Network ಇಲ್ಲದ ಸಂಬಂಧಗಳು

ಕಾಲ ಬದಲಾಗಿದೆ. ಇದೊಂದು ಸಾಮಾನ್ಯವಾಗಿ ಈ ಕಾಲದಲ್ಲಿ ಪ್ರತಿಯೊಂದು ವಿಷಯದಲ್ಲೂ ಕೇಳಿ ಬರುವ ಮಾತು. ಎಂತ ಬದಲಾವಣೆಯನ್ನ ನೋಡಿದ್ರು ನಮ್ ಜನ ಕಾಲ ಬದಲಾಗಿದೆ ಸ್ವಾಮಿ ಅಂತ ಹೇಳದಿದ್ರೆ ಅವರ ಮಾತಿಗೆ ಪರಿಪೂರ್ಣತೆ ಸಿಗೊಲ್ಲ.
ಕಾಲ ಎಷ್ಟರ ಮಟ್ಟಿಗೆ ಬದಲಾಗಿದೆ ಅಂದ್ರೆ, ಒಂದು ಸಣ್ಣ ಉದಾಹರಣೆ ಕೊಡಲು ಇಷ್ಟಪಡ್ತೀನಿ.
ಆಗ ಅಮ್ಮ ಮತ್ತು ಮಕ್ಕಳ ಸಂಬಂಧ ಮಾತು ಮತ್ತು ಮನಸ್ಸಿನ ನಡುವೆ ಇರ್ತಿತ್ತು, ಆದ್ರೆ ಈಗ ಅಮ್ಮ ಮತ್ತು ಮಕ್ಕಳ ಸಂಬಂಧ ವಾಟ್ಸಾಪ್ ಮತ್ತೆ ಫೇಸ್ಬುಕ್ ನಲ್ಲಿ ನೋಡ್ಬೇಕು. ಮಗ ಸ್ನಾನಕ್ಕೆ ಹೋದಾಗ “ಓ ಗಾಡ್ ಐ ಫರ್ಗಾಟ್ ಮೈ ಟವೆಲ್” ಅಂತ ವಾಟ್ಸಾಪ್ ಸ್ಟೋರೀಸ್ ಹಾಕ್ತಾನೆ ಅದಕ್ಕೆ ಅವರ ಅಮ್ಮ “ಅಲ್ಲೇ ಬಾತ್ ರೂಮ್ ಬಾಗಿಲಲ್ಲಿ ಸಿಗಿಸಿದ್ದೀನಿ ನೋಡೊ” ಅಂತ ರಿಪ್ಲೆ ಮಾಡ್ತಾರೆ. ಹಿಂಗ್ ಆಗಿದೆ ನಮ್ಮ ಜನರ ಪರಿಸ್ಥಿತಿ.
ಈ ನಮ್ಮ ದಿನ ನಿತ್ಯದ ಕೆಲಸದಲ್ಲಿ ಡಿಜಿಟಲ್ ಮೀಡಿಯ ನಮ್ಮ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅದು ಒಳ್ಳೆಯ ರೀತಿಯಲ್ಲೂ ಹೌದು ಕೆಟ್ಟ ರೀತಿಯಲ್ಲೂ ಹೌದು. ಒಂದು ದಿನ ಮೊಬೈಲ್ ಕೈಯಲ್ಲಿ ಇಲ್ಲ ಅಂದ್ರೆ ಆಗೋ ಜಂಜಾಟಗಳು ತಂಟೆ ತಾಪತ್ರೆಗಳು ನೂರಾರು. ಈ ಡಿಜಿಟಲ್ ಮೀಡಿಯಾನ ಬಿಟ್ಟು ಬದುಕೋದು ಕಷ್ಟ ಅನ್ನೋ ಮಟ್ಟಿಗೆ ತಲುಪಿದ್ದೇವೆ. ಆದರೆ ಈ ಡಿಜಿಟಲ್ ಮೀಡಿಯಾ ಕೈ ಕೊಟ್ಟಾಗ ಆಗೋ ಜಂಜಾಟಾನೆ ನನ್ನ ಈ ಪುಟ್ಟ ಕಥೆ.
ಅವನ ಹೆಸರು ಪೃಥ್ವಿ, ಅವಳ ಹೆಸರು ಕೃತಿ. ಇವರಿಬ್ರುದು ಅರೇಂಜ್ ಮ್ಯಾರೇಜ್. ಇಬ್ರುದು ಹಿಂದೆ ಒಂದೊಂದು ಲವ್ ಸ್ಟೋರಿ ಇದ್ರು ಮನೆಯವರ ಒತ್ತಾಯದಿಂದ, ಮನೆಯವರನ್ನ ಖುಷಿ ಪಡಿಸಬೇಕು ಅನ್ನೋ ಒಂದೇ ಕಾರಣಕ್ಕೆ ಎಲ್ಲಾ ಕನಸು ಆಸೆಗಳನ್ನ ಬಿಟ್ಟು ಅರೇಂಜ್ ಮ್ಯಾರೇಜ್ ಆದ್ರು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋಕೆ ತುಂಬಾನೆ ಟೈಂ ಬೇಕಾಗಿತ್ತು. ಎಷ್ಟೇ ಆಗಲಿ ಜಗತ್ತನ್ನ ನೋಡಿ ಬೇಕಾಗಿರೋದಕ್ಕಿಂತ ಹೆಚ್ಚು ತಿಳಿದುಕೊಂಡು ಬಂದವರಲ್ವಾ ಅದಕ್ಕೆ ಇವರಿಬ್ಬರ ಬಾಂಡಿಂಗ್ ಸ್ಟ್ರಾಂಗ್ ಆಗೋಕೆ ಒಂದು ವರ್ಷ ಆಯ್ತು. ನಂತರದ ಖುಷಿಯ ಸಂಗತಿ ಏನಪ್ಪಾ ಅಂದ್ರೆ ಆಕೆ ಗರ್ಭಿಣಿ ಆದಳು. ಸುದ್ದಿ ಕೇಳಿದ ಪೃಥ್ವಿ ತಾನು ಅಪ್ಪ ಆಗ್ತಿದ್ದೀನಿ ಅಂತ ತುಂಬಾ ಖುಷಿಯಾದ ಹಾಗು ಅವತ್ತಿನಿಂದ ಅವರಿಬ್ಬರ ಪ್ರೀತಿ ಮುಗಿಲು ಕಡಲು ನಾಚುವಂತೆ ಮಾಡಿತ್ತು.
ಪ್ರತಿದಿನ ಕೃತಿಯ ಆರೋಗ್ಯ ನೋಡಿಕೊಳ್ಳೋದು ಪೃಥ್ವಿಯ ಜವಾಬ್ದಾರಿಯಾಗಿತ್ತು. ಪೃಥ್ವಿಗೆ ಒಳ್ಳೆಯ ಕಂಪನಿಯಲ್ಲೇ ಕೆಲಸ ಇದ್ದ ಕಾರಣ ಸಂಬಳ ಕೂಡ ಸಂಸಾರ ನಡೆಸಿ ಖರ್ಚು ಕಳೆದು ಉಳಿಸುವಷ್ಟು ಬರುತ್ತಿತ್ತು. ಹಾಗಾಗಿ ಕೃತಿ ಕೆಲಸಕ್ಕೆ ಹೋಗುವುದು ಪೃಥ್ವಿಗೆ ಇಷ್ಟ ಇರಲಿಲ್ಲ ಹಾಗು ಅದರ ಅಗತ್ಯವು ಇರಲಿಲ್ಲ. ಕೃತಿ ಕೂಡ ಗರ್ಭಿಣಿಯಾದ ಕಾರಣ, “ಸರಿ ಪರವಾಗಿಲ್ಲ ಪೃಥ್ವಿ ನಾನು ಆರೋಗ್ಯ ನೋಡ್ಕೋತೀನಿ ಹಾಗೆ ಮನೆಯ ಕೆಲಸದ ಜವಾಬ್ದಾರಿ ನನಗೆ ಇರಲಿ” ಅಂದಳು. ಆದರು ಪೃಥ್ವಿಗೆ ತನ್ನ ಹೆಂಡತಿ ಆಯಾಸ ಮಾಡ್ಕೋಬಾರದು ಅಂತ ಮನೆಯ ಕೆಲಸ ಕೂಡ ಅವನೆ ನೋಡ್ಕೋತ್ತಿದ್ದ. ಬೆಳಗ್ಗೆ ಎದ್ದು ಅವನು ಮೊದಲು ರೆಡಿಯಾಗಿ ಮಲಗಿದ್ದ ಹೆಂಡತಿಗೆ ಹಾಲು ತಂದು ಕೊಟ್ಟು, ಅಡುಗೆ ಮಾಡಿ, ಮನೆ ಸ್ವಚ್ಚ ಮಾಡಿ ನಂತರ ಕೆಲಸಕ್ಕೆ ಹೋಗುತ್ತಿದ್ದ. ಇದು ಅವನ ದಿನನಿತ್ಯದ ಕೆಲಸ ಆಗಿ ಹೋಯ್ತು. ಕೃತಿ “ನಾನು ಇಂತಹ ಒಬ್ಬ ಸುಂದರ ಮನಸ್ಸಿನ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳೋಕೆ ಇಷ್ಟು ದಿನ ಬೇಕಾಗಿತ್ತ?. ಎಂಥಾ ಮನುಷ್ಯ ಇವನು ನನ್ನ ಕೋಪ, ಆಸೆ, ದುಃಖ, ಕನಸ್ಸು, ಕಷ್ಟ ಎಲ್ಲವನ್ನು ಅರ್ಥ ಮಾಡಿಕೊಂಡು ನನನ್ನ ಖುಷಿಯಾಗಿ ಇಡೋಕೆ ಎಷ್ಟು ಪ್ರಯತ್ನ ಪಡ್ತಾನೆ” ಅಂತ ಒಬ್ಬಳೆ ಗೋಡೆಯನ್ನ ನೋಡುತ್ತಾ ನೆನೆದು ಎರಡು ಹನಿ ಕಣ್ಣಿಂದ ಜಾರಿ ಮನಸ್ಸಲ್ಲಿ ಮುತ್ತಾಯಿತು.
ನಮ್ಮ ಪೃಥ್ವಿ ಕೆಲಸ ಮಾಡುತ್ತಿದ್ದದ್ದು ಒಂದು ಕಾರ್ಪೊರೇಟ್ ಕಂಪನಿಯಲ್ಲಿ, ಆದ ಕಾರಣ ಅವನಿಗೆ ಕೆಲವೊಮ್ಮೆ ಡೇ ಮತ್ತು ಕೆಲವೊಮ್ಮೆ ನೈಟ್ ಶಿಫ್ಟ್ ಅಂತ ಬದಲಾಗ್ತಾಯಿತ್ತು. ಹಾಗಾಗಿ ಕೃತಿಯನ್ನ ನೋಡಿಕೊಳ್ಳೋಕೆ ಅಂತ ಅವರ ಅಮ್ಮನನ್ನ ಕರೆಸಿದ್ದ. ಅವನು ಕೆಲಸದಲ್ಲಿದ್ದರು ಬಿಡುವು ಮಾಡಿಕೊಂಡು ಅವಳಿಗೆ ಮೆಸೇಜ್ ಅಥವ ಕಾಲ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದ. ಕೃತಿಯ ಮೇಲೆ ಅಷ್ಟು ಕಾಳಜಿ ಅವನಿಗೆ. ಹೀಗೆ ನೋಡ ನೋಡುತ್ತಿದ್ದಂತೆ ಆಕೆಗೆ ಏಳು ತಿಂಗಳಾಯ್ತು. ಕೃತಿಯ ಅಮ್ಮ ಜೊತೆಯಲ್ಲಿ ಇರೊ ಕಾರಣ ಆಕೆಗೆ ಏನು ಆಗದೆ ಇರೋ ಹಾಗೆ ಅತ್ತೆ ನೋಡ್ಕೋತಾರೆ ಅನ್ನೋ ಧೈರ್ಯ ಮತ್ತು ನಂಬಿಕೆ ಅವನದ್ದು.
ಪೃಥ್ವಿಯ ಮನೆ ಕನಕಪುರ ರಸ್ತೆಯ ಒಂದು ಲೇಔಟ್ ನಲ್ಲಿತ್ತು. ಸ್ವಂತ ಮನೆ ಆದ ಕಾರಣ ಅವನಿಗೆ ಮನೆ ಬದಲಾಯಿಸುವ ಚಿಂತೆ ಇರಲಿಲ್ಲ. ಆದರೆ ಏನಾದರು ಕಷ್ಟ ಅಂದ್ರೆ ಸಹಾಯಕ್ಕೆ ಅಂತ ಅಕ್ಕಪಕ್ಕದಲ್ಲಿ ಯಾರೂ ಇರಲಿಲ್ಲ. ಅದೊಂದು ಇಂಡಿಪೆಂಡೆಂಟ್ ಹೌಸ್ ಆಗಿತ್ತು. ಸ್ವಲ್ಪ ದೂರದಲ್ಲಿ ಮನೆಗಳಿದ್ದವು ಆದರೆ ಅವರು ಕಷ್ಟಕ್ಕೆ ಕೈ ಹಿಡಿಯುವ ಜನರಾಗಿರಲಿಲ್ಲ. ಈ ಒಂದು ಚಿಂತೆ ಪೃಥ್ವಿಗೆ ತುಂಬಾ ಕಾಡುತ್ತಿತ್ತು. ಆದರು ದೇವರಿದ್ದಾನೆ ಕಷ್ಟ ಅಂದಾಗ ಒಂದಲ್ಲಾ ಒಂದು ದಾರಿ ತೋರಿಸ್ತಾನೆ ಅನ್ನೋ ನಂಬಿಕೆಯಲ್ಲೇ ದಿನಗಳನ್ನ ಕಳೆಯುತ್ತಿದ್ದ.
ಹೆಣ್ಣು ಎಂತಹ ಪರಿಸ್ಥಿತಿಗಳನ್ನು ತಾನೆ ನಿಂತು ಎದುರಿಸಬಲ್ಲ ಶಕ್ತಿ ಹೊಂದಿರುತ್ತಾಳೆ ಆದರೆ ಆಕೆ ಗರ್ಭಿಣಿಯಾದಾಗ ಮಲಗಲು ಗಂಡನ ತೋಳು ಬಯಸುತ್ತಾಳೆ. ಅವನ ಎದೆಯ ಮೇಲೆ ತಲೆ ಇಟ್ಟು ಮಲಗಲು ಇಚ್ಚಿಸುತ್ತಾಳೆ. ಅದೆಲ್ಲದಕ್ಕು ಹೆಚ್ಚಾಗಿ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ, ತನ್ನ ಗರ್ಭದ ನೋವು ಅನುಭವಿಸುವ ಸಮಯದಲ್ಲಿ ತನ್ನ ಗಂಡನ ಕೈ ಹಿಡಿದು ಆಕೆಯ ಆ ನೋವಲ್ಲು ಒಂದು ಖುಷಿಯನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. “ಆ ಒಂದು ಸೂಕ್ಷ್ಮ ಸಮಯದಲ್ಲಿ ನನ್ನ ಗಂಡ ಜೊತೆಯಲ್ಲಿದ್ದರೆ ಸಾಕು ನಾನು ಎಂತಹ ಕಷ್ಟಗಳನ್ನು ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಮತ್ತು ಧೈರ್ಯ ಅವಳಿಗಿರುತ್ತದೆ”
ಹೀಗೆ ಕಾಲ ಉರುಳಿದಂತೆ ಡಾಕ್ಟರ್ ಆಕೆಯ ಆಪರೇಷನ್ ಗೆ ಕೊಟ್ಟಿದ್ದ ಡೇಟ್ ಹತ್ತಿರ ಬಂತು. ಪೃಥ್ವಿ ಗೆ ಒಂದು ಕಡೆ ಖುಷಿಯಾದರೆ ಮತ್ತೊಂದು ಕಡೆ ಭಯ. ನನ್ನ ಕೃತಿಗೆ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಏನಪ್ಪಾ ಕಥೆ ಅಂತ ಭಯದಿಂದ ಪ್ರತಿದಿನ ದೇವರಲ್ಲಿ ಅವನ ಬೇಡಿಕೆ ಹೆಚ್ಚುತ್ತಿತ್ತು. ಕೃತಿಯನ್ನ ನೋಡಿಕೊಳ್ಳೋಕೆ ಮತ್ತು ನೋವು ಹೆಚ್ಚಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅಂತ ಕೊಟ್ಟಿದ್ದ ಡೇಟ್ ಗೆ ಮೂರು ದಿನ ಮೊದಲೆ ಕೆಲಸಕ್ಕೆ ರಜೆ ಹಾಕ್ಕಿದ್ದ. ಆದರೆ ಆಕೆಗೆ ನೋವು ಕಾಣಿಸಿಕೊಳ್ಳದ ಕಾರಣ ಮತ್ತು ಅವನು ರಜೆ ಹಾಕಿದ್ದಕ್ಕೆ ಕೆಲಸಗಳು ಹೆಚ್ಚಾದ ಕಾರಣ ಅವನು ಮತ್ತೆ ಕೆಲಸಕ್ಕೆ ಅನಿವಾರ್ಯವಾಗಿ ಹೋಗಬೇಕಾಯಿತು.
ಆ ದಿನ ಕೃತಿ ಗೆ ನೋವು ಶುರುವಾಯಿತು. ಅಮ್ಮ ತಳಮಳಗೊಂಡರು, ರಾತ್ರಿ ಕರೆಂಟ್ ಇಲ್ಲ, ಪೃಥ್ವಿ ಗೆ ಕಾಲ್ ಮಾಡಲು ಮೊಬೈಲ್ ನಲ್ಲಿ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿದೆ. ಇಂತಹ ಸಮಯದಲ್ಲಿ ಮೊದಲು ಕೈ ಕೊಟ್ಟಿದ್ದು ಡಿಜಿಟಲ್ ಮೀಡಿಯಾ. ಪೃಥ್ವಿಯನ್ನ ಕಾಂಟಾಕ್ಟ್ ಮಾಡಲು ಯಾವ ದಾರಿ ಕೂಡ ಇಲ್ಲದಂತಾಯಿತು. ಅಕ್ಕ ಪಕ್ಕ ಯಾವ ಮನೆಯೂ ಇಲ್ಲ, ಆಂಬುಲೆನ್ಸ್ ಗೆ ಕಾಲ್ ಮಾಡೋಣ ಅಂದ್ರೆ ಮೊಬೈಲ್ ಕೂಡ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿದೆ. ಕೃತಿಗೆ ನೋವು ಹೆಚ್ಚಾಯಿತು, ಬೆವರು ಬರಲು ಶುರುವಾಯಿತು. ಅಮ್ಮ ಹೇಗಾದರೂ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತಳು.
ಆಗ ಕೊನೆಯ ಕ್ಷಣದಲ್ಲಿ ಏನು ಮಾಡಲಾಗದ ಪರಿಸ್ಥಿತಿಯಲ್ಲಿದ್ದಾಗ ಕೃತಿಯ ಮನೆಗೆ ಬಂದದ್ದು “ಕರ್ಣ”.
ಇವನ್ಯಾರು ಅಂತ ಯೋಚಿಸ್ತಿದ್ದೀರ?. ಇವನಿನ್ಯಾರು ಅಲ್ಲ ಸ್ವಾಮಿ ಕೃತಿಯ ಮನಸ್ಸನ್ನ ಗೆದ್ದು ಅವರಿಬ್ಬರೂ ಮದುವೆಯಾಗಬೇಕು ಅಂದುಕೊಂಡಿದ್ದವರು. ಹೌದು ರೀ, ಕರ್ಣ ಕೃತಿಯ ಬಾಯ್ ಫ್ರೆಂಡ್.
ಕರ್ಣ ಅವರ ಮನೆಗೆ ಬಂದಾಗ ಕೃತಿಯ ಪರಿಸ್ಥಿತಿ ನೋಡಿ ತಾನೆ ತನ್ನ ಎರಡೂ ಕೈಗಳಿಂದ ಅವಳನ್ನು ಮಗುವಂತೆ ಎತ್ತಿಕೊಂಡು ತನ್ನ ಕಾರ್ ನಲ್ಲಿ ಕೂರಿಸಿ ಆಕೆಯ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟ. ಕೃತಿಯ ಮನಸ್ಸಲ್ಲಿ “ಕರ್ಣ ಯಾವತ್ತಿದ್ರು ನನ್ನ ಕಷ್ಟದಲ್ಲಿ ಇರ್ತಾನೆ. ಓಳ್ಳೆ ಗಂಡ, ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡಿರುವ ನನ್ನ ಪ್ರೀತಿ ಇವರಿಬ್ಬರು ಇದ್ದ ಮೇಲೆ ನನಗಿನ್ನೇನು ಯೋಚನೆ. ನಾನು ನಿಜವಾಗಲು ಭಾಗ್ಯವಂತೆ”. ಈ ನೋವಲ್ಲು ಇಂತಹ ಆನಂದ ಯಾರಿಗೆ ಸಿಗುತ್ತೆ ಹೇಳಿ. ಖುಷಿಯಲ್ಲಿ ಕೃತಿಯ ಕಣ್ಣು ತುಂಬಿತ್ತು.
ದಾರಿಯಲ್ಲಿ ಹೋಗುತ್ತಿದ್ದಂತೆ ಕರ್ಣ ಪೃಥ್ವಿಗೆ ಕಾಲ್ ಮಾಡಿ ಜಯನಗರದ “ಕ್ಲೌಡ್ ನೈನ್” ಆಸ್ಪತ್ರೆಗೆ ಬರಲು ಹೇಳಿದ. ಪೃಥ್ವಿ ತನ್ನ ಎಲ್ಲಾ ಕೆಲಸ ಬಿಟ್ಟು ಆಸ್ಪತ್ರೆಗೆ ಬಂದ.
ಆಸ್ಪತ್ರೆಯಲ್ಲಿ ಕಾದು ಕುಳಿತಿದ್ದ ಪೃಥ್ವಿ ಅವರು ಬಂದ ಕೂಡಲೇ ಕೃತಿಯನ್ನ ನಿಧಾನವಾಗಿ ಕೆಳಗಿಳಿಸಿ ಅವಳ ಕೈ ಹಿಡಿದು “ನಿನಗೆ ಏನು ಆಗೋಲ್ಲ ನಾನಿದ್ದೀನಿ” ಅಂತ ಹೇಳಿ ಆಕೆಯ ಹಣೆಗೆ ಒಂದು ಮುತ್ತು ಕೊಟ್ಟು ಆಪರೇಷನ್ ಥಿಯೇಟರ್ ಗೆ ಕಳಿಸಿದ. ಒಬ್ಬ ಮನುಷ್ಯನ ದೇಹದ 206 ಮೂಳೆಗಳನ್ನ ಮುರಿದಾಗ ಎಷ್ಟು ನೋವಾಗುತ್ತೊ ಅಷ್ಟೇ ನೋವು ಒಂದು ಹೆಣ್ಣು ಮಗುವಿಗೆ ಜನ್ಮ ನೀಡುವಾಗ ಅನುಭವಿಸುತ್ತಾಳೆ. ಅಂತಹ ಸನ್ನಿವೇಶದಲ್ಲಿ ಕೃತಿಗೆ ಎಲ್ಲಿಲ್ಲದ ಆನಂದ, ಸಂತೋಷ. “ನನ್ನ ಯಜಮಾನ ಮತ್ತು ನನ್ನ ಹುಡುಗ ಇಬ್ಬರನ್ನು ಒಟ್ಟಿಗೆ ಈ ಸಂದರ್ಭದಲ್ಲಿ ನೋಡಲು ನಾನು ಎಷ್ಟು ಪುಣ್ಯ ಮಾಡಿದ್ದೆ” ಎಂದು ಭಾವುಕಳಾದಳು.
ಕರ್ಣ, ಪೃಥ್ವಿ ಮತ್ತು ಕೃತಿಯ ತಾಯಿ ಭಯದಿಂದ ದೇವರಲ್ಲಿ ಕೈ ಹಿಡಿದು ಬೇಡುತ್ತಿದ್ದಾಗ ಡಾಕ್ಟರ್ ಬಂದು “ಪೃಥ್ವಿ ನಿಮ್ಮ ಕೃತಿ ಅಷ್ಟು ನೋವಲ್ಲು ನಗುನಗುತ್ತಾ ಆಪರೇಷನ್ ಥಿಯೇಟರ್ ಗೆ ಬಂದಿದ್ದಾರೆ, ತುಂಬಾ ಖುಷಿಯಾಗಿದ್ದಾರೆ. ಎಲ್ಲಾ ಒಳ್ಳೆದಾಗುತ್ತೆ” ಅಂತ ಧೈರ್ಯ ತುಂಬಿ ಹೋದರು.
ಪೃಥ್ವಿ ಕರ್ಣನ ಬಳಿಬಂದು “ಕರ್ಣ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು, ನೀನು ಇವತ್ತು ಇಲ್ಲ ಅಂದಿದ್ರೆ ನಾನು ಕೃತಿಯನ್ನ ಕಳಕೊತ್ತಿದ್ದೆ. ನೀನು ಆಕೆನ ಎಷ್ಟು ಪ್ರೀತಿಸ್ತೀಯ ಅಂತ ನನಗೆ ಬಹಳ ಚೆನ್ನಾಗಿ ಗೊತ್ತು. ತುಂಬ ಥ್ಯಾಂಕ್ಸ್ ಕರ್ಣ” ಅಂತ ಹೇಳಿ ಅವನನ್ನ ಬಾಚಿ ತಬ್ಬಿಕೊಂಡು ಎರಡು ಹನಿ ಕಣ್ಣಿರು ಕರ್ಣನ ಭುಜದ ಮೇಲೆ ಬಿತ್ತು. ಕರ್ಣ ತಕ್ಷಣ ಪೃಥ್ವಿಯನ್ನ ಎದುರು ನೋಡುತ್ತಾ “ಪೃಥ್ವಿ ಆಕೆಗೆ ಏನು ಆಗೋಲ್ಲ, ಆಕೆ ಅದೃಷ್ಟವಂತೆ, ಅವಳಿಗೆ ನಿನ್ನಂತಹ ಒಬ್ಬ ಮನೆಯ ಮತ್ತು ಮನದ ದೊರೆ ಸಿಕ್ಕಿರೋದು ತುಂಬಾ ಅದೃಷ್ಟ, ಯು ಆರ್ ದಿ ಬೆಸ್ಟ್” ಅಂತ ಹೇಳಿ ಅವನಿಗೆ ಸಮಾಧಾನ ಮಾಡಿದ.
ಅಮ್ಮ: ಕರ್ಣ, ಕೃತಿಯನ್ನ ನೋಡೋಕೆ ಇವತ್ತೇ ಯಾಕ್ ಬಂದೆ? ಅವಳಿಗೆ ನೋವು ಕಾಣಿಸಿಕೊಂಡಿದೆ ಅಂತ ನಿಂಗ್ ಹೇಗೆ ಗೊತ್ತಾಯ್ತು?.
ಕರ್ಣ: ಇಲ್ಲ ಅಮ್ಮ ನನಗೆ ಇವತ್ತೇ ಅವಳಿಗೆ ನೋವು ಬಂದಿದೆ ಅಂತ ಗೊತ್ತಿರಲಿಲ್ಲ. ನನ್ನ ಫ್ರೆಂಡ್ ಕೃತಿ ಗರ್ಭಿಣಿ ಆಗಿದ್ದಾಳೆ ಅಂತ ತುಂಬ ದಿನದ ಹಿಂದೆನೆ ಹೇಳಿದ್ದ. ಅವತ್ತಿಂದ ಕೃತಿಯನ್ನ ನೋಡ್ಕೊಂಡು ಬರಬೇಕು ಅಂದ್ಕೊಂಡಿದ್ದೆ. ಆದ್ರೆ ಕೆಲಸದ ಒತ್ತಡದಿಂದ ಬರಲಿಕ್ಕೆ ಆಗ್ಲಿಲ್ಲ. ಇವತ್ ಏನೋ ನೋಡ್ಲೆ ಬೇಕು ಅನ್ನಿಸ್ತು ಅದಕ್ಕೆ ಬಂದೆ. ಮುಂದೆ ಏನಾಯ್ತು ಅಂತ ನಿಮಗೆ ಗೊತ್ತು.
ಪೃಥ್ವಿ: ಕರ್ಣ, ನೀನು ಯಾವತ್ ಬಂದಿದ್ರು ನನಗೆ ಖುಷಿ ಇರ್ತಿತ್ತು ಆದ್ರೆ ಈ ದಿನ ಬಂದು ಆಕೆಯ ಜೀವ ನನ್ನ ಉಸಿರು ಉಳಿಸಿದ್ದೀಯಲ್ಲ ನೀನು ನಿಜವಾಗಲು ಗ್ರೇಟ್. ನಿನ್ನ ಮೇಲೆ ನನಗೆ ಗೌರವ ಹೆಚ್ಚಾಯ್ತು.
ಕರ್ಣ: ಹಾಗೆಲ್ಲ ಹೇಳಬೇಡ ಪೃಥ್ವಿ. ಕಾಲ ನಿರ್ಧಾರ ಮಾಡಿತ್ತು ಹಾಗೆ ನಡೀತು ಅಷ್ಟೇ.
ಅಮ್ಮ: ನೀನ್ ಇಲ್ಲ ಅಂದಿದ್ರೆ ಇವತ್ತು ನನ್ನ ಮಗಳನ್ನ ಕಳಕೊತ್ತಿದ್ದೆ ಕರ್ಣ. ಅವತ್ತು “ಅವಳನ್ನ ಇಷ್ಟ ಪಟ್ಟಿದ್ದೀನಿ ಮದುವೆ ಮಾಡ್ಕೊಡಿ” ಅಂತ ಕೇಳಿದಾಗ ಅದಕ್ಕೆ ನಾನು “ಅವಳನ್ನ ಎಷ್ಟು ಜೋಪಾನ ಮಾಡ್ತೀಯಾ” ಅಂತ ಕೇಳ್ದಾಗ ನೀನ್ ಹೇಳಿದ್ದು ಒಂದೆ ಮಾತು. “ಕಷ್ಟ ಬಂದಾಗ ಸುಖ ಸೋತಾಗ ಕಾಲ ನಿರ್ಧಾರ ಮಾಡುತ್ತೆ ಅಮ್ಮ ಹೇಳೊ ಅವಶ್ಯಕತೆ ಇಲ್ಲ ಅದು ನನ್ನ ಕರ್ತವ್ಯ”. ಅಂತ ಹೇಳಿದ್ದೆ ಆಗ ಕೋಪದಿಂದ ನಿನ್ನನ್ನ ಬೈದು ಹೊರಗೆ ಹಾಕಿದ್ದೆ ಆದ್ರೆ ಆ ಮಾತಿನ ಅರ್ಥ ಈಗ ನನಗೆ ಗೊತ್ತಾಯ್ತು. ನನ್ನನ್ನ ಕ್ಷಮಿಸಿಬಿಡು ಕರ್ಣ ಅಂತ ಅಮ್ಮ ಬಿಕ್ಕಳಿಸಿ ಅಳುತ್ತಿದ್ದಳು.
ಕರ್ಣ: ಅಮ್ಮ ನೀವು ಅಳಬಾರದು. ಅದು ಮುಗಿದ ಕಥೆ ಬಿಡಿ, ಆಕೆಗೆ ಏನು ಆಗೋಲ್ಲ. ಅವಳು ಖುಷಿಯಿಂದ ಒಳಗೆ ಹೋಗಿದ್ದಾಳೆ ಖುಷಿಯ ವಿಚಾರ ತರ್ತಾಳೆ ನೋಡಿ.
ಡಾಕ್ಟರ್ ಪೃಥ್ವಿಯ ಬಳಿ ಬಂದು, ಕಂಗ್ರಾಜುಲೇಷನ್ಸ ಪೃಥ್ವಿ. ನಿಮಗೆ ಹೆಣ್ಣು ಮಗು ಆಗಿದೆ. ತಾಯಿ ಮಗು ಇಬ್ಬರೂ ಆರಾಮಾಗಿದ್ದಾರೆ. ಸುದ್ದಿಯನ್ನ ಕೇಳಿದ ಎಲ್ಲರು ಒಮ್ಮೆ ನಿಟ್ಟುಸಿರು ಬಿಟ್ರು. ಕರ್ಣ ಪೃಥ್ವಿಯನ್ನ ತಬ್ಬಿಕೊಂಡ. ಅಮ್ಮ ದೇವರ ಮುಂದೆ ನಿಂತಿದ್ರೆ ಇನ್ನೊಂದು ಕಡೆ ಪೃಥ್ವಿ ಒಂದು ಖಾಲಿ ಗೋಡೆಯನ್ನ ನೋಡುತ್ತಾ ಎಲ್ಲಾ ನೋವು ಕಷ್ಟಗಳು, ನಡೆದ ಘಟನೆಯನ್ನ ಮೆಲುಕು ಹಾಕುತ್ತಾ ಒಂದು ಕ್ಷಣ ಮಗಳು ಕಣ್ಣ ಮುಂದೆ ಇದ್ದಾಳೆ ಅಂತ ನೆನೆದು ರೋಮಾಂಚನಗೊಂಡ.
ಕೃತಿ ಮತ್ತು ಮಗುವನ್ನ ನೋಡಲು ಪೃಥ್ವಿ ಮತ್ತು ಅಮ್ಮನನ್ನ ಕರ್ಣ ಕಳಿಸಿಕೊಟ್ಟ. ಮಗುವನ್ನ ನೋಡಿದ ಪೃಥ್ವಿಗೆ ತನ್ನ ಎಲ್ಲಾ ಸಂತೋಷ ಮತ್ತು ಕನಸು ಒಂದು ಬುತ್ತಿಯಾಗಿ ಕೃತಿಯ ಮಡಿಲಲ್ಲಿ ಮಲಗಿದಂತೆ ಕಾಣುತ್ತಿತ್ತು. ಇದು ನನ್ನ ಕೂಸು, ಇದು ನನ್ನ ಆಸ್ತಿ ಅಂತ ತುಂಬಾ ಆನಂದದಿಂದ ಮಗುವನ್ನ ಎತ್ತಿಕೊಂಡು ಮುದ್ದಾಡುತ್ತಿದ್ದ. ಕೃತಿಯ ಅಮ್ಮ “ನನ್ನನ್ನ ಅಮ್ಮ ಅಂತ ಮುದ್ದಾಗಿ ಕರೆಯುತ್ತಿದ್ದವಳು ಈಗ ಅವಳನ್ನೆ ಮುದ್ದಾಗಿ ಅಮ್ಮ ಅನ್ನುವ ಕಾಲ ಬಂದಿದೆ” ಅಂತ ಮಗಳ ಬಗ್ಗೆ ಹೆಮ್ಮೆ ಪಟ್ಟರು.
ಅಮ್ಮ ಹೊರಗಡೆ ಬಂದು “ಕರ್ಣ ಅಲ್ಲಿ ನನ್ನ ಅವಶ್ಯಕತೆಗಿಂತ ನಿನ್ನ ಅವಶ್ಯಕತೆ ತುಂಬಾ ಇದೆ ಹೋಗು ಕರ್ಣ” ಅಂದರು. ಕರ್ಣ ಒಳಗೆ ಬಂದು ನೋಡಿದಾಗ ಕೃತಿ ಮಲಗಿದ್ದಳು. ಪೃಥ್ವಿ ಮಗುವನ್ನ ಎತ್ತಿಕೊಂಡು ಆಟ ಆಡುತ್ತಿದ್ದ, ಅವನ ಖುಷಿಗೆ ಮಿತಿಯೇ ಇರಲಿಲ್ಲ. ಕರ್ಣ ಬಂದದ್ದು ಕೂಡ ಪೃಥ್ವಿಗೆ ಅರಿವಿರಲಿಲ್ಲ, ಮಗಳ ಪ್ರೀತಿಯಲ್ಲಿ ಅಷ್ಟು ಮುಳುಗಿದ್ದ.
ಕರ್ಣ ಕೃತಿಯನ್ನ ನೋಡುತ್ತಾ ಬಹಳ ಭಾವುಕದಿಂದ “ಕೃತಿ, ನೀನೊಂದು ತುಂಟ ಮುಗ್ಧ ಕೂಸು ಕಣೆ. ಆಗ ನನ್ನ ಜೊತೆ ಇದ್ದಾಗ ಎಷ್ಟು ತರ್ಲೆ ಮಾಡ್ತಿದ್ದೆ, ಯಾವಾಗ್ಲು ಎಷ್ಟು ಖುಷಿಯಿಂದ ಇರ್ತಿದ್ದೆ, ನಾನು ನೀನು ನಮ್ಮಿಬ್ಬರ ಮುಂದಿನ ಜೀವನದ ಬಗ್ಗೆ ಹೇಗೆಲ್ಲಾ ಕನಸು ಕಟ್ಟಿ ಜೋಪಾನ ಮಾಡ್ತಿದ್ವಿ,‌ ನಿನ್ನ ತುಂಟಾಟ ಎಲ್ಲರಿಗು ನಗು ತರಿಸ್ತಿತ್ತು. ಈಗ ನೋಡು ಒಂದು ಮಗುವಿಗೆ ಜನ್ಮ ನೀಡಿ ಏನು ಗೊತ್ತಿಲ್ಲ ಅನ್ನೊ ಹಾಗೆ ಮುದ್ದಾಗಿ ಮಲಗಿದ್ದೀಯ. ಆ ಮಗು ನಿನ್ನ ಮಗು ಆದರೆ ನೀನು ಯಾವತ್ತಿಗು ನನ್ನ ಮಗು ಕಣೆ. ಏನೆ ಆದ್ರು ನಿನನ್ನ ನೋಡಿಕೊಳ್ಳೋಕೆ ಪೃಥ್ವಿ ಇದ್ದಾನೆ. ನಂಗ್ ಗೊತ್ತು ನೀನು ಜೀವನದಲ್ಲಿ ತುಂಬಾ ಚೆನ್ನಾಗಿ ಇರ್ತಿಯ ಅಂತ. ಎಲ್ಲಾ ಒಳ್ಳೆದಾಗಲಿ ಕೃತಿ. ಮರೀಬೇಡ ನನ್ನನ್ನ ಬರ್ತಿನಿ ಬಾಯ್” ಅಂತ ಹೇಳಿ ಕಣ್ಣೀರು ಒರೆಸಿಕೊಂಡು ಪೃಥ್ವಿಗು ಹೇಳದೆ ಆ ಪುಟ್ಟ ಮಗುವಿನ ಮುಖವನ್ನು ನೋಡದೆ ಕರ್ಣ ಅಲ್ಲಿಂದ ಹೊರಟು ಬಿಟ್ಟ. ಪೃಥ್ವಿ ಮಗುವಿನ ಜೊತೆ ಆಟ ಆಡುತ್ತಿದ್ದ ಖುಷಿಯಲ್ಲಿ ಕರ್ಣನನ್ನ ಮರೆತುಬಿಟ್ಟ.
ಕೃತಿಗೆ ಎಚ್ಚರ ಆಯ್ತು. ಪೃಥ್ವಿ ಅಂತ ಕರೆದು ತಕ್ಷಣ ಮೈ ಮರೆತ್ತಿದ್ದ ಪೃಥ್ವಿ ಎಚ್ಚೆತ್ತುಕೊಂಡು ಕೃತಿಯ ಬಳಿ ಓಡಿ ಬಂದ. “ನೋಡು ಕೃತಿ ನಮ್ಮ ಮಗು ಕಣೆ ಇದು ಎಷ್ಟು ಮುದ್ದು ಮುದ್ದಾಗಿದ್ದಾಳೆ ನನ್ನ ಮಗಳು. ಕೃತಿ ತುಂಬಾ ಥ್ಯಾಂಕ್ಸ್ ಕಣೆ, ನನ್ನ ಕನಸ್ಸನ್ನ ನನಸಾಗಿಸಿಬಿಟ್ಟೆ ನೀನು” ಅಂತ ಹೇಳುತ್ತಿದ್ದಂತೆ ಕೃತಿ “ಆ ಮಗು ಯಾವತ್ತಿಗು ನಿನ್ನ ಸ್ವಂತ, ಯೋಚಿಸಬೇಡ” ಅಂತ ಹೇಳಿದಳು. ಸುತ್ತ ಮುತ್ತ ಕಾತರದಿಂದ ನೋಡುತ್ತಿದ್ದಳು, ಇದನ್ನ ಗಮನಿಸಿದ ಪೃಥ್ವಿ ಏನು ಬೇಕು ಕೃತಿ ಅಂದಾಗ “ಕರ್ಣ ಎಲ್ಲಿ ಹೋದ ಅವನ್ನ ಕರಿ ಪೃಥ್ವಿ ನಾನ್ ಮಾತಾಡ್ಬೇಕು” ಅಂದಾಗ ಪೃಥ್ವಿ ಕರ್ಣನನ್ನ ಎಲ್ಲಾ ಕಡೆ ಹುಡುಕಿದ ಎಲ್ಲೂ ಕರ್ಣನ ಸುಳಿವೆ ಇಲ್ಲ. ಕೃತಿಗೆ ಕೊಂಚ ಗಾಬರಿಯಾಯಿತು. ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿದೆ, ಅಕ್ಕ ಪಕ್ಕದ ಜನರನ್ನ ಕೇಳಿದ್ರೆ ನಮಗೆ ಗೊತ್ತಿಲ್ಲ ಸ್ವಾಮಿ ಅಂತಾರೆ.
ಕೃತಿ: ನಾನ್ ಎಲ್ಲೇ ಇರಲಿ ಹೇಗೆ ಇರಲಿ ಯಾವಾಗ್ಲು ಖುಷಿಯಾಗಿರ್ಬೇಕು ಅಂತ ಬಯಸೋನು ಅವನು, ನಿನ್ನೆಯಿಂದ ಅಷ್ಟು ಸಹಾಯ ಮಾಡಿ ಈಗ ನಾನು ಕಣ್ಣು ಬಿಡುವಷ್ಟರಲ್ಲಿ ಹೊರಟು ಹೋದ. ಅವನು ಮತ್ತೆ ನನನ್ನ ನೋಡೋಕೆ ಬರೋಲ್ಲ ಅದು ನನಗೆ ಬಹಳ ಚೆನ್ನಾಗಿ ಗೊತ್ತು ಅಂತ ಬಿಕ್ಕಿ ಬಿಕ್ಕಿ ಅತ್ತಳು.
ಈ ದೃಶ್ಯವನ್ನು ನೋಡಿದ ಪೃಥ್ವಿಯ ಮನ ಕಲಕುವಂತೆ ಮಾಡಿತ್ತು.
ಇನ್ನೊಂದು ಕಡೆ ಕರ್ಣ ಆಕೆಗೆ ಒಳ್ಳೆಯದನ್ನೇ ಬಯಸುತ್ತಾ ಮತ್ತೆ ಅವರಿಬ್ಬರ ನಡುವೆ ನಾನು ಹೋಗುವುದು ಸರಿಯಲ್ಲ ಅಂತ ನಿರ್ಧಾರ ಮಾಡಿದ. ಅದೊಂದು ಘಟನೆ ಅವನ ಮೇಲೆ ಬಹಳ ಪರಿಣಾಮ ಬೀರಿತ್ತು. ಅವನಿಗೆ ಒಂದು ಕಡೆ ಆನಂದ, ನನ್ನ ಕೃತಿಗೆ ಒಳ್ಳೆ ಲೈಫ್ ಸೆಟಲ್ ಆಯ್ತು. ಒಳ್ಳೆ ಗಂಡ, ಒಳ್ಳೆ ಜೀವನ, ಅದರ ಜೊತೆ ಈಗ ಒಂದು ಪುಟ್ಟ ಪಾಪು. ಆಕೆಯ ಖುಷಿಗೆ ಸರಿಸಾಟಿ ಇನ್ನೊಂದ್ ಇಲ್ಲ. ಇನ್ನೊಂದು ಕಡೆ ನಾನು ಇಷ್ಟ ಪಟ್ಟ ಹುಡುಗಿ ಈಗ ಅವಳಿಷ್ಟದಂತೆ ಬದುಕುತ್ತಿದ್ದಾಳೆ. ನನ್ನ ಖುಷಿ ಅವಳಲ್ಲಿ; ಅವಳ ಖುಷಿ ಪೃಥ್ವಿಯಲ್ಲಿ ಅಂತ ನೆನೆದು ಕೊಂಚ ಬೇಸರ ಮಾಡಿಕೊಂಡ.
ಆಕೆಯ ನೆನಪಲ್ಲೇ ಆತ ಮದುವೆ ಕೂಡ ಆಗದೆ ಒಂದು ಒಳ್ಳೆಯ ಕಾರ್ಯಕ್ಕೆ ನನ್ನ ಜೀವ ಮುಡಿಪಾಗಬೇಕು ಅಂತ ಇಂಡಿಯನ್ ಆರ್ಮಿ ಫೋರ್ಸ್ ಗೆ ಸೇರಿ, ಸೈನಿಕನಾಗಿ ಸೇವೆ ಸಲ್ಲಿಸಿ ಕೆಲವೇ ವರ್ಷದಲ್ಲಿ ಒಂದು ಉನ್ನತ ಸ್ಥಾನಕ್ಕೆ ತಲುಪಿದ. ಅವನ ಜೀವನ ಎಂದೆಂದಿಗು ಒಳ್ಳೆಯ ಕಾರ್ಯಕ್ಕೆ ಮೀಸಲು ಅಂತ ಕಾಲ ನಿರ್ಧಾರ ಮಾಡಿತ್ತು. ಹೀಗೆ ಒಂದು “ಸರ್ಜಿಕಲ್ ಸ್ಟ್ರೈಕ್” ನಲ್ಲಿ ಶತ್ರುಗಳೊಡನೆ ಹೋರಾಡಿ ಅವರನ್ನ ಸೋಲಿಸಿ ಇವನು ಸಾವಿಗೆ ಶರಣಾದ.
ಇದನ್ನ ಟಿವಿಯಲ್ಲಿ ನೋಡಿದ ಪೃಥ್ವಿ ಹಾಗು ಕೃತಿಗೆ ಹೃದಯ ಓಡೆಯುಂತೆ ಮಾಡಿತ್ತು, ಕರ್ಣನನ್ನ ನೆನೆದು ಅವನು ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾನೆ ಅವನು ನಿಜವಾದ ಕರ್ಣ ಅಂತ ಹೇಳಿ ಅವನೊಂದಿಗೆ ಕಳೆದ ಕೆಲವೊಂದು ಕ್ಷಣಗಳನ್ನು ನೆನೆದು ಕಣ್ಣೀರಿಟ್ಟರು. ಇದನ್ನ ನೋಡಿದ ಅವರ ಮುದ್ದು ಮಗಳು “ಇಬ್ಬನಿ” “ಅಮ್ಮಾ ಯಾಕೆ ಹೀಗೆ ಇಬ್ಬರು ಅಳುತ್ತಿದ್ದೀರ? ಟಿವಿಯಲ್ಲಿ ಬರ್ತಿರೋದು ಯಾರು?” ಅಂತ ಕೇಳಿದಾಗ ಅದಕ್ಕೆ ಪೃಥ್ವಿ “ನೀನು ಹುಟ್ಟೊವಾಗ ಅಮ್ಮ ತುಂಬಾ ಕಷ್ಟ ಪಟ್ಟಿದ್ರು ಪುಟ ಆಗ ಅಮ್ಮನಿಗೆ ಸಹಾಯ ಮಾಡಿ ಅಮ್ಮ ಮತ್ತೆ ನಿನ್ನನ್ನ ಉಳಿಸಿದ ನಮ್ಮಿಬ್ಬರ ಫ್ರೆಂಡ್ ಪುಟ ಅವರು” ಅಂತ ಹೇಳಿ ಇಬ್ಬನಿಯನ್ನ ತಬ್ಬಿಕೊಂಡ. ಪೃಥ್ವಿಯ ಈ ಮಾತಿಗೆ ಕೃತಿ ಮತ್ತು ಇಬ್ಬನಿಗೆ ದುಃಖ ಮತ್ತು ಹೆಮ್ಮೆಯ ವಿಚಾರವಾಗಿತ್ತು.
ಎಲ್ಲಾ ಬೆರಳ ಅಂಚಲ್ಲಿ ಇರುವ ಈ ಕಾಲದಲ್ಲಿ ಕೆಲವೊಮ್ಮೆ ಡಿಜಿಟಲ್ ಮೀಡಿಯಾ ಕೈ ಕೊಟ್ಟರೆ ಎಂತಹ ಕಷ್ಟಗಳನ್ನು ಅನುಭವಿಸಬೇಕು ನಾವು. ಅದೊಂದನ್ನೆ ಅವಲಂಬಿಸಿರುವ ನಾವು ಅದನ್ನು ಬಿಟ್ಟು ಬದುಕುವುದು ಹೇಗೆ ಅಂತ ಕೂಡ ತಿಳಿದುಕೊಂಡಿರಬೇಕು‌. ಇದೆಲ್ಲದರ ನಡುವೆ ಪ್ರೀತಿ, ವಿಶ್ವಾಸ, ಮಮತೆ, ಕರುಣೆ ಯಾವುದೂ ಕೂಡ ಅದರ ಸ್ಥಾನ ಮತ್ತು ಸತ್ವ ಕಳೆದುಕೊಂಡಿಲ್ಲ ಅನ್ನೋದೆ ಅಚ್ಚರಿಯ ಸಂಗತಿ.
ಇಂತಿ
ಕೃಷ್ಣಮೂರ್ತಿ. ಕೆ
Categories Short StoriesTags , , ,

4 thoughts on “Network ಇಲ್ಲದ ಸಂಬಂಧಗಳು

 1. ಮನ ಮಿಡಿದ ಕಥೆ,, ಓದಿ ಕಣ್ಣಂಚು ನೆನೆಯಿತು,,,😓.. ಪ್ರೀತಿ ಎಂದೂ ಸೋಲಲ್ಲ…

  “ಪ್ರೀತಿಸಿದವಳು”

  Liked by 1 person

 2. ಒಳ್ಳೆಯ ಸಂದೇಶ. ಕಥೆ ತುಂಬಾ ಚೆನ್ನಾಗಿದೆ ಕಿಟ್ಟಿ. ಖುಷಿಯಾಯಿತು ಓದಿ 😊

  Like

  1. ಧನ್ಯವಾದಗಳು ಸರ್. ನಿಮಗೆ ಇಷ್ಟ ಆದ್ರೆ ಕಥೆಗೆ ಒಂದು ಅರ್ಥ ಸಿಕ್ಕಂತೆ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close