆಯಾಸವೇ ಮರೆತು ಹೋಯಿತು.
ಕ್ಯಾಂಪ್ ಫಯರ್ ನಲ್ಲಿ ಸಾಂಗ್ಸ್ ಗೆ ಕುಣಿದು ಕುಪ್ಪಳಿಸಿ, ಆಟ ಆಡಿ, ಮಜಾ ಮಾಡಿ ಸಾಕಪ್ಪಾ ಸಾಕು ಅನ್ನುವಷ್ಟು ಸುಸ್ತಾಗಿ ಹೋದರು. ಹಾಗೆ ನಮ್ಮ ಸರ್ ಮಡಿಕೇರಿಯ ಪ್ರವಾಸಕ್ಕೆ ನಿಯಮಗಳನ್ನು ಹೇಳುತ್ತಾ ಭದ್ರತೆ ಹಾಗು ಸುರಕ್ಷತೆಗೆ ನಾಂದಿ ಹಾಡಿದರು. ನಂತರ ಎಲ್ಲರು ರೂಂ ಬಳಿ ಬಂದು ಊಟ ಮಾಡಿ ಹರಟೆ ಹೊಡೆಯುತ್ತಾ ತರ್ಲೆ ತಮಾಷೆ ಮಾಡಿಕೊಂಡು ರೇಗಿಸಿಕೊಂಡು ನಂತರ ಪ್ರವಾಸದ ಆಯಾಸ ನಿದ್ದೆಗೆ ಜಾರುವಂತೆ ಮಾಡುತ್ತಿತ್ತು, ಹಾಗಾಗಿ ಎಲ್ಲರು ಮಲಗಲು ಹೋದರು.
ಆದ್ರೆ ನಮ್ಮ ಹುಡುಗರು ಬಿಡಬೇಕಲ್ಲ, ಮತ್ತೆ ಕುಡಿಯಲು ಸಿಗರೇಟು ಸೇದಲು ಶುರುಮಾಡಿದರು. ಅಂತಹ ಅಭ್ಯಾಸ ಇಲ್ಲದ ನನ್ನಂತವರ ಪಾಡು ಆ ದೇವರಿಗೆ ಗೊತ್ತು ಬಿಡಿ. ಅವರು ನಿದ್ದೆ ಮಾಡೋಲ್ಲ ನಮಗೂ ನಿದ್ದೆ ಮಾಡೋಕೆ ಬಿಡೋಲ್ಲ. ಕುಡಿದವರು ಕಥೆ ಹೇಳುವ ರೀತಿನೇ ಬೇರೆ ಆದ್ರೆ ಲವ್ ಸ್ಟೋರಿ ಶುರು ಮಾಡಿದ್ರೆ ಹಿಂಸೆ ತಡೆಯೋಕಾಗಲ್ಲ. ಹೀಗೆ ಅವರ ಕಾಟ ತಡೆಯೋಕೆ ಆಗದೆ ಗೋಳಾಡುತ್ತಾ ಮಲಗಿದ್ದು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಯಾಗಿತ್ತು. ಒಳ್ಳೆಯ ನಿದ್ದೆ ಏನೋ ಬಂತು ಆದ್ರೆ ಮತ್ತೆ ಹುಡುಗಿಯರ ಕಾಟ ಶುರುವಾಯ್ತು. ಐದು ಮೂವತ್ತು ಸುಮಾರು ಹುಡುಗಿಯರು ನಮ್ಮ ರೂಂ ಗೆ ಬಂದು ಎದ್ದೇಳ್ರೊ ಎದ್ದೇಳ್ರೊ ಅಂತ ಪ್ರಾಣ ಹಿಂಡಿದರು. ಇಲ್ಲ ಅನ್ನೋಕೆ ಆಗಲ್ಲ ನಿದ್ದೆ ಬಿಡೋಕೆ ಆಗಲ್ಲ. ಆ ದಿನದ ನಮ್ಮ ಪಾಡು “ಬ್ರೆಡ್ ಕಿತ್ಕೊಂಡ ನಾಯಿ ಪಾಡು” ಆಗಿತ್ತು. ಇವರ ಗೋಳಾಟದಲ್ಲಿ ಬೆಳಗ್ಗೆ ಏಳು ಗಂಟೆ ಆಗೆ ಹೋಯ್ತು. ಎಲ್ಲರು ಎದ್ದು ಫ್ರೆಶ್ ಆಗಿ ರೂಂ ಖಾಲಿ ಮಾಡಿದೆವು.
Madikeri FireCamp
ನಂತರ ನಾವು ಹೋಗಿದ್ದು “ಇರುಪು ಫಾಲ್ಸ್” ಗೆ ಅಲ್ಲಿ ಮೋಜು ಮಸ್ತಿ ಮಾಡುತ್ತಿದ್ದಂತೆ ಟೈಟ್ ಆಗಿ ಹ್ಯಾಂಗ್ ಓವರ್ ನಲ್ಲಿದ್ದ ನಮ್ಮ ಹುಡುಗರು ಸುಸ್ತಾಗಿ ಆಟ ಆಡುತ್ತಾ ಎಲ್ಲಾ ಅಲ್ಲಲ್ಲೇ ಮಲಗಿಬಿಟ್ಟರು. ಪುಟ್ಟ ಫಾಲ್ಸ್ ನಲ್ಲಿ ಐವತ್ತು ಜನ ಎಷ್ಟು ಬಾರಿ ಆಡಿಲಿಕ್ಕೆ ಸಾಧ್ಯ ಹೇಳಿ?. ಹೀಗೆ ಎಲ್ಲರೂ ಮಲಗಿದ್ದನ್ನು ನೋಡಿ ನಮ್ಮ ಲೆಕ್ಚರರ್ ಸೂಸನ್ ಮ್ಯಾಮ್ ಬಂದು ಎಲ್ಲರನ್ನು ಬೈಯುತ್ತಾ ಎಬ್ಬಿಸಿ ಹೊರಡಿಸಿದರು. ಅವರ ಸ್ಥಿತಿ ನೋಡಲು ಅಯ್ಯೋ ಅನ್ನಿಸ್ತಿತ್ತು. ಅಷ್ಟು ಜನರನ್ನು ನಿಭಾಯಿಸೊದು ಅಂದ್ರೆ ಸುಲಭದ ಮಾತಲ್ಲ ಬಿಡಿ. ನಮ್ಮ ಮಾದಪ್ಪ ಸರ್ ಎಲ್ಲರನ್ನು ಒಂದೆಡೆ ಕರೆದು “ಈಗ ಎಲ್ಲರು ಬಟ್ಟೆ ಬದಲಿಸಿ ಬೇಗ ಬೇಗ ರೆಡಿಯಾಗಬೇಕು ನಮ್ಮ ನೆಕ್ಸ್ಟ್ ವಿಸಿಟ್ಟ್ ನೀವು ತುದೀ ಕಾಲಲ್ಲಿ ಕಾಯುತ್ತಿರುವ ನಿಮ್ಮ ಮಾದಪ್ಪ ಸರ್ ಮನೆಗೆ” ಅಂತ ಹೇಳುತ್ತಿದ್ದಂತೆ ಎಲ್ಲರಿಗು ಸುಸ್ತು ಆಯಾಸ ಮರೆತೇ ಹೋಯ್ತು. ಕೂರ್ಗಿ ಅಂದ್ರೆ ಅವರ ಮನೆಯ ನೋಟ ಸ್ವರ್ಗಕ್ಕೆ ಎರಡೇ ಗೇಣು ಇದ್ದಂತೆ. ಅದರಲ್ಲೂ ಅವರ ಮನೆಯ ಊಟ ಅಂದ್ರೆ ಸುಮ್ಮನೇ ನಾ?? ಆ ಖುಷಿಗೆ ಎಲ್ಲರು 15 ನಿಮಿಷದಲ್ಲಿ ರೆಡಿ ಆಗಿ ನಮ್ ಸರ್ ಮನೆಗೆ ಪಯಣ ಬೆಳೆಸಿದೆವು. ಮನೆಯ ಬಳಿ ಬಸ್ ಹೊಗುವುದಿಲ್ಲ ಹಾಗಾಗಿ ಸ್ವಲ್ಪ ದೂರ ಟ್ರಾಕ್ಟರ್ ನಲ್ಲಿ ಹೋಗಬೇಕಿತ್ತು. ನಮ್ಮ ರೈತರ ಬಂದು ಟ್ರಾಕ್ಟರ್ ನಲ್ಲಿ ಹೋಗುವುದೆಂದರೆ ಅದರಲ್ಲಿರುವ ಮಜಾ ಪದಗಳಲ್ಲಿ ಹೇಳೊಕೆ ಆಗಲ್ಲ ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ಮನೆ ಸೇರುತ್ತಿದ್ದಂತೆ ಚಿಕನ್ ಫ್ರೈ, ಮಟನ್ ಬಿರಿಯಾನಿ, ಹಾಗು ರುಚಿ ಗೊತ್ತಿಲ್ಲದ, ತರಕಾರಿ ಸೊಪ್ಪು ಸೊದೆ ತಿನ್ನುವ ವೆಜಿಟೇರಿಯನ್ ಗಳಿಗೆ ಪುಲಾವ್, ಫ್ರೂಟ್ ಸಲಾಡ್, ಹಣ್ಣುಗಳು ಎಲ್ಲ ರೀತಿಯ ವ್ಯವಸ್ಥೆ ನಡೆದಿತ್ತು. ಎಲ್ಲರು ಹೊಟ್ಟೆ ತುಂಬಾ ತಿಂದು ಎಳನೀರು ಕುಡಿದು ನಮ್ಮ ಮಾದಪ್ಪ ಸರ್ ಶೂಟಿಂಗ್ ವಿದ್ಯೆಯನ್ನು ಪ್ರದರ್ಶಿಸಿ ಎಲ್ಲರು ತಬ್ಬಿಬ್ಬಾಗುವಂತೆ ಮಾಡಿದರು, ಕೊಡಗಿನ ಕುಡಿ ಅಂದ್ರೆ ಸುಮ್ನೆನಾ ಹೇಳಿ. ಹೀಗೆ ಕೆಲ ಸಮಯ ಅವರ ಮನೆಯಲ್ಲೇ ಆಟ ಆಡುತ್ತಾ ಮಾತಾಡುತ್ತಾ ಹರಟೆ ಹೊಡೆಯುತ್ತಾ ಸಮಯ ಕಳೆದೆವು. ಅಷ್ಟರಲ್ಲಿ ಆಗಲೆ ಇಳಿ ಸಂಜೆಯಾಗಿತ್ತು ಮತ್ತೆ ನಮ್ಮ ಪಯಣ ಮೈಸೂರಿಗೆ ಬೆಳೆಸಬೇಕಾದ ಕಾರಣ ಅಲ್ಲಿಂದ ಹೊರಡಲು ಸಿದ್ಧರಾದೆವು.
Madikeri Madappa Sir
ಮಡಿಕೇರಿಯ ಅವರ ಮನೆಯಿಂದ ಮೈಸೂರಿಗೆ ನಾಗರಹೊಳೆ ಮಾರ್ಗವಾಗಿ ಹೋಗಬೇಕಿತ್ತು ಹಾಗಾಗಿ ಎಲ್ಲರು ಪ್ರಾಣಿಗಳನ್ನು ನೋಡಬಹುದು ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ ಶುರುವಿನಲ್ಲಿ ಕಂಡ ಜಿಂಕೆ ಎಲ್ಲರ ಮನ ತಣಿಸಿತು. ಕಾಡಿನ ಜನ ಅವರ ವಾಸ ಸ್ತಾನ ಎಲ್ಲವನ್ನು ನೋಡುತ್ತಾ ನಮ್ಮ ನಾಗರೀಕತೆಯನ್ನು ಅದರ ನಿಜವಾದ ಅರ್ಥವನ್ನು ಅಲ್ಲಿನ ಜನ ಹಾದಿಯಲ್ಲಿ ಹಾದು ಹೋಗುತ್ತಿದಂತೆ ಅರ್ಥ ಮಾಡಿಸಿಬಿಟ್ಟರು‌. ಹೀಗೆ ಕಾಡಿನಲ್ಲಿ ಹೋಗುತ್ತಿದ್ದಂತೆ ಕೊನೆಯವರೆಗೂ ಅದೇ ಜಿಂಕೆಗಳನ್ನು ಕಂಡು ಎಲ್ಲರ ಮುಖ ಬಾಡಿಹೋಯಿತು‌. ನಾಗರಹೊಳೆಯ ಅರಣ್ಯದ ಗಾಳಿ ಮುಖಕ್ಕೆ ರಾಚ್ಚುತ್ತಾ ಹೊಸ ಉಸಿರಾಟದ ಒಳ್ಳೆಯ ಪ್ರಶಾಂತತೆಯ ಸೋಬಗನ್ನು ಕಣ್ತುಂಬಿಸಿತು, ಮನಸ್ಸಿಗೆ ಹಿತ ನೀಡಿತು. ಕನ್ನಡ ನಾಡಿನ ಪ್ರಕೃತಿಯ ವಿಶೇಷತೆ ಅಂತದ್ದು ಏನಂತೀರಾ?
ಹೀಗೆ ಎಲ್ಲರು ಸ್ವಚ್ಚ ಗಾಳಿಯಲ್ಲಿ ಬೆರೆತು ಮಲಗಿದರು, ಕಣ್ಣು ಬಿಟ್ಟು ನೋಡಿದರೆ ಮೈಸೂರು, ಸಾಂಸ್ಕೃತಿಕ ನಗರಿಯ ಹುಮ್ಮಸ್ಸು ಚಿಗುರೊಡೆಯಿತು. ಮೈಸೂರಿನಲ್ಲಿ ಮತ್ತೆ ಹತ್ತು ರೂಂ ಗಳನ್ನು ಬುಕ್ ಮಾಡಿ ನಮ್ಮ ಮಾದಪ್ಪ ಸರ್ “ಎಲ್ಲರು ಬೇಗ ಬೇಗ ಫ್ರೆಶ್ ಆಗಿ ಊಟಕ್ಕೆ ಬರಬೇಕು” ಅಂತ ಹೇಳಿ ಅವರೊಂದು ರೂಂ ಗೆ ಹೋದರು. ರೂಂ ಚಿಂತೆಯಲ್ಲ ಮುಗಿದ ಮೇಲೆ ಊಟದ ಚಿಂತೆ. ಅಲ್ಲೇ ನಾರ್ತ್ ಇಂಡಿಯನ್ ಹೊಟೆಲ್ ಗೆ ಹೋದೆವು, ಮಧ್ಯಾಹ್ನ ತಿಂದ ಭರ್ಜರಿ ಊಟ ಇನ್ನು ಅರಗಿಲ್ಲ ಹಾಗಾಗಿ ಚೂರು ಹಾಳು ಮೂಳು ತಿಂದು ಹೊಟ್ಟೆ ತುಂಬಿತು ಅಂತ ಅಲ್ಲಿಂದ ಜಾಗ ಖಾಲಿ ಮಾಡಿದೆವು. ರೂಂ ಗೆ ಬಂದ ತಕ್ಷಣ ನೋಡಿದರೆ ನಮ್ಮ ಹುಡುಗರು ಹಾವಳಿ ಶುರು, ಆಗಲೆ ಎಲ್ಲರೂ ಬಾಟಲ್ ಓಪನ್ ಮಾಡಿ ತೀರ್ಥ ಪ್ರಸಾದ ಸೇವನೆಗೆ ರೆಡಿಯಾಗಿದ್ದಾರೆ. ಇನ್ನು ನನಗೆ ಆಗ ಯಾವ ರೂಂ ನಲ್ಲು ಉಳಿಗಾಲ ಇಲ್ಲ ಅಂತ ಹೇಳಿ ನಾನು ಮತ್ತು ನನ್ನ ಒಬ್ಬ ಕುಡಿಯದ ಗೆಳೆಯ ಹುಡುಗಿಯರ ಜೊತೆ ಹರಟೆ ಹೊಡೆಯುತ್ತಾ ತಂಟೆ ತರ್ಲೆ ಮಾಡುತ್ತಾ ನೆಮ್ಮದಿಯಿಂದ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದೆವು. ತಕ್ಷಣ ಒಂದು ರೂಂ ನಿಂದ ಕಿರುಚಾಟದ ಧ್ವನಿ ಕೇಳಿಸಿತು, ನಮಗೆ ಎಲ್ಲಿಲದ ಗಾಬರಿ, ಏನಾಯ್ತು ಅಂತ ಎಲ್ಲರು ಓಡಿ ಹೋಗಿ ನೋಡಿದ್ರೆ ನಮ್ ಹುಡುಗರು ಕುಡಿದ ಅಮಲಿನಲ್ಲಿ ಗಲಾಟೆ ಮಾಡ್ಕೊಂಡಿದ್ದಾರೆ ಅದು ಅತಿರೇಕಕ್ಕೆ ಏರುವ ಮೊದಲೇ ಅವರನ್ನು ಸಮಾಧಾನ ಮಾಡಿ ಬೇರೆ ಬೇರೆ ರೂಂ ಗಳಲ್ಲಿ ಮಲಗಿಸಿ ಬಂದು ನೋಡಿದ್ರೆ ಕೊನೆಗೆ ನಮ್ಗೆ ರೂಂ ಇಲ್ಲ ಅನ್ನೋ ಹಾಗೆ ಆಯ್ತು. ನಮ್ ಈ ಪಾಡನ್ನ ನೋಡಿದ ಹುಡುಗಿಯರು ನಮ್ ರೂಂ ನಲ್ಲೆ ಬಂದು ಮಲ್ಕೊಳಿ ಅಂತ ಹೇಳಿ ಪಾಪ ಅವರು ಕೂಡ ಒಳ್ಳೆಯವರಾದ್ರು. ಆ ಟೈಂ ನಲ್ಲಿ ನಮ್ ಕಷ್ಟ ಅರ್ಥ ಮಾಡ್ಕೊಂಡ್ರು; ಹುಡುಗಿಯರು ಅಂದ್ರೆ ಹಾಗೆ ಅಲ್ವ ಕಷ್ಟನು ಅರ್ಥ ಮಾಡ್ಕೊತಾರೆ ಹಾಗೆ ಕಾಟನು ಕೊಡ್ತಾರೆ‌. ಅವರ ಜೊತೆ ಕಷ್ಟ ಸುಖ ಮಾತಾಡ್ಕೊಂಡು ಹಾಗೆ ಮಲ್ಕೊಂಡ್ ಬಿಟ್ವಿ. ಕಣ್ಣು ಬಿಟ್ಟು ನೋಡಿದರೆ ಬೆಳಗಿನ ಜಾವ 7 ಗಂಟೆ ಎಲ್ಲರಿಗು ನಮ್ ಸರ್ ಮತ್ತೆ ಸೂಸನ್ ಮ್ಯಾಮ್ ಕಾಲ್ ಮಾಡಿ ಎಬ್ಬಿಸಿದ್ರು. ಎಲ್ರು ಎದ್ದು ಬಿದ್ದು ರೆಡಿಯಾಗಿ ಬ್ರೇಕ್ ಫಾಸ್ಟ್ ಅಂತ ಒಂದು ಹೋಟೆಲ್ ಗೆ ಹೋದೆವು. ಐವತ್ತು ಜನ ಒಟ್ಟಿಗೆ ಹೋದರೆ ಅವರ ಪಾಡೇನು ಅಲ್ವಾ, ಪಾಪ ಅವರು ಕಷ್ಟ ಬಿದ್ದು ಎಲ್ಲರಿಗು ತಿಂಡಿ ಕೊಟ್ಟು ಸಂತೃಪ್ತಿ ಪಡಿಸಿದರು. ನಂತರ ನಮ್ಮ ಪಯಣ ಮೈಸೂರಿನ ವಿಶ್ವವಿದ್ಯಾಲಯದ ಕಡೆ ನಡೆಯಿತು. ಅಲ್ಲಿಗೆ ಹೋಗಬೇಕಾದದ್ದು ನಮ್ಮ ಕರ್ತವ್ಯ, ಏಕೆಂದರೆ ಅದು ಇಂಡಸ್ಟ್ರಿಯಲ್ ಟ್ರಿಪ್ ಆಗಿತ್ತು. ಎಲ್ಲರು ಕೆಮಿಸ್ಟ್ರಿ, ಬಾಟನಿ, ಜುವಾಲಜಿ, ಬಯೋಟೆಕ್ ಡಿಪಾರ್ಟ್ಮೆಂಟ್ ಗಳಿಗೆ ಹೋಗಿ ಅವರು ಹೇಳಿದ್ದನ್ನು ಕೇಳುತ್ತಾ ಸ್ವಲ್ಪ ಹೊತ್ತು “ವಿಜ್ಞಾನ ಎಷ್ಟು ದೊಡ್ಡದು ಎಂತೆಂಥ ಅದ್ಭುತ ವಿಸ್ಮಯ ಅಂತ ಕುತೂಹಲದಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ನೋಡುತ್ತಿದ್ದೆವು” ಆದ್ರೆ ಅದು ಸ್ವಲ್ಪ ಹೊತ್ತು ಮಾತ್ರ. ನಂತರ ಎಲ್ಲರು “ಏನ್ ಗುರು ಇನ್ನು ಎಷ್ಟೊತ್ತು ಬ್ಲೇಡ್ ಹಾಕ್ತಾರೆ?” ಅಂತ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು. ನಿದ್ದೆ ಬಂದ್ರು ನಿದ್ದೆ ಹೋಗದಂತೆ ಎಚ್ಚರ ವಹಿಸಿ ವಸ್ತು ಸಂಗ್ರಹಾಲಯಕ್ಕೆ ಹೋದೆವು. ಅಲ್ಲು ಕೆಲ ಕಾಲ ಟೈಂ ಪಾಸ್ ಮಾಡಿ ಮತ್ತೆ ಬಸ್ ಗೆ ಬಂತು ಕುಳಿತೆವು. ಶುರುವಾದಾಗ ನಮ್ಮ ಸರ್ ಹಿಂದೆ ಇದ್ದ ಐವತ್ತು ಜನ ಮುಗಿಯುವುದರಲ್ಲಿ ಅವರು ತಿರುಗಿ ನೋಡಿದರೆ ಹತ್ತು ಜನ ಉಳಿದಿದ್ದರು‌. ನಮ್ ಸರ್ “ನಿಮ್ಮಂತವರನ್ನ ಹೀಗೆ ಎರಡು ಬ್ಯಾಚ್ ಕರ್ಕೊಂಡ್ ಬಂದ್ರೆ ಸಾಕು ಮತ್ತೆ ನೆಕ್ಸ್ಟ್ ಟೈಂ ಇಂದ ಕಾಲೇಜೇ ಟ್ರಿಪ್ ಗೆ ಕಳಿಸೋಲ್ಲ” ಅಂತ ಹಾಸ್ಯ ಮಾಡುತ್ತಾ ಬಸ್ ಬಳಿ ಬಂದರು.
ನಂತರ ಹೋಗುವಾಗ ಕೆ.ಆರ್.ಎಸ್ ರೊಡ್ ನಲ್ಲಿದ್ಧ ಒಂದು ಹೋಟೆಲ್ ಬಳಿ ಬಸ್ ನಿಲ್ಲಿಸಿದ್ವಿ ಅಲ್ವಾ? ಹಾ… ಈಗಲು ಅದೇ ಹೊಟೆಲ್ ನಲ್ಲಿ ಊಟ ಮುಗಿಸಿ “ರಂಗನ ತಿಟ್ಟು ಪಕ್ಷಿ ಧಾಮ” ಗೆ ಬಂದ್ವಿ, ಎಲ್ಲರಿಗು ವಿಶ್ವವಿದ್ಯಾಲಯದಲ್ಲಿ ಇಲ್ಲದ ಜೋಶ್ ಇಲ್ಲಿ ಬಂತು ನೋಡಿ, ಎಲ್ಲರು ಬೋಟಿಂಗ್ ಹೋಗೋಣ ಅಂತ ಹೇಳಿ ನಮ್ ಮಾದಪ್ಪ ಸರ್ ಎರಡು ಬೋಟ್ ಬುಕ್ ಮಾಡಿ ಎಲ್ಲರನ್ನೂ ಒಟ್ಟಿಗೆ ರೌಂಡ್ ಹೊಡೆಸಿದ್ರು. ಆದ್ರೆ ಅಲ್ಲಿದ್ದ ಗೈಡ್ ಆ ಜಾಗದ ವೈಶಿಷ್ಟ್ಯತೆ ಗಳನ್ನು ಹೇಳುತ್ತಾ ನಮಗೇ ಗೊತ್ತಿಲ್ಲದಂತೆ ಒಂದು ಮೊಸಳೆ ಇರುವ ಜಾಗಕ್ಕೆ ಕರೆದುಕೊಂಡು ಹೋದ. ಅಮ್ಮ ಮಗುವಿಗೆ “ಅಲ್ಲಿ ನೋಡು ಚಂದಮಾಮ ಅನ್ನೋ ತರ ಅಲ್ಲಿನೋಡಿ ಮೊಸಳೆ” ಅಂದ ನಮ್ ಜೀವ ಬಾಯ್ಗೆ ಬಂದಿತ್ತು. ನಮಗು ಮೊಸಳೆಗು ಹತ್ತು ಹೆಜ್ಜೆ ದೂರ ಅಷ್ಟೇ, ನಮ್ ಸ್ಥಿತಿ ಹೇಗ್ ಇರೊಲ್ಲ ಯೋಚನೆ ಮಾಡಿ. ಕೊನೆಗೂ ಅವನು ದಡಕ್ಕೆ ತಂದು ಬಿಟ್ಟ “ಗುರು ನಿಮ್ ಸಹವಾಸ ಸಾಕು” ಅಂತ ಅಲ್ಲಿಂದ ಓಟ ಕಿತ್ತೆವು. ಯಪ್ಪಾ ಐದು ನಿಮಿಷದಲ್ಲಿ ಜೀವದ ಬೆಲೆ ತೊರಿಸ್ಬಿಟ್ಟ ಆ ಪುಣ್ಯಾತ್ಮ. ನಂತರ ಎಲ್ಲರು ಬಸ್ ಬಳಿ ಬಂದು ಕುಳಿತರು, ನಮ್ ಸರ್ ಎಲ್ರಿಗು ಟೆನ್ಷನ್ ಕಮ್ಮಿ ಆಗ್ಲಿ ಅಂತ ಕಬ್ಬಿನ ಹಾಲು ಕೊಡಿಸಿದ್ರು. ನಮ್ಮ ಈ ಮೂರು ದಿನದ ಇಂಡಸ್ಟ್ರಿಯಲ್ ಟ್ರಿಪ್ ಕೊನೆಯ ಹಂತಕ್ಕೆ ಬರುತ್ತಿದೆ ಅಂತ ಎಲ್ಲರಿಗೂ ಬೇಸರ ಆದ್ರೂ ಅದು ಕೊನೆ ಆಗ್ಲೇ ಬೇಕು ಅಲ್ವಾ.
ನಮ್ಮ ಪಯಣ ಬೆಂಗಳೂರಿಗೆ ಮುಂದುವರೆಯಿತು ಮಧ್ಯದಲ್ಲಿ ಬ್ರೇಕ್ ಅಂತ ಚನ್ನಪಟ್ಟಣದಲ್ಲಿ ನಮ್ ಡ್ರೈವರ್ ಅಣ್ಣ ಬಸ್ ನಿಲ್ಲಿಸಿದ್ರು. ಎಲ್ಲರು ಅಲ್ಲಿ ಮನೆಗೆ ಬೇಕಾದ ವಸ್ತುಗಳು, ಗೊಂಬೆಗಳನ್ನ ಖರೀದಿಸಿದರು ಇನ್ನು ಕೆಲವರು ಅವರವರ ಸ್ನೇಹಿತರಿಗೆ ಗಿಫ್ಟ್ ಕೊಟ್ಟ ಅವರ ಸಂಬಂಧಗಳನ್ನು ಗಟ್ಟಿಗೊಳಿಸಿದರು‌. ಇನ್ನು ಕೆಲವರು ಅವರ ಗೆಳೆಯ ಗೆಳತಿಯರಿಗೆ ಕೇಳಿದ್ದನ್ನ ಕೊಡಿಸಿ ಅವರ ಖುಷಿಯಲ್ಲಿ ತಮ್ಮ ಖುಷಿ ಕಾಣುತ್ತಿದ್ದರು. ಅಲ್ಲಿಂದ ಮುಂದುವರೆದ ಪಯಣ ನಮ್ಮ ಟ್ರಿಪ್ ಇನ್ನೂ ಮೆಮೋರಬಲ್ ಆಗಿಸಲು ಸಾಂಗ್ಸ್ ಹಾಡಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಸ್ನೇಹದ ಅರ್ಥ ಮಾಡಿಸಿಬಿಟ್ಟರು‌. ಕೊನೆಗೂ ನಮ್ಮ ಸವಿನೆನಪಿನಲ್ಲಿ ಒಂದಾದ ಬಸ್ ಕಾಲೇಜ್ ಬಳಿ ಬಂದು ಸೇರಿತು. ಎಲ್ಲರ ಕಣ್ಣಲ್ಲೂ ನೀರು, ಖುಷಿ ಕ್ಷಣಗಳು ಮುಗಿಯಿತು ಇನ್ನು ಎಕ್ಸಾಂ, ರಿಸಲ್ಟ್ ಮತ್ತೆ ಎಲ್ಲರು ಬೇರೆ ಬೇರೆ ಕಡೆ ಹೋಗುತ್ತಾರೆ ಅಂತ ನೆನೆದು ಬೇಸರವಾಯಿತು. ಕೆಲವರ ತಂದೆ ತಾಯಿಯರು ಬಂದ್ರೆ, ಕೆಲವರು ಕ್ಯಾಬ್ ಬುಕ್ ಮಾಡಿದರು, ಇನ್ನು ಕೆಲವರು ಬಸ್ಸು ಮತ್ತು ಗಾಡಿಗಳು ಹೀಗೆ ಎಲ್ಲರು ಸುರಕ್ಷಿತವಾಗಿ ಮನೆಗೆ ಸೇರಿದರು.
Industrial Tour
ಹೀಗೆ ಒಂದು ನೆನಪನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಹೋದಂತೆ ಪ್ರತಿಯೊಂದು ಕ್ಷಣಕ್ಕು ಜೀವ ತುಂಬುತ್ತದೆ. ನಮ್ಮ ಪಯಣದ ಖುಷಿ ದುಃಖದ ಕ್ಷಣಗಳು, ನಮ್ಮ ನಮ್ಮಲ್ಲೇ ಗೊತ್ತಿಲ್ಲದೇ ಬೆಳೆದ ಧೃಡ ಸಂಬಂಧಗಳು ಅದಕ್ಕೊಂದು “ಬಟಾಣಿ” ಅಂತ ಹೆಸರು ಎಲ್ಲವು ಎಷ್ಟು ಸುಂದರ ಅಲ್ವಾ. ಮೂರು ವರ್ಷದಲ್ಲಿ ಇರದ ಬಂಧ ಮೂರು ದಿನಗಳಲ್ಲಿ ಊಹಿಸಲಾಗದಷ್ಟು ಗಟ್ಟಿಯಾಗಿ ಬೆಳೆಯಿತು. ಆದರೆ ಈಗ ಎಲ್ಲರು ಅವರವರ ಜೀವನದಲ್ಲಿ ಅವರದ್ದೇ ಆದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಕೆಲವರು ಹೊರ ರಾಜ್ಯಗಳಿಗೆ ಓದಲು ಹೋದರೆ ಇನ್ನು ಕೆಲವರು ಹೊರ ದೇಶಗಳಿಗೆ ಹೋದರು. ಇನ್ನು ಕೆಲವರು ಕೆಲಸದಲ್ಲಿ ಮುಳುಗಿದರೆ ಇನ್ನು ಕೆಲವರು ಸುಳಿವೇ ಇಲ್ಲದಂತೆ ಮರೆಯಾಗಿದ್ದಾರೆ. ಈ ಒಂದು ಪುಟ್ಟ ನೆನಪಿನ ಜಾಡಿನ ಕಥೆ ನನ್ನ ಆ ಎಲ್ಲ ಸ್ನೇಹಿತರಿಗೆ ಅರ್ಪಣೆ.
ಯಾವಾಗ್ಲಾದ್ರು ಬೇಜಾರಾದಾಗ, ಕೆಲಸದಲ್ಲಿ ಟೆನ್ಷನ್ ಜಾಸ್ತಿ ಆದಾಗ, ಅಥವಾ ಕಾಲೇಜ್ ಡೇಸ್ ನೆನಪಾದಾಗ ಈ ನನ್ನ ಪುಟ್ಟ ಕಥೆ ಓದಿ, ಆನಂದಿಸಿ. ನೆನಪುಗಳನ್ನ ಮರುಕಳಿಸಿ ಮುಖದಲ್ಲೊಂದು ನಗೆ ಬೀರಿ. ಅದೇ ನನ್ನ ಆಶಯ.
ಇಂತಿ, ನಿಮ್ಮ ಪ್ರೀತಿಯ
Categories Short StoriesTags , , ,

1 thought on “ನೆನಪುಗಳ ಅಂತರಾಳದಿಂದ…

  1. Thanks for coming to ..my land… Madikeri…

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close