ಕಾಶಿಯಾತ್ರೆ

ಕಾಶಿನಾಥ್. ಈ ಒಂದು ಅದ್ಭುತ ಕಲಾವಿದನ ಹೆಸರು ಹೇಳುತ್ತಿದ್ದಂತೆ ಎಲ್ಲರ ಮುಖದಲ್ಲೊಂದು ನಗು ಹಾಗು ಆ ಕಲಾವಿದ ಕನ್ನಡಿಗ ಎಂಬ ಹೆಮ್ಮೆ. ಕನ್ನಡ ಚಿತ್ರರಂಗದ ಹೆಮ್ಮೆಯ ಗರಿಯಾಗಿ ಬೆಳೆದು, ಚಿತ್ರರಂಗವನ್ನು ಉತ್ತುಂಗಕ್ಕೆರಿಸುವ  ಕಾರ್ಯದಲ್ಲಿ ಇವರ ಪಾಲು ಮತ್ತು ಶ್ರಮ ಅಳೆಯಲಾಗದು‌. ಪೌರಾಣಿಕ ನಾಟಕ, ಕಾದಂಬರಿ ಆಧಾರಿತ ಚಿತ್ರಗಳು, ಕಲ್ಪನೆಗಳ ಆಧಾರಿತ ಚಿತ್ರಗಳು ಬರುತ್ತಿದ್ದಂತ ಸಮಯದಲ್ಲಿ ಹೊಸ ರೀತಿಯ ಕಾನ್ಸೆಪ್ಟ್, ವಿಭಿನ್ನ ರೀತಿಯ ಐಡಿಯಾಗಳನ್ನ ಉಪಯೋಗಿಸಿ ಹೀಗು ಚಿತ್ರಗಳನ್ನು ನಿರ್ದೇಶಿಸಬಹುದು ಎಂದು ತೋರಿಸಿ ಇಡೀ ಚಿತ್ರರಂಗವೆ ಬೆರಗಾಗುವಂತೆ ಸಾಧನೆ ಮಾಡಿ ಬಾಲಿವುಡ್, ಕಾಲಿವುಡ್, ಟಾಲಿವುಡ್, ಕನ್ನಡದ ಸ್ಯಾಂಡಲ್ ವುಡ್ ಕಡೆಗೆ ತಿರುಗಿ ನೋಡುವಂತೆ ಮಾಡಿದ ಮಹಾನ್ ಚಮತ್ಕಾರಿ ನಿರ್ದೇಶಕ ಕಾಶಿನಾಥ್.  1980ರ ದಶಕ ಕಾಶಿನಾಥ್ ಯುಗ ಎಂದೇ ಕರೆಯಲ್ಪಟ್ಟಿತು.
ಇವರ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳುವ ಮೊದಲು ಇವರ ಪರಿಚಯ ಮಾಡಿಕೊಳ್ಳೋಣ. ಇವರ ಪೂರ್ತಿ ಹೆಸರು ಕಾಶಿನಾಥ್ ಹತ್ವಾರ್. ಇವರು ಮೇ 8 1951 ರಂದು ಕುಂದಾಪುರದಲ್ಲಿ ಜನಿಸಿದರು. ಇವರ ತಂದೆ ವಾಸುದೇವ ರಾವ್ (ಬಿಸಿನೆಸ್ ಮ್ಯಾನ್) ತಾಯಿ ಸರಸ್ವತಿ (ಮನೆಯಾಕೆ), ಹೆಂಡತಿ ಚಂದ್ರಪ್ರಭ ಹಾಗು ಇವರಿಗೆ ಇಬ್ಬರು ಮಕ್ಕಳು, ಮಗ ಅಭಿಮನ್ಯು ಮತ್ತು ಮಗಳು ಅಮೃತವರ್ಷಿಣಿ. ಕಾಶಿನಾಥ್ ರವರಿಗೆ ಒಡಹುಟ್ಟಿದವರು 6 ಜನ, ಮೊದಲ ಮಗನಾಗಿ ಸತ್ಯನಾರಾಯಣ ಎರಡನೆಯ ಕುಲಪುತ್ರ ಕಾಶಿನಾಥ್, ಮೂರನೆಯವನಾಗಿ ದತ್ತಾತ್ರೇಯ, ರವಿ,ಉಮಾಪತಿ ಹಾಗು ಕೊನೆಯ ಸಹೋದರಿಯಾಗಿ ಗಾಯಿತ್ರಿ.
ಹೀಗೆ ಕಾಶಿನಾಥ್ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಸರಳ ಜೀವನ ನಡೆಸುವ ಸಜ್ಜನ ಕುಟುಂಬದಲ್ಲಿ ಬೆಳೆದುಬಂದವರು. ಚಿಕ್ಕ ವಯಸ್ಸಿನಲ್ಲಿ ತಂದೆ ಬಹಳ ಕಟ್ಟು ನಿಟ್ಟಾಗಿ ಬೆಳೆಸಿದ ಕಾರಣ ಬಹಳ ತುಂಟ ಹುಡುಗನಾಗಿದ್ದರು ಅಪ್ಪನ ಮುಂದೆ ಮಾತ್ರ ಗಾಂಭೀರ್ಯ ಮತ್ತು ಶಿಸ್ತುಬದ್ಧ ಹುಡುಗ. ಬಹಳ ಶಿಸ್ತಿನಿಂದ ಬೆಳೆಸಿದ ಕಾರಣ ಹೊರಗಡೆ ಎಲ್ಲಿಯೂ ಹೋಗದೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದಿ ಮುಂದೆ ಬರಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ ದೇಹ ನಾಲ್ಕು ಗೋಡೆಗಳ ಮಧ್ಯೆ ಇದ್ದರೆ ಮನಸ್ಸು ಮಾತ್ರ ಕೂತ ಜಾಗದಲ್ಲೇ ನಾಲ್ಕು ಲೋಕ ಸುತ್ತುತ್ತಿತ್ತು.
ಅವರ ತಾಯಿ ಸರಸ್ವತಿ ಅವರಿಗೆ ಸಿನಿಮಾರಂಗದಲ್ಲಿ ಹೀರೋಯಿನ್ ಆಗಿ ತೆರೆಯ ಮೇಲೆ ಬರಬೇಕೆಂಬ ಆಸೆ ಇತ್ತು ಆದರೆ ಅವರ ಮನೆಯ ಸಂಪ್ರದಾಯ ಕಟ್ಟುಪಾಡುಗಳು ಅವರ ಆಸೆ ಆಕಾಂಕ್ಷೆಗಳನ್ನು ಮೂಟೆ ಕಟ್ಟಿ ಪಕ್ಕಕ್ಕಿಡುವಂತೆ ಮಾಡಿತು. ಆದರು ಅವರ ಆಸೆಗಳು ಮಣ್ಣಾಗಲಿಲ್ಲ. ಅವರ ಮಗ ಕಾಶಿನಾಥ್ ಗೆ ಚಿತ್ರರಂಗದ ಬಗ್ಗೆ ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದಾನೆ ಅಂತ ಗುರುತಿಸಿದ ಮೊದಲ ಗುರು ಅವರ ತಾಯಿ.
ಅಷ್ಟಿಲ್ಲದೆ ದೊಡ್ಡೊರು ತಾಯಿಗಿಂತ ಗುರುವಿಲ್ಲ ಅಂತ ಹೇಳ್ತಾರಾ?
ಆ ತಾಯಿ ಗುರುತಿಸಿದ ಅಪ್ರತಿಮ ಪ್ರತಿಭೆ ಈಗ ದೇಶ ವಿದೇಶಗಳಲ್ಲಿ ನಕ್ಷತ್ರವಾಗಿ ಮಿಂಚುತ್ತಿದೆ. ಕಾಶಿನಾಥ್ ಚಿಕ್ಕವರಿದ್ದಾಗ ಅವರ ತಾಯಿ ಸರಸ್ವತಿ ಕಾಶಿನಾಥ್ ಗೆ ಆಗಾಗ್ಗೆ ಒಂದಿಷ್ಟು ಹಣ ಕೊಟ್ಟು “ಟೆಂಟ್ ನಲ್ಲಿ ಹೊಸ ಪಿಚ್ಚರ್ ಬಂದೈತಂತೆ ಹೊಗ್ ನೋಡ್ಕೂಂಡ್ ಬಾ” ಅಂತ ಗುಟ್ಟಾಗಿ ಹೇಳಿ ಕಳಿಸುತ್ತಿದ್ದರು. ಆದರೆ ಈ ಕಿಲಾಡಿ ಕಾಶಿನಾಥ್ ಆ ಹಣದಲ್ಲಿ ಬರಿ ಇಂಗ್ಲಿಷ್ ಚಿತ್ರಗಳನ್ನು ನೋಡಿ ಆ ಜನ ಹೇಗೆ ಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಸಂಭಾಷಣೆ ಗಳನ್ನು ಹೇಗೆ ನಡೆಸಬೇಕು, ಛಾಯಾಗ್ರಹಣ ಹೇಗಿರಬೇಕು, ಮುಖ್ಯ ಅಂಶಗಳನ್ನು ಹೇಗೆ ಎತ್ತಿ ಹಿಡಿಯಬೇಕು ಕಥೆಯ ಸಾರಾಂಶ ಹೇಗೆ ಪ್ರತಿಬಿಂಬಸಬೇಕು ಅಂತ ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅದರಿಂದ ಕಲಿತ ಎಷ್ಟೋ ವಿಷಯಗಳು ಅವರು ಸಿನಿಮಾರಂಗದಲ್ಲಿ ಬೆಳೆದು ಬರಲು ಮೂಲ ಕಾರಣವಾಯಿತು.
ಅವರು ಡಿಗ್ರಿ ಮಾಡುವಾಗಲೆ ಸ್ಲಿಪ್ ಅಂತ ಒಂದು ಕಿರುಚಿತ್ರ ನಿರ್ದೇಶಿಸಿ ಎಲ್ಲರು ಸೈ ಎನ್ನುವಂತೆ ಮಾಡಿದರು. ನಂತರ ನಿರ್ದೇಶನದಲ್ಲಿ ಒಲವು ಹೆಚ್ಚಾದಂತೆ ಮನಸ್ಸಿನಲ್ಲಿದ್ದ ಎಲ್ಲ ಅನುಭವಗಳು ಯೋಚನೆಗಳನ್ನ ಮೂಲವಾಗಿಟ್ಟುಕೊಂಡು ಒಂದು ದೊಡ್ಡ ಪ್ರಮಾಣದ ಚಿತ್ರ ನಿರ್ದೇಶಿಸಬೇಕೆಂದು ತೀರ್ಮಾನಿಸಿದರು. ಆದರೆ ಇದಕ್ಕೆ ಹಣ ಹಾಕುವವರು ಯಾರು ಇಲ್ಲ, ಹುಡುಕುತ್ತಾ ಹುಡುಕುತ್ತಾ ಕೊನೆಗೆ ತನ್ನ ತಂದೆಯ ಕಡೆಗೆ ಕಾಲ ಬೆರಳು ಮಾಡಿ ತೋರಿಸಿತು. ಬಿಸಿನೆಸ್ ಮ್ಯಾನ್ ಆಗಿದ್ದ ಅವರ ತಂದೆ ಹಣ ಹೂಡುವುದರಲ್ಲಿ ಎರಡು ಯೋಚನೆ ಇರಲಿಲ್ಲ ಆದರೆ ಮಗ ಎಲ್ಲಿ ಇದರಿಂದ ದಾರಿ ತಪ್ಪುತ್ತಾನೋ ಎಂಬ ಸಹಜ ಭಯ ಅವರಲ್ಲಿತ್ತು. ಆದರು ಮಗನ ಆಸೆಗೆ ಬೇಡ ಎನ್ನಲಾಗದ ಹೃದಯ ಬಂಡವಾಳ ಹೂಡುವುದಕ್ಕೆ ತಯಾರಾಯಿತು. ಆ ತಂದೆಯ ಮೊದಲ ನಿರ್ಮಾಣದ ಹಾಗು ಕಾಶಿನಾಥ್ ರವರ ಮೊದಲ ನಿರ್ದೇಶನದ ಚಿತ್ರ “ಅಪರೂಪದ ಅತಿಥಿಗಳು” (1976)ರಲ್ಲಿ ಹಾಸ್ಯ ಮತ್ತು ನಾಟಕ ಮಿಶ್ರಿತ ಸ್ವರೂಪ ತೆರೆಯ ಮೇಲೆ ಪ್ರದರ್ಶನಗೊಂಡಿತು. ಈ ಚಿತ್ರ ಹೇಳಿಕೊಳ್ಳುವಷ್ಟು ಹಣ ಗಳಿಸದಿದ್ದರು ಹಾಕಿದ ಹಣ ವಾಪಸ್ ಬರುವಂತೆ ಮಾಡಿತ್ತು. ಇದನ್ನ ಕಂಡು ಖುಷಿಯಾದ ಅವರ ತಂದೆ “ಮಗ ದಾರಿ ತಪ್ಪಲಿಲ್ಲ ಬದಲು ಸಾಧನೆ ಎಡೆಗೆ ಗುರಿ ಇಟ್ಟು ಶ್ರಮಿಸುತ್ತಿದ್ದಾನೆ” ಅಂತ ಒಳಗೊಳಗೆ ಮಗನ ಬಗ್ಗೆ ಹೆಮ್ಮೆ ಪಟ್ಟರು.
ಹೀಗೆ ಚಿತ್ರರಂಗಕ್ಕೆ ಕಾಲಿಟ್ಟ ಕಾಶಿನಾಥ್ ನಂತರ 1978ರಲ್ಲಿ ಸುರೇಶ್ ಹೆಬ್ಬಾಳ್ಕರ್ ಅವರು ನಾಯಕತ್ವ ದಲ್ಲಿ “ಅಪರಿಚಿತ” ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಕಾಶಿನಾಥ್ ರವರ ನಿಜ ಪ್ರತಿಭೆ ಬೆಳಕಿಗೆ ಬಂತು. ಕನ್ನಡ ಚಿತ್ರರಂಗದ ದಿಗ್ಗಜರು ಚಿತ್ರರಂಗವನ್ನ ಆಳುತ್ತಿದ್ದಂತ ಸಮಯದಲ್ಲಿ ಇಡೀ ದೇಶ ವಿದೇಶದ ಜನರು ಕಾಶಿನಾಥ್ ಕಡೆಗೆ ತಿರುಗಿ ನೋಡುವಂತೆ ಮಾಡುವುದು ಸುಲಭದ ಮಾತಲ್ಲ ಬಿಡಿ.
ಇದೆಲ್ಲದರ ನಡುವೆ ಕಾಶಿನಾಥ್ ಸಿನಿಮಾ ರಂಗದಲ್ಲಿ ಬರಿ ತಾನೊಬ್ಬ ಬೆಳೆಯಬೇಕು ಎಂಬ ಆಸೆ ಇರಲಿಲ್ಲ, ಬದಲಿಗೆ ತನ್ನ ಜೊತೆ ಇರುವ ಎಲ್ಲ ಹೊಸ ಪ್ರತಿಭೆಗಳು ತನ್ನೊಟ್ಟಗೆ ಬೆಳೆಯಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಹೀಗೆ ಅವರು ಇನ್ನೊಬ್ಬರಿಗೆ ಮಾದರಿಯಾಗುವ ಸಮಯದಲ್ಲೆ ಎಷ್ಟೊ ಕಲಾವಿದರಿಗೆ ಕಲಾ ಸರಸ್ವತಿಯಾದರು. ಇದಕ್ಕೆ ಸಾಕ್ಷಿಯಾಗಿ 1984ರಲ್ಲಿ ಬಿಡುಗಡೆಯಾದ “ಅನುಭವ” ಚಿತ್ರದ ಮೂಲಕ ಬೆಳಕಿಗೆ ಬಂದದ್ದು ಕನ್ನಡದ ಹೆಮ್ಮೆಯ ಸಂಗೀತ ನಿರ್ದೇಶಕ “ವಿ. ಮನೋಹರ್” ಈಗಲು ಸಹ “ಅನುಭವ” ಎಂಬ ಚಿತ್ರದ ಹೆಸರು ಕೇಳುತ್ತಿದ್ದಂತೆ ಎಲ್ಲರ ಮುಖದಲ್ಲೊಂದು ಮಂದಹಾಸ ಮೂಡಿತ್ತದೆ‌. ಇದೊಂದು ರೀತಿಯ ವಿಭಿನ್ನ ಪ್ರಯತ್ನದ ಚಿತ್ರ. ವಿ ಮನೊಹರ್ ಈ ಚಿತ್ರಕ್ಕೆ ನೀಡಿದ ಹಾಡುಗಳು ಈಗಲು ಕೂಡ ಮರೆಯಲಾಗದ ಹಾಡುಗಳು ಎಂದು ಹೆಸರು ಮಾಡಿದೆ. ಪೌರಾಣಿಕ ಹಾಗೂ ಕಾದಂಬರಿ ಆಧಾರಿತ ಚಿತ್ರಗಳು ಬರುತ್ತಿದ್ದಂತ ಸಮಯದಲ್ಲಿ ವಿಭಿನ್ನ ರೀತಿಯಲ್ಲಿ ಚಿತ್ರಗಳನ್ನು ನೀಡಿ ಎಲ್ಲರ ಮನೆಮಾತಾದ ಕಾಶಿನಾಥ್ ದೇಶ ವಿದೇಶಗಳಲ್ಲಿ ಹಾಗೂ ಬಹುಭಾಷಾ ಚಿತ್ರಗಳಲ್ಲಿ ನಿರ್ದೇಶನ ಮಾಡುವುದಕ್ಕೆ ಅವಕಾಶಗಳು ಸಾಲಾಗಿ ಬಂದು ನಿಂತವು. ಬೇರೆ ಭಾಷೆಯ ಚಿತ್ರಗಳು ನಿರ್ದೇಶನ ಮಾಡುವುದಕ್ಕೆ ಅಷ್ಟು ಒಲವು ತೋರಿಸದ ಅವರು ನಮ್ಮ ಭಾಷೆಯ ಚಿತ್ರಗಳು ನಿರ್ದೇಶನ ಮಾಡುವುದರಲ್ಲಿ ಬಹಳ ಬಿಜಿಯಾದರು. ಇನ್ನೊಂದು ಕಡೆ ಪ್ರತಿಭೆಗಳನ್ನು ಹುಟ್ಟುಹಾಕುವ ಪ್ರಯತ್ನದಲ್ಲಿ ಸಿಕ್ಕಿದ್ದು ನಮ್ಮ ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ. ಆಗ ಸಿಂಪಲ್ ಸ್ಟಾರ್ ಆಗಿದ್ದ ಉಪೇಂದ್ರ ಸೂಪರ್ ಸ್ಟಾರ್ ಆಗಿದ್ದು ನಮ್ಮ ಕಾಶಿನಾಥ್ ರವರ ದಯೆಯಿಂದ ಅಂದ್ರೆ ತಪ್ಪಾಗೊಲ್ಲ.
ಉಪೇಂದ್ರ ರವರು ಸಣ್ಣ ಪುಟ್ಟ ನಾಟಕಗಳಿಗೆ ಡೈಲಾಗ್ ಬರೆಯುತ್ತಾ ಹಾಡುಗಳಿಗೆ ಲಿರಿಕ್ಸ್ ಬರೆಯುತ್ತಾ ತಮ್ಮ ಕನಸುಗಳ ಬೆನ್ನತ್ತಿ ಹೋಗುತ್ತಿದ್ದರು. ಹೀಗೆ ಯಾರಿಂದಲೋ ಪರಿಚಯವಾಗಿ ಅವರೊಂದಿಗೆ ಒಡನಾಟ ಬೆಳೆದು ಪ್ರತಿದಿನ ಕಾಶಿನಾಥ್ ರವರ ಮನೆಯಲ್ಲೇ ಇದ್ದು ಅವರೊಂದಿಗೆ ಚಲನಚಿತ್ರ ನಿರ್ಮಿಸುವ ಹೊಸ ಬಗೆಯ ಐಡಿಯಾಗಳನ್ನ ರೂಪಿಸಿ ಚಿತ್ರರಂಗವನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರು. ಹೀಗೆ ಉಪೇಂದ್ರ ಅವರ ವಿಭಿನ್ನ ರೀತಿಯ ಯೋಚನೆಗಳನ್ನ ಗುರುತಿಸಿದ ಕಾಶಿನಾಥ್ ಅವರದ್ದೇ ನಿರ್ದೇಶನದಲ್ಲಿ ಮೂಡಿ ಬಂದ “ಅನಂತನ ಅವತಾರ”1989 ರಲ್ಲಿ ಒಂದು ಪುಟ್ಟ ಪಾತ್ರ ಉಪೇಂದ್ರ ಗೆ ಮೀಸಲಾಗಿಟ್ಟರು. ಅದರ ನಂತರ ಅಜಗಜಾಂತರ, ಹೆಂಡತಿಯೆಂದರೆ ಹೀಗಿರಬೇಕು, ಅವಳೇ ನನ್ನ ಹೆಂಡ್ತಿ, ಹೀಗೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದರು. “ಲವ್ ಮಾಡಿ ನೋಡು” ಎಂಬ ಚಿತ್ರದ ಮಂಗಳೂರು ಮಂಜುನಾಥ ಡೈಲಾಗ್ ಈಗಲು ಯಾರೂ ಮರೆಯೋಕಾಗಲ್ಲ.
ಕಾಶಿನಾಥ್ ಮೊದಲು ಅವರ ಮೈಕಟ್ಟು ಮತ್ತು ಮುಖ ಲಕ್ಷಣ ಅಷ್ಟೇನು ಹೇಳಿಕೊಳ್ಳುವಷ್ಟಿಲ್ಲ ಎಂಬ ಬೇಸರ ಅವರಿಗಿತ್ತು ಹಾಗಾಗಿ ಬರಿ ಸಿನಿಮಾ ನಿರ್ದೇಶನದಲ್ಲಿ ಮುಳುಗಿದ್ದರು. ಸುಮಾರು ವರ್ಷಗಳ ನಂತರ ಅವರಿಗೆ ಅರಿವಾಗಿದ್ದು ನಟನೆಗೆ ಬೇಕಾಗಿರುವುದು ಮೈಕಟ್ಟು ಮುಖ ಲಕ್ಷಣ ಅಲ್ಲ ಬದಲು ಮನಸ್ಸಲ್ಲಿ ಭಕ್ತಿ ಇಟ್ಟು ಪೂಜಿಸುವ ಕಲೆ. ಆ ಕಲೆಯನ್ನು ಮೂಲವಾಗಿಟ್ಟು ಅವರದ್ದೆ ಚಿತ್ರಗಳಲ್ಲಿ ನಟಿಸಿ ಯಾವ ನಟನಿಗು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟರು.
ಹೀಗೆ ಕಾಲ ಉರುಳಿದಂತೆ ಉಪೇಂದ್ರ ಚಲನಚಿತ್ರಗಳನ್ನ ನಿರ್ದೇಶಿಸಲು ಮುಂದಾದರು. ತನ್ನ ಗುರುವಿಗೆ ತನ್ನದೇ ಆದ ಚಿತ್ರಗಳಲ್ಲಿ ಒಂದು ಪಾತ್ರ ಕೊಟ್ಟು ಅವರಿಗೆ ಗೌರವ ಸಲ್ಲಿಸಬೇಕು ಎಂಬ ಆಸೆ ಉಪೇಂದ್ರ ಅವರಿಗೆ ತುಂಬ ಕಾಡುತ್ತಿತ್ತು ಅದೇ ಕಾರಣಕ್ಕೆ ‘ಶ್’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಶಿನಾಥ್ ರವರಿಗೆ ಒಂದು ಸ್ಥಾನ ಕಲ್ಪಿಸಲಾಯಿತು. ಆ ಕಾಲದಲ್ಲೇ ‘ಶ್’ ಒಂದು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿತ್ತು. ಆ ಸಿನಿಮಾ ಎಷ್ಟು ಬಾರಿ ನೋಡಿದರು ಬೇಜಾರಾಗೊಲ್ಲ, ನನ್ನ ಫೇವರೆಟ್ ಮೂವಿಗಳಲ್ಲಿ ಅದು ಕೂಡ ಒಂದು. ನಂತರ ಉಪೇಂದ್ರ ಮತ್ತು ಕಾಶಿನಾಥ್ ಇಬ್ಬರು ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬುದು ಜನರ ಬಯಕೆ ಅದರ ಬಗ್ಗೆ ಕಾಶಿನಾಥ್ ಗೆ ಕೇಳಿದರೆ ಅವರು ಹೇಳಿದ್ದು ಹೀಗೆ.
“ನೋಡಿ, ನಾನು ಉಪೇಂದ್ರ ಇಬ್ಬರು ನಿರ್ದೇಶಕರೆ ಆದರೆ ಅವನ ಶೈಲಿ ಬೇರೆ ನನ್ನ ಶೈಲಿ ಬೇರೆ ಇಬ್ಬರು ಸ್ಕ್ರೀನ್ ಶೇರ್ ಮಾಡೋಕೆ ಇನ್ನು ಕಾಲ ಇದೆ‌. ಅದಕ್ಕೆ ನಾನೆ ಒಂದು ಸ್ಕ್ರಿಪ್ಟ್ ರೆಡಿ ಮಾಡ್ತಿನಿ”. ಅಂತ ಹೇಳಿ ಜನರಲ್ಲಿ ಒಂದು ಕುತೂಹಲ ಮೂಡಿಸಿದರು‌.
ಈ ಹೆಸರಾಂತ ನಿರ್ದೇಶಕನಿಗೆ ಒಂದು ಅವಕಾಶ ದೊರಕಿತ್ತು. ಅದೇನೆಂದರೆ ಕನ್ನಡ ಚಿತ್ರರಂಗದ ಅತಿ ಶ್ರೇಷ್ಠ ಹಾಗು ವಿಭಿನ್ನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಚಲನಚಿತ್ರ ನಿರ್ದೇಶನದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುವ ಒಂದು ಅದ್ಭುತ ಅವಕಾಶ ದೊರಕಿತ್ತು. ಆದರೆ ನಮ್ಮ ಕಾಶಿನಾಥ್ ಆ ಕೆಲಸ ನನಗೆ ಬೇಡ ಎಂದು ಖಡಾಖಂಡಿತವಾಗಿ ಹೇಳಿದರು. ಯಾಕೆ ಅಂತ ಕೇಳ್ತೀರಾ?
ಕಾಶಿನಾಥ್ 80-90ರ ದಶಕದಲ್ಲೇ ಹೆಸರಾಂತ ನಿರ್ದೇಶಕ ಅವರು ಪುಟ್ಟಣ್ಣ ಕಣಗಾಲ್ ಅವರ ಜೊತೆ ಕೆಲಸ ಮಾಡಲು ನಿರಾಕರಿಸಿದರು ಎಷ್ಟೋ ಜನರಿಗೆ ಕಾಶಿನಾಥ್ ಅಹಂಕಾರಿ ಸ್ವಭಾವಿ ಅಂತ ಪ್ರತಿಬಿಂಬಿತರಾದರು. ಆದರೆ ಅದರ ನಿಜ ಸತ್ಯ ಏನೆಂದರೆ, ಪುಟ್ಟಣ್ಣ ಕಣಗಾಲ್ ರವರು ಚಿತ್ರೀಕರಣದ ಸೆಟ್ ಗೆ ಬರುತ್ತಿದ್ದಂತೆ ಬಹಳ ಶಿಸ್ತು ಮತ್ತು ಕೆಲಸವನ್ನು ಕಟ್ಟುನಿಟ್ಟಾಗಿ ನಡೆಸುವ ಸ್ವಭಾವದವರು‌. ಅವರಿಗೆ ಕೆಲಸದಲ್ಲಿ ಸೋಮಾರಿತನ ತೋರಿಸುವವರು ಎಂದರೆ ಬಹಳ ಸಿಟ್ಟು ಅಂತವರಿಗೆ ಕೆಲವು ಬಾರಿ ಕೈ ಮಾಡಿರುವ ಪ್ರಸಂಗಗಳು ಉಂಟು. ಇದನ್ನ ಅರಿತ್ತಿದ್ದ ಕಾಶಿನಾಥ್
“ನನ್ನ ಅನಿಸಿಕೆ ಮತ್ತು ನನ್ನ ದೃಷ್ಟಿಕೋನದಲ್ಲಿ ನಾನು ಸಿನಿಮಾ ಮಾಡ್ತೀನಿ ಹಾಗಂತ ನಾನು ಅವರ ಅಸಿಸ್ಟೆಂಟ್ ಆಗೋದಕ್ಕೆ ನಿರಾಕರಿಸಿದ್ದು ನನ್ನ ದೊಡ್ಡಸ್ತಿಕೆ ಅಲ್ಲ ನನ್ನ ಸಿನಿಮಾ ಮೊದಲು ನನಗೆ ಇಷ್ಟ ಆಗ್ಬೇಕು ಹಾಗಂತ ಅವರೊಟ್ಟಿಗೆ ಕೆಲಸ ಮಾಡಿ ಹೊಡಿಸಿಕೊಳ್ಳೋದು ನನಗಿಷ್ಟ ಇಲ್ಲ ಆ ಒಂದು ಕಾರಣಕ್ಕೆ ನಾನು ಬೇಡ ಅಂದಿದ್ದು. ನನ್ನ ಸಿನಿಮಾ ನೋಡುವ ಜನರಿಗೆ ಇಷ್ಟ ಆದ್ರೆ ತಗೋತಾರೆ ಇಲ್ಲ ಬೇಡ ಅಂತ ಕಾಶಿನಾಥ್ ಮುಖದ ಮೇಲೆ ಬೈತಾರೆ ಅಷ್ಟೇ. ಪುಟ್ಟಣ್ಣ ಕಣಗಾಲ್ ಜೊತೆ ಕೆಲಸ ಮಾಡೋದಿಲ್ಲ ಅನ್ನೋದು ನನ್ನ ಸ್ವಂತ ಅಭಿಪ್ರಾಯ ಅಷ್ಟೇ”.
 ಅಂತ ಟಿವಿ 9 ನಡೆಸಿದ ಒಂದು ಕಾರ್ಯಕ್ರಮದಲ್ಲಿ ಕಾಶಿನಾಥ್ ರವರೆ ಖುದ್ದಾಗಿ ಹೇಳಿದ ಮಾತುಗಳಿವು.
ಪ್ರತಿವರ್ಷ ಜಿ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುವ, ಪ್ರತಿಯೊಂದು ಮನೆ ಮನದ ಮಾತಾಗಿರುವ, ಪ್ರತಿಯೊಬ್ಬ ಯುವಕನಲ್ಲು ನವ ಚೈತನ್ಯ ಹುಟ್ಟಿಸುವ ಒಂದು ರಿಯಾಲಿಟಿ ಶೋ “ವೀಕೆಂಡ್ ವಿತ್ ರಮೇಶ್” ನಿಮಗೆಲ್ಲರಿಗು ತಿಳಿದಿದೆ. ಈ ಒಂದು ಅದ್ಭುತ ಕಾರ್ಯಕ್ರಮದ ಒಂದು ಸಂಚಿಕೆ ಕಾಶಿನಾಥ್ ರವರಿಗೆ ಮೀಸಲಿಟ್ಟಿತ್ತು. ಕನ್ನಡದ ಪ್ರತಿಯೊಬ್ಬ ಸಾಧಕರನ್ನು ಕರೆಸಿ ಅವರ ಜೊತೆ ಹರಟೆ ಹೊಡೆಯುತ್ತಾ ಅವರು ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಡಿಸುತ್ತಾ ನೋಡುಗರಿಗೆ ಸ್ಪೂರ್ತಿ ತುಂಬುವ “ರಮೇಶ್” ಅವರಿಗೆ ಸರಿಸಾಟಿ ಯಾರು ಇಲ್ಲ. ಇಂತಹ ಒಂದು ಶೋ ನಲ್ಲಿ ಕಾಶಿನಾಥ್ ರವರ ಚರಿತ್ರೆ ಅವರ ಬೆಳವಣಿಗೆಯ ಕಷ್ಟ ಸಂಕಟ ನೋವುಗಳನ್ನು ಕೇಳಿ ಮೈ ಜುಮ್ ಎನಿಸುವಂತೆ ಮಾಡಿದರು. ಒಂದು ಸಂಪೂರ್ಣ ಸಂಚಿಕೆಯಲ್ಲಿ ಅವರ ಕಷ್ಟಗಳನ್ನ ಹೇಳಿಕೊಂಡಿರುವುದು ಬಹಳ ಕಡಿಮೆ. ಆದರೆ ಅವರು ತನ್ನ ತಾಯಿಯ ಮೇಲೆ ಇಟ್ಟಿದ್ದ ಅಪಾರ ಪ್ರೀತಿ ನೋಡುಗರಿಗೆ ಹೃದಯ ಕಲಕುವಂತೆ ಮಾಡಿತ್ತು. ಅವರ ತಾಯಿ ವಿಧಿವಶರಾದಾಗ ಅವರ ಅಂತ್ಯಕ್ರಿಯೆ ಮಾಡಲು ಹಿಂಜರಿದರು‌. ಇದರ ಬಗ್ಗೆ ರಮೇಶ್ ಕೇಳಿದಾಗ,
“ಇಲ್ಲ ರಮೇಶ್ ನನ್ನ ಅಮ್ಮ ಸತ್ತಿಲ್ಲ ಅವರು ನನ್ನ ಜೊತೆಲೇ ಇದ್ದಾರೆ ಯಾರ್ ಹೇಳಿದ್ದು ನನ್ನ ಅಮ್ಮ ತೀರೋಗಿದ್ದಾರೆ ಅಂತ, ಅಮ್ಮ ಎಲ್ಲೋ ದೂರ ಹೋಗಿದ್ದಾರೆ ಕಣ್ಮುಂದೆ ಇಲ್ಲ ಅಂದ ಮಾತ್ರಕ್ಕೆ ಅವರು ಸತ್ ಹೋದ್ರು ಅಂತಾನ? ಅಮ್ಮ ಎಲ್ಲೋ ಹೋಗಿದ್ದಾರೆ ಬರ್ತಾರೆ”
ಅಂತ ರಮೇಶ್ ಮುಂದೆ ಅವರು ದುಃಖವನ್ನ ಇನ್ನೊಂದು ರೀತಿಯಲ್ಲಿ ವ್ಯಕ್ತಪಡಿಸಿದ್ರು. ಅಚ್ಚರಿ ವಿಷಯ ಏನಪ್ಪಾ ಅಂದ್ರೆ ಅವರ ತಾಯಿ ವಿಧಿವಶರಾದಾಗ ಒಂದು ಹನಿ ಕಣ್ಣಿರು ಹಾಕಲಿಲ್ಲ ಅನ್ನೋದು ಅವರ ಚಿಕ್ಕಮ್ಮ ರ ಹೇಳಿಕೆ.
ಹೀಗೆ ಕಾಶಿನಾಥ್ ತನ್ನ ಜೀವನದಲ್ಲಿ ಸಾಕಷ್ಟು ನೋವುಗಳನ್ನ ಒಳಗೊಳಗೆ ಇಟ್ಟುಕೊಂಡು ಯಾರೊಂದಿಗು ತನ್ನ ಕಷ್ಟಗಳನ್ನ ಹೇಳಿಕೊಳ್ಳದೆ ಬರಿ ಸಂತೋಷ ಸುಖ ಸಾಧನೆಗಳನ್ನ ಮಾತ್ರ ಹಂಚಿಕೊಂಡು ಇನ್ನೊಬ್ಬರಿಗೆ ಸ್ಪೂರ್ತಿಯಾಗಿ ಬದುಕಬೇಕು ಎಂಬ ಧೃಡ ನಿಯಮವನ್ನು ಇಟ್ಟುಕೊಂಡು ಬದುಕಿ ತೋರಿಸಿದರು.
ಜನವರಿ 18 2018, ಅದೊಂದು ಕರಾಳ ದಿನ, ಇಡೀ ಕನ್ನಡ ಚಿತ್ರರಂಗ ಕತ್ತಲಲ್ಲಿ ಮುಳುಗಿದ ದಿನ. ಬೆಳಗಿನ ಜಾವ ಸುಮಾರು 8 ಗಂಟೆ ವಿಷಯ ಎಲ್ಲ ಕಡೆ ಹರಡಿತು. ಯಾವ ನ್ಯೂಸ್ ಚಾನಲ್ ಹಾಕಿದರು ಒಂದೇ ಸುದ್ದಿ, ಎಲ್ಲರ ಬಾಯಲ್ಲೂ ಒಂದೇ ಮಾತು ಅದು “ಕಾಶಿನಾಥ್ ಇನ್ನಿಲ್ಲ”. ಅಭಿಮಾನಿಗಳು ಜಯನಗರದ ಅವರ ಮನೆಯ ಕಡೆ ದಾರಿ ಹಿಡಿದರು ಮನೆಯ ಮುಂದೆ ನೀರವ ಮೌನ ಆ ಮೌನದಲ್ಲೂ ಮನೆಯೊಳಗಿಂದ ಕುಟುಂಬಸ್ಥರ ಕಣ್ಣ ಹನಿ ನೀರು ಜಾರಿದ ಶಬ್ದ ಕೇಳುತ್ತಿತ್ತು. ನೋಡ ನೋಡುತ್ತಿದ್ದಂತೆ ಜನ ಸಾಗರ ಹರಿದು ಬಂತು. ಆದರೆ ಕಾಶಿನಾಥ್ ರವರ ಪಾರ್ಥಿವ ಶರೀರ ಇನ್ನು ಆಸ್ಪತ್ರೆಯಲ್ಲಿತ್ತು‌.
“ಹಾಡ್ಗ್ಕಿನ್ಸ್ ಲಿಂಫೋಮಾ” ಎಂಬ ಕಾಯಿಲೆಯಿಂದ ತುಂಬಾ ವರ್ಷಗಳಿಂದ ಬಳಲುತ್ತಿದ್ದ ಕಾಶಿನಾಥ್ ಅದರ ಬಗ್ಗೆ ಯಾರಿಗು ಒಂದು ಸುಳಿವು ಕೂಡ ಕೊಟ್ಟಿರಲಿಲ್ಲ. ಅದೊಂದು ಇಮ್ಯೂನ್ ಸಿಸ್ಟಮ್ ಅಂದ್ರೆ ದೇಹದ ನಿರೋಧಕ ವ್ಯವಸ್ಥೆಗೆ ಕ್ಯಾನ್ಸರ್ ಎಂಬ ಕೆಟ್ಟ ದೃಷ್ಟಿ ಬಿದ್ದಾಗ ಬರುವ ಕಾಯಿಲೆ  ಈ ಕಾಯಿಲೆಯಿಂದ ಬಳಲುತ್ತಿದ್ದ ಕಾಶಿನಾಥ್ ರವರು ಕೊನೆಯುಸಿರೆಳೆದದ್ದು ಅದೇ ಜನವರಿ 18ರಂದು. ಆ ದಿನ ಕನ್ನಡ ಚಿತ್ರರಂಗದಿಂದ ಒಂದು ಮುತ್ತು ಕೈ ಜಾರಿ ಬಿದ್ದು ಕಳೆದುಹೋದ ದಿನ.
ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ವಿವಿಧ ಭಾಷೆಗಳ  ಚಿತ್ರ ನಮ್ಮ ಕನ್ನಡ ಭಾಷೆಯ ಚಿತ್ರಗಳ ಜೊತೆ ಪೈಪೋಟಿ ನಡೆಸುವ ಸಮಯದಲ್ಲಿ ಎಲ್ಲಾ ಚಿತ್ರರಂಗಕ್ಕು ಅದಕ್ಕೆ ತಕ್ಕಂತೆ ಉತ್ತರ ಕೊಟ್ಟು ಕನ್ನಡ ಚಿತ್ರರಂಗದ ಸ್ಥಾನ ಮತ್ತು ಹಿರಿಮೆಯನ್ನು ಕಾಪಾಡಿದ ಹೆಗ್ಗಳಿಕೆ ಕಾಶಿನಾಥ್ ರವರಿಗೆ ಸಲ್ಲಬೇಕು. ಕನ್ನಡ ಚಿತ್ರರಂಗಕ್ಕೆ ಕವಚವಾಗಿ ನಿಂತಿದ್ದ “ಕನ್ನಡದ ಕವಚ ಕಾಶಿನಾಥ್” ಎಂದರೆ ತಪ್ಪಾಗೊಲ್ಲ.
ಕಾಶಿನಾಥ್ ಎಷ್ಟೋ ಯುವ ಪ್ರತಿಭೆಗಳಿಗೆ ಒಂದು ಯೂನಿವರ್ಸಿಟಿ. ಚಿತ್ರಗಳನ್ನ ನಿರ್ದೇಶಿಸಬೇಕು, ಅದಕ್ಕೆ ಎಷ್ಟು ಜನರ ತಂಡ ಬೇಕು, ಎಷ್ಟು ದಿನಗಳ ಕಾಲ ಶೂಟಿಂಗ್ ನಡೆಸಬೇಕು. ಎಷ್ಟು ಬಜೆಟ್ ನಲ್ಲಿ ಎಂತಹ ಸಿನಿಮಾಗಳನ್ನ ಮಾಡಬಹುದು, ಒಂದು ಟೇಕೆ ಗೆ ಎಷ್ಟು ಸಮಯ ಬೇಕು, ಇದರ ಜೊತೆಗೆ ಜೀವನದ ಮೌಲ್ಯಗಳನ್ನ ಹೇಗೆ ಅರ್ಥಮಾಡಿಕ್ಕೊಳ್ಳಬೇಕು, ಸಾಧನೆಯ ಶಿಖರ ಹೇಗೆ ಏರಬೇಕು. ಹೀಗೆ ಹಲವಾರು ರೀತಿಯ ವಿಷಯಗಳನ್ನ ಈ ಒಂದು ಯೂನಿವರ್ಸಿಟಿಯಲ್ಲಿ ಕಲಿಯಬಹುದು.
ಅವರ ಜೀವನದುದ್ದಕ್ಕೂ ಸ್ಪೂರ್ತಿ ತುಂಬುವ ವಿಷಯಗಳನ್ನೆ ಹೊತ್ತು ಬದುಕಿ ಬೆಳೆದು ಬಂದಿದ್ದಾರೆ. ಇನ್ನು ಅವರು ಹೇಳಿ ಕೊಟ್ಟ ಪಾಠ ಕಲಿತುಕೊಂಡು ನಮ್ಮ ಜೀವನವನ್ನು ನಡೆಸಿಕೊಂಡು ಅವರ ಹೆಸರನ್ನು ಉಳಿಸಿಕೊಂಡು ಹೋಗುವುದರಲ್ಲೆ ನಮ್ಮ ಮತ್ತು ಕಾಶಿನಾಥ್ ರವರ ಬಂಧನ ಗಟ್ಟಿಯಾಗುತ್ತದೆ.
ಅವರ ಜೀವನದ ಈ ಒಂದು ಸ್ಪೂರ್ತಿದಾಯಕ ಪುಟ್ಟ ಕಥೆಯೆ “ಕಾಶಿಯಾತ್ರೆ”.
ಇಂತಿ
ಕೃಷ್ಣಮೂರ್ತಿ. ಕೆ
Categories TrendingTags , ,

2 thoughts on “ಕಾಶಿಯಾತ್ರೆ

  1. Akshaybvaidya April 8, 2018 — 19:16

    Gud job kitti

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close