ಅಮ್ಮನಿಲ್ಲದ ಎರಡು ದಿನ

ಕಾಲೇಜ್ ದಿನಗಳಲ್ಲಿ ಸುತ್ತಾಡೊದು, ಕ್ಲಾಸ್ ಬಂಕ್ ಮಾಡೋದು, ಲೇಟ್ ಆಗಿ ಮನೆಗೆ ಹೋಗೋದು, ಹೊಸ ಮೂವಿ ರಿಲೀಸ್ ಆದ್ರೆ ಸಾಕು ಕಾಲೇಜ್ ನೆ ಮರೆತು ಹೋಗೋದು… ಇದು ಎಲ್ಲರ ಜೀವನದಲ್ಲಿ ಸಖತ್ ಮಜಾ ಕೊಡೊ ದಿನಗಳು ಅಂದ್ರೆ ತಪ್ಪಾಗೊಲ್ಲ. ಕ್ಲಾಸ್ ನಲ್ಲಿ ಕೂತು ಪಾಠ ಕೇಳ್ತೀವೋ ಬಿಡ್ತೀವೋ ಆದ್ರೆ ತಿರುಗಾಡೋಕೆ ಅಂದ್ರೆ ನಾವ್ ಯಾವಾಗ್ಲೂ ರೆಡಿ.
ಅವತ್ತು ನನ್ನ ಅಮ್ಮ ಅಪರೂಪಕ್ಕೆ ಊರಿಗೆ ಹೋಗಿದ್ದಾರೆ, ಬರೋದು ಎರಡು ದಿನ ಆಗುತ್ತೆ ಅಂತ ಹೇಳಿದ್ದಾರೆ. ನನಗಂತು ಫುಲ್ ಖುಷಿ, ಅಮ್ಮ ಕೈಲಿ ಬೈಸ್ಕೊಂಡು ಸಾಕಾಗಿ ಹೋಗಿದ್ದೆ, ಇನ್ನು ಎರಡು ದಿನ ನೆಮ್ಮದಿಯಾಗಿ ಇರಬಹುದು. ಅಪ್ಪ ಕೆಲಸದ ಮೇಲೆ ಉತ್ತರ ಕರ್ನಾಟಕಕ್ಕೆ ಹೋಗಿದ್ದಾರೆ, ಅಕ್ಕ ಕಾಲೇಜ್ ಗೆ ಹೋದ್ರೆ ಬರೋದು ಸಂಜೆ ಆಗುತ್ತೆ. ಇದಕ್ಕಿಂತ ಒಳ್ಳೆ ಟೈಂ ಬೇಕಾ??…
ಕಾಲೇಜ್ ಗೆ ಬಂಕ್ ಮಾಡಿ ನನ್ನ 4 ದೋಸ್ತಗಳು ರಮೇಶ್, ರಿಯಾಜ್, ಪೀಟರ್ ಮತ್ತು ನರೇನ್ ಎಲ್ಲರನ್ನು ನಮ್ಮ ಮನೆಗೆ ಕರೆ ತಂದೆ. ರಿಯಾಜ್ ಮತ್ತು ಪೀಟರ್ ಚಿಕನ್ ಐಟಮ್ ಮಾಡೋದ್ರಲ್ಲಿ ನಿಸ್ಸೀಮರು, ನಾನು ರಮೇಶ್ ಮತ್ತೆ ನರೇನ್ ತಿನ್ನೋದ್ರಲ್ಲಿ ನಿಸ್ಸೀಮರು. ಮನೆಯಲ್ಲೇ ಅಡುಗೆ ಮಾಡಿ ಹೊಟ್ಟೆ ಬಿಗಿಯಾಗುವಂತೆ ತಿಂದು ಹರಟೆ ಹೊಡೆಯುತ್ತಾ ಕುಳಿತೆವು. ಹಾಗೆ ಸಮಯ ಕಳೆದಂತೆ ಕೂತ ಜಾಗದಲ್ಲೇ ಎಲ್ಲರು ಮಲಗಿಬಿಟ್ರು.
ಸಂಜೆ ಸುಮಾರು 5:30 ಆಗಿತ್ತು, ನನ್ನ ಮೊಬೈಲ್ ಪಕ್ಕದಲ್ಲೇ ಇದ್ದ ಕಾರಣ ಕಾಲ್ ಬಂದ ಸದ್ದಿಗೆ ಎದ್ದು ಬಿಟ್ಟೆ, ಆ ಕಾಲ್ ನನ್ನ ಅಮ್ಮಳದ್ದಾಗಿತ್ತು. ಹೇಳಮ್ಮ ಅಂದ ಕೂಡಲೇ “ಬಂದ ಕೆಲಸ ಬೇಗನೆ ಮುಗೀತು ಕಣೋ ಇವತ್ ರಾತ್ರೀನೆ ಮನೆಗೆ ಬಂದು ಬಿಡ್ತೀನಿ” ಅಂತ ಹೇಳಿ ಕಾಲ್ ಕಟ್ ಮಾಡಿಬಿಟ್ರು. ಪಕ್ಕದಲ್ಲೇ ಲೋಕವನ್ನೇ ಮರೆತು ಮಲಗಿದ್ದ ನನ್ನ ಗೆಳೆಯರನ್ನು ಎಬ್ಬಿಸಿ ಅಮ್ಮ ಇವತ್ ರಾತ್ರೀನೆ ಬರ್ತಿದ್ದಾರಂತೆ ಎದ್ದೇಳ್ರೊ ಮನೆ ಕ್ಲೀನ್ ಮಾಡ್ರೋ ಅಂತ ಹೇಳಿದೆ. ನರೇನ್ ಗೆ ನನ್ನ ಅಮ್ಮನನ್ನ ಕಂಡರೆ ಭಯ ಅವರು ಬಂದೇ ಬಿಟ್ಟಿದ್ದಾರೆ ಅಂತ ಗಾಬರಿಯಲ್ಲಿ ಪಾಪ ಸೊಂಬೇರಿಯಾಗಿದ್ದರು ಅಚ್ಚುಕಟ್ಟಾಗಿ ಕೆಲಸ ಮಾಡಿದ. “ಕ್ಲಾಸ್ ನಲ್ಲಿ ಇದ್ದಿದ್ರೆ ಅಟೆಂಡೆನ್ಸ್ ಆದ್ರೂ ಸಿಕ್ತಿತ್ತು ಹಾಗೆ ಒಳ್ಳೆ ನಿದ್ದೇನು ಮಾಡಬಹುದಿತ್ತು ಆದ್ರೆ ಇವನು ಇಲ್ಲಿಗೆ ಕರೆದು ಗೋಳ್ ಕೊಡ್ತಿದ್ದಾನಲ್ಲ ಮಗ” ಅಂತ ರಿಯಾಜ್ ರಮೇಶ್ ಗೆ ಹೇಳುತ್ತಿದ್ದದ್ದು ಕಿವಿಗೆ ಬಿತ್ತು. ಆಗ ನಾನು “ನೀವ್ ಏನು ಮಾಡಿಲ್ಲ ಅಂದ್ರು ಪರವಾಗಿಲ್ಲ ಅಮ್ಮ ಬಂದಾಗ ನಿಮ್ಮ ಹೆಸರು ಹೇಳಿದ್ರೆ ಸಾಕು ಮುಂದಿನ ಸಲ ಬಂದಾಗ ಎಲ್ಲರಿಗು ಹಬ್ಬಾನೆ” ಅಂತ ಹೇಳಿದೆ ಪಾಪ ಎಲ್ಲರು ಸೇರಿ ಪೂರ್ತಿಯಾಗಿ ಸ್ವಚ್ಚಮಾಡಿಬಿಟ್ಟರು, ನನಗಂತು ಸಾಕಾಗಿ ಹೋಯ್ತು. ಅಮ್ಮ ದಿನ ಹೀಗೆ ಕೆಲಸ ಮಾಡ್ತಾಳ??. ನಾನು ಒಂದೆ ದಿನಕ್ಕೆ ಸುಸ್ತಾಗಿ ಹೋದೆ ಆದ್ರೆ ಆಕೆ ಪಾಪ ಪ್ರತಿದಿನ ಇಷ್ಟೆಲ್ಲಾ ಒಬ್ಬಳೆ ಮಾಡಬೇಕಲ್ಲ ಅಂತ ಆಶ್ಚರ್ಯವಾಯಿತು.
ಸಂಜೆ 7 ಗಂಟೆಯ ಸಮಯ, ಎಲ್ಲಾ ನನ್ನ ಸ್ನೇಹಿತರನ್ನು ಮನೆಗೆ ಕಳಿಸಿಕೊಟ್ಟು ಸುಮ್ಮನೆ ಕುಳಿತಿದ್ದೆ. ಅಕ್ಕ ಮನೆಗೆ ಬಂದಳು. ಮನೆ ಅಷ್ಟು ಕ್ಲೀನ್ ಆಗಿರೋದನ್ನ ನೋಡಿ “ಯಾರೋ ಬಂದಿರಬೇಕು ಮನೆಗೆ ಅದಕ್ಕೆ ಅಷ್ಟು ಕ್ಲೀನ್ ಆಗಿದೆ” ಅಂತ ಹೇಳುತ್ತಾ ಕುಳಿತಳು. ಅದೆ ಸಮಯದಲ್ಲಿ ಅಮ್ಮನಿಗೆ ಕಾಲ್ ಮಾಡಿ ಕೇಳೋಣ ಅಂದ್ರೆ “ವ್ಯಾಪ್ತಿ ಪ್ರದೇಶದಲ್ಲಿ ದೊರಕುತ್ತಿಲ್ಲ” ಅಂತ ಕೇಳಿ ಬರ್ತಿದೆ. ಇನ್ನು ಸ್ವಲ್ಪ ಹೊತ್ತು ಕಾದೆ, ಕಾಲ್ ಬರಲಿಲ್ಲ, ಅಕ್ಕ ಸುಸ್ತಾಗಿ ಮಲಗಿದಳು. ರಾತ್ರಿ 9 ಗಂಟೆ, ಅಮ್ಮ ಎಲ್ಲಿದ್ದಾಳೆ ಅಂತ ಸುಳಿವು ಕೂಡ ಇಲ್ಲ. “ಅಯ್ಯೋ ಬಿಡು ಎಲ್ಲಿ ಹೋಗ್ತಾರೆ, ಬಂದೆ ಬರ್ತಾರೆ” ಅಂತ ಬೇಜವಾಬ್ದಾರಿ ತನದಿಂದ ಮಲಗಲು ಹೋದೆ. ಅಕ್ಕ ನಾನು ಇಬ್ಬರೂ ಊಟ ಮಾಡಿರಲಿಲ್ಲ. ಅಡುಗೆ ಮಾಡಲು ನನಗಂತು ಬರೋದಿಲ್ಲ, ಮಲಗಿರುವ ಅವಳನ್ನು ಎಬ್ಬಿಸಿ ಅಡುಗೆ ಮಾಡು ಅಂತ ಹೇಳಿದರೆ ರುದ್ರತಾಂಡವ ಆಡುತ್ತಾಳೆ. ಯಾಕಪ್ಪಾ ಬೇಕು ಅಂತ ಸುಮ್ಮನೆ ಮಲಗಿಕೊಂಡೆ.
ಆ ದಿನ ಜೋರು ಮಳೆ, ರಾತ್ರಿ 11 ಗಂಟೆಯ ಸಮಯ ಮತ್ತೆ ಕಾಲ್ ಮಾಡಿದೆ ಆಗಲು ವ್ಯಾಪ್ತಿ ಪ್ರದೇಶದಲ್ಲಿ ದೊರಕುತ್ತಿಲ್ಲ ಅಂತ ಕೇಳಿ ಬರ್ತಿದೆ. ಮನಸ್ಸಲ್ಲಿ ಏನೋ ಒಂದು ರೀತಿಯ ಗೊಂದಲ. ಸರಿಯಾಗಿ ನಿದ್ರೆ ಕೂಡ ಬರಲಿಲ್ಲ.
ಮುಂಜಾನೆ ಎಂದಿನಂತೆ ಸೂರ್ಯ ಸರಿಯಾದ ಸಮಯಕ್ಕೆ ಎದ್ದಿದ್ದಾನೆ ಆದರೆ ನಾನು ಮಾತ್ರ ಏಳೋದು ಸ್ವಲ್ಪ ನಿಧಾನ. ಹಾಲು ಹಾಕುವವನು ಬಂದು ಅಮ್ಮ ಹಾಲು ಅಂತ ಕೂಗಿ ಕೂಗಿ ನನ್ನನ್ನು ಎದ್ದೇಳಿಸಿದ. “ಅಮ್ಮ ಇಲ್ವೇನಪ್ಪ” ಅಂತ ಕೇಳಿದ ಅದಕ್ಕೆ ನಾನು “ಇಲ್ಲಾ ಅಂಕಲ್ ಊರಿಗೆ ಹೋಗಿದ್ದಾರೆ” ಅಂತ ಹೇಳಿದೆ. ಮತ್ತೆ ಮಲಗಲು ಹೋದರೆ ಪೇಪರ್ ನವನು ಬಂದ ಅವನ ಪ್ರಶ್ನೆಗು ಅದೇ ಉತ್ತರ, ಮತ್ತೆ ಹೂವು ಮಾರುವವಳು ಬಂದಳು ಅವಳಿಗು ಅದೇ ಉತ್ತರ, ಹೀಗೆ ಒಬ್ಬರಾದ ಮೇಲೆ ಒಬ್ಬರು ಬರುತ್ತಲೇ ಇದ್ದಾರೆ ನನಗಂತು ಬೆಳಗೆಯೆ ಸಾಕಾಗಿ ಹೋಯ್ತು. ಪ್ರತಿ ದಿನ ಅಮ್ಮ ಇಷ್ಟು ಜನರನ್ನು ಸಂಬಾಳಿಸುತ್ತಾಳ ಅಂತ ಅವಳ ಕಷ್ಟ ನನಗೆ ಆಗ ಅರ್ಥವಾಯಿತು.
ಅಕ್ಕ ಎದ್ದು ಕಾಲೇಜ್ ಗೆ ಅಂತ ರೆಡಿಯಾಗಿ ಮೇಕಪ್ ಮಾಡಿಕೊಂಡು “ಲೋ ಹೋಟೆಲ್ ಇಲ್ಲ ಕ್ಯಾಂಟೀನ್ ನಲ್ಲೇ ಏನಾದ್ರು ತಿನ್ನು ನನಗೀಗ ತಿಂಡಿ ಮಾಡುವಷ್ಟು ಟೈಂ ಇಲ್ಲ” ಅಂತ ಒಂದೇ ಮಾತಿನಲ್ಲಿ ಹೇಳುತ್ತಾ ಹೊರಟು ಹೋದಳು. ನನ್ನ ಪಾಡು ಯಾರಿಗೆ ಹೇಳೋದು. ಆ ದಿನ ಬೆಳಗ್ಗೆ ಕೂಡ ತಿನ್ನೊದಕ್ಕೆ ಏನು ಇಲ್ಲದಂತಾಯಿತು‌. ಬ್ರೆಡ್ ಮತ್ತು ಜಾಮ್ ತಿಂದು ಹೊಟ್ಟೆ ತುಂಬಿಸಿಕೊಂಡೆ. ಮನಸ್ಸಲ್ಲಿ ಅಮ್ಮ ಎಲ್ಲಿ ಹೋದಳು ಎಂಬ ಗೊಂದಲ, ಕಾಲೇಜ್ ಗೆ ಕೂಡ ಹೋಗಲು ಮನಸ್ಸಾಗಲಿಲ್ಲ. ಭಯ ಮತ್ತು ಗೊಂದಲ ಎರಡು ಶುರುವಾಯಿತು. ಅವಳಿಗಾಗಿ ದಾರಿ ಕಾಯುತ್ತಾ ಕುಳಿತಿದ್ದೆ. ಹಿಂದೆ ಅವಳ ಜೊತೆ ಜಗಳ ಆಡಿದ ಕ್ಷಣಗಳು ನೆನಪಿಗೆ ಬಂತು. “ನನ್ನ ಅಮ್ಮ ನನ್ನ ಕಾಟ ಸಹಿಸಿಕೊಂಡು, ಅಕ್ಕನ ಜೊತೆ ಹೆಣಗಾಟ ಆಡಿ, ಅಪ್ಪನ ಜೊತೆ ಸಂಸಾರದಲ್ಲಿ ಸೊರಗಿ, ಬಂಧು ಮಿತ್ರರೊಡನೆ ಬಾಂಧವ್ಯ ಬೆಳೆಸಿ, ಸ್ನೇಹಿತರನ್ನು ಸಂಭಾಳಿಸಿ…. ಅಬ್ಬಾ… ಇಷ್ಟೆಲ್ಲಾ ಮಾಡುವ ಅವಳು ಒಂದು ವಿಸ್ಮಯದ ಶಕ್ತಿನೇ ಸರಿ”.
ಸಮಯ 10 ಗಂಟೆ ಆಯ್ತು. ಕಾಲ್ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ ಸಂಭಂದಿಕರಿಗೆಲ್ಲಾ ಕೇಳಿದೆ ಆದ್ರೆ ಯಾರು ಕೂಡ ಅಮ್ಮ ನಮ್ಮ ಜೊತೆಯಲ್ಲಿಯೇ ಇದ್ದಾಳೆ ಅಂತ ಹೇಳಲೇ ಇಲ್ಲಾ. ಭಯ ಅನ್ನುವುದರ ನಿಜವಾದ ಅರ್ಥ ಆಗ ತಿಳಿಯಿತು. ಏನು ಮಾಡೋದು ಅಂತ ದಿಕ್ಕು ತೋರುತ್ತಿಲ್ಲ. ಮನೆಯಲ್ಲಿದ್ದ ವಸ್ತುಗಳು, ಕಿಟಕಿ ಬಾಗಿಲುಗಳು, ಗೋಡೆಗಳು ನನ್ನನ್ನ ನೋಡಿ ನಗುತ್ತಿದೆ. “ಅಯ್ಯೋ ಹುಚ್ಚ ಅವಳಿದ್ದಾಗ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಆಡಿ ಕೋಪ ಮಾಡಿಕೊಳ್ತಿದ್ದೆ ಆದ್ರೆ ಈಗ ಅವಳ ಬೆಲೆ ಗೊತ್ತಾಯಿತಾ?? ಹೋಗು ಹುಡುಕು” ಅಂತ ಗೇಲಿ ಮಾಡುತ್ತಿದ್ದವು.
ಗಾಬರಿ, ಕೋಪ, ಆಕ್ರೋಶ, ಕರುಣೆ ಎಲ್ಲದರ ಮೂಲ ಕಣ್ಮುಂದೆ ಕಾಣುತ್ತಿತ್ತು. ಹೊರಗಡೆಯ ಗಾಳಿಯ ಸದ್ದು ಅವಳು ಉಸಿರಾಡಿದಂತಿತ್ತು. ಯಾರಾದ್ರೂ ಮಾತಾಡಿದ್ರೆ ಅಮ್ಮನ ಜೊತೆ ಮಾತಾಡ್ತಿದ್ದಾರಾ? ಅಂತ ಕಿವಿ ನೆಟ್ಟಗಾಗುತ್ತಿತ್ತು. ರಸ್ತೆಯಲ್ಲಿ ಓಡಾಡುವ ಆಟೋ ಸದ್ದು ಕೇಳಿದರೆ ಅಮ್ಮ ಬಂದೇಬಿಟ್ಟಳು ಅಂತ ಓಡಿ ಹೋಗುತ್ತಿದ್ದೆ. ಹೆಜ್ಜೆಯ ಸಪ್ಪಳ ಕೇಳಿದರೆ ಅವಳದ್ದೆ ಅನ್ನೊ ಭ್ರಮೆಯಲ್ಲಿ ಮುಳುಗಿ ಹೋಗಿದ್ದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನನ್ನ ಮಾತಿಗೆ ಪ್ರತಿಕ್ರಿಯಿಸುತ್ತಿತ್ತು. ಗೋಡೆ ಕಿಟಕಿ ಬಾಗಿಲುಗಳು ಕಿರುಚಾಡಿದಂತಿತ್ತು. ಆದರೆ ಮನೆ ಪ್ರಶಾಂತತೆಯಿಂದ ಇತ್ತು. ಏನು ನಡೀತಿದೆ ಅಂತ ನಿಜವಾಗಲು ಅರ್ಥವಾಗುತ್ತಿಲ್ಲ.
ತಕ್ಷಣ ಒಂದು ಕಾಲ್ ಬಂತು, ಕಾಲ್ ರಿಸೀವ್ ಮಾಡಲು ಕೂಡ ಭಯ, ಯಾರ್ ಕಾಲ್ ಆಗಿರಬಹುದು? ಏನಾಯಿತೊ? ಏನಾದರು ಕೆಟ್ಟದ್ದು ಕೇಳಿದರೆ ಏನು ಗತಿ ಅಂತ ಯೋಚನೆ. ಆ ಮೊಬೈಲ್ ಕೈಗೆತ್ತಿಕೊಂಡು ಕಾಲ್ ರಿಸೀವ್ ಮಾಡಿ ಯಾರು ಅಂತ ನಡುಕ ಧ್ವನಿಯಲ್ಲಿ ಕೇಳಿದೆ. ಅವನೊಬ್ಬ ಅಪರಿಚಿತ ವ್ಯಕ್ತಿ. ನಿನ್ನ ತಾಯಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಅಂದ, ಅವನ ಮಾತು ಮುಗಿದಿರಲಿಲ್ಲ ಆಗಲೆ ನನ್ನ ತಲೆಯಲ್ಲಿ ಅಮ್ಮ ಬಗ್ಗೆ ಏನ್ ಹೇಳ್ತಿದ್ದಾನೆ? ಅವಳಿಗೇನಾದರು ಹೆಚ್ಚು ಕಮ್ಮಿ ಆಯ್ತಾ? ಮೊಬೈಲ್ ಕಳೆದು ಹೋಯ್ತಾ? ಅಥವಾ ಅವಳೆ ಕಳೆದುಹೋಗಿದ್ದಾಳ? ಹೀಗೆ ಏನೇನೋ ಯೋಚನೆಗಳು ಮನಸ್ಸಿನಲ್ಲಿ ಕುಣಿಯುತ್ತಿದೆ. ಮನೆಯ ಬಾಗಿಲು ಕಿಟಕಿ ಗೋಡೆಗಳ ಬೈಗುಳದ ಕಿರುಚಾಟ ಇನ್ನು ಕೇಳಿಸುತ್ತಿತ್ತು. ಆ ವ್ಯಕ್ತಿಯ ಮಾತು ಮುಗಿದಿರಲಿಲ್ಲ “ನಿನ್ನ ಅಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದೆ ಅದಕ್ಕೆ ನನ್ನ ಮೊಬೈಲ್ ನಲ್ಲಿ ಕಾಲ್ ಮಾಡ್ತಿದ್ದಾರೆ. ಅವರು ಇಲ್ಲೇ ಇದ್ದಾರೆ ಮಾತಾಡು ಅಂತ ಫೋನ್ ಅವರ ಕೈಗೆ ಕೊಟ್ಟ.
“ಲೋ” ಅಂತ ಕೇಳಿದ ಆ ಧ್ವನಿಗೆ ಕಿರುಚಾಡುತ್ತಿದ್ದ ಕಿಟಕಿ ಗೋಡೆಗಳೆಲ್ಲಾ ನಿಷಬ್ದವಾದವು. ಅವರ ಕಿರುಚಾಟ ನಿಲ್ಲಿಸೋಕೆ ಅವಳ ಧ್ವನಿ ಸಾಕಾಗಿತ್ತು.
“ಲೋ ರಾತ್ರಿ ಮೈಸೂರಿನಿಂದ ಕಾವೇರಿ ಎಕ್ಸ್ ಪ್ರೆಸ್ ರೈಲು ಹತ್ತಿ ಸುಸ್ತಾಗಿತ್ತು ಅಂತ ಮಲಗಿದೆ ಮತ್ತೆ ಕಣ್ಣು ಬಿಟ್ಟು ನೋಡಿದರೆ ಬಂಗಾರಪೇಟೆಯಲ್ಲಿ ಇದ್ದೀನಿ. ಬೆಂಗಳೂರು ಬಂದಿದ್ದು ಗೊತ್ತಾಗಿಲ್ಲ ಹೋಗಿದ್ದು ಗೊತ್ತಾಗಿಲ್ಲ. ಈ ಹಾಳಾದ್ ಮೊಬೈಲ್ ಚಾರ್ಜ್ ಕಮ್ಮಿ ಆಗಿ ಸ್ವಿಚ್ ಆಫ್ ಆಯ್ತು, ನಿನ್ನ ನಂಬರ್ ಯಾವುದೊ ಚೀಟಿಯಲ್ಲಿ ಬರೆದಿಟ್ಟಿದ್ದ ನೆನಪು ಹುಡುಕಿದ್ದಕ್ಕೆ ಈಗ ಸಿಕ್ತು ಯಾರೋ ಪುಣ್ಯಾತ್ಮ ಫೋನ್ ಮಾಡಿ ಕೊಟ್ರು. ಹೇಗೋ ಇಲ್ಲಿಂದ ಬರೋದು? ನನ್ಗೆ ಎಲ್ಲಾ ಹೊಸ ಜಾಗ ತರ ಕಾಣ್ತಿದೆ”. ಅಂತ ಒಂದೇ ಉಸಿರಲ್ಲಿ ಹೇಳಿದಳು. ನಾನು ಮನೆಯಲ್ಲಿ ಅವಳಿಲ್ಲದ ಘಳಿಗೆ ಒಂದು ಸಲ ನೆನೆಸಿಕೊಂಡು “ಅಬ್ಬಾ… ಅಮ್ಮ ಇಲ್ಲ ಅಂದ್ರೆ ಒಂದು ದಿನ ಕಳೆಯೋಕೆ ಆಗೊಲ್ಲ ಎಂತಾ ಸಂಬಂಧ ಸ್ವಾಮಿ ಅಂತ ತಲೆ ಮೇಲೆ ನಾನೆ ಹೊಡೆದುಕೊಂಡು ಬುದ್ದಿ ಕಲಿಯೋ ಮಗನೆ” ಅಂತ ಹೇಳಿ, ಅಮ್ಮನಿಗೆ ಅಲ್ಲಿಂದ ಮೆಜೆಸ್ಟಿಕ್ ಗೆ ಬಸ್ ಹತ್ತಿ ಬಾ ಅಲ್ಲಿಂದ ನಾನು ಮನೆಗೆ ಕರ್ಕೊಂಡು ಬರ್ತೀನಿ ಅಂತ ಹೇಳಿ ಅವಳಿಗೆ ಧೈರ್ಯ ತುಂಬಿ ನಿಟ್ಟುಸಿರು ಬಿಟ್ಟೆ.
ಅವಳಿಲ್ಲದ ಎರಡು ದಿನದ ಪರದಾಟ ನೆನೆಸಿಕೊಂಡರೆ ಈಗಲು ಮೈ ಜುಮ್ ಅನ್ನುತ್ತೆ. ಅಮ್ಮ ಇದ್ದಾಗ ಅವಳ ಕಷ್ಟ ಅರ್ಥ ಆಗೋಲ್ಲ ಆದರೆ ದೇವರು ಎರಡು ದಿನದಲ್ಲೇ ಅವಳ ಸಂಸಾರದ ಜವಾಬ್ದಾರಿಯನ್ನ ತಿಳಿಸಿಕೊಟ್ಟ. ಈಗಲು ಅಮ್ಮನ ಜೊತೆ ಮಾತನಾಡದಿದ್ರೆ ಒಂದು ವರ್ಷ ಆದಂತೆ ಫೀಲ್ ಆಗುತ್ತೆ.
ಅಮ್ಮ ಮನೆಗೆ ಬಂದ ಕ್ಷಣವೇ “ಏನೋ ಮನೆ ಇಷ್ಟು ಕ್ಲೀನ್ ಆಗಿದೆ. ಅಷ್ಟು ಒಳ್ಳೆ ಬುದ್ದಿ ಬಂತಾ ನಿಂಗೆ” ಅಂತ ಹೇಳಿದರು. ನನ್ನ ದೋಸ್ತ್ ಗಳು ಮಾಡಿದ ಕೆಲಸನ ನಾನೆ ಮಾಡಿದ್ದು ಅಮ್ಮ ಅಂತ ಬಿಲ್ಡ್ ಅಪ್ ತಗೊಂಡು ಒಂದು ಮುಗುಳು ನಗೆ ಬೀರಿದೆ. “ನೀನ್ ಒಬ್ನ ಇಷ್ಟೆಲ್ಲಾ ಮಾಡೋಕೆ ಸಾಧ್ಯ ಇಲ್ಲ, ಯಾರ್ ಬಂದಿದ್ರು ಮನೆಗೆ” ಅಂತ ಕೇಳಿದರು.
ನಾವ್ ಎಷ್ಟೇ ಬುದ್ದಿವಂತರಾದ್ರು ಅಮ್ಮನ ಮುಂದೆ ನಮ್ಮ ಆಟ ನಡೆಯೋಲ್ಲ ಅಲ್ವಾ…
ಕೃಷ್ಣಮೂರ್ತಿ. ಕೆ
Categories Short StoriesTags , , ,

4 thoughts on “ಅಮ್ಮನಿಲ್ಲದ ಎರಡು ದಿನ

  1. Very nice bro superb

    Like

  2. The way of narrating is beloved the perfect site for story readers😊

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close