ಭಾವನೆಗಳ Express

ದಿನನಿತ್ಯದ ಕೆಲಸಗಳು, ವಾಟ್ಸಾಪ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲ ತಾಣಗಳು ಮನುಷ್ಯನ ಜೀವನದಲ್ಲಿ ಬಹಳಷ್ಟು ಮುಖ್ಯ ಪ್ರಾಮುಖ್ಯತೆ ಹೊಂದಿದೆ. ಇಂತಹ ಸಾಮಾಜಿಕ ಜಾಲತಾಣಗಳಿಂದ ಮನುಷ್ಯನಿಗೆ ದಿನದ 24ಗಂಟೆ ಮೀರಿದ ಸಮಯ ಸೃಷ್ಟಿಯಾಗಿದೆ. ಹೇಗೆ ಅಂತ ಕೇಳ್ತೀರಾ? ಒಂದು ಕಡೆ ಕಾಲೇಜಿನ ಕ್ಲಾಸ್ ರೂಂ ನಲ್ಲಿ ಕುಳಿತ ವಿದ್ಯಾರ್ಥಿ ಅವನ ಮೊಬೈಲ್ ನಲ್ಲಿ ಕ್ರಿಕೆಟ್ ಲೈವ್ ಸ್ಕೋರ್ ನೋಡ್ತಿರ್ತಾನೆ, ಹಾಗೆ ತನ್ನ ಗರ್ಲ್ ಫ್ರೆಂಡ್ ಗೆ ಮೆಸೆಜ್ ಮಾಡ್ತಾ ಫೇಸ್ಬುಕ್ ನಲ್ಲಿ ಪೊಸ್ಟ ಲೈಕ್ ಮಾಡ್ತಾ ಮಲ್ಟಿಟಾಸ್ಕಿಂಗ್ ನಲ್ಲಿ ಇರ್ತಾನೆ. ಒಂದೇ ಜಾಗದಲ್ಲಿ ಕೂತು ಮೂರು ಕೆಲಸಗಳಲ್ಲಿ ಬಿಜಿಯಾಗೋದು ಅಂದ್ರೆ ತಮಾಷೆನ ಹೇಳಿ?. ಹೀಗೆ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಆದ್ರೆ ನಮ್ಮ ಜನ ಎಷ್ಟು ಸಮಯ ಸಿಕ್ಕಿದೆ ಅದನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ತಿಳಿಯದೆ ಯಾವಾಗ ಕೇಳಿದ್ರು “ಟೈಂ ಇಲ್ಲ ಗುರು” ಅಂತ ಒಂದು ಡೈಲಾಗ್ ಹೇಳಿ ತಪ್ಪಿಸಿಕೊಳ್ಳುತ್ತಾರೆ.
ಹೀಗೆ ಸಿಕ್ಕ ಟೈಂ ನ ಸರಿಯಾಗಿ ಬಳಸಿಕೊಳ್ಳೋರು ತುಂಬಾನೆ ಕಡಿಮೆ. ಸಮಯವನ್ನ ಸರಿಯಾಗಿ ಬಳಸಿಕೊಂಡವರು ಅತ್ಯುತ್ತಮ ಕ್ಷಣಗಳನ್ನ ಅವರ ನೆನಪಿನ ಜೋಳಿಗೆಗೆ ಹಾಕುವುದರಲ್ಲಿ ಎರಡು ಮಾತ್ತಿಲ್ಲ. ಸಮಯದ ಬಳಕೆ ಎಷ್ಟು ಮುಖ್ಯ ಅಂದ್ರೆ ನಾವು ಅದರಿಂದ ಪಡೆದ ಲಾಭ ಒಂದು ಸೆಕೆಂಡ್ ಅಥವ ಒಂದು ದಿನವೇ ಆಗಿದ್ದರು ನಮ್ಮ ಜೀವನದ ಉದ್ದಕ್ಕು ಮೆಲುಕು ಹಾಕುವ ನೆನಪುಗಳಾಗಿ ಉಳಿದುಬಿಡುತ್ತದೆ. ಇಂತಹ ಸಮಯವನ್ನು ಸರಿಯಾಗಿ ಬಳಸಿಕೊಂಡು ನೆನಪುಗಳನ್ನು ಸೃಷ್ಟಿಸಿದ ಒಂದು ಫ್ರೆಂಡ್ ಶಿಪ್ ನ ಕಥೆ ಇದು.
ಅವನ ಹೆಸರು ವಸಂತ್ ಮತ್ತು ಅವನ ಕ್ರಶ್ ಎಂದೇ ಕರೆಸಿಕೊಂಡ ಋತು. ಇವರಿಬ್ಬರೊಂದಿಗೆ ಸದಾಕಾಲ ಜೊತೆಯಲ್ಲಿದ್ದ ಮನಸ್ ಮತ್ತು ಅವನ ಗರ್ಲ್ ಫ್ರೆಂಡ್ ಖುಷಿ. ಈ ನಾಲ್ಕು ಜನ ಒಂದೇ ಕಾಲೇಜಿನಲ್ಲಿ ಓದಿ ಪಾಸ್ ಆಗಿ ಡಿಗ್ರಿ ಮುಗಿಸಿ ಋತು ಬಿಟ್ಟು ಮೂರು ಜನ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಋತು ಮಾತ್ರ ಇನ್ನೊಂದು ಕಂಪನಿಯಲ್ಲಿ ಕೆಲಸ ಹುಡುಕಿ ಮನೆಗೆ ಜವಾಬ್ದಾರಿಯುತ ಮಗಳಾಗಿ ಜೀವನ ಸಾಗಿಸುತ್ತಿದ್ದಳು. ಇವರು ನಾಲ್ಕು ಜನ ಎಂದರೆ ಕಾಲೇಜಿನಲ್ಲಿ ಚಿರಪರಿಚಿತ ವ್ಯಕ್ತಿಗಳು. ಕಾಲೇಜಿನ ದಿನಗಳನ್ನು ಓದಿನ ಜೊತೆಗೆ ರೆಕ್ಕೆ ಬಿಚ್ಚಿದ ಹಕ್ಕಿಗಳಂತೆ ಹಾರಾಡಿ ಗುಂಪುಗಳನ್ನು ಕಟ್ಟಿಕೊಂಡು ಸುಂದರ ಕ್ಷಣಗಳನ್ನು ಕಳೆದು ಸಂತೋಷದ ಏಣಿಯನ್ನ ಆಕಾಶಕ್ಕೆ ಹಾಕಿ ಪ್ರತಿದಿನ ಹತ್ತುವ ಸಾಹಸಕ್ಕೆ ಕೈ ಹಾಕಿ ಅದ್ಭುತ ನೆನಪುಗಳನ್ನ ಸೃಷ್ಟಿ ಮಾಡಿದವರು. ಇವರದ್ದೇ ಒಂದು ಪುಟ್ಟ ಕುಟುಂಬ ಅಂದ್ರೆ ತಪ್ಪಾಗೊಲ್ಲ. ವಸಂತ್ ಗೆ ಋತುನ ಕಂಡ್ರೆ ತುಂಬಾ ಇಷ್ಟ ಅದು ಋತುಗೆ ಕೂಡ ಗೊತ್ತು ಇದರಿಂದ ಅವರಿಬ್ಬರ ಮಧ್ಯೆ ಮನಸ್ತಾಪಗಳು ಕಡಿಮೆಯಾಗಿತ್ತು. ಒಬ್ಬರನ್ನೊಬ್ಬರು ಅರಿತಿದ್ದವರು ಜೊತೆಯಲ್ಲಿ ಇದ್ದದ್ದಕ್ಕಿಂತ ಜಗಳ ಆಡಿದ್ದೇ ಜಾಸ್ತಿ. ಖುಷಿ ಮತ್ತು ಮನಸ್ ಗೆ ಇವರಿಬ್ಬರ ಜಗಳ ನೋಡೋದೆ ಏನೋ ಒಂತರ ಆನಂದ. ಋತು ನ ಗೋಳ್ಹೋಕೊಂಡಿಲ್ಲ ಅಂದ್ರೆ ವಸಂತ್ ಗೆ ತಿಂದ ಅನ್ನ ಅರಗೊಲ್ಲ, ವಸಂತ್ ನ ಬೈದಿಲ್ಲ ಅಂದ್ರೆ ಋತುಗೆ ಸರಿಯಾಗಿ ನಿದ್ದೆ ಬರೊಲ್ಲ. ಹೀಗೆ ಇದ್ದ ಇವರ ನಾಲ್ಕು ಜನರ ಸ್ನೇಹ ಕಾಲೇಜು ಮುಗಿದ ಮೇಲೆ ಋತು ಮಾತ್ರ ಬೇರೆ ದಾರಿ ಹಿಡಿದು ಕೆಲಸ ಮುಂದುವರಿಸಿದ್ದು ಸ್ವಲ್ಪ ಬೇಜಾರಾಯ್ತು ಆದ್ರು ಅವಳ ಇಚ್ಚೆ ಅವಳ ಕಷ್ಟ ಅಂತ ಮೂರು ಜನ ಒಬ್ಬರನ್ನೊಬ್ಬರು ಸಮಜಾಯಿಸಿ ಇವರು ಮೂರು ಜನ ಮಾತ್ರ ಪ್ರತಿದಿನ ಅವಳನ್ನು ನೆನಪಿಸಿಕೊಂಡು ಒಂದು ಫ್ರೆಂಡ್ ಶಿಪ್ ಗೆ ಅರ್ಥಕೊಡುವಂತೆ ಬದುಕುತ್ತಿದ್ದರು.
ಹೀಗೆ ಕೆಲಸದಲ್ಲಿ ಎಲ್ಲರೂ ಬ್ಯುಸಿಯಾಗಿ ಜೀವನ ನಡೆಸುತಿದ್ದ ಸಮಯದಲ್ಲಿ ಒಂದು ದಿನ ಮನಸ್ ಮೊಬೈಲ್ ಗೆ ಮೆಸೇಜ್ ಬಂತು ಅದು ಋತು ಮೆಸೇಜ್ ಆಗಿತ್ತು. “ಮನಸ್ ಈ ಸಲ ಎಲ್ಲರೂ ಒಂದು ಲಾಂಗ್ ರೈಡ್ ಹೋಗೋಣ? ಎಲ್ಲರನ್ನು ಒಂದು ಮಾತು ಕೇಳು ಒಂದು ಡೇಟ್ ಫಿಕ್ಸ್ ಮಾಡಿ ಹೋಗೋಣ ತುಂಬ ದಿನ ಆಯಿತು ಎಲ್ಲರನ್ನು ನೋಡಿ ” ಅಂತ ಋತು ಮೆಸೇಜ್ ಮಾಡಿದ್ಲು ಅದಕ್ಕೆ ಸರಿ ಅಂತ ರಿಪ್ಲೈ ಮಾಡಿ ಆಫೀಸ್ ನ ಕ್ಯಾಂಟೀನ್ ನಲ್ಲಿ ಕುಳಿತಿದ್ದ ವಸಂತ್ ಮತ್ತು ಖುಷಿ ಯ ಹತ್ತಿರ ಬಂದು ತುಂಬಾ ಸಂತೋಷದಿಂದ
ಮನಸ್ : ಗೆಸ್ ಸಂಥಿಂಗ್ ?
ವಸಂತ್ : ಏನೋ, ಏನ್ ಆಯಿತು ?
ಮನಸ್ : ಗೆಸ್ ಮಾಡು ಮಗ ನಿಂಗೆ ಖುಷಿ ಕೊಡೋ ವಿಚಾರ ಇದು
ವಸಂತ್ : ಏನು? ಋತು ಮೆಸೇಜ್ ಮಾಡಿದ್ಲಾ?
ಮನಸ್: ಅದು ಹೇಗೆ ಮಗ ಅಷ್ಟ್ ಕರೆಕ್ಟ್ ಆಗಿ ಗೆಸ್ ಮಾಡ್ದೆ?
ಖುಷಿ: ಅವನಿಗೆ ಖುಷಿ ಕೊಡೋ ವಿಚಾರ ಅಂದ್ರೆ ಅದು ಋತು ನೇ ತಾನೇ.
ವಸಂತ್: ಹೌದಾ ಮಗ? ಏನ್ ಅಂತ ಮೆಸೇಜ್ ಮಾಡಿದ್ಲು ಏನ್ ಸಮಾಚಾರ? ಅಪರೂಪಕ್ಕೆ ನೆನಪಿಸಿಕೊಂಡಿದ್ದಾರೆ ಮೇಡಂ.
ಮನಸ್: ಮಗ, ಋತು ಲಾಂಗ್ ರೈಡ್ ಹೋಗೋಣ ಅಂತ ಹೇಳಿದ್ದಾಳೆ ಮಗ ನಿಮ್ಮನೆಲ್ಲಾ ಒಂದು ಮಾತು ಕೇಳಿ ಹೇಳು ಅಂದ್ಲು
ಇದನ್ನ ಕೇಳಿದ ವಸಂತ್ ಗೆ ಎಲ್ಲಿಂದನೋ ಒಂದು ಹಕ್ಕಿ ಕೂಗಿದಂತಾಯಿತು, ಎದೆ ಒಳಗೆ ಖುಷಿಯ ಕೂಗು ಕೇಳಿಸುತಿತ್ತು ಅದು ಅವನಿಗೆ ಮಾತ್ರ ಕೇಳಿಸುತಿತ್ತು, ಆ ಖುಷಿ ಹೇಳಿಕೊಳೋಕೆ ಆಗ್ತಿಲ್ಲ ಆದ್ರೆ ವಸಂತ್ ಕೊಟ್ಟ ಒಂದು ತುಂಟ ನಗೆ ಖುಷಿ ಮತ್ತು ಮನಸ್ ಗೆ ಬರೋಕಾಗಲ್ಲ ಅಂತ ಹೇಳೋಕ್ ಮನಸ್ಸೇ ಆಗ್ಲಿಲ್ಲ.
ಅಯ್ಯೋ “ಏನ್ ನಗು ನೋಡು ಅವನಿಗೆ” ಅಂತ ಇಬ್ಬರು ರೇಗಿಸೋಕೆ ಶುರುಮಾಡಿದ್ರು. ಎಲ್ಲರು ಒಪ್ಪಿದ್ದೇನೋ ಆಯಿತು ಆದರೆ ಯಾವ ಜಾಗ ಅಂತ ನಿರ್ಧಾರ ಮಾಡೋದು ತುಂಬಾ ಕಷ್ಟ ಸ್ವಾಮಿ. ಹುಡುಗರೇ ಆದ್ರೆ ಯಾವ ಜಾಗಕ್ಕೆ ಯಾವ ಟೈಮ್ ಗೆ ಬೇಕಾದ್ರು ಹೋಗಬಹುದು ಆದ್ರೆ ಹುಡುಗೀರಿದ್ರೆನೇ ತಲೆ ನೋವು, ಬೆಳಗ್ಗೆ ಬೇಗ ಮನೆ ಬಿಡೋಕೆ ಆಗಲ್ಲ ರಾತ್ರಿ ಲೇಟ್ ಆಗಿ ಮನೆಗೆ ಹೋಗೋಕಾಗಲ್ಲ ಹೀಗೆ ಹುಟ್ಟುತ್ತಾನೆ ಹೆಸರು ಪಕ್ಕದಲ್ಲಿ ಒಂದು ಸ್ಟಾರ್ ಮಾರ್ಕ್ (*) ಅಂದ್ರೆ ಕಂಡಿಷನ್ಸ್ ಅಪ್ಲೈ ಅಂತ ಹುಟ್ಟುಬಿಡ್ತಾರೆ. ಇದೇ ಪರಿಸ್ಥಿತಿಯಲ್ಲಿ ವಸಂತ್ ಕೂಡ ಸಿಗಾಕಿಕೊಂಡ. ಮನಸ್ ನ ಕೇಳುದ್ರೆ “ಮಗ ಏನ್ ಬೇಕಾದ್ರು ಮಾಡು ಆದ್ರೆ ಲೇಟ್ ಆಗೊತರ ಪ್ಲಾನ್ ಮಾಡ್ಬೇಡ ಬೇಗ ಬರೋ ಹಾಗೆ ಮಾಡು ನಾನು ಬೇಗ ಮನೆಗೆ ಹೋಗಿ ಮಲ್ಕೊತೀನಿ” ಅಂದ ಇದನ್ನ ಕೇಳಿದ ವಸಂತ್ “ಲೋ ಸರಿಯಾಗ್ ಇದ್ದೀಯ ಕಣೋ ನೀನು, ಎಲ್ಲಾ ಸರಿಯಾಗಿ ಪ್ಲಾನ್ ಪ್ರಕಾರ ನಡುದ್ರೆ ಕ್ರೆಡಿಟ್ ನಿಂಗೆ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಬೈಸ್ಕೊಳೋಕೆ ನಾನ? ಅಂತ ತುಸು ನಗುಮೊಗದಿಂದ ಹೇಳಿದ.
ಅಷ್ಟರಲ್ಲಿ ಟೀ ಬ್ರೇಕ್ ಮುಗಿತು ಕೆಲಸಕ್ಕೆ ಮತ್ತೆ ಎಲ್ಲರು ಹೋದರು.
ಖುಷಿ ಮತ್ತು ಮನಸ್ ಎಂದಿನಂತೆ ಕೆಲಸ ಮುಂದುವರಿಸಿದರು ಆದ್ರೆ ವಸಂತ್ ಗೆ ಮಾತ್ರ ಅದು ಒಂದು ಅಪರೂಪದ ಘಳಿಗೆ ಆಗಿತ್ತು, ತುಂಬಾ ಖುಷಿಯಲ್ಲಿ ಕೆಲಸ ಮುಂದುವರಿಸಿದ ಅವನ ಸಂತೋಶಕ್ಕೆ ಯಾರು ಕಾರಣ ಅಂತ ಅವನ ಟೀಂ ನಲ್ಲಿ ಯಾರಿಗೂ ತಿಳಿದಿರಲಿಲ್ಲ. ಕೆಲಸ ಮುಗಿಯಿತು ಖುಷಿ ಮನೆಗೆ ಹೊರಟಳು, ವಸಂತ್ ಮತ್ತೆ ಮನಸ್ ಗೆ ಎಲ್ಲಿಗೆ ಹೋಗೋದು ಅನ್ನೋದೇ ತಲೆ ನೋವು ತರಿಸುವ ಸಂಗತಿಯಾಗಿತ್ತು.
ಆ ದಿನ ರಾತ್ರಿ ವಸಂತ್ ಗೆ ನಿದ್ಧೆ ಬರಲಿಲ ಅಷ್ಟು ಮಟ್ಟಿಗೆ ಆ ವಿಷಯವನ್ನು ಮನಸ್ಸಿಗೆ ಹಾಕಿಕೊಂಡಿದ್ದ. ಮರುದಿನ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ರೆಡಿಯಾಗುತ್ತಿದ್ದ ಸಮಯದಲ್ಲಿ ವಸಂತ್ ಮೊಬೈಲ್ ಗೆ ಒಂದು ಮೆಸೇಜ್ ಬಂತು ಅದು ಅವರ ಹಳೇ ಟೀಮ್ ಲೀಡ್ ದೀಕ್ಷಿತಾ ಮೇಡಂ ಅವರದ್ದು. ಮನಸ್ ಗು ಕೂಡ ದೀಕ್ಷಿತಾ ಮೇಡಂ ಪರಿಚಯ ಇತ್ತು. ಮೊದಲು ಎಲ್ಲರು ಒಂದೇ ಟೀಮ್ ನಲ್ಲಿ ಕೆಲಸ ಮಾಡುತ್ತಿದ್ದರು ನಂತರ ಪ್ರೋಸೆಸ್ ಚೇಂಜ್ ಆದ ಕಾರಣ ಟೀಮ್ ಬೇರೆ ಬೇರೆಯಾಗಿತ್ತು.
“ಏನಪ್ಪಾ ವಸಂತ್ ಹೇಗಿದ್ದೀಯ?” ದೀಕ್ಷಿತಾ ರವರ ಮೆಸೇಜ್ ನೋಡಿದ ನಂತರ…
ಹಾ ಮ್ಯಾಮ್ ಚೆನ್ನಾಗಿದ್ದೀನಿ. ನೀವು ಹೇಗಿದ್ದೀರ? ಪಾಪು ಹೇಗಿದ್ದಾಳೆ?
“ಎಲ್ಲರು ಚೆನ್ನಾಗ್ ಇದ್ದೀವಿ ಕಣೋ”
“ಏನ್ ಮ್ಯಾಮ್ ಸಮಾಚಾರ ಅಪರೂಪಕ್ಕೆ ನೆನಸಿಕೊಂಡಿದೀರಾ?”
“ಹೂ ಕಣೋ ನೆನೆಸಿಕೊಳ್ಳೋ ಟೈಮ್ ಇದು. ಯಾವಾಗ್ಲೂ ಪಾಪು  ನೋಡ್ಬೇಕು ಅಂತ ನೀನು ಮನಸ್ ಹೇಳ್ತಿದ್ರಲ್ಲ ಈಗ ಆ ಟೈಮ್ ಬಂದಿದೆ. ಈ ಭಾನುವಾರ ಮೈಸೂರ್ ನಲ್ಲಿ ನನ್ನ ಮಗಳ ನಾಮಕರಣ ಇದೇ ತಪ್ಪದೆ ಇಬ್ರು ಬರಬೇಕು ಆಯ್ತಾ?
“ಓಹೋ ಮ್ಯಾಮ್ ಬೆಳಗ್ಗೆನೇ ಎಂಥ ಸುದ್ದಿ ಕೊಟ್ರಿ. ಅಂತೂ ಇಂತೂ ಇಷ್ಟು ದಿನ ಆದ್ಮೇಲೆ ಪಾಪು ನೋಡೋ ಯೋಗ ಬಂತು. ಖಂಡಿತಾ ತಪ್ಪದೆ ನಾವಿಬ್ರು ಆ ದಿನ ಅಲ್ಲಿ ಇರ್ತಿವಿ ಮ್ಯಾಮ್”
“ಸರಿ ಹಾಗಾದ್ರೆ ಕಾಯ್ತ ಇರ್ತಿನಿ ಆದಷ್ಟು ಬೇಗ ಬನ್ನಿ ಅಡ್ರೆಸ್ ಕಳಿಸ್ತಿನಿ ಬಾಯ್.
“ಬಾಯ್ ಮ್ಯಾಮ್ ಟೇಕ್ ಕೇರ್” ಅಂತ ಹೇಳಿ ವಸಂತ್ ದೀಕ್ಷಿತಾ ಜೊತೆ ಮಾತು ಮುಗಿಸಿದ.
ವಸಂತ್ ಆಫೀಸ್ ಗೆ ಬಂದ ಕೂಡಲೇ ಮನಸ್ ಗೆ ದೀಕ್ಷಿತಾರವರ ಮಗಳ ನಾಮಕರಣದ ವಿಷಯ ತಿಳಿಸಿದ. ಹಿಂದು ಮುಂದು ಯೋಚಿಸದೆ ಮನಸ್ “ಸರಿ ಮಗ ನಡಿ ಹೋಗೋಣ ಅಂದ” ಅದರಂತೆ ಹೊರಡಲು ಸಿದ್ದರಾದರು. ವಸಂತ್ ಗೆ ಆ ದಿನ ಅವನ ಫ್ರೆಂಡ್ ಮದುವೆ ಇದ್ದ ಕಾರಣ ನೆಲಮಂಗಲದಲ್ಲಿ ಬೆಳಗ್ಗೆ ಮದುವೆ ಮುಗಿಸಿ ನೆಲಮಂಗಲದಿಂದ ಮಾಗಡಿ ಮುಖಾಂತರವಾಗಿ ಹುಲಿಯೂರುದುರ್ಗ ದಾಟಿ ಮೈಸೂರು ತಲುಪಬೇಕಿತ್ತು, ಅದರಂತೆಯೇ ಬೈಕಿನಲ್ಲಿ ಇಬ್ಬರು ಮದುವೆ ಮುಗಿಸಿ ಹೊರಟರು.
“ಏನ್ ಮಗ ಎಲ್ಲಿಂದ ಎಲ್ಲಿಗೆ ಕೇಳಿದ್ರು ಒಂದು ರೂಟ್ ಗೊತಿರುತ್ತಲ್ಲಾ ಮಗ ನಿಂಗೆ” ಮನಸ್ ಹೇಳಿದ
“ಈ ದಾರಿ ನಿನಗೆ ತುಂಬ ಇಷ್ಟ ಆಗುತ್ತೆ. ದಾರಿ ಪೂರ್ತಿ ಮರಗಳಿದ್ದಾವೆ ಹೋಗ್ತಾ ಇದ್ರೆ ಆಯಾಸ ಆಗೋಲ್ಲ”
“ಏನೋ ಅದ್ ಎಲ್ಲಾ ನಂಗೆ ಗೊತ್ತಿಲ್ಲ ಸೇಫ್ ಆಗಿ ನಮ್ಮ್ ಮನೆಗ್ ವಾಪಾಸ್ ಕರ್ಕೊಂಡ್ ಬಂದ್ ಬಿಡು ಸಾಕು”
“ಬರಿ ಮನೆಗೆ ಹೋಗೋ ಮಾತೆ ಅಡ್ತ್ಯ ಯಾವಾಗ್ಲೂ”
ದಾರಿ ಸಾಗಿದಂತೆ ವಸಂತ್ ಮತ್ತು ಮನಸ್ ನಡುವಿನ ಮಾತುಗಳು ಹೆಚ್ಚಾಯಿತು. ಅವರ ಮುಂದಿನ ಜೀವನದ ಬಗ್ಗೆ, ಮಾಡುತ್ತಿರುವ ಕೆಲಸಗಳ ಬಗ್ಗೆ ವಿಚಾರಗಳು ಚರ್ಚೆಗಳು ಮುಂದುವರೆದವು. ಏನೆ ಆದ್ರು ಒಂದು ಜರ್ನಿಯಲ್ಲಿ ಮಾತಾಡುವ ಮಾತುಗಳು ತುಂಬಾ ಪರಿಣಾಮ ಬೀರುತದೆ. ಅದರಲ್ಲೂ ಟ್ರಿಪ್ ಗೆ ಅಂತ ಸುತ್ತಾಡುವ ಜನರಿಗೆ ಚೆನ್ನಾಗಿ ತಿಳಿದಿರುತ್ತದೆ.
ಹೀಗೆ ಮಾತು ಮುಂದುವರಿದಂತೆ ಹುಲಿಯೂರುದುರ್ಗಾ ಸಮೀಪಿಸುತ್ತಿದಂತೆ ಒಂದು ಜಾಗ ಸಿಕ್ಕಿತು. ಮರಗಳಿಂದ ಉದುರಿದ ಕೆಂಪು ಹೂಗಳು ತುಂಬಿದ ರಸ್ತೆಯದು. ಸುಂದರಿಯ ಬಳುಕಿದ ಮೈಯಂತೆ ಬಾಗಿದ ತಿರುವುಗಳು, ಸುತ್ತ ಮುತ್ತ ಬರಿ ಕಾಡು. ಆ ದಾರಿ ಜನರಿಗೆ ಪರಿಚಯವಿದ್ದರೂ ಯಾರು ಜಾಸ್ತಿ ಓಡಾಡಿದಂತೆ ಕಾಣಲಿಲ್ಲ. ಪಕ್ಕದಲ್ಲೇ ಪಾಳು ಬಿದ್ದಿದ ಒಂದು ಫಾರೆಸ್ಟ್ ಆಫೀಸರ್ ಮನೆ, ಮನೆ ತುಂಬಾ ಹಳೆಯದಾದರೂ ಮನೆಯ ಗೋಡೆ ಮೇಲಿನ ನಾಮಫಲಕದ ಮೇಲೆ ಬರೆದಿದ್ದನ್ನ ನೋಡಿ ಅದು ಫಾರೆಸ್ಟ್ ಆಫೀಸರ್ ನ ಮನೆ ಎಂದು ತಿಳಿಯಿತು. ಸುತ್ತಮುತ್ತ ಯಾರು ಇಲ್ಲ ಆದರೆ ಪಕ್ಕದಲ್ಲೇ ಕಾಡಿನ ದೇವರ ಗುಡಿ ಇರುವುದು ವಸಂತ್ ಕಣ್ಣಿಗೆ ಬಿತ್ತು ದಾರಿಯ ಸೊಬಗನ್ನು ಸವೆಯುತ್ತಾ ನಿಂತಿದ್ದ ಮನಸ್ ನ ಕರೆದ ವಸಂತ್. “ನೋಡು ಮಗ ಇದ್ಯಾವುದೋ ಆಫೀಸರ್ ವಾಸ ಇದ್ದ ಮನೆ ಇದು ಹೀಗೆ ಪಾಲು ಬಿದ್ದಿದೆ”
“ಯಾರ್ ಇದ್ರೆ ಏನು ಬಾ ಹೋಗೋಣ ಲೇಟ್ ಆಗುತ್ತೆ”
“ಏನ್ ಲೇಟ್ ಆಗೋಲ್ಲ ಇರಪ್ಪ, ಒಳಗೆ ಹೋಗಿ ಬರೋಣ ಬಾ”
“ನಿನ್ನ ಜೊತೆ ಬಂದು ಇನ್ನು ಏನ್ ಏನ್ ನೋಡಬೇಕೋ ಗೊತ್ತಿಲ್ಲ” ಅಂತ ಮನಸಿನಲ್ಲೇ ಗೊಣಗುತ್ತಾ ವಸಂತ್ ಹಿಂದೆ ಹೆಜ್ಜೆ ಹಾಕಿದ.
ಒಳಗೆ ಹೋಗುತ್ತಿದಂತೆ ಚಿಕ್ಕಮನೆ ಕಟ್ಟಿದ ರೀತಿ ವಸಂತ್ ಗೆ ಇಷ್ಟ ಆಯ್ತು ಆದರೆ ಯಾಕೆ ಪಾಳು ಬಿದ್ದಿದೆ ಅಂತ ತಿಳಿಯಲಿಲ್ಲ.
ಹಂಚಿನ ಮಾಳಿಗೆ ಗಾಳಿಯ ರಭಸಕ್ಕೆ ಬಿದ್ದುಹೋಗಿದೆ, ಮನೆಯ ದೇವರ ಕೋಣೆಯಲ್ಲಿ ದೇವರ ಫೋಟೋ ಒಂದು ಕಾಲದಲ್ಲಿ ಪ್ರತಿದಿನ ಹೂ ಇಟ್ಟು ಪೂಜಿಸುತಿದ್ದ ಫೋಟೋ ಈಗ ಜನರ ಉಸಿರ ಬಿಸಿ ತಟ್ಟಿ ವರುಷಗಳಾದಂತೆ ಭಾಸವಾಗುವ ರೀತಿಯಲ್ಲಿ ಬಿದ್ದಿತ್ತು. ಅದನ್ನ ನೋಡಿದ ಮನಸ್ ಅದನ್ನ ಎತ್ತಿ ಪಕ್ಕಕ್ಕೆ ಇಟ್ಟ. ತಳ್ಳಿದರೆ ಬೀಳುವಂತಾ ಗೋಡೆಗಳು, ಮಾಳಿಗೆ ಕುಸಿದು ಬಿದ್ದ ಮನೆಯಲ್ಲಿ ಕಿಟಕಿಗೆ ಏನು ಕೆಲಸ ಎಂಬಂತೆ ಕೆಳಗೆ ಬಿದ್ದಿದ್ದವು. ಮನೆಯ ಹಿಂದಿನ ಬಾಗಿಲು ಕಾಡಿಗೆ ಹೋಗುವ ಕಾಲುದಾರಿಗೆ ಅಂಟಿಕೊಂಡಿತ್ತು. ಮನೆಯಲ್ಲಿ ಯಾವ ವಸ್ತುಗಳು ಕೂಡ ಕಾಣಲಿಲ್ಲ. ಮನೆಯಲ್ಲಿ ಯಾವುದೋ ಒಂದು ಕುಟುಂಬ ಇದ್ದು ಹೋದಂತಹ ಸುಳಿವುಗಳಿದ್ದವು. ಇದನ್ನ ನೋಡಿದ ಮನಸ್
“ಮಗ ಹೇಗೂ ಬರೋದು ಬಂದಿದ್ದೀವಿ ದಾರಿ ಕೂಡ ಚೆನ್ನಾಗಿದೆ, ಬೆಂಗಳೂರಿನಿಂದ ಸುಮಾರು 80 ಕಿ.ಮೀ ಆದ್ರೂ ಇದೆ ಯಾಕೆ ನಾವು ಲಾಂಗ್ ರೈಡ್ ಗೆ ಇದೆ ಜಾಗ ಫಿಕ್ಸ್ ಮಡ್ಬಾರ್ದು?”
“ಆಹಾ ಎಲ್ಲಿಂದ ಬರುತ್ತೆ ಈ ಐಡಿಯಾಗಳು ನಿನಗೆ, ಎಲ್ಲಿಂದ ಎಲ್ಲಿಗೆ ಕನೆಕ್ಟ್ ಮಾಡಿದ್ಯಾ ಮಗ. ಅದಕ್ಕೆ ಕಣೋ ನೀನು ಜೊತೆಯಲ್ಲಿ ಇರಬೇಕು ಅನ್ನೋದು”
“ಎಣ್ಣೆ ಜೊತೆ ಬತ್ತಿ ಇದ್ದಹಾಗೆ” ವಸಂತ್ ಹೇಳಿದ
“ಹಣತೆ ಅನ್ನೋ ಇಬ್ಬರು ಹುಡುಗಿಯರ ಕ್ಯಾರೆಕ್ಟರ್ ಲಾಂಗ್ ರೈಡ್ ನಲ್ಲಿ ಬರುತ್ತೆ” ಮನಸ್ ಉತ್ತರಿಸಿದ
“ಈ ಹಣತೆ ಬತ್ತಿ ಎಣ್ಣೆ ಎಲ್ಲವೂ ಸೇರಿ ಕಳೆದುಕೊಂಡಿರೋ ಸಂಬಂಧನ ಖುಷಿನ ಮತ್ತೆ ದೀಪದಂತೆ ಹಚ್ಚಬೇಕು”
“ಹಚ್ಚುವ ಬೆಂಕಿಯ ಕಿಡಿ ಜ್ಯೋತಿಯಾಗಬೇಕು ಜ್ವಾಲೆಯಾಗಬಾರದು” ಮನಸ್ ಹೇಳಿದ
“ಏನು ನಿನ್ ಮಾತಿನ ಅರ್ಥ?”
“ಏನು ಇಲ್ಲ ಇಷ್ಟು ದಿನ ಕಳೆದುಹೋಗಿದ್ದ ಸಂತೋಷ ಮತ್ತೆ ಬರ್ತಿದೆ ಏನು ಹೆಚ್ಚು ಕಮ್ಮಿ ಆಗದೆ ಇರ್ಲಿ ಅಂತ ಅಷ್ಟೇ. ಎಲ್ಲಾನು ಪ್ಲಾನ್ ಪ್ರಕಾರ ಆದ್ರೆ ಸಾಕು. ನಿನ್ನ ಋತುನ ಮತ್ತೆ ಜೊತೆಯಲ್ಲಿ ನೋಡೋದೇ ಒಂದು ಆನಂದ ಮಗ” ಮನಸ್ ಹೇಳಿದ.
“ಸಾಕು ಬಾರಪ್ಪ ಈಗ ಬಂದಿರೋ ಕೆಲಸನ ಮುಗಿಸು ಮನೆಗೆ ಹೋಗೋಣ”
“ವಸಂತ್!! ಹೇಗೂ ಬಂದಿದ್ದೀವಿ ಮತ್ತೆ ಅವರಿಗೆ ಸರ್ಪ್ರೈಸ್ ಕೊಡೋ ತರ ಏನಾದ್ರು ಮಾಡೋಣ”
“ಈ ಕಾಡಲ್ಲಿ ಸರ್ಪ್ರೈಸ್ ಅಂತ ಏನೋ ಮಾಡ್ತಿಯಾ?” ವಸಂತ್ ಪ್ರಶ್ನಿಸಿದ.
“ಒಂದು ಮರದ ಮೇಲೆ ನಮ್ಮೆಲ್ಲರ ಹೆಸರು ಬರೆಯೋಣ?
ಕುತೂಹಲದಿಂದ ವಸಂತ್ ಮನಸ್ ನ ಮುಖ ನೋಡಿ
“ಐಡಿಯಾ ಏನೋ ಚೆನ್ನಾಗ್ ಇದೆ ಆದ್ರೆ ಮರದ ಮೇಲೆ ಹೆಸರು ಬರೆಯೋದು ಬೇಡ, ಆ ಮರ ಆದ್ರೂ ಚೆನ್ನಾಗ್ ಇರಲಿ”
“ಹಾಗ್ ಅಲ್ಲ ಮಗ, ಮರಕ್ಕೆ ತೊಂದ್ರೆ ಆಗೋ ತರ ಕೆತ್ತಿ ಬರೆಯೋದು ಬೇಡ ಆದ್ರೆ ಮರದ ಮೇಲೆ ಹೆಸರು ಕಾಣೋ ತರ ಬರುದ್ರೆ ಸಾಕು. ಅದ್ ಮತ್ತೆ ನಾವ್ ಬಂದಾಗ ಇರುತೊ ಇರಲ್ವೊ ಗೊತ್ತಿಲ್ಲ ಆದ್ರೆ ಬರೆದು ನೋಡೋಣ” ಮನಸ್ ಹೇಳಿದ
“ಸರಿ ಯಾವ್ದ್ ಆದ್ರೆ ಏನು ಸರ್ಪ್ರೈಸ್ ಇದ್ರೆ ಸಾಕು. ನಡಿ ಅದು ಒಂದು ಆಗೋಗ್ಲಿ”
ಅಂದುಕೊಂಡಂತೆ ಮರದ ಮೇಲೆ ಅವರವರ ಹೆಸರಿನ ಮೊದಲಕ್ಷರ ಬರೆದು ಸಿದ್ದ ಮಾಡಿ ಬರೆದ ಕಲ್ಲನ್ನು ಕೂಡ ಬಚ್ಚಿಟ್ಟು ಅಲ್ಲಿಂದ ಹೊರಟರು.
ನೇರವಾಗಿ ಮೈಸೂರಿನ ಅರಮನೆ ಹತ್ತಿರ ಬಂದು ಹೋಟೆಲ್ ನಲ್ಲಿ ನಡೆಸುತ್ತಿದ್ದ ಫಂಕ್ಷನ್ ಗೆ ಇಬ್ಬರು ಬಂದರು. ಸ್ಟೇಜ್ ಮೇಲೆ ಪಾಪುವನ್ನ ಕೈಯಲ್ಲಿ ಎತ್ತಿಕೊಂಡು ಫೋಟೋಗ್ರಾಫರ್ ಹೇಳಿದ ರೀತಿ ಪೋಸ್ ಕೊಡುತ್ತಾ ಮುದ್ದಿನ ಮಗಳ ಜೊತೆ ಆಟ ಆಡುತ್ತಿದ್ದ ದೀಕ್ಷಿತಾ ಮಾಮ್ ಮತ್ತು ಪಕ್ಕದಲ್ಲೇ ಸೆಲ್ಫಿ ಗಳಿಗೆ ಪೋಸ್ ಕೊಡುತ್ತಿದ್ದ ಅವರ ಕುಟುಂಬಸ್ಥರು. ದೀಕ್ಷಿತಾ ಮಾಮ್ ಅವರನ್ನ ನೋಡಿದ ಕೂಡಲೇ ಬನ್ನಿ ಸ್ಟೇಜ್ ಮೇಲೆ ಅಂತ ಕೂಗಿ ಕರೆದರು. ಪಾಪು ನ ನೋಡಿ ಎತ್ತಿಕೊಳೋಕೆ ವಸಂತ್ ಬಂದರೆ ದೀಕ್ಷಿತಾ ಮಾಮ್ ಫೋಟೋ ತಗೊಳೋಣ ಬನ್ನಿ ಅಂದ್ರು. ಕೊನೆಗೂ ಫೋಟೋ ಕಥೆ ಮುಗಿದು ಮಗುವಿನ ಮುಖ ನೋಡುವ ಘಳಿಗೆ ಬಂತು. ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ತಿರುಗಿ ನೋಡಿದರೆ ಹೂವಿನ ಒಡಲಲ್ಲಿ ದುಂಬಿ ಕಂಡಂತೆ ಭಾಸವಾಯಿತು. ನೋಡಿದರೆ ಎಲ್ಲಿ ದೃಷ್ಟಿ ತಾಗುತೋ, ಎತ್ತಿಕೊಂಡರೆ ಎಲ್ಲಿ ಆ ಮುಖದ ಮೇಲೆ ನಗು ಸರಿದುಬಿಡುತೋ ಅಂತ ಎತ್ತಿಕೊಳ್ಳದೆ ವಸಂತ್ ಹಾಗು ಮನಸ್ ಇಬ್ಬರು ಮಗುವನ್ನೇ ನೋಡುತ್ತಾ ನಿಂತರು.
ಹಿಂದೆಯಿಂದ ಎಲ್ಲೊ ಪರಿಚಯವಿದ್ದ ಧ್ವನಿ ಕೇಳಿ ಬಂತು “ಅಂತೂ ಇಂತೂ ಮಗು ನೋಡೋ ಆಸೆ ಇವತ್ತು ಈಡೇರಿತು ಅನ್ನಿ?”
ಇಬ್ಬರು ತಿರುಗಿ ನೋಡಿದರೆ ಅದು ದೀಕ್ಷಿತಾ ರವರ ಯಜಮಾನರು ಮಧುಸೂಧನ್ ಅವರು.
ವಸಂತ್ : “ಸರ್ ಹೇಗಿದ್ದೀರ? ನೋಡಿ ಖುಷಿಯಾಯ್ತು”.
ಮನಸ್ : “ಮಗುನ ತೋರಿಸೋಕೆ ಬೆಂಗಳೂರಿಂದ ಇಲ್ಲಿವರೆಗೂ ಕರೆಸಿದ್ರಿ ಅಂತ ಆಯ್ತು”.
ದೀಕ್ಷಿತಾ : “ನೀವು ಬಂದೆ ಬರ್ತಿರ ಅಂತ ಖಂಡಿತ ಗೊತಿತು ಕಣ್ರೋ ನಮ್ಮ ಯಜಮಾನ್ರಿಗೂ ಅದನ್ನೇ ಹೇಳ್ತಿದ್ದೆ”
ವಸಂತ್ : “ನೀವ್ ಬಿಡಿ ಮಾಮ್ ನಮನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಾ”
ಮಧುಸೂಧನ್ : “ನಾನ್ ಚೆನ್ನಾಗ್ ಇದ್ದೀನಿ ಕಣ್ರೋ. ಕೂತು ಆರಾಮಾಗಿ ಮಾತಾಡೋಣ ಈಗ ಊಟ ಮಾಡ್ಕೊಂಡ್ ಬನ್ನಿ.”
ಮನಸ್ : “ನೀವ್ ಎಲ್ಲ ಕೆಲಸ ಮುಗಿಸ್ಕೊಂಡು ಬನ್ನಿ ಒಟ್ಟಿಗೆ ಊಟಕ್ಕೆ ಹೋಗೋಣ”
ಅದರಂತೆಯೇ ಬಂದವರನ್ನೆಲ್ಲ ಸ್ವಾಗತಿಸಿ ಮಗುವಿನ ಜೊತೆ ಫೋಟೋ ತೆಗಿಸಿ ಎಲ್ಲರನ್ನು ಊಟಕ್ಕೆ ಕಳುಹಿಸಿದ ನಂತರ ದೀಕ್ಷಿತಾ ಮತ್ತು ಮಧುಸೂಧನ್ ಇಬ್ಬರು ಮನಸ್ ಮತ್ತು ವಸಂತ್ ಜೊತೆಯಲ್ಲೇ ಊಟಕ್ಕೆ ಕುಳಿತರು. ತುಂಬ ದಿನದ ನಂತರ ಭೇಟಿಯಾದ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತಾಗ ಮಾತನಾಡುತ್ತಾ ಕಂಠ ಪೂರ್ತಿಯಾಗುವಷ್ಟು ತಿಂದು ತೃಪ್ತಿಯಿಂದ ಹೊರಗೆ ಬಂದು ಸ್ವಲ್ಪ ಬಿಡುವು ಮಾಡಿಕೊಂಡು ಕೂತು ಮಾತನಾಡಿ ನಂತರ ಲೇಟ್ ಆದ ಕಾರಣ “ಸರಿ ಮಾಮ್ ನಿಮ್ ಇಬ್ಬರನ್ನ ಮತ್ತೆ ಮಗುನ ನೋಡಿ ತುಂಬ ಖುಷಿ ಆಯ್ತು ಬೆಂಗಳೂರಿಗೆ ಬಂದ್ಮೇಲೆ ಒಂದ್ ಸಲ ಕಾಲ್ ಮಾಡಿ ಮತ್ತೆ ಬರ್ತಿವಿ ಈಗ ಲೇಟ್ ಆಗೋ ಅಷ್ಟ್ರಲ್ಲಿ ಬೆಂಗಳೂರಿಗೆ ಸೇರ್ಕೋಬೇಕು. ಹೊರಡ್ತಿವಿ ಮಾಮ್” ಮನಸ್ ಹೇಳಿದ
“ಸರಿ ಕಣ್ರೋ ಹುಷಾರು ಮನೆ ಸೇರ್ತಿದ್ದಾಗೆ ಒಂದ್ ಮೆಸೇಜ್ ಮಾಡಿ”
“ಆಯ್ತು ಮಾಮ್ ಬರ್ತಿವಿ, ಬಾಯ್” ಅಂತ ಹೇಳಿ ಅಲ್ಲಿಂದ ಬೆಂಗಳೂರಿಗೆ ಹೊರಟರು.
ಮೈಸೂರು ಬಿಡುತ್ತಿದಂತೆ ಮಳೆ ಬರುವ ಮುನ್ಸೂಚನೆ ಇತ್ತು. ಆದಷ್ಟು ಬೇಗ ಮನೆ ಸೇರ್ಕೋಬೇಕು ಅಂತ ಆತುರದಿಂದ ಬರುತ್ತಿದ್ದರು. ಅಷ್ಟರಲ್ಲಿ ಮನಸ್ ಅಮ್ಮನಿಂದ ಒಂದು ಫೋನ್ ಬಂತು. ಫೋನ್ ರಿಸೀವ್ ಮಾಡಿ ಮಾತನಾಡಿದ ಮನಸ್
“ಹೇಳಮ್ಮ”
“ಎಲ್ಲಿದಿರಾ ಇನ್ನು, ಬೆಂಗಳೂರಲ್ಲಿ ತುಂಬಾ ಮಳೆ ಬರ್ತಿದೆ, ಎಷ್ಟೊತ್ ಆಗುತ್ತೆ ಬರೋಕೆ?
 “ಬರ್ತಾ ಇದೀವಿ ಅಮ್ಮ ಇಲ್ಲೂ ಮಳೆ ಬಾರೋ ಹಾಗ್ ಆಗಿದೆ”
“ಹಾಗಾದ್ರೆ ಒಂದ್ ಕೆಲಸ ಮಾಡು. ಈವತು ನಿಮ್ ಮಾವ ಬರ್ತಡೇ ಅಲ್ವ ಹೇಗೂ ಅಲ್ಲೇ ಶಿವನಸಮುದ್ರ ಹತ್ರ ಮನೆ ಇರೋದು. ಹೋಗಿ ಮಾತಾಡಿಸ್ಕೊಂಡು ಬಾ ಮಳೆ ಏನಾದ್ರು ಜಾಸ್ತಿ ಆದ್ರೆ ಅಲ್ಲೇ ಇದ್ದು ಬೆಳಗೆ ಬಾ”
“ಸರಿ ಅಮ್ಮ ಆಯ್ತು ಬಾಯ್” ಅಂತ ಹೇಳಿ ಫೋನ್ ಕಟ್ ಮಾಡಿದ ಮನಸ್ ವಸಂತ್ ಗೆ ಈ ವಿಷಯ ತಿಳಿಸಿ ಶಿವನಸಮುದ್ರ ಕಡೆಗೆ ಹೊರಟರು, ಅಲ್ಲಿಗೆ ತಲುಪುವಷ್ಟರಲ್ಲಿ ಸಂಜೆಯಾಗಿತ್ತು. ಮನಸ್ ನ ಮಾವ ಬಂದಕೂಡಲೇ ಓಡಿ ಬಂದು ಅವನನ್ನ ತಬ್ಬಿಕೊಂಡು ಮುದ್ದಾಡಿದರು. ಆಗಲೇ ವಸಂತ್ ಗು ಅರಿವಾಗಿದ್ದು ಅವರಿಬ್ಬರೂ ಪರಸ್ಪರ ಭೇಟಿಯಾಗಿ ಹತ್ತು ವರ್ಷ ಆಗಿದೆ ಅಂತ. ನಂತರ ಮನಸ್ ನ ಮಾವ ಪ್ರಶಾಂತ್ ಅವರ ಅಮ್ಮನಿಗೆ ವಿಷಯ ತಿಳಿಸಿ ಒಳ್ಳೆ ಅಡಿಗೆ ಮಾಡಲು ಹೇಳಿ ಅವರಿಬ್ಬರಿಗೂ ರಾತ್ರಿ ಅಲ್ಲಿಯೇ ಇದ್ದು ಬೆಳಗ್ಗೆ ಹೋಗುವಂತೆ ಬಲವಂತ ಮಾಡಿದರು. ಹತ್ತು ವರ್ಷದ ನಂತರ ಬೇಟಿಯಾದವರಿಗೆ ಮಾತಾಡಲು ತುಂಬಾ ಇರುತ್ತೆ ಅಂತ ಅರಿತ ವಸಂತ್ ಅವರ ಪ್ರೀತಿ ನೋಡಿ ರಾತ್ರಿ ಅಲ್ಲೇ ಇದ್ದು ಬೆಳಗ್ಗೆ ಹೋಗುವುದಕ್ಕೆ ಒಪ್ಪಿದ. ರಾತ್ರಿ ಪೂರ್ತಿ ಮನಸ್ ಮತ್ತು ಪ್ರಶಾಂತ್ ಅವರ ಆಚರಣೆಗೆ ವಸಂತ್ ಗು ಕೂಡ ನಿದ್ದೆ ಬರಲಿಲ್ಲ. ಅವರ ಮಾತು ಮುಗಿಯುವ ಹಾಗೆ ಕಾಣೋದಿಲ್ಲ ಅಂತ ವಸಂತ್ ಗೆ ಅರಿವಾಗೋಷ್ಟರಲ್ಲಿ ಆಗಲೇ ಸೂರ್ಯ ತನ್ನ ದಿನನಿತ್ಯದ ಕೆಲಸಕ್ಕೆ ಹಾಜರಾಗಿದ್ದ. ಬೆಳಗಾಗುತ್ತಿದಂತೆ ಎದ್ದು ರೆಡಿ ಆಗಿ ಬೆಂಗಳೂರುಕಡೆಗೆ ದಾರಿ ಹಿಡಿದರು.
ಬೆಳ್ಳಂಬೆಳಗ್ಗೆ ಹೋರಾಟ ಅವರು ಬೇಗ ಬೆಂಗಳೂರಿಗೆ ತಲುಪಿ ಮತ್ತೆ ರೆಡಿ ಆಗಿ ಆಫೀಸ್ ಗೆ ಹೋಗಬೇಕಾಗಿತ್ತು. ಅದರಂತೆಯೇ ಎಲ್ಲವೂ ನಡೆಯಿತು. ಆಫೀಸ್ ನಲ್ಲಿ ಎಂದಿನಂತೆ ಊಟದ ಸಮಯದಲ್ಲಿ ಖುಷಿ ಮನಸ್ ಮತ್ತು ವಸಂತ್ ಬೇಟಿಯಾಗೋದು ಸಹಜ, ಅದರಂತೆಯೇ ಅವರು ಆ ದಿನ ಕೂಡ ಭೇಟಿಯಾಗಿ ಹಿಂದಿನದಿನ ನಡೆದ ಕಥೆಯನ್ನೆಲ್ಲಾ ಖುಷಿಗೆ ಹೇಳಿದ ಆದರೆ ಮುಂಬರುವ ಲಾಂಗ್ ರೈಡ್ ಸರ್ಪ್ರೈಸ್ ನ ಕಥೆ ಒಂದನ್ನು ಬಿಟ್ಟು. ಖುಷಿಗೂ ಕೂಡ ಇಬ್ಬರು ಸೇರಿ ಏನೋ ಮುಚ್ಚಿಟ್ಟಿದ್ದಾರೆ ಅಂತ ಅನುಮಾನ ಬಂದಿತ್ತು ಆದರೆ ಮನಸ್ ಅದನ್ನೆಲ್ಲಾ ಮಾತಿನಲ್ಲೇ ಮರೆಸಿ ದಿಕ್ಕು ತಪ್ಪಿಸುವುದರಲ್ಲಿ ನಿಸ್ಸೀಮ.
ಹೀಗೆ ದಿನ ಕಳೆಯಿತು, ಮನಸ್ ಮತ್ತು ವಸಂತ್ ಗು ಲಾಂಗ್ ರೈಡ್ ಗೆ ಹೋಗುವುದು ತುಂಬಾ ಕಾಡುತಿತ್ತು, ಅದರಂತೆಯೇ ಖುಷಿಯನ್ನು ಕೂಡ ಕೇಳಿ ಡೇಟ್ ಫಿಕ್ಸ್ ಮಾಡಿ ಒಪ್ಪಿಸಿದರು. ಇನ್ನು ಋತು ಒಪ್ಪಿಗೆ ಒಂದೇ ಬಾಕಿ, ಆದರೆ ಋತು ಜೊತೆ ಮಾತನಾಡುತ್ತಿದದ್ದು ಮನಸ್ ಒಬ್ಬನೇ. ಹಾಗಾಗಿ ಮನಸ್ ಋತು ಗೆ ಮೆಸೇಜ್ ಮಾಡಿ ಕೇಳಿದ.
“ಋತು…”?
“ಹಾ, ಹೇಳು ಮನಸ್ ಏನ್ ಸಮಾಚಾರ ಲಾಂಗ್ ರೈಡ್ ಫಿಕ್ಸ್ ಆಯ್ತಾ?”
“ಅದು ಹೇಗೆ ಅಷ್ಟು ಕರೆಕ್ಟ್ ಆಗಿ ಹೇಳ್ತಿಯ?”
“ಅಷ್ಟಿಲ್ಲದೆ ಸುಮ್ಮನೆ ಮೆಸೇಜ್ ಮಾಡೋ ಮಾರಾಯ ಅಲ್ಲ ನೀನು…”
“ಅದು ನಿಜಾನೆ… ಋತು ಲಾಂಗ್ ರೈಡ್ ಡೇಟ್ ಫಿಕ್ಸ್ ಆಗಿದೆ, ಇದೇ ಮೇ 19 ಎಲ್ಲರೂ ಬರೋಕೆ ರೆಡಿ ಇದ್ದಾರೆ ನಿಂಗೆ ಆ ಡೇಟ್ ಓಕೆ ಅಲ್ವ? ಹಾಗೇನಾದ್ರೂ ನಿಂಗೆ ಬೇರೆ ಕೆಲಸ ಇದ್ರೆ ಹೇಳು ಇನ್ನೊಂದ್ ಡೇಟ್ ಫಿಕ್ಸ್ ಮಾಡೋಣ”
ಪಕ್ಕದಲ್ಲೇ ಇದ್ದ ವಸಂತ್ ಗೆ ಅವಳು ಆ ಡೇಟ್ ಗೆ ಒಪ್ಪುತ್ತಾಳೋ ಇಲ್ಲವೋ, ಅಥವಾ ನನ್ನ ಬಗ್ಗೆ ಕೇಳಿ ಕಿತಾಪತಿ ತೆಗಿತಾಳೋ, ಇಲ್ಲ ಪ್ಲಾನ್ ಕ್ಯಾನ್ಸಲ್ ಮಾಡೋಕೆ ಏನಾದ್ರು ಯೋಚನೆ ಮಾಡ್ತಿದ್ದಾಳಾ ಹೀಗೆ ಹಲವಾರು ಅರ್ಥವಿಲ್ಲದ ಒಳಮಾತುಗಳು ವಸಂತ್ ನ ಮನಸ್ಸಿನಲ್ಲಿ ಓಡಾಡುತ್ತಿತ್ತು.
ಅಷ್ಟರಲ್ಲಿ ಮನಸ್ ಗೆ ಮತ್ತೆ ಮೆಸೇಜ್ ಬಂತು
“ಹಾ ಮನಸ್ ನಂಗೆ ಓಕೆ. ಅವತು ಶನಿವಾರ ನನಗು ಕೂಡ ರಜಾ ಇರುತ್ತೆ ಮನೇಲಿ ಫ್ರೆಂಡ್ ಮನೆಗೆ ಅಂತ ಏನೋ ಸುಳ್ಳು ಹೇಳಿ ಬರಬಹುದು” ಎಂದಳು
“ಸರಿ ನೀನು ರೆಡಿಯಾಗು ಮಿಕ್ಕಿದೆಲ್ಲಾ ನಮಗೆ ಬಿಡು” ಅಂತ ಹೇಳುತ್ತಿದಂತೆ.
“ಆದರೆ ಒಂದು ಕಂಡೀಶನ್. ನಾನು ಸಂಜೆ ಅಷ್ಟರಲ್ಲಿ ಮನೆಗೆ ವಾಪಸ್ ಬರೋಹಾಗೆ ಇರಬೇಕು ಮತ್ತೆ ಲೇಟ್ ಆದ್ರೆ ಅಮ್ಮಾಗೆ ಡೌಟ್ ಬರುತ್ತೆ”
“ಇದೆಲ್ಲ ಏನು ಹೊಸಾದ ನಮಗೆ ಹೇಳು, ಸರಿ ಅದೆಲ್ಲ ನನಗೆ ಬಿಡು ನೀನು ನೆಮ್ಮದಿಯಾಗಿ ಬಂದು ಹೋಗು ಸಾಕು” ಬಾಯ್ ದೇಜಾವು!!!
“ಸರಿ ಬಾಯ್ ಮನಸ್” ಎಂದು ಅವರಿಬ್ಬರ ಮಾತುಕತೆ ಮುಗಿಯಿತು.
ಮನಸ್ ಯಾಕೆ ಋತುನ ದೇಜಾವು ಅಂತ ಕರೀತಾನೆ ಅಂತ ಇಲ್ಲಿಯವರೆಗೂ ವಸಂತ್ ಗು ಖುಷಿಗು ಗೊತ್ತಿಲ್ಲ.
ದಿನ ಕಳೆಯಿತು ಮೇ 19 ಹತ್ತಿರ ಬಂದೇ ಬಿಡ್ತು, ವಸಂತ್ ಗೆ ವರ್ಷವಾದ ಮೇಲೆ ಋತುನ ನೋಡ್ತಿದೀನಿ ಅನ್ನೋ ಖುಷಿ ಒಂದುಕಡೆಯಾದರೆ, ಕಾರಣವಿಲ್ಲದೆ ಮಾತು ಬಿಟ್ಟು ಮೌನಿಯಾದ ಇಬ್ಬರ ನಡುವಿನ ಕಾಣದ ಮುಳ್ಳಿನ ಪದರವನ್ನು ಸರಿಸುವುದು ಹೇಗೆ, ಅದರ ಬಗ್ಗೆ ಮತ್ತೆ ಏನಾದರೂ ಕೋಪಮಾಡಿಕೊಂಡರೆ ಹೇಗೆ ಅವಳನ್ನು ಸಮಾಧಾನ ಮಾಡೋದು ಅನ್ನೋದು ಚಿಂತೆಯಾಗಿತ್ತು.
ವಸಂತ್ ಚಿಂತೆಯನ್ನು ಮುಖದಲ್ಲೇ ಗಮನಿಸಿ ಅರಿತುಕೊಂಡ ಖುಷಿ ಅವನ ಕೈ ಹಿಡಿದು ಸಮಾಧಾನ ಮಾಡುತ್ತಾ ಏನು ಮಾಡಬೇಕು ಏನು ಮಾಡಬಾರದು ಅಂತ ಬುದ್ದಿ ಹೇಳುತ್ತಾ ಕುಳಿತಳು. ಅದನ್ನು ಕೇಳಿ ತಿಳಿದು ಅವನ ಪಾಲಿನ ಐತಿಹಾಸಿಕ ದಿನಕ್ಕೆ ಸಿದ್ದನಾದ.
ಮೇ 19, ಬೆಳಗಿನಜಾವ 5 ಗಂಟೆ ವಸಂತ್ ಈ ದಿನಕ್ಕಾಗಿ ಕಾಯುತ್ತಿದ್ದ ಹಾಗಾಗಿ ರಾತ್ರಿಯಲ್ಲ ನಿದ್ದೆಯಿಲ್ಲದೆ ಋತು ಬಂದರೆ ಅವಳನ್ನು ಹೇಗೆ ಮಾತನಾಡಿಸೋದು!!!,
“ಬಂದ ಕೂಡಲೇ ಸ್ನೇಹದಿಂದ ಒಂದು ಅಪ್ಪುಗೆ ಕೊಟ್ಟರೆ…? ಹೇ ಬೇಡ ಬೇಡ ಅದು ಆದಿಕಪ್ರಸಂಗ ಆಗುತ್ತೆ. ಬಂದ ಕೂಡಲೇ ಎಲ್ಲರಂತೆ ಸಾಮಾನ್ಯವಾಗಿ ಹಾಯ್ ಋತು ಅಂತ ಹೇಳೋದೇ ಸರಿ. ಆದ್ರೆ ಬರಿ ಹಾಯ್ ಅಂದ್ರೆ ಚೆನ್ನಾಗಿರೊಲ್ಲ ತುಂಬ ದಿನ ಆದ್ಮೇಲೆ ಭೇಟಿ ಆಗ್ತಾಯಿದ್ದೀವಿ ಒಂದು ಚಾಕ್ಲೆಟ್ ತಗೊಂಡು ಹೋದ್ರೆ ಚೆನ್ನಾಗಿರುತ್ತೆ. ಆದ್ರೆ ಚಾಕ್ಲೆಟ್ ತಗೋಳೋದಿಲ್ಲ ಅಂದ್ರೆ… ಹೇ ಹುಡುಗೀರು ಚಾಕ್ಲೆಟ್ ಯಾವತ್ತೂ ಬೇಡ ಅನ್ನೊಳ ತಗೋತಾಳೆ”
ಹೀಗೆ ರಾತ್ರಿ ಪೂರ್ತಿ ಒಬ್ಬನೇ ಮಾತಾಡಿಕೊಳುತ್ತಾ ಕುಳಿತ್ತಿದ್ದ. ನಂತರ ಅವನು ರೆಡಿಯಾಗಿ ಎಲ್ಲರಿಗು ಒಂದು ಸಲ ಕಾಲ್ ಮಾಡಿ ರೆಡಿಯಾಗೋದಕ್ಕೆ ಹೇಳಿದ. ಅದರಂತೆಯೇ ಮನಸ್ ಮತ್ತು ಖುಷಿ ಇಬ್ಬರು ರೆಡಿಯಾದರು.
ಸುಮಾರು 7 ಗಂಟೆಗೆ ಸರಿಯಾಗಿ ವಸಂತ್ ಕಾರ್ ಹತ್ತಿ ಮನೆ ಬಿಟ್ಟು ಹೊರಟ ಹಾಗೆ ಮನಸ್ ಮತ್ತು ಖುಷಿಯನ್ನು ಕೂಡ ದಾರಿಯಲ್ಲಿ ಭೇಟಿಮಾಡಿ ಎಲ್ಲರೂ ಋತು ಮನೆ ಕಡೆಗೆ ಹೊರಟರು. ಚಾಕ್ಲೆಟ್ ತಗೊಳೋಣ ಅಂದ್ರೆ ಅಂಗಡಿಗಳು ಇನ್ನು ತೆಗೆದಿರಲಿಲ್ಲ, ಹಾಗಾಗಿ ರಸ್ತೆಯಲ್ಲಿ ಒಂದು ಬದಿಗೆ ಹೂವು ಮಾರುತ್ತಿದ್ದ ಒಂದು ಹೆಂಗಸಿನ ಹತ್ತಿರ ಕಾರ್ ನಿಲ್ಲಿಸಿ ಅವಳಿಗೆ ಅಂತ ಹೂವು ತೆಗೆದುಕೊಂಡ. ಏನೆ ಆಗ್ಲಿ ಎಷ್ಟೇ ಹೊಸ ರೀತಿಯ ಪ್ರಯತ್ನಗಳು ಬಂದರು ಹುಡುಗಿಯರ ಮನಸ್ಸು ಕರಗಿಸೋಕೆ ಐಸ್ಕ್ರೀಮ್, ಚಾಕ್ಲೆಟ್ ಮತ್ತೆ ಹಳೆ ಕಾಲದ ಐಡಿಯಾಗಳೆ ಸರಿ. ಅದೇ ಎಂದೆಂದಿಗೂ ಎವರ್ ಗ್ರೀನ್ ಅಲ್ವಾ. ಹೂವು ತೆಗೆದುಕೊಂಡು ಋತು ಮನೆಯ ಸಮೀಪ ಪೆಟ್ರೋಲ್ ಬಂಕ್ ಬಳಿ ಬಂದು ನಿಂತು ಮನಸ್ ಗೆ ಕಾಲ್ ಮಾಡಲು ಹೇಳಿದ. ಮನಸ್ ಮೆಸೇಜ್ ಮಾಡಿ “ಪೆಟ್ರೋಲ್ ಬಂಕ್ ಹತ್ರ ಇದ್ದೀವಿ ಇಲ್ಲಿಗೆ ಬಾ ಅಂತ ಹೇಳಿದ”.
“ಸರಿ 5 ನಿಮಿಷ ಬರ್ತೀನಿ” ಅಂತ ಹೇಳಿದಳು ಋತು.
ವಸಂತ್ ಗೆ ಒಳಗೊಳಗೇ ಆನಂದ, ಹೆಂಡ ಕುಡಿದ ಮಂಗನಂತೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದ. ಅವನ ಖುಷಿಗೆ ಮಿತಿಯೇ ಇರಲಿಲ್ಲ, ಅವನ ಭಯವನ್ನು ಕೂಡ ಅಳೆಯೋಕೆ ಆಗುತ್ತಿರಿಲ್ಲ. ಅವಳು ಬಂದ ಕೂಡಲೇ ಏನಂತಾ ಬೈತಾಳೋ ಅನ್ನೋದೇ ಅವನಿಗೆ ದೊಡ್ಡ ಚಿಂತೆ. ನೂರಾರು ಯೋಚನೆಗಳು ತಲೆಯಲ್ಲಿ ತುಂಬಿಕೊಂಡು ಕೆಂಡದ ಮೇಲೆ ನಿಂತವನಂತೆ ಆಡುತ್ತಿದ್ದ. ಮನಸ್ ಮತ್ತು ಖುಷಿ ಅವನು ಆಡುತ್ತಿದ್ದನ್ನ ನೋಡಿ ಹೊಟ್ಟೆ ನೋವಾಗುವಷ್ಟು ನಗುತ್ತಿದ್ದರು. ಯಾರನ್ನು ನೋಡಿದರು ಋತುನ ಅಂತ ಗಾಬರಿಯಾಗುತ್ತಿದ್ದ. ಪ್ರೀತಿ ಮಾಡಿದವರ ಖುಷಿ, ಸಂಕಟ ಅಂದ್ರೆ ಹೀಗೇನೆ ಅದರಲ್ಲೇನೋ ಒಂದು ಮಜಾ ಇದೆ, ಆ ಸಂದರ್ಭ ಸನ್ನಿವೇಶಗಳನ್ನು ಎದುರಿಸಿದವನಿಗೆ ಮಾತ್ರ ಗೊತ್ತು.
ನೋಡನೋಡುತ್ತಿದಂತೆ ಋತು ಬಂದೆ ಬಿಟ್ಟಳು. ಬಂದು ಎದುರಿಗೆ ನಿಂತಳು ವಸಂತ್ ಗೆ ಗಾಬರಿ ಹೆಚ್ಚಾಯಿತು. “ಬಂದ ಕೂಡಲೇ ಎಲ್ಲರನ್ನು ಬಿಟ್ಟು ನನ್ನ ಮುಂದೆ ಯಾಕೆ ಬಂದು ನಿಂತಳು” ಅಂತ ತಳಮಳಗೊಂಡ ಇನ್ನೊಂದು ಕಡೆ ವರ್ಷಗಳಿಂದ ನೋಡಿರದ ಆ ಮುಖ ಈಗ ನೋಡೋಹಾಗೆ ಅಯ್ತು. ಮುಖಕ್ಕೆ ನೀಲಿ ಬಣ್ಣದ ದುಪ್ಪಟ್ಟ ಸುತ್ತಿಕೊಂಡಿದ್ದಾಳೆ ಮುಖ ಪೂರ್ತಿ ಮುಚ್ಚಿತ್ತು ಕಣ್ಣುಗಳು ಮಾತ್ರ ವಸಂತ್ ನನ್ನೇ ದಿಟ್ಟಿಸಿ ನೋಡುತಿತ್ತು. ಕಾಡಿಗೆಯಿಂದ ತುಂಬಿದ್ದ ಆ ಕಣ್ಣುಗಳು ಕತ್ತಲ ರಾತ್ರಿಯಲ್ಲಿ ಚಂದ್ರನು ಹೊಳೆಯುವಂತೆ ಹೊಳೆಯುತ್ತಿತ್ತು. ನಿಧಾನವಾಗಿ ಅವಳ ಮುಖ ಮುಚ್ಚಿದ ದುಪ್ಪಟ್ಟ ಸರಿಸುತ್ತಿದಂತೆ ಅವಳ ಮುಖ ನೋಡಿ ವಸಂತ್ ನಿಂತಲ್ಲೇ ಕುಣಿದಾಡಿದ. ಒಳಗೊಳಗೆ ಅವಳ ಸೌಂದರ್ಯಕ್ಕೆ ದೃಷ್ಟಿ ತೆಗೆದು ಕೆನ್ನೆಯಮೇಲೆ ಒಂದು ದೃಷ್ಟಿ ಬೊಟ್ಟು ಇಡುತ್ತಿದ್ದ. ವಾಸ್ತವದಲ್ಲಿ ಅವಳನ್ನೇ ನೋಡುತ್ತಾ ನಿಂತಿದ್ದ. ಋತು ಅವನನ್ನ ವಸಂತ್ ಎಂದು ಜೋರಾಗಿ ಕರೆದಾಗ ಬೇರೆ ಲೋಕದಲ್ಲಿ ಮುಳಿಗಿದ್ದ ಅವನು ಮತ್ತೆ ಪ್ರಜ್ಞೆ ಪಡೆದು “ಹಾ ಋತು” ಎಂದ
“ಸಾಕು ನೋಡಿದ್ದು ಬಾ ಹತ್ತು ಕಾರ್ ನ” ಎಂದಳು.
ತಲೆ ಚೆಚ್ಚಿಕೊಂಡು “ರಾತ್ರಿಯೆಲ್ಲಾ ಅವಳು ಬಂದ್ರೆ ಹೇಗೆ ಮಾತನಾಡಿಸೋದು ಅಂತ ಚಿಂತೆ ಮಾಡ್ತಿದ್ದೆ ಆದ್ರೆ ಈಗ ಎಲ್ಲಾ ಇಷ್ಟು ಸುಲಭವಾಗಿ ಮುಗಿದು ಹೋಯ್ತಾ” ಅಂತ ಓಡಿ ಬಂದು ಕಾರ್ ಹತ್ತಿ ಲಾಂಗ್ ರೈಡ್ ನ ಶುರು ಮಾಡಿದರು.
ವಸಂತ್ ಮತ್ತು ಮನಸ್ ಎಲ್ಲಿಗೆ ಹೋಗೋದು ಏನು ಮಾಡೋದು ಅಂತ ಸ್ಪಷ್ಟವಾಗಿ ಪ್ಲಾನ್ ಮಾಡಿದ್ದರು ಆದರೆ ಖುಷಿ ಮತ್ತು ಋತು ಮುಂದೆ ಮಾತ್ರ ಏನು ಗೊತ್ತಿಲ್ಲದಂತೆ ನಡೆದುಕೊಳ್ಳುತಿದ್ದರು. ತುಂಬಾ ದಿನಗಳ ನಂತರ ನಾಲ್ಕು ಜನ ಒಟ್ಟಿಗೆ ಸೇರಿದ ಅಪರೂಪದ ದಿನ ಅದು, ನಾಲ್ಕು ಜನ ಒಟ್ಟಿಗೆ ಮಾತನಾಡಿದ ಮೊದಲ ಘಳಿಗೆ ಅದು. ಅಷ್ಟೆಲ್ಲಾ ಆದರೂ ಋತು ಮಾತ್ರ ಬದಲಾಗದ ಗೊಂಬೆಯಂತೆ ಮೊದಲು ಹೇಗಿದ್ದಳೋ ಈಗಲೂ ಹಾಗೆ ಇದ್ದಳು, ಅವಳ ಮಾತುಗಳು, ಭಾವನೆಗಳು, ಬೈಗುಳಗಳು, ಯಾವುದು ಕೂಡ ಹೊಸ ರೂಪ ಕಂಡಿರಲಿಲ್ಲ. ಇದನ್ನ ಗಮನಿಸಿದ ವಸಂತ್ ಮನಸ್ ಮತ್ತು ಖುಷಿ ಗೆ ಋತು ಬದಲಾಗಿಲ್ಲ ಅನ್ನೋ ನಂಬಿಕೆ ಬಂತು. ಆದರೂ ಇಷ್ಟು ದಿನ ಯಾಕೆ ಯಾರ ಜೊತೆಯೂ ಕೂಡ ಮಾತನಾಡಲಿಲ್ಲ ಎನ್ನುವುದು ಯಾರಿಗೂ ತಿಳಿಯಲಿಲ್ಲ. ಅದರ ಬಗ್ಗೆ ಈಗ ಕೇಳಿದರೆ ಈ ದಿನದ ಸಂತೋಷಕ್ಕೆ ಒಂದು ಚಿಟಿಕೆ ಉಪ್ಪು ಹೆಚ್ಚು ಬಿದ್ದು ರುಚಿ ಹಾಳಾಗಬಹುದೆಂಬ ಮುಂದಾಲೋಚನೆಯಿಂದ ಯಾರು ಕೂಡ ಆ ವಿಷಯದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ.
“ಏನು ಅಪರೂಪಕ್ಕೆ ಎಲ್ಲರೂ ಹೇಳಿದ್ದ ಟೈಮ್ ಗೆ ಬಂದಿದ್ದೀರ. ಯಾವತ್ತೂ ಇಂತ ಅಚ್ಚರಿ ಆಗಿರಲಿಲ್ಲ ಅಲ್ವ??” ಋತು ಪ್ರಶ್ನಿಸಿದಳು
ಮನಸ್ : “ನೀನು ಬರ್ತಿದ್ಯ ಅಂದಮೇಲೆ ಕೆಲವರು ನಾವ್ ಲೇಟ್ ಮಾಡುದ್ರೆ ಸುಮ್ನೆ ಬಿಡ್ತಾರಾ?”
ಖುಷಿ : “ಯಾರೋ ರಾತ್ರಿಯೆಲ್ಲ ಬೆಳಗ್ಗೆ ಗೋಸ್ಕರ ಕಾಯ್ತಾ ಇದ್ರೆ ಇನ್ನು ಲೇಟ್ ಎಲ್ಲಿ ಆಗುತ್ತೆ ಹೇಳು ಋತು”.
ಇದನ್ನ ಕೇಳಿದ ಎಲ್ಲರೂ ನಗುತ್ತಿದ್ದರೆ ಕಾರು ಓಡಿಸುತ್ತಿದ್ದ ವಸಂತ್ ಮಾತ್ರ ಅಮಾಯಕನಂತೆ ಕುಳಿತಿದ್ದ.
ಹೀಗೆ ತರ್ಲೆ ತಮಾಷೆಗಳಿಂದ ಮಾತುಗಳು ಶುರುವಾಯಿತು, ಪರಸ್ಪರ ಮಾತನಾಡಿ ವರುಷಗಳೇ ಕಳೆದ ಕಾರಣ ಮಾತುಗಳು ಮೌನದ ಕಟ್ಟೆ ಒಡೆದು ನಗುತ್ತಾ ಒಬ್ಬರನೊಬ್ಬರು ಒಂದು ಮಾಡಿತು.
“ಹೇಗಿದೆ ಕೆಲಸ, ಹೇಗಿದೆ ಹೊಸ ಫ್ರೆಂಡಶಿಪ್, ಹೊಸ ಜಾಗ, ಹೊಸ ಜನ”? ವಸಂತ್ ಪ್ರಶ್ನಿಸಿದ.
ಅದಕ್ಕೆ ಋತು “ಎಲ್ಲಾ ಚೆನ್ನಾಗಿದೆ ಕಣೋ, ಕೆಲಸ ಸ್ವಲ್ಪ ಪ್ರೆಷರ್ ಜಾಸ್ತಿ ಅಷ್ಟೇ ಅದು ಬಿಟ್ರೆ ನೆಮ್ಮದಿ ಇಂದ ಹೋಗಿ ನೆಮ್ಮದಿ ಇಂದ ಬರ್ತೀನಿ”
“ನೀನ್ ಬಿಡಮ್ಮ, ಹೇಳಿದ ಕೆಲಸನ ಎಷ್ಟೇ ಹೊತ್ತು ಆದರು ಮುಗಿಸಿ ಬರ್ತೀಯ ಇನ್ನು ಅದೆಲ್ಲ ಪ್ರೆಷರ್ ಅನ್ನಿಸೋದ್ರಲ್ಲಿ ತಪ್ಪಿಲ್ಲ” ಎಂದು ಖುಷಿ ಪ್ರತಿಕ್ರಿಯಿಸಿದಳು.
“ಹಾಗಂತ ನೀನು ಆಫೀಸ್ ನಲ್ಲಿ ಕೆಲಸ ಮಾಡೋವಾಗ ಪ್ರೆಷರ್ ಅನ್ನಿಸೋಲ್ವ ಖುಷಿ.?”
“ಅಯ್ಯೋ ನೀನ್ ಒಳ್ಳೆ ಸರಿಯಾಗ್ ಹೇಳ್ದೆ. ಇವರಿಬ್ಬರ ಜೊತೆ ಸೇರಿ ಅವರ ಬುದ್ದಿನೇ ಬಂದಿದೆ. ಕೆಲಸ ಎಷ್ಟು ಬೇಕು ಅಷ್ಟೇ ಮಾಡಿ ಬರ್ತೀನಿ. ಹೆಚ್ಚು ಅಂತ ಮಾಡೋಲ್ಲ ಕಮ್ಮಿ ಆದರು ತಲೆ ಕೆಡಿಸಿಕೊಳೋಲ್ಲ” ಖುಷಿ ಉತ್ತರಿಸಿದಳು
“ಇವ್ರ್ ಇಬ್ರು ಜೊತೆ ಸೇರಿದ್ಯಾಲ್ಲ ಇನ್ನು ನಿಂಗೆ ಎಲ್ಲಿ ಕಷ್ಟ ಅನ್ನಿಸುತ್ತೆ ಬಿಡು”
“ಮತ್ತೆ ನೀನು ಬಾ… ನೀನು ಈಗ್ಲೂ ಹೂ ಅಂದ್ರೆ ಅವ್ರೆ ಎಲ್ಲಾ ರೆಡಿ ಮಾಡ್ತಾರೆ”
“ಈಗ ಇರೋ ಕೆಲಸ ಬಿಟ್ಟು ಬರೋಕ್ ಆಗುತ್ತಾ? ಮುಂದೆ ನೋಡೋಣ ಬಿಡು” ಎಂದು ಋತು ವಿಷಯಕ್ಕೆ ಮುಕ್ತಿ ಹೇಳಿದಳು.
ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರು ವಸಂತ್ ಮಾತ್ರ ಸುಮ್ಮನೆ ಕುಳಿತಿದ್ದ.
“ಯಾಕೋ ಸುಮ್ಮನೆ ಕುಳಿತಿದ್ಯಾ?” ಋತು ಕೇಳಿದಳು
“ನೀನು ಬೈದಿಲ್ಲ ಅಂತ ಬೇಜಾರಾಗಿದ್ದಾನೆ. ಒಂದು ಸಲ ಬೈದ್ಬಿಡು ನೋಡು ಆಮೇಲೆ ನೀನು ಸಾಕು ಅಂದ್ರು ಸುಮ್ಮನಾಗೋಲ್ಲ” ಮನಸ್ ಹೇಳಿದ
ವಸಂತ್ : ಸುಮ್ಮನೆ ಇರೋ, ಯಾಕೋ ನನ್ನೇ ಬಕ್ರ ಮಾಡ್ತಿದ್ದೀಯಾ?
ಋತು : ಪಾಪ ಅವನನ್ನ ನೋಡಿದ್ರೆ ಹೇಗೋ ಬೈಯೋಕ್ಕೆ ಮನಸ್ಸು ಬರುತ್ತೆ…
ಖುಷಿ : ಅಬ್ಬಾ… ಈ ಮಾತು ಕಾಲೇಜು ನಲ್ಲಿ ಇದ್ದಾಗ ಯಾಕ್ ಬರ್ಲಿಲ್ಲ
ಮನಸ್ : ಋತು…!! ನೀನು ಹೀಗೆಲ್ಲ ಹೇಳಿದ್ರೆ ಅವನನ್ನ ಹಿಡಿಯೋಕೆ ಆಗಲ್ಲ ಸುಮ್ನೆ ಇರು.
ಬೆಳ್ಳಂಬೆಳಗ್ಗೆ ಎದ್ದು ಬಂದಿದ್ದರಿಂದ ಯಾರು ಕೂಡ ತಿಂಡಿ ತಿನ್ನದೇ ಬಂದಿದ್ದರು. ಹಾಗಾಗಿ ದಾರಿಯಲ್ಲಿ ಹೋಗುತ್ತಿದಂತೆ ಒಂದು ಹೋಟೆಲ್ ಮುಂದೆ ನಿಲ್ಲಿಸಿ ತಿಂಡಿ ತಿನ್ನಲು ಬಂದರು.
ತಿಂಡಿ ತಿಂದು ಮುಗಿಸಿದ ಮೇಲೆ ಸ್ವಲ್ಪ ಸಮಯ ಜೊತೆಯಲ್ಲೇ ಇರಬೇಕು ಎಂದು ಖುಷಿ ಮತ್ತು ಋತು ಇಬ್ಬರು ದೂರದಲ್ಲಿ ಕುಳಿತು ಕಷ್ಟ ಸುಖ ಮಾತನಾಡುತ್ತಿದ್ದರು. ಇನ್ನೊಂದು ಕಡೆ ಮನಸ್ ಮತ್ತು ವಸಂತ್ ಕೂಡ ಮಾತನಾಡುತ್ತಾ ಕುಳಿತರು.
ಮನಸ್ : ಏನ್ ಮಗ, ಏನಾದ್ರು ಮಾತಾಡಬೇಕು ಅಂತಿದ್ಯ ಏನ್ ಕಥೆ?
ವಸಂತ್ : ಹೇ ಹಾಗೆಲ್ಲ ಏನು ಇಲ್ಲ ಮಗ. ಹಾಗೇನಾದ್ರೂ ಮತ್ತೆ ಹಳೇ ವಿಷಯ ಹಾಳು ಮೂಳು ಅಂತ ಮಾತಡುದ್ರೆ ಇವತ್ತಿನ ದಿನ ಕೂಡ ಹಾಳಾಗುತ್ತೆ. ಅವಳು ಕೋಪ ಮಾಡ್ಕೊಂಡ್ರೆ ಯಾರಿಗೂ ನೆಮ್ಮದಿ ಇರೋಲ್ಲ.
ಮನಸ್ : ಅದು ನಿಜಾನೆ, ಆದ್ರೆ ಯೋಚನೆ ಮಾಡು ಇವತ್ ಸಂಜೆಯ ವರೆಗೂ ಟೈಂ ಇದೆ, ಇಷ್ಟು ದಿನ ಏನ್ ಕಷ್ಟ ಪಟ್ಟಿದ್ಯ ಅಂತ ಜೊತೇಲಿ ಇರೋ ನಮಿಗ್ ಗೊತ್ತು. ನಿನ್ ಮನಸ್ಸಿಗೆ ಹೇಳ್ಬೇಕು ಅನ್ಸಿದ್ರೆ ಹೇಳಿಬಿಡು ಯಾವಾಗಾದ್ರೂ ಸರಿ. ನೀನು ಮಾತು ಶುರು ಮಾಡು ನಾನು ಮತ್ತೆ ಖುಷಿ ಅರ್ಥಮಾಡಿಕೊಂಡು ನಿಮ್ಮಿಬ್ಬರನ್ನ ಸೆಪೆರೇಟ್ ಆಗಿ ಬಿಡ್ತಿವಿ. ಅವಳಿಗೆ ಗೊತ್ತಾಗದ ಹಾಗೆ ಅಷ್ಟೆ. ಒಂದು ಮಾತ್ರ ನೆನಪಿರಲಿ ಮಾತನಾಡುವ ಸಮಯ ಸನ್ನಿವೇಶ ಸಂದರ್ಭ ಬಂದಾಗ ಅದನ್ನ ದೂರ ಮಾಡಬೇಡ ಮತ್ತೆ ಅದಕ್ಕೆ ತುಂಬಾ ಪಶ್ಚಾತಾಪ ಪಡಬೇಕಾಗುತ್ತೆ.
ವಸಂತ್ : ಸರಿ ಮಗ, ನೋಡೋಣ ಈಗ ಬಾ ಇಲ್ಲೇ ತುಂಬಾ ಟೈಂ ವೇಸ್ಟ್ ಮಾಡಿದ್ರೆ ಸಂಜೆ ಮತ್ತೆ ಅವರಿಬ್ಬರ ರಗಳೆ ಶುರು ಆಗುತ್ತೆ.
ಖುಷಿ ಮತ್ತೆ ಋತು ನ ಕರೆದು ಎಲ್ಲರೂ ಕಾರು ಹತ್ತಿ ಅಲ್ಲಿಂದ ಹೊರಟರು.
ಲಾಂಗ್ ರೈಡ್ ಅಂದ್ರೆ ತಲೆ ಕೆಡಿಸಿಕೊಂಡು ಟೈಮ್ ವೇಸ್ಟ್ ಆಗುತ್ತೆ ಅಂತ ನೆಮ್ಮದಿ ಇಲ್ಲದೆ ಹೋಗಿ ಬರೋದ್ ಅಲ್ಲ. ಜೊತೆಯಲ್ಲಿ ಸಮಯ ಕಳೆದು ಒಟ್ಟಿಗೆ ಮಾತಾಡಿ ತಮಗೆ ಅಂತ ಸಮಯ ಕಳೆಯೋದು ಎಂದು ಎಲ್ಲರೂ ಅರಿತಿದ್ದರು. ಹೀಗೆ ದಾರಿಸಾಗಿದಂತೆ ತಾವರೆಕೆರೆಯಲ್ಲಿ ಕಾರ್ ನಿಲ್ಲಿಸಿ ಮುಂದೆ ಟೈಂ ಪಾಸ್ ಮಾಡೋಕೆ ಅಂತ ಜ್ಯೂಸ್ ಚಿಪ್ಸ್ ತಿಂಡಿ ತಿನಿಸು ಎಲ್ಲ ತಗೊಂಡು ಮುಂದುವರಿದರು.
ಮಾತುಗಳು ಮುಂದುವರೆಯಿತು, ತಲೆಹರಟೆಗಳು ಶುರುವಾಯಿತು, ಒಬ್ಬರನೊಬ್ಬರು ಕಾಲು ಎಳೆಯುತ್ತಿದರೆ ಅವರಿಗೆ ಸಾಥ್ ಕೊಡೋಕೆ ಇನ್ನೊಬ್ಬರು ಸೇರುತ್ತಿದ್ದರು. ಅದೇ ಹಳೆ ನೆನಪುಗಳು, ತರ್ಲೆ-ತಮಾಷೆಗಳು, ತುಂಬಾ ದಿನದಿ ಕಾಯುತ್ತಿದ್ದ ಧ್ವನಿಗಳು ಅವರ ಜೊತೆ ಲಾಂಗ್ ರೈಡ್ ಹೀಗೆ ಎಲ್ಲವೂ ಒಟ್ಟಿಗೆ ನೋಡಿದ್ದ ಕಾರಣ ಎಲ್ಲರ ಮನಸ್ಸು ಕೂಡ ಪ್ರಶಾಂತವಾಗಿತ್ತು.
ದಾರಿ ಸಾಗುತ್ತಿದಂತೆ ಋತು ವಸಂತ್ ಗೆ ಕಾರ್ ನಿಲ್ಲಿಸು ಅಂತ ಹೇಳಿ ಕಾರ್ ನಿಂತ ಕೂಡಲೇ ಖುಷಿ ಬಾ ಎಂದು ಖುಷಿಯನ್ನು ಕರೆದುಕೊಂಡು ಓಡಿ ಹೋದಳು.
ವಸಂತ್ : ಲೋ ಮನಸ್ ಎಲ್ಲಿಗೆ ಹೋಗ್ತಿದ್ದಾರೋ ಇವ್ರು
ಮನಸ್ : ಇದ್ ಏನ್ ದೊಡ್ಡ ವಿಷಯಾನ? ಅವರು ಯಾವಾಗ್ಲೂ ಹಾಗೆ ಎಲ್ಲೊ ಹೋಗಿದ್ದಾರೆ ಬರ್ತಾರೆ ಬಿಡು
ವಸಂತ್ : ಸರಿ ನಡಿ ನಾವು ಹೋಗೋಣ
ಮನಸ್ : ನಾನ್ ಬರಲ್ಲ ಇಲ್ಲೇ ಮಲಗಿರ್ತಿನಿ ನೀನು ಹೋಗ್ಬಾ
ವಸಂತ್ : ನಿದ್ದೆ ಅಂದ್ರೆ ಅದ್ ಏನ್ ಆಸೆನೋ ನಿಂಗೆ, ಎಲ್ಲಾ ಕಡೆ ಮಲಗೋದಲ್ಲ, ಕೆಲವೊಂದ್ ಕಡೆ ನಿದ್ದೆಗೆಟ್ಟು ಎದ್ದಿರೋದು ತುಂಬ ಮುಖ್ಯ ಅಂತ ಹೇಳಿ ನಗುತ್ತಾ ಹೋದ
ಸ್ವಲ್ಪ ಮುಂದೆ ಹೋಗಿ ನೋಡಿದರೆ ಖುಷಿ ಮತ್ತು ಋತು ಇಬ್ಬರು ಮಾವಿನ ತೋಟದಿಂದ ಮಾವಿನಕಾಯಿ ಕಿತ್ತುಕೊಂಡು ಓಡಿ ಬರುತ್ತಿದ್ದರು. ವಸಂತ್ ಅದನ್ನ ನೋಡಿ ಓಡಿ ಬಂದು ಕಾರ್ ಸ್ಟಾರ್ಟ್ ಮಾಡಿದ. ಗಾಬರಿಯಿಂದ ಮನಸ್ ಎದ್ದು ನೋಡಿದರೆ ತುಂಬಾ ಒಳ್ಳೆ ಹುಡುಗೀರು ಅಂತ ಅಂದುಕೊಂಡಿದ್ದವರು ಮಾವಿನಕಾಯಿ ತೋಪಿನಿಂದ ಕಿತ್ತುಕೊಂಡು ಬರುತಿದ್ದನ್ನ ನೋಡಿ ತಬ್ಬಿಬ್ಬಾಗಿಬಿಟ್ಟ.  ಯಾರಾದರೂ ಅಟ್ಟಿಸಿಕೊಂಡು ಬರೋಕು ಮುಂಚೆ ಅಲ್ಲಿಂದ ಜಾಗ ಕಾಲಿಮಾಡಬೇಕು ಎಂದು ಅವರಿಬ್ಬರೂ ಕಾರ್ ಹತ್ತಿದ ಕೂಡಲೇ ಹಿಂದುಮುಂದು ನೋಡದೆ ಅಲ್ಲಿಂದ ಹೊರಟುಬಿಟ್ಟರು. ಸುಮಾರು ಒಂದು ಕಿ.ಮೀ. ಸಾಗುತ್ತಿದಂತೆ ಎಲ್ಲರೂ ಭಯದಿಂದ ಇರುವುದೋ, ಗಾಬರಿಯಿಂದ ಕೂಗುವುದೋ ಅಥವಾ ಖುಷಿಯಿಂದ ಕಿರುಚುವುದೋ ಏನು ತಿಳಿಯದೆ ಅರ್ಥವಿಲ್ಲದಂತೆ ನಗುತ್ತಿದ್ದರು. ಹೀಗೆ ತರ್ಲೆ-ತಮಾಷೆಗಳು ಮುಂದುವರಿದಂತೆ ಮನಸ್ ಮತ್ತು ವಸಂತ್ ಅಂದುಕೊಂಡಿದ್ದ ಜಾಗಕ್ಕೆ ಬಂದೆ ಬಿಟ್ಟರು.
ಯಾರಿಗೂ ತಿಳಿಯದಂತೆ ವಸಂತ್ ಮನಸ್ ಗೆ ಸಿಗ್ನಲ್ ಮಾಡಿ ಏನು ಗೊತ್ತೆ ಇಲ್ಲ ಅನ್ನೋ ರೀತಿಯಲ್ಲಿ ಕಾರ್ ನಿಲ್ಲಿಸಿ ಕಾರ್ ಯಿಂದ ಕೆಳಗಿಳಿದು ನಿಂತರು. ಅವರ ಹಿಂದೆಯೇ ಖುಷಿ ಮತ್ತು ಋತು ಕೂಡ ಕೆಳಗಿಳಿದರು
ಮನಸ್ : ನೋಡು ಜಾಗ ಏನ್ ಚೆನ್ನಾಗ್ ಇದೆ…
ಋತು : ತುಂಬಾ ಚೆನ್ನಾಗಿದೆ ಕಣೋ. ಲಾಂಗ್ ರೈಡ್ ನಲ್ಲಿ ಈ ತರ ಜಾಗಕ್ಕೆ ಬರ್ತೀನಿ ಅಂತ ನಿಜವಾಗ್ಲೂ ಅಂದುಕೊಂಡಿರಿಲಿಲ್ಲ.
ಕೇಸರಿ ಬಣ್ಣದ ಹೂಗಳು ರಸ್ತೆಯಮೇಲೆ ಹಾಸಿ ರಸ್ತೆಗೆ ಅಲಂಕಾರ ಮಾಡಿದಂತ್ತಿತ್ತು. ಎಲ್ಲಿ ನೋಡಿದರಲ್ಲಿ ಹಸಿರು, ಕಾಡಿನ ಮಧ್ಯ ಬಂದು ನಿಂತಂತೆ ಭಾಸವಾಗಿತ್ತು. ದೂರದಲ್ಲಿ ಒಂದು ಪಾಳು ಬಿದ್ದ ಮನೆ ಋತುವಿನ ಕಣ್ಣಿಗೆ ಬಿತ್ತು. ಯಾರು ಓಡಾಡದ ಪ್ರಶಾಂತವಾದ ಜಾಗ. ಆಗಲೋ ಈಗಲೋ ಒಂದೊಂದು ಗಾಡಿಗಳು ಹೋಗುತ್ತಿದ್ದರು ಸಣ್ಣ ಕಾಲುವೆಯ ನೀರು ಹರಿಯುತ್ತಿರುವ ಜರಿಯ ಸದ್ದು ಪ್ರಕೃತಿಯೊಳಗೆ ಸಂಗೀತ ಸ್ವರಗಳು ಹೊಮ್ಮುತ್ತಿದಂತಿತ್ತು. ಎಲ್ಲವೂ ಕೂಡಿ ಆ ಜಾಗ ಸ್ವರ್ಗಕ್ಕೆ ಸಮಾನವಾಗಿತ್ತು.
ಇದೆಲ್ಲದರ ನಡುವೆ ಖುಷಿ, ಎಲ್ಲರ ಹೆಸರು ಕೆತ್ತಿದ ಮರವನ್ನು ಗುರುತಿಸಿದಳು. ತಕ್ಷಣ ಆ ಮರದ ಹತ್ತಿರ ಓಡಿ ಹೋಗಿ ಋತುವನ್ನು ಜೋರಾಗಿ ಕೂಗಿ ಕರೆದಳು. ಹೇಳುವುದಕ್ಕೂ ಮೊದಲೇ ಖುಷಿ ಅದನ್ನ ಗುರುತಿಸಿದ್ದು ವಸಂತ್ ಮತ್ತು ಮನಸ್ ಗೆ ಅಚ್ಚರಿಯಾಯಿತು. ಪಕ್ಕದಲ್ಲೇ ಬಚ್ಚಿಟ್ಟಿದ್ದ ಹೆಸರು ಕೆತ್ತಿದ ಕಲ್ಲನ್ನು ಸಹ ಋತು ಗುರುತಿಸಿದಳು.
ಮನಸ್ : ವಸಂತ್, ನಾವೇನು ಸರ್ಪ್ರೈಸ್ ಕೊಡಬೇಕು ಅಂದುಕೊಂಡ್ದಿದೆವೋ ಅದೆಲ್ಲಾ ಅವರೇ ಕಂಡು ಹಿಡಿದ್ದಿದ್ದಾರೆ ಇನ್ ಏನು ಸರ್ಪ್ರೈಸ್ ಮಣ್ಣು.
ಅಷ್ಟರಲ್ಲಿ ಖುಷಿ ಓಡಿ ಬಂದು ಮನಸ್ ನ ತಬ್ಬಿಕೊಂಡು. “ನೀವು ಮೊದಲೇ ಇಷ್ಟೆಲ್ಲಾ ಮಾಡಿ ಹೋಗಿದ್ದೀರ? ಒಂದು ಚೂರು ಗೊತ್ತಾಗದಂತೆ ಇಷ್ಟೆಲ್ಲಾ ನಾಟಕ ಆಡಿದ್ದೀರ? ಮೆಚ್ಚಬೇಕು ನಿಮನ್ನ… “ಲವ್ ಯೂ ಮನಸ್” ಅಂತ ಜೋರಾಗಿ ಕೂಗಿ ಹೇಳಿದಳು.
ಇನ್ನೊಂದು ಕಡೆ ಋತು ಕೈಯಲ್ಲಿ ಕಡ್ಡಿ ಹಿಡಿದುಕೊಂಡು
“ನನ್ನ ಮಕ್ಳ, ಲಾಂಗ್ ರೈಡ್ ಅಂತ ಕರ್ಕೊಂಡು ಹೋಗಿ ಅಂದ್ರೆ ಮುಂಚೆನೇ ಪ್ಲಾನ್ ಮಾಡಿ ಇಲ್ಲಿಗೆ ಬಂದು ಇಷ್ಟೆಲ್ಲಾ ಮಾಡಿ ಏನು ಗೊತಿಲ್ಲದೆ ಇರೋ ಅಮಾಯಕರ ತರ ಬಂದಿದ್ದೀರ!!” ಅಂತ ಹೇಳಿ ವಸಂತ್ ನ ಅಟ್ಟಾಡಿಸಿಕೊಂಡು ಹೊಡೆಯೋಕೆ ಓಡಿ ಬರುತ್ತಿದ್ದಳು.
ಇವರಿಬ್ಬರ ಜಗಳವನ್ನು ನೋಡಿ ಆನಂದಿಸುತ್ತಿದ್ದರು ಮಾತ್ರ ಇನ್ನೊಂದು ಜೋಡಿ. ಆ ಜೋಡಿ ಏನೋ ಖುಷಿಯಾಗಿ ಒಂದು ಕಡೆ ಮಾತಾಡಲು ಕುಳಿತುಕೊಂಡರು. ಆದರೆ ಋತುಗೆ ಯಾವುದೊ ಕಾಲ್ ಬಂತು ಅಂತ ಫೋನಿನಲ್ಲಿ ಮಾತಾಡುತ್ತಾ ನಿಂತ್ತಿದಾಳೆ ಇದೆಲ್ಲದರ ನಡುವೆ ಒಬ್ಬಂಟಿಯಾಗಿ ಇದ್ದವನು ಮಾತ್ರ ವಸಂತ್.
ಕಾಗೆಗಳು ಹಾರಾಡುವುದನ್ನು ನೋಡುತ್ತಾ, ಆಗಲೋ ಈಗಲೋ ಓಡಾಡುತಿದ್ದ ಗಾಡಿಗಳನ್ನು ನೋಡುತ್ತಾ, ಮಣ್ಣಿನಲ್ಲಿ ರಂಗೋಲಿ ಹಾಕುತ್ತಾ ಒಬ್ಬನೇ ಕುಳಿತಿದ್ದ. ಯಾರನ್ನು ಕರೆಯುವಂತಹ ಪರಿಸ್ಥಿತಿಯಲ್ಲಿ ಅವನಿರಲಿಲ್ಲ. ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಅಂತ ಒಬ್ಬನೇ ಹಾಡು ಹಾಡುತ್ತಾ ಮಾತಾಡುತ್ತಾ ಕುಳಿತಿದ್ದ. ಮಾತು ಮುಗಿಸಿಬಂದ ಋತು “ಎಲ್ಲರೂ ಒಂದು ಸೆಲ್ಫಿ ತಗೊಳೋಣ ಬನ್ನಿ” ಅಂತ ಹಠಮಾಡಿದಳು. ಅದರಂತೆಯೇ ಫೋಟೋಗಳನ್ನು ತೆಗೆದು, ಯಾವುದೋ ಮುಖವಾಡ ಹಾಕಿ ಸೆಲ್ಫಿ ತೆಗೆದು ಟೈಮ್ ಪಾಸ್ ಮಾಡಿದರು. ನಂತರ ಅಲ್ಲೇ ಸ್ವಲ್ಪ ಮುಂದೆ ಇದ್ದ ಪಾಳು ಬಿದ್ದ ಮನೆಗೆ ಬಂದರು. ಇಡೀ ಮನೆಯನ್ನ ಸುತ್ತುಹೊಡೆದು ಸೆಲ್ಫಿ ತೆಗೆದು ಮನೆ ತುಂಬ ಓಡಾಡಿ ನಂತರ ಮನಸ್ ಖುಷಿ ಮತ್ತು ಋತುವನ್ನು ಕರೆದು ಅವನು ಒಂದು ಕಲ್ಲಿನ ಮೇಲೆ ನೆನಪಿಗೆ ಎಂದು ಬರೆದಿಟ್ಟಿದ್ದ “ಮೇ 19” ಎಂದು ಅವತ್ತಿನ ಡೇಟ್ ತೋರಿಸಿದ. ಅದು ಯಾರ ಮನಸ್ಸಿಗೆ ಎಷ್ಟು ಪರಿಣಾಮ ಬೀರುತೋ ಗೊತ್ತಿಲ್ಲ ಆದರೆ ವಸಂತ್ ಗೆ ಮಾತ್ರ ಆ ದಿನ ಮನಸಿಗ್ಗೆ ತುಂಬ ಹತ್ತಿರದಿಂದ ನೋಡಿದ ದಿನವಾಗಿತ್ತು.
ಎಲ್ಲರೂ ಆನಂದದಿಂದ ಹೊರಟರು. ಮುಂದೆ ಹೆಜ್ಜೆ ಹಾಕುತ್ತಿದಂತೆ ಮನಸ್ ಓಡಿ ಬಂದ.
“ಏನಾದ್ರು ಮಾತಾಡ್ದ ಮಗ, ಏನಾದ್ರು ಪಾಸಿಟಿವ್ ರೆಸ್ಪಾನ್ಸ್ ಕೇಳಬಹುದಾ ನಾನು?” ಎಂದು ಕುತೂಹಲದಿಂದ ಕೇಳಿದ.
“ಇಲ್ಲ ಕಣೋ ಯಾವುದೋ ಕಾಲ್ ಬಂತು ಅಂತ ಮಾತಾಡ್ತಾ ಇದ್ಲು ನೀವು ಬಂದಾಗ್ಲೇ ಅವಳು ಬಂದಿದ್ದು ನಾನು ಕೂಡ ಏನು ಮಾತಾಡೋಕೆ ಹೋಗಿಲ್ಲ”
“ಸರಿ ಮಾತಾಡಬೇಕು ಅಂತ ಅಂದುಕೊಂಡಿದ್ರೆ ಹೇಳು ನಿಮ್ಮಿಬ್ಬರನ್ನ ಜೊತೆಯಲ್ಲಿ ಪ್ರೈವೇಟ್ ಆಗಿ ಬಿಡೋ ಹಾಗೆ ಸಿಚುಯೇಶನ್ ನಾನ್ ಮಾಡ್ತಿನಿ. ಇದು ನನ್ನ ಜವಾಬ್ದಾರಿ” ಮನಸ್ ಹೇಳಿದ
“ಬೇಡ ಬಿಡು ಮನಸ್, ಅವಳು ಲಾಂಗ್ ರೈಡ್ ಅಂತ ಮಾತ್ರ ಬಂದಿರೋದು. ಮಾತಾಡೋಕೆ ಅಂತ ಬಂದಿದ್ರೆ ಖಂಡಿತ ಮಾತಾಡ್ತಾ ಇದ್ಲು. ನಾವೇ ಅರ್ಥ ಮಾಡಿಕೊಳ್ಳಬೇಕು” ಅಂತ ಸ್ವಲ್ಪ ದುಃಖದ ಧ್ವನಿಯಲ್ಲಿ ಹೇಳಿದ
“ಏನೋ ಮಗ, ಸಂಜೆ ವರೆಗೆ ಟೈಮ್ ಇದೆ, ನಿನಗೆ ಬಿಟ್ಟಿದ್ದು ನಿನ್ನ ಮನಸ್ಸಿಗೆ ಅನ್ಸುದ್ರೆ ನೀನೇ ಮಾತು ಶುರುಮಾಡು ಎಲ್ಲಾ ತಾನಾಗಿ ತಾನೇ ದಾರಿಗೆ ಬರುತ್ತೆ”
“ಬೇಡ ಮಗ, ಯಾಕೋ ಸರಿ ಅನ್ನಿಸೊಲ್ಲ. ಖುಷಿಯಿಂದ ಬಂದಿದ್ದೀವಿ ಖುಷಿಯಿಂದ ಹೋಗೋಣ ಅಂತ ಹೇಳಿ ಅಲ್ಲಿಂದ ಹೊರಟರು.
ಸೂರ್ಯ ನೆತ್ತಿಯ ಮೇಲೆ ಬಂದು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಅಂತ ಅಮ್ಮ ಹೇಳಿದ ಮಾತನ್ನು ನೆನಪಿಸಿದ. ಅದರಂತೆಯೇ ದಾರಿಯಲ್ಲಿ ಒಂದು ಹೋಟೆಲ್ ಹುಡುಕಿ ಎಲ್ಲಾರೂ ಊಟಕ್ಕೆ ಅಂತ ಬಂದರು. ಮನಸ್ ಅದೇ ಖುಷಿಯಲ್ಲಿ ಪಾರ್ಟಿ ಮಾಡೋಣ ಅಂತ ಹೋಗಿ ಒಂದು ಬಿಯರ್, ಕೂಲ್ ಡ್ರಿಂಕ್ಸ್, ಚಿಪ್ಸ್ ಎಲ್ಲಾ ತಂದ. ಊಟ ಆರ್ಡರ್ ಮಾಡಿ ಮತ್ತೆ ಮಾತು ಮುಂದುವರೆಸುತ್ತಾ ಊಟ ತಿಂದು ತೇಗಿ ಮುಗಿಸಿದ್ದು ಯಾರಿಗೂ ತಿಳಿಯಲಿಲ್ಲ. ಎಲ್ಲರು ಊಟ ಮುಗಿಸಿ ವಾಪಾಸ್ ಬೆಂಗಳೂರಿಗೆ ಹೋಗಲು ನಿರ್ಧರಿಸಿದರು. ಅದರಂತೆಯೇ ವಸಂತ್ ಬೆಂಗಳೂರು ಕಡೆಗೆ ಕಾರ್ ತಿರುಗಿಸಿದ. ದಾರಿಯಲ್ಲಿ ಹೋಗುತ್ತಿದಂತೆ ಒಂದು ಗೊಂಬೆಗಳ ಅಂಗಡಿ ನೋಡಿ ತಕ್ಷಣ ಕಾರ್ ನಿಲ್ಲಿಸಿದ. ಗಾಬರಿಗೊಂಡ ಎಲ್ಲರು ಏನಾಯಿತು ಅಂತ ಕೇಳಿದ್ರೆ
“ಖುಷಿ ಮತ್ತೆ ಋತು ಗೆ ನಾನ್ ಏನಾದ್ರು ಕೊಡಿಸಬೇಕು” ಅಂತ ಹೇಳಿ ಇಬ್ಬರನ್ನು ಅಂಗಡಿಗೆ ಕರೆದುಕೊಂಡು ಹೋದ
ಖುಷಿ : ಇಲ್ಲಿ ಕರಕೊಂಡು ಬಂದಿರೋದು ನನಗಲ್ಲ ಅಂತ ಗೊತ್ತು ಅದೇನು ಕೊಡಿಸಬೇಕು ಅಂತಿದ್ಯೋ ಬೇಗ ಕೊಡಿಸು
ಋತು : ನನಗೆ ಒಬ್ಬಳಿಗೆ ಅಂದ್ರೆ ನಾನು ಏನು ತಗೋಳೋಲ್ಲ ಖುಷಿಗೂ ಸೇರಿಸಿ ಕೊಡಿಸಿದ್ರೆ ತಗೋತೀನಿ ಅಂದಳು.
ಋತು ಹೇಳಿದಳು ಅಂತಾನೋ ಅಥವಾ ವಸಂತ್ ಗೆ ಸಮಾಧಾನ ಆಗಲಿ ಅಂತಾನೋ ಗೊತ್ತಿಲ್ಲ ಆದರೆ ಇಷ್ಟ ಇಲ್ಲ ಅಂದ್ರು ಗಿಫ್ಟ್ ತಗೊಂಡಳು ನಮ್ಮ ಖುಷಿ. ಅವಳ ಹಿಂದೆಯೇ ಋತು ಕೂಡ ಒಂದು ಪುಟಾಣಿ ಆಟಿಕೆ ತೆಗೆದುಕೊಂಡಳು. ಇದರಿಂದ ವಸಂತ್ ಮನಸ್ಸಿಗೆ ಸ್ವಲ್ಪ ನಿರಾಳ ಸಿಕ್ಕಿದೆ ಅಂತ ಖುಷಿ ಗೆ ಅರಿವಾಯಿತು. ಖುಷಿ ಗೆ ಅರ್ಥ ಆದರೆ ಏನಂತೆ ಆದರೆ ಋತು ಗೆ ಮಾತ್ರ ಏನು ತಿಳಿಯಲಿಲ್ಲ. ಆಗ ಸಮಯ ಸಂಜೆ 4 ಗಂಟೆಯಾಗಿತ್ತು. ಕತ್ತಲಾಗುವುದರೊಳಗೆ ಖುಷಿ ಮತ್ತು ಋತು ಮನೆ ಸೇರಬೇಕಿತ್ತು ಆ ಜಾಗದಿಂದ ಬೆಂಗಳೂರಿಗೆ ಸುಮಾರು 100 ಕಿ.ಮೀ. ಇತ್ತು. ತಡಮಾಡುವಹಾಗಿಲ್ಲ ಎಂದು ಪ್ರಯಾಣ ಮುಂದುವರಿಸಿದರು. ಈಗ ಋತು ಮನಸ್ ಜೊತೆ ಮತ್ತು ಖುಷಿ ವಸಂತ್ ಜೊತೆ ಕುಳಿತರು. ಬೆಂಗಳೂರಿಗೆ ಬರುವವರೆಗೂ ಮಾತನಾಡುತ್ತಾ ಬಂದರು. ಇವರಿಬ್ಬರು ಮಾತನಾಡಿದ್ದು ಅವರಿಗೆ ಕೇಳಿಸಲಿಲ್ಲ ಅವರಿಬ್ಬರೂ ಮಾತನಾಡಿದು ಇವರಿಬ್ಬರಿಗೆ ಕೇಳಿಸಲಿಲ್ಲ, ಒಂದೇ ಕಾರಿನಲ್ಲಿದ್ದರು ಚರ್ಚೆಗಳು ಬೇರೆಬೇರೆಯಾಗಿತ್ತು. ಹೀಗೆ ಬೆಂಗಳೂರು ತಲುಪುವ ವರೆಗೂ ಪ್ರಯಾಣ ಮಾತುಗಳಲ್ಲೇ ಮುಳುಗಿತ್ತು.
ಮನಸ್ ಜೊತೆ ಋತು ಅವರ ಕೆಲಸದ ಬಗ್ಗೆ ಮಾತನಾಡುತ್ತಾ, ಮುಂದಿನ ಅವಳ ಜವಬ್ದಾರಿಯುತ ನಡೆಯ ಬಗ್ಗೆ ಮತ್ತು ಅವಳ ಮನೆಯ ಕೆಲವೊಂದು ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುತ್ತಾ ಮನಸ್ ಬಳಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದಳು. ಇನ್ನೊಂದು ಕಡೆ ಖುಷಿ ವಸಂತ್ ಜೊತೆ ಮಾತನಾಡುತ್ತಾ ಕೆಲಸದ ಬಗ್ಗೆ ಕೆಲವೊಂದು ವಿಚಾರಗಳನ್ನು ತಿಳಿದುಕೊಳುತ್ತಾ ಮುಂದಿನ ಅವಳ ಜೀವನದ ಕೆಲವೊಂದು ಮುಖ್ಯ ತಿರುವುಗಳ ಬಗ್ಗೆ, ಅವಳ ಮುಂದಿನ ನಡಿಗೆಯ ಬಗ್ಗೆ ಚರ್ಚಿಸುತ್ತಾ ಅವಳ ನಿರ್ಧಾರಗಳ ಬಗ್ಗೆ ಸ್ಪಷ್ಟತೆ ಕಂಡುಕೊಳುತ್ತಿದಳು. ಹೀಗೆ ಮಾತುಗಳು ಬೆಳೆದಂತೆ ಬೆಂಗಳೂರು ಬಂದೇಬಿಟ್ಟಿತು. ವಸಂತ್ ಮನಸ್ಸಲ್ಲಿ ಮಾತ್ರ ಸಾವಿರ ಮಾತುಗಳು ಹೆಪ್ಪುಗಟ್ಟಿ ನಿಂತಿದ್ದವು. ಮಾತು ಮೌನವಾಗಬೇಕೋ ಮೌನ ಒಡೆದು ಮನಸುಗಳು ಒಂದಾಗಬೇಕೋ ಅವನಿಗೆ ನಿರ್ಧಾರ ಮಾಡುವುದು ಕಷ್ಟವಾಗಿತ್ತು. ಈ ದಿನ ಬಿಟ್ಟರೆ ಮತ್ತೆ ಇಂತ ಸಮಯ ಸಿಗೋದಿಲ್ಲ ಅನ್ನೋದು ಕೂಡ ಅವನಿಗೆ ತಿಳಿದಿತ್ತು ಆದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಎಲ್ಲವನ್ನು ಪಕ್ಕಕ್ಕಿಟ್ಟು ಇರುವ ಸಮಯ ಹಾಳು ಮಾಡಬಾರದು ಅಂತ ನಗುನಗುತ್ತಾ ಕುಳಿತ್ತಿದ. ಆ ನಗುವಿನ ಹಿಂದೆ ಎಷ್ಟು ಸಂಕಟ ಇದೆ ಅಂತ ಅವನಿಗೆ ಬಿಟ್ಟು ಬೇರೆ ಯಾರಿಗೂ ತಿಳಿಯಲಿಲ್ಲ
ಬೆಂಗಳೂರು ತಲುಪುವ ಹೊತ್ತಿಗೆ ಸೂರ್ಯ ಮುಳುಗಿ ಹೋಗಿದ್ದ, ಬಂದಿದ್ದೇನೋ ಅಯ್ತು ಆದರೆ ಅಲ್ಲಿಂದ ಮನೆಗೆ ಹೋಗುವುದೇ ಒಂದು ಸಾಹಸ. ವಸಂತ್ ಗೆ ಯಾವಾಗಲೂ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಎನ್ನಿಸುತ್ತಿತ್ತು ಆದರೆ ಆ ದಿನ ಮಾತ್ರ ಟ್ರಾಫಿಕ್ ಅವನಿಗೆ ಸುಂದರವಾಗಿ ಕಾಣ ತೊಡಗಿತು. ಏಕೆಂದರೆ ಋತು ಇನ್ನು ಸ್ವಲ್ಪ ಹೊತ್ತು ಜೊತೆಯಲ್ಲೇ ಇರುತ್ತಾಳೆ ಎಂಬ ಸಂತೋಷ ಆದರೆ ವಸಂತ್ ಮನಸ್ಸಿನಲ್ಲಿ ಎಲ್ಲೊ ಒಂದು ಮೂಲೆಯಲ್ಲಿ “ಋತು ಸಿಗೋದು ಇವತ್ತಿಗೆ ಕೊನೆ” ಎಂದು ಕೂಗಿ ಕೂಗಿ ಸಾರಿ ಸಾರಿ ಹೇಳುತಿತ್ತು. ಆದರೂ ಆ ಮಾತನ್ನು ಲೆಕ್ಕಿಸದೆ ಎಲ್ಲರ ಜೊತೆ ಬೆರೆತು ಸಂತೋಷದಿಂದ ಇದ್ದ.
ದಾರಿ ಸಾಗಿದಂತೆ ಋತು ಮನೆ ಬಂದೆ ಬಿಡ್ತು
ಮನಸ್ : ಮತ್ತೆ ಯಾವಾಗ ಸಿಕ್ತಿಯ ಋತು?
“ನೋಡೋಣ ಫ್ರೀ ಆದಾಗ ಎಲ್ಲರೂ ಮತ್ತೆ ಸಿಗೋಣ ಇನ್ನೊಂದು ಸಲ ಲಾಂಗ್ ರೈಡ್ ಗೆ ಹೋಗೋಣ” ಎಂದಳು
“ಅಲ್ಲಿ ವರೆಗೂ ಕಾಲ್ ಇಲ್ಲ ಮೆಸೇಜ್ ಮಾಡು ಋತು ಮತ್ತೆ ಗ್ಯಾಪ್ ಕೊಡಬೇಡ ಎಲ್ಲರಿಗೂ ಬೇಜಾರಾಗುತ್ತೆ” ಖುಷಿ ಹೇಳಿದಳು
“ಹಾಗೆಲ್ಲ ಏನು ಇಲ್ಲ ಮತ್ತೆ ಸಿಕ್ತಿನಿ, ಬಾಯ್” ಅಂತ ಹೇಳಿ ಕಾರ್ ಇಂದ ಕೆಳಗೆ ಇಳಿದಳು.
ತಕ್ಷಣ ವಸಂತ್ ಓಡಿ ಬಂದು “ಋತು ಮಾವಿನ ಕಾಯಿ ಬೇಡ್ವಾ”? ಎಂದ
“ಬೇಡ ಲೇಟ್ ಅಯ್ತು ಅಮ್ಮ ಬೈತಾರೆ” ಅಂತ ಹೇಳಿ ಹೋದಳು
ಹೌದು, ವಸಂತ್ ಋತುವನ್ನ ಅದೇ ಕೊನೆಯಬಾರಿ ನೋಡಿದ್ದು, ಅವಳನ್ನು ಕಳಿಸಿಕೊಟ್ಟ ಮೇಲೆ ಮನಸ್ಸಿನಲ್ಲಿ ಕೂಗಿ ಕೂಗಿ ಹೇಳುತ್ತಿದ್ದ ಆ ಮಾತು ಮತ್ತೆ ಮತ್ತೆ ಕೇಳಿಸತೊಡಗಿತು. ಅವನಿಗೆ ಆದ ಸಂತೋಷದಿಂದಲೋ ಅಥವ ದಿನ ಮುಗಿಯಿತೆಂಬ ಬೇಜಾರಿನಿಂದಲೋ ಅಥವ ಮತ್ತೆ ಅವಳು ಸಿಗುವುದಿಲ್ಲ ಎಂಬ ಆ ಮನಸ್ಸಿನ ಮಾತಿನಿಂದಲೋ ಗೊತ್ತಿಲ್ಲ ಆದರೆ ಆ ದಿನ ಮಾತ್ರ ವಸಂತ್ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ ಕಣ್ಣಿನಲ್ಲಿ ನೀರು ತುಂಬಿ ಹರಿಯುತಿತ್ತು. ಮನಸ್ ಮತ್ತು ಖುಷಿ ಎಷ್ಟು ಸಮಾಧಾನ ಮಾಡಿದರು ಕೂಡ ಅವನ ಅಳು ನಿಲ್ಲಲಿಲ್ಲ. ಅವನ ದುಃಖ ಅವಳು ಹೋದಮೇಲೆ ಹೆಚ್ಚಾಯಿತು.
ಅದಾದ ಎರಡು ತಿಂಗಳಾದರೂ ಋತು ಇಂದ ಒಂದು ಕಾಲ್ ಅಥವ ಒಂದು ಮೆಸೇಜ್ ಕೂಡ ಬರಲಿಲ್ಲ. ಯಾರು ಕಾಲ್ ಮಾಡಿದರು ಅವಳಿಂದ ರಿಪ್ಲೈ ಕೂಡ ಬರಲಿಲ್ಲ. ವಸಂತ್ ಪಾಲಿಗೆ ಮಾತ್ರ ಆ ಒಂದು ದಿನ ಅಚ್ಚರಿ, ಅದ್ಬುತ ಮತ್ತು ಸುಂದರ ಕ್ಷಣಗಳಿಂದ ಅಮೋಘ ನೆನಪುಗಳಿಂದ ತುಂಬಿತ್ತು. ಏನೆ ಆಗಲಿ ಸುಂದರ ಕ್ಷಣಗಳು, ನೆನಪುಗಳು ಜೀವನದಲ್ಲಿ ಪದೇ ಪದೇ ಆಗುವುದಿಲ್ಲ ಎಂಬುದನ್ನು ಅರಿತ್ತಿದ್ದ ವಸಂತ್.
ಅವನ ಪಾಲಿಗೆ ಆ ದಿನ ಜೀವನದ ಒಂದು ದೊಡ್ಡ ಅಧ್ಯಾಯವಾಗಿತ್ತು. ಆ ದಿನ ಮಾತನಾಡದೆ ಇದ್ದಿದು ಕೂಡ ಒಂದು ಅರ್ಥ ಕಟ್ಟಿ ಕೊಟ್ಟಿತು. ಅದಾದ ನಂತರ ಅವನಿಗೆ ಎಲ್ಲವೂ ಕೂಡ ಮೌನವಾಗಿ ಕಂಡಿತ್ತು. ಸಾಗರವು ಸದ್ದಿಲ್ಲದಂತೆ ಸ್ತಬ್ದವಾಗಿತ್ತು. ಗಾಳಿಯು ಕೂಡ ಅವಳ ಹೆಸರು ಹೇಳುತಿತ್ತು. ಜ್ವಾಲಾಮುಖಿಯು ಕೂಡ ತಣ್ಣಗಾಗಿ ಕಂಡಿತ್ತು, ಬಿರುಗಾಳಿಯೂ ಕೂಡ ತಂಗಾಳಿಯಾಗಿತ್ತು, ಬೇಸಿಗೆಯ ಬೆವರು ಕೂಡ ಮಳೆ ನೀರಿನಂತಿತ್ತು. ಹೀಗೆ ಎಲ್ಲವೂ ಕೂಡ ವಸಂತ್ ನ ಪಾಲಿಗೆ ಪ್ರಶಾಂತವಾಯಿತು. ವಸಂತ್ ಆ ದಿನದ ನಂತರ ತುಂಬಾ ಬದಲಾದ. ಮಾತಿನಲ್ಲಿ ಮನೆ ಕಟ್ಟುತ್ತಿದ್ದವನು ಮೌನದಲ್ಲಿ ಬದುಕು ಕಟ್ಟಿಕೊಂಡ, ಮಾಡುವ ಎಲ್ಲಾ ಕೆಲಸದಲ್ಲು ಅವಳ ಹೆಸರು ಹೇಳಿ ಪ್ರೀತಿಗೆ ಋಣಿಯಾದ. ಕೋಪತಾಪಗಳನ್ನು ಹತೋಟಿಗೆ ತಂದು ಜೀವನವನ್ನು ಅರಿತುಕೊಂಡ. ಅವನ ಎಲ್ಲಾ ಸಾಧನೆಗೂ ಅವಳೇ ಕಾರಣ ಎಂದು ಸಾರಿ ಸಾರಿ ಹೇಳಿದ. ಮನಸ್ ಮತ್ತು ಖುಷಿಯ ಸ್ನೇಹವನ್ನು ಮನಸ್ಸಿನಲ್ಲಿಟ್ಟು ಅವರ ಜೊತೆಯಲ್ಲೇ ಇದ್ದು ಸ್ನೇಹಕ್ಕೂ ಪ್ರೀತಿಗೂ ಒಂದು ಹೊಸ ಅರ್ಥ ಕೊಡಲು ಸಿದ್ದನಾದ. ಪ್ರತಿದಿನವೂ ಕೂಡ ಋತುವನ್ನು ನೆನದು ಮುಖದಲ್ಲಿ ತುಸು ನಗೆ ಬೀರಿ ಜೀವನ ಮುಂದುವರೆಸಿದ.
ಒಂದು ಲಾಂಗ್ ರೈಡ್ ಅಂತ ಅವಳು ಹೇಳಿದಕ್ಕೆ ಅಷ್ಟೆಲ್ಲ ಕಷ್ಟ ಪಟ್ಟು ಎಲ್ಲ ವ್ಯವಸ್ಥೆ ಮಾಡಿದ ಅವನು ಆ ದಿನ ಎಷ್ಟು ಬೇಗ ಮುಗಿದು ಹೋಯಿತು ಅಂತ ಬೇಸರಗೊಂಡ ಆದರೂ ಆ ದಿನ ಅವನಿಗೆ ಒಂದು ಮರೆಯಲಾಗದ ನೆನಪಾಗಿ ಉಳಿಯಿತು ಎಂದು ಮನಸ್ಸು ಹಸಿ ಮಾಡಿದ. ಯಾರಾದರೆ ಏನ್ ಅಂತೆ ಮನಸ್ಸಿನ ಖುಷಿಗೆ ಏನು ಬೇಕಾದ್ರು ಮಾಡೋಕೆ ರೆಡಿ ಆಗ್ತಾರೆ. ಕೆಲವೊಂದು ಮನಸಿಗ್ಗೆ ನೆಮ್ಮದಿ ಕೊಟ್ಟರೆ ಕೆಲವೊಂದು ನೆನಪುಗಳು ಕೊಡುತ್ತದೆ. ಭಾವನೆಗಳೇ ತುಂಬಿರುವ ಈ ಪ್ರಪಂಚದಲ್ಲಿ ಅಹಂ ಎಂಬ ಪರದೆ ಸರಿದು ನೋಡಿದರೆ ಅಲ್ಲಿ ಕಾಣುವುದು ಒಂದು ಮುಗ್ದ ಮನಸುಗಳು ಅಷ್ಟೆ.
ಹೀಗೆ ಎಷ್ಟೋ ವಿಷಯಗಳು, ಸನ್ನಿವೇಶಗಳು ಮನುಷ್ಯನ ಜೀವನದಲ್ಲಿ ಮಹತ್ವದ ಪರಿಣಾಮಗಳು ಬೀರುತ್ತದೆ. ಅದು ಅರಿವಿದ್ದರೂ ಹೌದು ಅರಿವಿಲ್ಲದಿದ್ದರು ಹೌದು. ಏನೆ ಆದರೂ ಎಲ್ಲದಕ್ಕೂ ಕೊನೆಯಲ್ಲಿ ಒಂದು ಅರ್ಥ ಹುಡುಕುವುದೇ ಎಲ್ಲರ ಪ್ರಯತ್ನ, ಅರ್ಥ ಸಿಕ್ಕಿದರೆ ಬದುಕಿನ ಇನ್ನೊಂದು ಮುಖ ನೋಡುತ್ತಾರೆ, ಅರ್ಥ ಸಿಗದವರು ಇರುವುದರಲ್ಲೇ ನೆಮ್ಮದಿ ಕಾಣುತ್ತಾರೆ. ಎಲ್ಲಾ ಪ್ರೀತಿಗೂ ಒಂದೇ ಅರ್ಥ ಸಿಗುವುದು ಅಸಾಧ್ಯ!!!…
ಇಂದಿಗೆ ವಸಂತ್ ಎಷ್ಟೇ ಸಾಧನೆ ಮಾಡಿದರು ಸ್ಪೂರ್ತಿಗೆ ಅವಳನ್ನೇ ನೆನೆದರು ಆ ದಿನ ಮಾತ್ರ ಅವನ ಭಾವನೆಗಳು ಎಕ್ಸ್ಪ್ರೆಸ್ ಮಾಡಲಾಗದೆ ಅನುಭವಿಸಿದ ರೀತಿ ಈ ನನ್ನ “ಭಾವನೆಗಳ ಎಕ್ಸ್ಪ್ರೆಸ್”
-ಕೃಷ್ಣ ಮೂರ್ತಿ. ಕೆ

5 thoughts on “ಭಾವನೆಗಳ Express

 1. ಭಾವನೆಗಳಿಲ್ಲದ ಬದುಕು ಒಂದು ಬದುಕಾ? ಓದುಗರ ಮನಸ್ಸಿಗೆ ಮುಟ್ಟಿದರೆ ಬರಹಗಾರನಿಗೆ ತೃಪ್ತಿ.
  ಧನ್ಯವಾದಗಳು

  Like

 2. Deekshith das.. November 18, 2019 — 18:01

  ವಸಂತ್ ಅವರ ಭಾವನೆಗಳನ್ನು ನಿಮ್ಮ ಬರವಣಿಗೆಯಲ್ಲಿ ವ್ಯಕ್ತಪಡಿಸಿರುವ ರೀತಿ ಅದ್ಭುತ…‌

  Like

 3. Ninu yavaglu super guru ❤️
  God bless you

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close