ಭೂತ ಕಥೆ

ಆತ್ಮಗಳ ದಾರಿಯಲ್ಲಿ…
ದಿನನಿತ್ಯದ ಬದುಕಿನಲ್ಲಿ ಕೆಲಸ ಕಾರ್ಯ, ಜವಾಬ್ದಾರಿ, ದುಡಿಮೆ, ನೆಮ್ಮದಿ, ಸಂತೋಷ, ದುಃಖ ಎಲ್ಲವೂ ಸೇರಿ ಒಂದು ವಿಭಿನ್ನ ರೂಪದ ಅನುಭವ ಪ್ರತಿದಿನ ಆಗುವುದು ಸಹಜ. ಈ ರೀತಿಯ ಪ್ರತಿದಿನದ ಅನುಭವದಲ್ಲಿ ನಾವು ಕಲಿತ್ತದ್ದು ಬಹಳಷ್ಟಿದೆ ಆದರೆ ಅದರ ಅರಿವು ನಮಗಿರುವುದಿಲ್ಲ. ಸಂದರ್ಭ ಸನ್ನಿವೇಶಗಳು ಎದುರಾದಾಗ ನಮ್ಮ ಒಳಮನಸ್ಸಿನ ಅನುಭವದ ಬುದ್ದಿಯಿಂದ ಕಾರ್ಯಸಾಧನೆ ಸುಲಭವಾಗಿ ಬಹಳ ಕಡಿಮೆ ಸಮಯದಲ್ಲಿ ಮುಗಿದುಹೋಗುತ್ತದೆ.
ಹೀಗೆ ಅನುಭವಕ್ಕೆ ಬಂದದ್ದು ಅನುಭವಕ್ಕೆ ಬರಬೇಕಾದದ್ದು ಬಹಳಷ್ಟಿದೆ. ಅನುಭವದಿಂದಲೇ ಜೀವನ ಸುಗಮ ಅಂತ ಹೇಳಿದ್ರೆ ತಪ್ಪಾಗೋಲ್ಲ. ಅದೇರೀತಿ ನನ್ನ ಜೀವನದಲ್ಲಿ ನಡೆದ ಒಂದು ಘಟನೆಯ ಅಗೋಚರ ಅನುಭವವನ್ನು ಈ ಕಥೆಯ ಮೂಲಕ ಹೇಳಲು ಇಷ್ಟಪಡ್ತೀನಿ.
ಈಗಿನ ಜನರೇಷನ್ ಸಾಮಾನ್ಯವಾಗಿ ರಜೆ ಬಂದರೆ ಮನೆ ಬಿಟ್ಟು ಹೊರಗಡೆ ಹೋಗಿ ರಜೆಯ ದಿನಗಳನ್ನು ಕಳೆಯುವುದು ಒಂದು ರೂಢಿಯಾಗಿದೆ. ಹೀಗೆ ಅತಿ ಹೆಚ್ಚು ಜನರು ಆಚರಣೆ ಮಾಡುವ, ಯಾವುದೇ ರೀತಿಯ ಜಾತಿ ಭೇದ ಇಲ್ಲದೆ ಸಂಭ್ರಮಿಸುವ ಹಬ್ಬ ಹೊಸ ವರ್ಷ ಹಬ್ಬ. ಹೊಸ ವರ್ಷದ ಹುಮ್ಮಸ್ಸಿನಲ್ಲಿ ಟ್ರಿಪ್ ಹೋಗುವುದು ಅಥವಾ ಲಾಂಗ್ ರೈಡ್ ಹೋಗುವುದು ಸಾಮಾನ್ಯ. ಅದರಂತೆಯೇ ನಾನು, ಸುಜಿತ್, ಟೋನಿ, ಪವನ್ ಮತ್ತು ಸುನಿಲ್ ಎಲ್ಲರು ಮಂಗಳೂರಿಗೆ ಹೋಗಬೇಕು ಅಂತ ಪ್ಲಾನ್ ಆಯ್ತು.
ಡಿಸೆಂಬರ್ 31 ರಂದು ಬೆಳಗಿನ ಜಾವ ಸುಮಾರು ಹತ್ತು ಗಂಟೆಗೆ ಹೊರಟೆವು. ನಮ್ಮ ಡೆಸ್ಟಿನೇಷನ್ ಮಂಗಳೂರು ಆಗಿದ್ರು ರಾತ್ರಿ ಅಷ್ಟರಲ್ಲಿ ಹೋಗುತ್ತೇವೆ ಅಂತ ಯಾರಿಗು ನಂಬಿಕೆ ಇರಲಿಲ್ಲ, ಆದರೆ ನಮ್ಮ ಟೈಂ ಹೇಗೆ ಕೆಟ್ಟಿತ್ತು ಅಂದ್ರೆ ಕಾರ್ ನಲ್ಲಿ ಹೋಗಬೇಕು ಅಂದುಕೊಂಡಿದ್ದ ನಾವು ಕೊನೆಯ ಘಳಿಗೆಯಲ್ಲಿ ಕಾರಣಾಂತರಗಳಿಂದ ಕಾರ್ ಸಿಗದಂತಾಯಿತು. ಇನ್ ಏನ್ ಮಾಡೋದು, ಹೋಗೋದು ಅಂತ ಆದ್ರೆ ಗಾಡಿಯಲ್ಲಿ ಹೋಗಬೇಕು 350 ಕಿ.ಮಿ ಪ್ರಯಾಣ ಅಂದ್ರೆ ತಮಾಷೆ ಅಲ್ಲ. ಹೋಗಲೇಬೇಕು ಪ್ಲಾನ್ ಕ್ಯಾನ್ಸಲ್ ಆಗಬಾರದು ಅಂತ ಧೃಡ ನಿರ್ಧಾರ ಮಾಡಿ ಬೆಂಗಳೂರಿನಿಂದ ಸುಜಿತ್ ನ ಆಕ್ಟೀವಾದಲ್ಲಿ ಮೂರು ಜನ ಹೊರಟೆವು ಇನ್ನಿಬ್ಬರು ಮಂಡ್ಯದಿಂದ ನಮ್ಮ ಜೊತೆ ಬರಲು ರೆಡಿಯಾದರು. ಪೋಲೀಸರ ಕಣ್ಣು ತಪ್ಪಿಸಿ ಮಂಡ್ಯ ತಲುಪುವುದು ಹರಸಾಹಸ ಮಾಡಿದಂತಾಯ್ತು ಅಲ್ಲಿಗೆ ಸಮಯ ಸಂಜೆ 4 ಗಂಟೆ. ನಂತರ ತಡ ಮಾಡದೆ ಪವನ್ ಮತ್ತು ಸುನಿಲ್ ರನ್ನ ಕರೆದುಕೊಂಡು ಶ್ರವಣಬೆಳಗೊಳ ಹಾಸನ ಮುಖಾಂತರವಾಗಿ ಮಂಗಳೂರು ತಲುಪಬೇಕಿತ್ತು. ಪವನ್ ಮತ್ತು ಸುನಿಲ್ ಆಕ್ಸಿಸ್ ಗಾಡಿಯಲ್ಲಿ ಹಾಗು ನಾನು ಸುಜಿತ್ ಟೋನಿ ಆಕ್ಟೀವಾದಲ್ಲಿ ಪ್ರಯಾಣ ಮುಂದುವರಿಸಿದೆವು. ಕತ್ತಲಾಗುತ್ತಿದ್ದಂತೆ ಸ್ವಲ್ಪ ಜಾಗ್ರತೆಯಿಂದ ಜವಾಬ್ದಾರಿಯಿಂದ ಹೋಗಬೇಕಿತ್ತು ಏಕೆಂದರೆ ನಾವು ಹೋಗುತ್ತಿದ್ದ ದಾರಿ ರಾಜ್ಯ ಹೆದ್ದಾರಿ ಮತ್ತು ಅಲ್ಲಿ ಬಹಳಷ್ಟು ಜನ ರಾತ್ರಿ ಹೊತ್ತಿನಲ್ಲಿ ಓಡಾಡುವುದು ಕಡಿಮೆ ಹಾಗಾಗಿ ಎಲ್ಲರ ಮನಸ್ಸಿನಲ್ಲೂ ಭಯ ಆವರಿಸಿತ್ತು ಆದರೆ ಎಲ್ಲರು ಏನು ಆಗದಂತೆ ಸಹಜವಾಗಿಯೇ ನಡೆದುಕೊಳ್ಳಲು ಆರಂಭಿಸಿದರು. ಇದರಿಂದ ಒಬ್ಬರ ಮುಖ ನೋಡಿ ಇನ್ನೊಬ್ಬರಿಗೆ ನಗು ಬರುತ್ತಿತ್ತು. ಸುಮ್ಮನೆ ಆಡಿದ ತುಂಟ ಮಾತಿಗೆ ಜೋರಾಗಿ ನಗುತ್ತಾ ಭಯವನ್ನು ದೂರವಿಡುವ ಕಾರ್ಯ ಸದಾ ನಡೆಯುತ್ತಿತ್ತು. ಹೀಗೆ ಜೀವವನ್ನು ಕೈಯಲ್ಲಿಟ್ಟುಕೊಂಡು ಹೇಗೋ ಹಾಸನ ತಲುಪಿದೆವು
ಹಾಸನದಲ್ಲಿ ಊಟ ಮುಗಿಸಿ ಪ್ರಯಾಣ ಮುಂದುವರಿಸಿದೆವು, ಅಷ್ಟರಲ್ಲಿ ಎಲ್ಲರಿಗೂ ಮಂಗಳೂರು ತಲುಪುವುದು ಅಸಾಧ್ಯ ಎಂದು ತಿಳಿಯಿತು ಹಾಗಾಗಿ ಸಕಲೇಶಪುರದಲ್ಲಿ ರಾತ್ರಿ ಹೊಸ ವರುಷಕ್ಕೆ ಕೇಕ್ ಕಟ್ ಮಾಡಿ ಮಲಗಿದ್ದು ಬೆಳಗ್ಗೆ ಮಂಗಳೂರಿಗೆ ಹೋಗೋಣ ಅಂತ ನಿರ್ಧಾರ ಆಯ್ತು. ನಾವು ಮೂರು ಜನ ಒಂದು ಗಾಡಿಯಲ್ಲಿ ನಿಧಾನವಾಗಿ ಬರುತ್ತಿದ್ದರಿಂದ ಪವನ್ ಮತ್ತು ಸುನಿಲ್ ಗೆ ನೀವು ಹೋಗಿ ಸಕಲೇಶಪುರದಲ್ಲಿ ರೂಂ ಮಾಡಿ ಎಂದು ಹೇಳಿ ಕಳಿಸಿದೆವು. ಅದರಂತೆಯೆ ಅವರು ನಮಗಿಂತ ಒಂದು ಗಂಟೆ ಮುಂಚೆಯೆ ತಲುಪಿ ಎಲ್ಲಾ ವ್ಯವಸ್ಥೆ ಮಾಡಿದರು. ನಾವು ಸಕಲೇಶಪುರ ತಲುಪುತ್ತಿದ್ದಂತೆ ದೇಹದ ಎಲ್ಲಾ ಅಂಗಾಂಗಗಳು ಪರಿಚಯವಾಗಿತ್ತು, ಸುಸ್ತಾಗಿ ಎಲ್ಲರು ಮಲಗಿಬಿಟ್ಟರು ಆ ರಾತ್ರಿ ಹೊಸ ವರ್ಷದ ಆಚರಣೆ ಹೇಗೆ ನಡಿತು ಏನ್ ಆಯ್ತು ಏನು ನೆನಪಿಲ್ಲ. ಕಣ್ಣು ಬಿಟ್ಟಾಗ ಬೆಳಿಗ್ಗೆ 8 ಗಂಟೆ. ಎಲ್ಲರು ಎದ್ದು ರೆಡಿಯಾಗಿ ತಿಂಡಿ ಮುಗಿಸಿ ಮತ್ತೆ ಪ್ರಯಾಣ ಮುಂದುವರಿಸಿದೆವು.
ನಾವು ಅಂದುಕೊಂಡಂತೆ ಏನು ಆಗಲಿಲ್ಲ. ಮಂಗಳೂರಿಗೆ ಬೇಗ ತಲುಪುತ್ತೇವೆ ಅಂದುಕೊಂಡಿದ್ದ ನಾವು ಶಿರಾಡಿ ಘಾಟ್ ಕಾಮಗಾರಿಯಲ್ಲಿದ್ದ ಕಾರಣ ಸಂಜೆ 6 ಗಂಟೆಗೆ ಮಂಗಳೂರಿಗೆ ತಲುಪಿದೆವು. ಹೊಸ ವರ್ಷದ ಮೊದಲ ದಿನವೇ ಪ್ರಯಾಣದಲ್ಲಿ ಕಳೆದೆವು. ನಮ್ಮ ಅದೃಷ್ಟ ಹೇಗೆ ಕೈ ಕೊಟ್ಟಿತು ಅಂದ್ರೆ ಪೋಲೀಸರು ನಾವು ಬರುತ್ತಿದ್ದ ಗಾಡಿ ಅಡ್ಡ ಹಾಕಿ ಅವರಿಂದ ಬಾಯ್ತುಂಬಾ ಬೈಗುಳ ಕೇಳಿ ಫೈನ್ ಕಟ್ಟಿ ಬಂದೆವು. ಖಾಲಿಯಾದ ಜೇಬುಗಳು ಬೇಸರದಲ್ಲಿದ್ದಾಗ ಮತ್ತೊಂದು ಹೊಡೆತ ಕಾದಿತ್ತು, ಮೂರು ಜನ ಕುಳಿತ್ತಿದ್ದ ಆಕ್ಟೀವಾ ಗಾಡಿ ಟೈರ್ ಬರ್ಸ್ಟ್ ಆಗಿ ಹೊಸ ಟೈರ್ ಹಾಕಿಸಬೇಕಾದ ಪರಿಸ್ಥಿತಿ ಎದುರಾಯಿತು. ಮೊದಲೇ ಬೇಸರದಲ್ಲಿದ್ದ ಜೇಬುಗಳು ಸ್ನೇಹಿತನಂತ್ತಿದ್ದ ಹಣವನ್ನು ಕಳೆದುಕೊಂಡು ಅಳುತ್ತ ಕುಳಿತ್ತಿದ್ದವು.
ಇದೆಲ್ಲ ಕೋಪ ಬೇಸರ ಆಕ್ರೋಶ ಸಂಕಟ ಹೊತ್ತುಕೊಂಡು ಮಂಗಳೂರಿಗೆ ತಲುಪುತ್ತಿದಂತೆ ನಮ್ಮನ್ನು ಸಮಾಧಾನ ಮಾಡಲು ಕಾದು ಕುಳಿತದ್ದು ಸೋಮೇಶ್ವರ ಸಮುದ್ರ. ಆಹಾ ಎಂಥಾ ನೆಮ್ಮದಿ ಅಂತೀರಾ, ಅಲೆಗಳ ಶಬ್ಧ ಕಿವಿಗೆ ಬಿದ್ದ ತಕ್ಷಣ ಮನಸ್ಸಿನಲ್ಲಿದ್ದ ಎಲ್ಲ ನೋವು ಮರೆಯಾಗಿ ಪ್ರಶಾಂತತೆ ಮೆರೆಯಿತು. ಸಮುದ್ರದಿಂದ ಬಂದ ಆ ಗಾಳಿ ಮುಖಕ್ಕೆ ರಾಚಿ ಆಯಾಸ ನೀಗಿಸಿತು. ಸಮುದ್ರದ ಮರಳು ನಾವು ತಡವಾಗಿ ಬಂದಿದ್ದಕ್ಕೆ ಕೋಪದಿಂದ ಸಮುದ್ರ ಮುಟ್ಟದಂತೆ ಹಿಡಿದು ನಿಲ್ಲಿಸುವ ಪ್ರಯತ್ನ ಮಾಡುತ್ತಿತ್ತು. ಖುಷಿಯಲ್ಲಿ ಅಲೆ ಮುಟ್ಟಲು ಹೋದರೆ ಹಿಂದೆ ಹಿಂದೆ ಓಡಿ ನಮ್ಮ ಜೊತೆ ತುಂಟಾಟ ಆಡುತ್ತಿತ್ತು. ಎಷ್ಟೋ ನೋವುಗಳು ಮನದಲ್ಲಿ ತುಂಬಿಕೊಂಡು ಜೀವನ ನಡೆಸುವಾಗ ಸಮುದ್ರದ ಮುಂದೆ ಕುಳಿತು ಕಷ್ಟ ಹೇಳಿದರೆ ಎಷ್ಟು ನೆಮ್ಮದಿ, ಎಲ್ಲಕ್ಕೂ ಉತ್ತರ ಕಡಲ ತೀರದಲ್ಲಿ ಅಡಗಿದೆ ಹುಡುಕಿದವ ಶ್ರೇಷ್ಠ ಅಂದ್ರೆ ತಪ್ಪಾಗೊಲ್ಲ.
ಹೀಗೆ ಸ್ವಲ್ಪ ಕಾಲ ಕಳೆದ ನಂತರ ಅಲ್ಲೇ ಒಂದು ರೂಂ ಬುಕ್ ಮಾಡಿ ರಾತ್ರಿ ಊಟ ಮುಗಿಸಿ ಆಯಾಸದಿಂದ ಮಲಗಿದ ನಾವು ಕಣ್ಣು ಬಿಟ್ಟಾಗ ಬೆಳಗ್ಗೆ 7 ಗಂಟೆ ಎದ್ದ ಕೂಡಲೇ ಮುಖ ಕೂಡ ತೊಳೆಯದೆ ಪನಂಬೂರ್ ಬೀಚ್ ಗೆ ಬಂದು ಬಿದ್ದು, ತೇಲಾಡಿ, ತೂರಾಡಿ, ಈಜಾಡಿ, ಖುಷಿಯಿಂದ ಕುಣಿದು ಕುಪ್ಪಳಿಸಿ, ಮಣ್ಣಿನಲ್ಲಿ ಮನೆಮಾಡಿ, ಹಳ್ಳತೋಡಿ ಹೂತುಹಾಕಿ, ಗರ್ಲ್ ಫ್ರೆಂಡ್ ಹೆಸರು ಮಣ್ಣಿನ ಮೇಲೆ ಬರೆದು, ಫೋಟೋ ಶೂಟ್ ಮಾಡಿ ಸುಸ್ತಾಗಿ ಎದ್ದು ಬಂದಾಗ ಮಧ್ಯಾಹ್ನ 12 ಗಂಟೆ. ರೂಂ ಗೆ ಹೋಗಿ ಸ್ನಾನ ಮಾಡಿ ಊಟ ಮುಗಿಸಿ ಅಲ್ಲಿಂದ ಬೆಂಗಳೂರಿಗೆ ಹೊರಡಲು ಸಿದ್ಧರಾದೆವು. ಯಾರಿಗು ಹೊರಡಲು ಇಷ್ಟ ಇಲ್ಲ ಆದರು ಕೆಲಸದ ಒತ್ತಡ ಮತ್ತು ಕಾಸು ಖಾಲಿಯಾದ ಕಾರಣ ಹೊರಡಬೇಕಾದ ಪರಿಸ್ಥಿತಿ ಎದುರಾಯ್ತು. ಹೊರಡುವ ವೇಳೆ ಕೆಲವು ಶಕುನಗಳು ಎದುರಾದವು ಆದರು ಅದನ್ನ ಲೆಕ್ಕಿಸದೆ ಗಾಡಿಗಳಿಗೆ ಪೆಟ್ರೋಲ್ ತುಂಬಿಸಿ ಹೊರಟೆವು. ಅದು ಹೊಸ ವರ್ಷದ ಎರಡನೇ ದಿನ ಮತ್ತು ಅಮಾವಾಸ್ಯೆಯ ಮರುದಿನವಾಗಿತ್ತು ಇಡೀ ರಾತ್ರಿ ಪ್ರಯಾಣ ಮಾಡಬೇಕು ಎಂದು ಅರಿತಿದ್ದ ನಮಗೆ ಭಯ ಜಾಸ್ತಿ ಆಯ್ತು ಆದರು ಒಂದು ನಂಬಿಕೆಯ ಮೇಲೆ ಪ್ರಯಾಣ ಮುಂದುವರೆಸಿದೆವು. ನಮ್ಮ ದಾರಿ ಉಜಿರೆ, ಚಾರ್ಮಾಡಿ ಘಾಟ್ ಮುಖಾಂತರವಾಗಿ ಹಾಸನ, ಶ್ರವಣಬೆಳಗೊಳ, ಮಂಡ್ಯ ಮತ್ತು ಬೆಂಗಳೂರು ತಲುಪಬೇಕಿತ್ತು. ಇದೆಲ್ಲದರ ನಡುವೆ ಕೆಟ್ಟ ಘಳಿಗೆ ತನ್ನ ಆರ್ಭಟ ಶುರುಮಾಡಿತು. ಆಕ್ಟೀವಾ ಗಾಡಿಯಲ್ಲಿ ಮೈಲೇಜ್ ಕಮ್ಮಿಯಾಗಿದೆ ಅಂತ ತಿಳಿಯಿತು. ಹಾಗೊ ಹೀಗೊ ಹೇಗೋ ಉಸಿರು ಬಿಗಿ ಹಿಡಿದು ಹಾಸನ ತಲುಪಿದೆವು. ಹಾಸನದಲ್ಲಿ ಊಟ ಮುಗಿಸಿ ಪ್ರಯಾಣ ಮುಂದುವರಿಸಬೇಕು ಎಂದಾಗ ಸುನಿಲ್ ಗೆ ಆಯಾಸ ಹೆಚ್ಚಾಗಿ ತಲೆತಿರುಗಿ ಬಿದ್ದ ಎಲ್ಲರು ಗಾಬರಿಯಿಂದ ಅವನನ್ನು ಎತ್ತಿ ಕೂರಿಸಿ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ ಸ್ವಲ್ಪ ಹೊತ್ತು ಬಿಟ್ಟು ನಂತರ ಅವನ ಆರೋಗ್ಯ ಸರಿ ಹೋದಂತೆ ಪ್ರಯಾಣ ಮುಂದುವರೆಯಿತು.
ಇಲ್ಲಿಂದ ಶುರುವಾಯಿತು ನೋಡಿ ನಮ್ಮ ಕೆಟ್ಟ ಘಳಿಗೆ. ಹಾಸನ ಹೆದ್ದಾರಿಯಲ್ಲಿ ಮುಂದುವರಿದರೆ ಶ್ರವಣಬೆಳಗೊಳ ಹೋಗುವುದಕ್ಕೆ ಒಂದು ಅಡ್ಡ ರಸ್ತೆ ಸಿಗುತ್ತದೆ. ನಾವು ಬಂದ ದಾರಿ ಅದು, ಆ ದಾರಿಯಲ್ಲಿ ಶ್ರವಣಬೆಳಗೊಳಕ್ಕೆ ಹೋಗುವುದಕ್ಕೆ ಒಂದು ಡೈರೆಕ್ಷನ್ ಬೋರ್ಡ್ ಕಾಣುತ್ತದೆ. ಆ ಒಂದು ಬೋರ್ಡ್ ನಮ್ಮ ಅಂದಿನ ಸ್ಥಿತಿ ಗತಿಗಳನ್ನ ಬದಲಿಸಿತ್ತು.
ಡೈರೆಕ್ಷನ್ ಬೋರ್ಡ್ ನಲ್ಲಿ ಯಾವ ಕಡೆ ಹೋಗಬೇಕು ಎಂಬ ಆರೋ ಮಾರ್ಕ್ ಇರುತ್ತದೆ ಆದರೆ ಆ ದಿನ ಆ ಆರೋ ಮಾರ್ಕ್ ಇದ್ದ ಭಾಗ ಮುರಿದಿತ್ತು. ಇದರಿಂದ ದಿಕ್ಕು ತಪ್ಪಿ ಶ್ರವಣಬೆಳಗೊಳ ಬಿಟ್ಟು ಬೇರೆ ದಾರಿಯನ್ನು ಹಿಡಿದು ಮುಂದೆ ಸಾಗಿದೆವು. ಸುನಿಲ್ ಗೆ ಆರೋಗ್ಯ ಸರಿ ಇಲ್ಲದ ಕಾರಣ ನಮ್ಮ ಪ್ರಯಾಣ ನಿಧಾನವಾಗಿಯೇ ಸಾಗಿತ್ತು. ಎಲ್ಲರಿಗು ಮನಸ್ಸಲ್ಲಿ ಏನೋ ಗೊಂದಲ ನಾವು ಬಂದ ದಾರಿ ಇದಲ್ಲ ಅಂತ ಅರಿವಿಗೆ ಬಂದರು ವಯಸ್ಸಿನ ಉತ್ಸಾಹದಲ್ಲಿ ಸಮಾಧಾನದಿಂದ ಯೋಚಿಸದೆ ಮುನ್ನುಗಿದೆವು. ಹೀಗೆ ನಮ್ಮ ಮಾತು ಮುಂದುವರೆಯಿತು, ಹರಟೆ ಹೆಚ್ಚಾಯಿತು, ಗಾಡಿಯಲ್ಲಿ ಪೆಟ್ರೋಲ್ ಕಮ್ಮಿಯಾಗಿತ್ತು, ನಮ್ಮ ಆತಂಕ ಅಲ್ಲಿಂದ ಶುರು. ಸುತ್ತಮುತ್ತ ಯಾವ ಹಳ್ಳಿಯೂ ಇಲ್ಲ, ನೇರ ಸಣ್ಣ ಭಯಂಕರ ರಸ್ತೆಯದು. ಅಕ್ಕಪಕ್ಕದಲ್ಲಿ ಒಣಗಿದ ಮರಗಳು ಒಂದೊಂದು ನಿಗೂಢ ಕಥೆಗಳು ಹೇಳುತ್ತಿತ್ತು. ಆ ರಸ್ತೆ ಎಷ್ಟೋ ಸಾವಿಗೆ ಕಾರಣವಾಗಿದೆ ಎಂದು ಪುಸ್ತಕದ ಪುಟಗಳಂತೆ ತಿರುವಿ ತಿರುವಿ ಹೇಳುತ್ತಿತ್ತು, ಕಾಡು ಬೆಕ್ಕುಗಳು ಮುಂಗೂಸಿಗಳು ನಮ್ಮ ದಾರಿಗೆ ಅಡ್ಡವಾಗಿ ಹೋದದ್ದು ನಮ್ಮ ಕೆಟ್ಟ ಘಳಿಗೆಗೆ ಮುನ್ನುಡಿ ಬರೆದಿತ್ತು. ಮನುಷ್ಯನ ಉಸಿರಿನ ಬಿಸಿ ತಟ್ಟಿ ಬಹಳ ವರ್ಷಗಳಾದಂತೆ ಕಾಣುತ್ತಿತ್ತು. ಗಾಡಿಯಲ್ಲಿ ಪೆಟ್ರೋಲ್ ಕಮ್ಮಿಯಾಗುತ್ತಿದೆ ಹತ್ತಿರದ್ದಲ್ಲಿ ಪೆಟ್ರೋಲ್ ಬಂಕ್ ಇರುವ ಯಾವ ಸೂಚನೆಗಳು ಇಲ್ಲ. ಅಲ್ಲೆ ಇದ್ದು ಬೆಳಗ್ಗೆ ಹೋಗೋಣ ಅಂದರೆ ಆ ದಾರಿಯ ಕೆಟ್ಟ ಪ್ರತಿಬಿಂಬಗಳು ಬಿಡಲಿಲ್ಲ.
ಮುಂದೆ ಸಾಗುತ್ತಿದ್ದಂತೆ ರಸ್ತೆಯ ಕ್ರೂರತೆ ಹೆಚ್ಚಾಯಿತು, ಆ ಭಯದ ಸಂದರ್ಭದಲ್ಲಿ ನಮಗೆ ಕಂಡದ್ದು ಒಬ್ಬ ಮುದುಕ. ನಾವು ಇದ್ದಂತ ಪರಿಸ್ಥಿತಿಯಲ್ಲಿ ಅವನು ಮುದುಕನಾಗಿ ಕಾಣಲಿಲ್ಲ ಬದಲಿಗೆ ಒಂದು ಆತ್ಮವಾಗಿ ಕಂಡಿತು. ಹತ್ತಿರ ಬರುತ್ತಿದ್ದಂತೆ ಅವನ ಮುಖ ಬಹಳ ವಿಕೃತವಾಗಿ ಕಾಣತೊಡಗಿತು. ನಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿದ, ನಂತರ ಆ ಮುದುಕ “ಇಲ್ಲಿಂದ ಮುಂದೆ ಹೋಗುವುದು ಒಳ್ಳೆಯದಲ್ಲ ನಿಮಗೆ ಇದು ಪ್ರಯಾಣ ಅಷ್ಟೇ ಆದರೆ ಕೆಲವರಿಗೆ ಇದು ಸ್ಮಶಾನ” ಎಂದ. ಅವನ ಮಾತಲ್ಲಿ ಒಂದು ಗಾಂಭೀರ್ಯ ಇತ್ತು ಆದರು ಅವನ ಮಾತನ್ನು ಲೆಕ್ಕಿಸದೆ ಮುಂದುವರಿದೆವು. ಆ ಮುದುಕ ಹೇಳಿದ ಮಾತು ನಮ್ಮೆಲ್ಲರಿಗೂ ಕಾಡಲು ಶುರುವಾಯಿತು. ನಾವು ಅಂದುಕೊಂಡಿದ್ದು ಆ ರಸ್ತೆಯಲ್ಲಿ ಕಳ್ಳರ ಕಾಟ ಇರಬಹುದು ಎಂದು, ಆದರೆ ನಮಗೆ ಮೊದಲ ಶಾಕ್ ಕಾದಿದ್ದು ಅಲ್ಲೆ. ಅದೊಂದು ಸೇತುವೆ, ಸೇತುವೆಯ ಮೇಲೆ ಒಬ್ಬ ಪ್ರಾಯದ ಯುವಕ ಕುಳಿತ್ತಿದ್ದಾನೆ ನಾವು ನಿಧಾನವಾಗಿ ಹೋಗುತ್ತಿದ್ದರಿಂದ ಅವನ ಚಟುವಟಿಕೆಗಳು ಕಾಣುತ್ತಿತ್ತು. ನಾವು ಹತ್ತಿರ ಸಮೀಪಿಸುತ್ತಿದ್ದಂತೆ ಅವನು ಸೇತುವೆಯಿಂದ ಕೆರೆಗೆ ಬಿದ್ದ ಅದನ್ನ ಕಣ್ಣಾರೆ ಕಂಡ ನಾವು ತಕ್ಷಣವೇ ಗಾಡಿ ನಿಲ್ಲಿಸಿ ಓಡಿ ಹೋಗಿ ನೋಡಿದರೆ ನೀರು ಪ್ರಶಾಂತವಾಗಿತ್ತು, ಅಲ್ಲಿ ಒಬ್ಬ ವ್ಯಕ್ತಿ ಇದ್ದ ಸುಳಿವು ಕೂಡ ಇರಲಿಲ್ಲ. ಆತಂಕ ಹೆಚ್ಚಾಯಿತು ಭಯದಿಂದ ಬೆವರು ಹರಿಯಿತು ಯಾರಿಗಾದರು ವಿಷಯ ತಿಳಿಸೋಣ ಅಂದರೆ ಸುತ್ತಮುತ್ತ ಯಾವ ಹಳ್ಳಿಯೂ ಇಲ್ಲ ತಕ್ಷಣವೇ ಅಲ್ಲಿಂದ ಹೊರಟೆವು. ಮುಂದೆ ಹೋದಂತೆ ತೀವ್ರತೆ ಹೆಚ್ಚಾಯಿತು ಅಲ್ಲೆ ದೂರದಲ್ಲಿ ಒಬ್ಬ ಹೆಣ್ಣು ಅಳುತ್ತಾ ನಿಂತಿದ್ದಾಳೆ ಅವಳು ಅಷ್ಟು ದೂರದಲ್ಲಿದ್ದರು ಅವಳು ಅಳುವ ಶಬ್ದ ಕೇಳುತ್ತಿತ್ತು. ಇದಕ್ಕಿಂತ ಭಯದ ಸಂಗತಿ ಬೇಕಾ? ಆಗ ನಮಗೆ ಅರಿವಾದದ್ದು ಇದು ಸಾಮಾನ್ಯ ಸಂಗತಿಯಲ್ಲ ಇಲ್ಲಿ ಖಂಡಿತ ಏನೋ ಅನಾಹುತ ಕಾದಿದೆ ಎಂದು ಸ್ಪಷ್ಟವಾಗಿ ತಿಳಿಯಿತು. ಅಷ್ಟರಲ್ಲಿ ಸುಜಿತ್ “ಮಗಾ, ಇದು ತುಂಬಾ ಡೇಂಜರ್ ನಾವ್ ಈ ರಸ್ತೆಯಲ್ಲಿ ಜಾಸ್ತಿ ಹೊತ್ತು ಇರೋದು ಸರಿಯಲ್ಲ ಗೂಗಲ್ ಮ್ಯಾಪ್ ಓಪನ್ ಮಾಡು ರೂಟ್ ಚೇಂಜ್ ಮಾಡೋಣ” ಎಂದ ಆದರೆ ನಮ್ಮ ದುರಾದೃಷ್ಟ ಹೇಗಿದೆ ಅಂದ್ರೆ ಯಾರ ಮೊಬೈಲ್ ನಲ್ಲು ನೆಟ್ವರ್ಕ್ ಇಲ್ಲ ಮುಂದೆ ಬರುವ ಸಂದರ್ಭ ಎದುರಿಸಲೇ ಬೇಕಾಯಿತು.
ಆ ಹೆಂಗಸಿನ ಕಡೆ ಯಾರು ಗಮನ ಕೊಡಬೇಡಿ ಎಂದು ಮುಂದೆ ಬಂದುಬಿಟ್ಟೆವು. ಆದರೆ ಯಾರು ಕೂಡ ಹಿಂದೆ ತಿರುಗಿ ನೋಡುವ ಪ್ರಯತ್ನ ಮಾಡಲಿಲ್ಲ. ಏನೋ ಮಾಡಲು ಹೋಗಿ ಈಗ ಜೀವವನ್ನೇ ಒತ್ತೆಯಾಗಿ ಇಡುವ ಪರಿಸ್ಥಿತಿ ಬಂದಿದೆ. ಭಯದಿಂದ ಮಾತನಾಡುತ್ತಿದ್ದ ನಮಗೆ ಇನ್ನೊಂದು ಹೊಸ ಧ್ವನಿಯಿಂದ ಉತ್ತರ ಬರುತ್ತಿತ್ತು, ಆ ಧ್ವನಿ ನಮ್ಮ ಐದು ಜನರಲ್ಲಿ ಯಾರಿಗು ಹೋಲುತ್ತಿರಲ್ಲಿಲ್ಲ. ಭಯದ ವಾತಾವರಣ ನಿರ್ಮಾಣ ಆಯ್ತು. ಎಲ್ಲೋ ಕೇಳಿದ ನೆನಪು, ಭೂತ ಪ್ರೇತಗಳು ನಮ್ಮ ಜೊತೆ ಮಾತನಾಡಲು ಪ್ರಯತ್ನಿಸಿದಾಗ ಅದರ ಮಾತಿಗೆ ರಿಯಾಕ್ಟ್ ಮಾಡಬಾರದು ತಿಳಿದು ತಿಳಿಯದಂತೆ ಸುಮ್ಮನಿರಬೇಕು ಅಂತ, ಅದರಂತೆಯೆ ನಾವು ಪ್ರೇತಗಳ ಮಾತಿಗೆ ರಿಯಾಕ್ಟ್ ಮಾಡದೆ ಸುಮ್ಮನಾದೆವು. ಆ ಸಮಯದಲ್ಲಿ ನಮ್ಮ ರಕ್ಷಣೆಗೆ ನಮ್ಮ ಒಗ್ಗಟ್ಟು ಕೂಡ ಮುಖ್ಯ ಪಾತ್ರ ವಹಿಸಿತು. ಸ್ವಲ್ಪ ದೂರ ಹೋದಂತೆ ಕೇಳುತ್ತಿದ್ದ ಆ ಧ್ವನಿ ನಿಂತು ಹೋಯಿತು.
ಈ ರಸ್ತೆಯಲ್ಲಿ ಒಂದು ಹಳ್ಳಿ ಸಿಕ್ಕಿತ್ತು ಆ ಹಳ್ಳಿಯಲ್ಲಿ ಗಾಡಿ ನಿಲ್ಲಿಸಿ ಬೆಳಗಿನ ಜಾವ ಎದ್ದು ಹೋಗೋಣ ಎಂದು ನಿರ್ಧಾರ ಆಯ್ತು. ಜನರಿದ್ದ ಆ ಊರಿನಲ್ಲಿ ನಮ್ಮ ಜೀವ ಸೇಫ್ ಎಂಬುದು ನಮ್ಮ ಅಭಿಪ್ರಾಯ ಆದರೆ ನಮಗೆ ಇನ್ನೊಂದು ಶಾಕ್ ಅಲ್ಲಿ ಕಾದಿತ್ತು. ಆ ಹಳ್ಳಿ ಶುರುವಾಗುತ್ತಿದ್ದಂತೆ ಒಬ್ಬ ವ್ಯಕ್ತಿ ರಸ್ತೆಯ ಬದಿಯಲ್ಲಿ ಕುಳಿತ್ತಿದ್ದ. ಅವನು ಸಾಮಾನ್ಯ ಹಳ್ಳಿಯ ವ್ಯಕ್ತಿಯಂತೆ ಒಂದು ಶರ್ಟ ಮತ್ತು ಒಂದು ಪಂಚೆ ಧರಿಸಿದ್ದ. ಯಾರೋ ಒಬ್ಬ ಕುಳಿತ್ತಿದ್ದಾನೆ ಅಂತ ಸಹಜವಾಗಿ ಮುಂದೆ ಬಂದ ನಾವು ನಂತರ ಊರಲ್ಲಿ ಮಲಗುವುದಕ್ಕೆ ಜಾಗ ಕೇಳೋಣ ಅಂತ ಯೋಚಿಸಿ ಹಿಂದೆ ತಿರುಗಿ ನೋಡಿದರೆ ಆ ವ್ಯಕ್ತಿ ಅಲ್ಲಿ ಇಲ್ಲ. ಅಲ್ಲಿಂದ ಓಡಿ ಹೋಗಿ ಕಣ್ಮರೆಯಾಗುವಂತ ಜಾಗ ಕೂಡ ಅಲ್ಲ ಅದು. ಇದು ಕೂಡ ಪ್ರೇತ ಕಾಟ ಅಂತ ಖಚಿತವಾಯಿತು. ಒಬ್ಬ ಅಥವ ಇಬ್ಬರಿಗೆ ಕಂಡರೆ ಅದು ಭ್ರಮೆ ಎನ್ನಬಹುದು ಆದರೆ ಎಲ್ಲರಿಗು ಕಂಡದ್ದೆ ಅಚ್ಚರಿಯ ಸಂಗತಿ. ದಾರಿ ಸಾಗುತ್ತಿದ್ದಂತೆ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗುತ್ತಿದೆ. ಇನ್ನು ನಾವು ಎಲ್ಲರು ಬದುಕುವುದು ಕಷ್ಟ, ಅಮಾವಾಸ್ಯೆಯ ಮರುದಿನದ ರಾತ್ರಿ ತುಂಬ ಕೆಟ್ಟ ರಾತ್ರಿಯದು. ಎರಡು ದಿನ ಖುಷಿಯಿಂದ ಇರಲು ಬಂದರೆ ನಮ್ಮ ಜೀವಕ್ಕೆ ಕಂಟಕ ಬಂದಿದೆ. ನಮ್ಮನ್ನು ಕಾಪಾಡೋರು ಯಾರು ಇಲ್ಲ, ಒಂದು ಜೀವದ ನಿಜವಾದ ಬೆಲೆ ಆಗ ತಿಳಿಯಿತು, ಅಪ್ಪ ಅಮ್ಮ ಅಕ್ಕ ಅಣ್ಣ ತಂಗಿ ತಮ್ಮ ಎಲ್ಲಾ ಸಂಬಂಧಗಳು ಒಂದೊಮ್ಮೆ ಕಣ್ಣು ಮುಂದೆ ಬಂದು ಹೋಯಿತು. ಜೀವನದ ಕಷ್ಟ ಸುಖ ಏನೂ ತಿಳಿಯದ ವಯಸ್ಸು ಆದರು ಏನಾದರು ಸಾಧಿಸಬೇಕು ಎಂಬ ಹುಮ್ಮಸ್ಸು ಇದೆಲ್ಲದರ ನಡುವೆ ಬಿಟ್ಟು ಬಿಡದೆ ಕಾಡುತ್ತಿರುವ ಅತೃಪ್ತ ಆತ್ಮಗಳು. ಒಳ್ಳೆದು ಕೆಟ್ಟದ್ದು ಏನು ತಿಳಿಯದ ವಯಸ್ಸಲ್ಲಿ ಒಂದು ದಿಟ್ಟ ನಿರ್ಧಾರ ನಮಗೆ ಕೆಟ್ಟ ಅನುಭವ ನೀಡುತ್ತಿದೆ. ಆಸೆ ಪಟ್ಟಿದ್ದು ಸಾಧಿಸದೆ ಮುಂದೆ ನಮ್ಮ ಜೀವಕ್ಕೆ ಏನು ಆಗಬಹುದು ಎಂದು ತಿಳಿಯದೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಒಂದು ಕಣ್ಣ ಹನಿ ನೀರು ಜಾರಿ ನಮಗೆ ಉಸಿರಿನ ಬೆಲೆ ಜೀವದ ಬೆಲೆ ತಿಳಿಸಿತು.
ಪ್ರಯಾಣ ಮುಂದುವರೆಯಿತು. ಅದೊಂದು ದೊಡ್ಡ ಆಲದ ಮರ ಸರಿಸುಮಾರು ಹಳ್ಳಿಯ ಕಾಲು ಭಾಗ ಆ ಮರ ಆವರಿಸಿತ್ತು ಆ ಹಳ್ಳಿ ಸಮೀಪಿಸುತ್ತಿದ್ದಂತೆ ಒಂದು ಹೆಣ ಆ ಮರದ ಮೇಲೆ ನೇತಾಡುತ್ತಿತ್ತು ಅದನ್ನು ಕಂಡು ಅಚ್ಚರಿಯಾಯಿತು ಸೂಕ್ಷ್ಮವಾಗಿ ಗಮನಿಸಿದ ನಂತರ ಅದು ಒಂದು ಹಗ್ಗದಿಂದ ನೇಣು ಬಿಗಿದಿರುವ ಹೆಣ ಎಂದು ಸ್ಪಷ್ಟವಾಗಿ ತಿಳಿಯಿತು. ಮನಸ್ಸು ತಳಮಳವಾಯಿತು, ಬುದ್ದಿ ಓಡಲ್ಲಿಲ್ಲ ಒಂದು ಕ್ಷಣವೂ ಕೂಡ ಗಾಡಿ ನಿಲ್ಲಿಸಿದ ಮುಂದೆ ಬಂದುಬಿಟ್ಟೆವು. ತಕ್ಷಣ ನಮ್ಮ ಸುಜಿತ್ ಗೆ ಅದು ಶ್ರವಣಬೆಳಗೊಳ ರಸ್ತೆಯಲ್ಲ ನಾಗಮಂಗಲ ರಸ್ತೆ ಅಂತ ಅರಿವಾಯ್ತು. ನಮಗೆ ಮೊದಲೆ ತಿಳಿದಂತೆ ನಾಗಮಂಗಲ ರಸ್ತೆ ಬಹಳ ನಿಗೂಢ ರಸ್ತೆ ಮತ್ತು ರಾತ್ರಿಯ ಹೊತ್ತಿನಲ್ಲಿ ವಾಮಾಚಾರ, ಮಾಟಮಂತ್ರಗಳು ನಡೆಯುವ ಕಾರಣ ಬಹಳ ಪ್ರೇತ ಕಾಟಗಳಿವೆ ಎಂದು ನೆನಪಿಗೆ ಬಂತು. ಇದರ ಬೆನ್ನಲ್ಲೇ ಆಯಾಸಗೊಂಡಿದ್ದ ಸುನಿಲ್ ಸರಿ ಹೋದ ಆದರೆ ಟೋನಿಗೆ ಇದ್ದಕ್ಕಿದ್ದಂತೆ ರಕ್ತವಾಂತಿ! ಕೈ ಪೂರ್ತಿ ರಕ್ತ ಗಾಡಿಯಲ್ಲಿದ್ದ ಒಂದು ಬಾಟಲ್ ನೀರು ತೆಗೆದು ರಕ್ತ ತೊಳೆದು ನೀರು ಕುಡಿಸಿ “ಏನ್ ಆಯ್ತು ಟೋನಿ?” ಅಂತ ಕೇಳಿದ್ರೆ “ಏನು ಇಲ್ಲ ಮಗ ನಾನ್ ಆರಾಮಾಗಿ ಇದ್ದೀನಿ ರಕ್ತವಾಂತಿ ಯಾಕ್ ಆಯ್ತು ಅಂತ ಗೊತ್ತಿಲ್ಲ ಆದರೆ ನನಗೆ ಏನು ಅನ್ನಿಸುತ್ತಿಲ್ಲ” ಅಂತ ಬಹಳ ಸಹಜವಾಗಿಯೇ ಉತ್ತರ ನೀಡಿದ ಅವನ ಮಾತಲ್ಲು ಕೂಡ ಏನು ವ್ಯತ್ಯಾಸ ತಿಳಿಯಲಿಲ್ಲ. ಜಾಸ್ತಿ ಹೊತ್ತು ಆ ಜಾಗದಲ್ಲಿ ನಿಲ್ಲದೆ ಹೊರಟು ಮುಂದೆ ಬಂದು ಒಂದು ಹಳ್ಳಿಯ ಸರ್ಕಲ್ ಸಿಕ್ಕಿತು ಅದರ ಪಕ್ಕದಲ್ಲೇ ಒಂದು ದೇವಸ್ಥಾನ ಇತ್ತು. ಅಲ್ಲೇ ಗಾಡಿ ನಿಲ್ಲಿಸಿ ಬೆಳಗಿನ ಜಾವದ ವರೆಗೂ ಈ ಸರ್ಕಲ್ ನ ಲೈಟ್ ಕೆಳಗೆ ಇದ್ದು ಆಮೇಲೆ ಬೆಳಕಾದ ನಂತರ ಹೋಗೋಣ ಅಂತ ನಿರ್ಧಾರ ಆಯ್ತು. ದೇವರನ್ನು ದೆವ್ವ ಪೀಡೆ ಪಿಶಾಚಿಗಳನ್ನ ನಂಬದ ನಾವು ದೇವಸ್ಥಾನದ ಮುಂದೆ ಕುಳಿತುಬಿಟ್ಟೆವು. ದೇವರನ್ನು ನಂಬದ ನವಯುವಕ ಬುದ್ದಿಜೀವಿಗಳಾದ ನಾವು ಆ ದಿನ ದೇವರ ಮುಂದೆ ಎರಡೂ ಕೈಗಳನ್ನು ಜೋಡಿಸಿ ಕಣ್ಣೀರಿಟ್ಟು ಬೇಡಿಕೊಂಡು ಜೀವದ ಬೆಲೆ ಅರ್ಥಮಾಡಿಕೊಂಡ ಹಾಗೆ ಆಯ್ತು. ನಂಬಿಕೆಯೇ ಆಧಾರ ಎನ್ನುವ ಹಾಗೆ ಆ ದಿನ ನಮ್ಮ ಪ್ರಾಣ ಉಳಿಯುವುದಕ್ಕೆ ಆ ಶಕ್ತಿಯೇ ಕಾರಣ. ಆಗ ಸುಜಿತ್ ಗೆ ನೆನಪಾದದ್ದು ಅದು ಅವರ ಊರಿನ ಹತ್ತಿರ ಇರುವ ಹಳ್ಳಿ. ಸುಜಿತ್ ನಮ್ಮೆಲ್ಲರಿಗೆ “ಬನ್ರೋ ನಮ್ಮೂರು ಇಲ್ಲಿಂದ ಒಂದು ಕಿ.ಮಿ. ಅಷ್ಟೇ ಇರೋದು” ಅಂದ. ಆದರೆ ಉಸಿರನ್ನು ಕೂಡ ಹುಡುಕುವ ಪರಿಸ್ಥಿತಿಯಲ್ಲಿದ್ದ ನಾವು ಅಲ್ಲಿಂದ ಒಂದು ಹೆಜ್ಜೆ ಕೂಡ ಮುಂದೆ ಇಡಲು ಸಾಧ್ಯವಾಗಲಿಲ್ಲ. ಪವನ್ ಕಣ್ಣ ಮುಂದೆ ಕಾಣುವ ಕೆಟ್ಟ ಕತ್ತಲನ್ನು ನೋಡಿ ಭಯದಿಂದ ಕೂತ ಜಾಗ ಬಿಟ್ಟು ಏಳಲಿಲ್ಲ. ಕೊನೆಗೆ ಎಲ್ಲರೂ ಕೂಡ ಒಪ್ಪಿ ಅಲ್ಲಿಂದ ಹೊರಟೆವು.
ಸುಜಿತ್ ನ ತಾತನ ಮನೆ ಮುಂದೆ ನಿಂತು ಬಾಗಿಲು ಬಡಿದು ಅವರನ್ನು ಎಬ್ಬಿಸಿ ತಾತ ಗಾಬರಿಯಿಂದ ಬಾಗಿಲು ತೆಗೆದು ನೋಡಿದರೆ ಅವರ ಮೊಮ್ಮಗ. ಯಾಕೆ ಇಷ್ಟು ಹೊತ್ತಲ್ಲಿ ಇಲ್ಲಿಗೆ ಬಂದಿದ್ದಾನೆ ಏನ್ ಆಗಿರಬಹುದು ಎಂದು ಮನಸ್ಸಲ್ಲಿ ಗೊಂದಲ. ನಮ್ಮೆಲ್ಲರ ಭಯದ ಮುಖ ನೋಡಿದ ತಾತನಿಗೆ ಆಗಲೆ ನಡೆದ ಘಟನೆಯ ಒಂದು ಭಾಗ ಅರ್ಥವಾಗಿದೆ. ಆದರು ಏನೂ ಪ್ರಶ್ನೆಗಳನ್ನ ಕೇಳದ ಅವರು ಅಜ್ಜಿಗೆ ಹೇಳಿ ನೀರು ಕೊಟ್ಟು ಅವರು ಹೊರಗೆ ಹೋಗಿ ಬಾಗಿಲು ಹಾಕಿ ಕೊಟ್ಟಿಗೆಯಿಂದ ಗೋಮೂತ್ರ ತಂದು ಏನೆನೋ ಮಾಡುತ್ತಿದ್ದರು. ಅಜ್ಜಿ, ನೀವು ಅದನ್ನ ನೋಡಬೇಡಿ ಅಂತ ಹೇಳಿ ಮಲಗುವ ವ್ಯವಸ್ಥೆ ಮಾಡಿದರು. ಕಣ್ಣು ಬಿಟ್ಟು ನೋಡಿದರೆ ಬೆಳಗಿನ ಜಾವ 10 ಘಂಟೆ
ಒಬ್ಬರಾದ ಮೇಲೆ ಒಬ್ಬರು ಎಚ್ಚರವಾಗುತ್ತಿದ್ದಂತೆ ರಾತ್ರಿ ನಡೆದ ಘಟನೆ ಒಂದೊಮ್ಮೆ ಮೆಲುಕು ಹಾಕುತ್ತಾ ಭಯದ ಬೆವರು ಹನಿ ನೀರು ನೆಲಕ್ಕೆ ಬಿದ್ದು ನಾವು ಅನುಭವಿಸಿದ ಭಯಾನಕ ಘಟನೆಯ ಸಾರಾಂಶ ತಾತನಿಗೆ ಮುಟ್ಟಿತು. ತಾತ ನಮ್ಮೆಲ್ಲರನ್ನು ಸಾಲಾಗಿ ಕೂರಿಸಿ ಬಾಯ್ತುಂಬಾ ಬೈದರು. ಹುಟ್ಟಿದಾಗಿನಿಂದ ಅದೇ ಊರಿನಲ್ಲಿ ವಾಸವಿರುವ ಅವರು ಅಲ್ಲಿ ನಡೆಯುವ ಎಲ್ಲ ಆಗು ಹೋಗುಗಳು ಚಟುವಟಿಕೆಗಳ ಬಗ್ಗೆ ತಿಳಿದುಕೊಂಡಿದ್ದರು. ಕೆಲವೊಂದಿಷ್ಟು ವಿಚಾರಗಳ ಬಗ್ಗೆ ನಿಗೂಢಗಳ ಬಗ್ಗೆ ಊರ ಜನರಿಗೆ ಉತ್ತರ ಸಿಗದೆ ಹುಡುಕಲು ಹೋಗದೆ ಸುಮ್ಮನಾಗಿದ್ದಾರೆ. ನಾವು ಬಂದ ದಾರಿಯಲ್ಲಿ ನಡೆದ ಎಷ್ಟೋ ಘಟನೆಗಳನ್ನ ನೆನೆದು ಈಗಲು ಬೆಚ್ಚಿಬೀಳುತ್ತಾರೆ. ನಾವುಗಳು ಆ ರಸ್ತೆಯಲ್ಲಿ ಅಂತಹ ಸನ್ನಿವೇಶಗಳನ್ನು ಎದುರಿಸಿ ಜೀವಂತವಾಗಿ ಬಂದಿರುವುದು ನಮ್ಮ ತಂದೆ ತಾಯಿ ನಮ್ಮ ಹಿರಿಯರು ಮಾಡಿದ ಪುಣ್ಯದ ಫಲ ಮತ್ತು ದೇವರ ಕೃಪೆಯಿಂದ ಮಾತ್ರ ಸಾಧ್ಯ ಎಂದು ಸಾರಿ ಸಾರಿ ಹೇಳಿದರು.
ಕೆಲವೊಂದು ಕೆಟ್ಟ ರಾತ್ರಿಯಲ್ಲಿ ಆ ರಸ್ತೆಯಲ್ಲಿ ಪ್ರಯಾಣ ಮಾಡುವ ಎಷ್ಟೋ ಜನ ಒಂದು ಊರಿನಲ್ಲಿ ಕಾಣಿಸಿಕೊಂಡರೆ ಮತ್ತೊಂದು ಊರಿನಲ್ಲಿ ಅವರ ಸುಳಿವೇ ಇರುತ್ತಿರಲಿಲ್ಲ. ದಾರಿಯ ಮಧ್ಯದಲ್ಲಿ ಏನು ಬೇಕಾದರೂ ನಡೆಯುತ್ತಿತ್ತು ಅದರಲ್ಲಿ ಕೆಲವೊಂದು ದೇಹಗಳು ಸಿಕ್ಕರೆ ಇನ್ನು ಕೆಲವು ಸಿಗದೆ ಪೋಲಿಸ್ ಲಿಸ್ಟ್ ನಲ್ಲಿ ನಾಪತ್ತೆ ಎಂದು ದಾಖಲಾಗಿ ಕೇಸ್ ಗಳು ಮುಚ್ಚಿಹೋದವು. ಕೆಲವರು ಕಳ್ಳರ ಕಾಟ ಎನ್ನುತ್ತಾರೆ ಆದರೆ ಸಿಕ್ಕ ಸಾಕ್ಷಿಗಳಲ್ಲಿ ಕಳ್ಳರ ಕೆಲಸ ಇಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಅಂತ ತಾತ ಹೇಳುತ್ತಿರುವಾಗ ನಮಗೆ ಒಂದು ಕ್ಷಣ ಮೈ ತಣ್ಣಗಾಯಿತು. ಒಬ್ಬರನ್ನೊಬ್ಬರು ಮುಖಗಳನ್ನು ನೋಡುತ್ತಾ ಕುಳಿತೆವು. ಈಗಲು ಕೂಡ ರಾತ್ರಿ ಕತ್ತಲಾದ ಮೇಲೆ ಎಂತಹ ಸಂದರ್ಭದಲ್ಲೂ ಯಾರು ಕೂಡ ಊರಿಂದ ಆಚೆ ಹೋಗುವ ಪ್ರಯತ್ನ ಕೂಡ ಮಾಡೋಲ್ಲ ಎಂಬುದು ತಾತನ ಮಾತಾಗಿತ್ತು‌.
ಹೀಗೆ ತಾತನ ಜೊತೆ ಮಾತುಕತೆ ಮುಂದುವರಿದಂತೆ ಅಜ್ಜಿ ನಾಟಿ ಕೋಳಿ ಸಾರು ಮುದ್ದೆ ಮಾಡಿ ಊಟಕ್ಕೆ ಕರೆದರು. ಮೊದಲೇ ಕೆಟ್ಟ ಹಸಿವು ಕಾಡುತ್ತಿದ್ದ ಕಾರಣ ಎಲ್ಲರಿಗು ಭರ್ಜರಿ ಭೋಜನವಾಯಿತು. ಮತ್ತೆ ಇಂತಹ ತಪ್ಪು ಮಾಡದಂತೆ ಎಚ್ಚರ ಹೇಳಿ ಸುರಕ್ಷಿತವಾಗಿ ಹೋಗುವಂತೆ ಬೀಳ್ಕೊಟ್ಟರು. ಆ ದಿನ ಕತ್ತಲಾಗುವ ಮುಂಚೆ ಎಲ್ಲರು ಮನೆ ಸೇರಿಕೊಂಡರು.
ಆ ರಾತ್ರಿಯ ಅನುಭವ ನಮ್ಮ ಜೀವನದಲ್ಲಿ ಮಹತ್ತರ ತಿರುವಿಗೆ ಕಾರಣವಾಯಿತು. ಅಲ್ಲಿಯವರೆಗು ದೇವರು, ಮಾಟ-ಮಂತ್ರ, ಪ್ರೇತ-ಪಿಶಾಚಿ ಗಳನ್ನ ನಂಬದ ನಾವು ಅದರ ಶಕ್ತಿಯನ್ನು ಅರಿತು ಮೂಡನಂಬಿಕೆಗಳು ನಂಬಿಕೆಯ ಕಂಬವಾಗಿ ನಿಂತಿದೆ. ಕೇಳುಗರಿಗೆ ಇದು ಕಥೆಯಾಗಬಹುದು ಆದರೆ ಅನುಭವಿಸಿದವರಿಗೆ ಮಾತ್ರ ಅದರ ಸತ್ಯಾಸತ್ಯತೆಯ ಆಳ ತಿಳಿದಿದೆ. ಎಲ್ಲರು ಹಾಗೆ ಒಂದು ವಿಷಯದ ಬಗ್ಗೆ ತಿಳಿದು ಕೊಳ್ಳಬೇಕಾದರೆ ನಂಬಿಕೆ ಬರಬೇಕಾದರೆ ಅದರ ಅನುಭವಕ್ಕೆ ತನನ್ನು ತಾನು ತೊಡಗಿಸಿಕೊಳ್ಳಬೇಕು. ಅನುಭವದಿಂದ ಕಲಿಯುವ ವಿದ್ಯೆ ಬಹಳ ಶ್ರೇಷ್ಠ ಯಾಕೆ ಅಂದ್ರೆ ಅದರ ಒಳಗಿನ ನಿಜ ಅರ್ಥ ತಿಳಿಯೋದು ಅನುಭವಿಸಿದಾಗ ಮಾತ್ರ. ಸ್ವಂತ ಅನುಭವ ಅಥವ ಇನ್ನೊಬ್ಬರು ಅನುಭವಿಸಿದ ಕಥೆಗಳಿಂದ ನಮ್ಮನ್ನು ನಾವು ಬುದ್ದಿಜೀವಿಗಳಾಗಿ ಪರಿವರ್ತಿಸಿ ಕೊಳ್ಳುವ ಎರಡು ಮಾರ್ಗ. ಅನುಭವಿಸಿ ನಂಬಿದವನು ಜೀವನವನ್ನು ಸರಿದೂಗಿಸುವ ಸೂಕ್ಷ್ಮ ಜೀವಿಯಾಗುತ್ತಾನೆ ಇಲ್ಲದವನು ಅನುಭವಕ್ಕಾಗಿ ಕಾಯುತ್ತಾನೆ.
ಕೃಷ್ಣ ಮೂರ್ತಿ. ಕೆ
Categories Short StoriesTags , , ,

12 thoughts on “ಭೂತ ಕಥೆ

 1. Good one bro… sakath agide…oole experience agide.

  Like

 2. Vichara nijavo sathyavo gothilla aadre
  Nanage sahithyadalli olleya improvements kaansthide..
  Kuthoohala kandithavagi moodisuthe…
  NOTE-nanu matra idanna FICTION agi consider madthini ashte…

  Like

  1. Thank you. As i mentioned in the story. It all depends on experience. Experience plays a major role in any context. And experience cannot be explained but i tried my best doing it. Story goes with each one’s perspective.

   Like

 3. ಕನ್ನಡದ ಪದಗಳ ಬಳಕೆ 👌. ಇಷ್ಟು ಚೆನ್ನಗಿ ಅನುಭವ ವರ್ಣಿಸೋದು ಒಂದ್ ಕಲೆ. Try some other way to reach more ppl instead of publishing online, as some don’t have patience to go through links. Good luck man.

  Like

  1. Thank you so much sir. This is my personal blog which has a collection of my own works. And I’m trying different way to reach more people it takes some Time. But definitely will do it. Thanks for your suggestion

   Like

 4. Damn good bro…. impressive 👻♥️

  Like

 5. Abdul Rehman June 2, 2019 — 23:12

  Adikke helodu dodavr maat kelro uddara aagtira anta… Hogli bidu ivag adru buddi bant alla. Ending alli conclusion channak kottidiya. Very good. Impressed 👍

  Like

  1. Everything cannot happen as we plan sometimes things takes its own turn which gives the best lesson and no one can go against it. Experience and learning are the two strands in a track which makes the journey smooth. Thanks for your feedback. Happy for that❣️

   Like

 6. It’s an awesome real story even I too have experienced the same when I was child hood

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close