ಕೋಟೆಯ ಹೆಜ್ಜೆಗಳು

-ಚರಿತ್ರೆಯ ಸೃಷ್ಟಿಯಲ್ಲಿ
ಚಿತ್ರದುರ್ಗ, ಈ ಹೆಸರು ಕೇಳುತ್ತಿದ್ದಂತೆ ಎಲ್ಲರಿಗು ಮನಸ್ಸಿನಲ್ಲಿ ಒಂದು ಕಲ್ಲಿನ ಕೋಟೆ ಮತ್ತು ಅದರ ಇತಿಹಾಸಕ್ಕೆ ಸಾಕ್ಷಿಯಾದ ಒನಕೆ ಓಬ್ಬವ್ವ ನೆನಪಾಗುವುದು ಸಹಜ. ಕರ್ನಾಟಕದ ಎಷ್ಟೋ ಪುರಾತನ ಪ್ರದೇಶಗಳು ಮತ್ತು ದೇವಾಲಯ ಕೋಟೆ ಕೊತ್ತಲುಗಳು ನೋಡುವುದಕ್ಕೆ ಈಗ ಪ್ರವಾಸಿ ತಾಣವಾದರೂ ಅದರ ಹಿಂದಿನ ಇತಿಹಾಸ ಮಾತ್ರ ರೋಚಕ ಕಥೆಯಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ. ಇಂತಹ ಕಥೆಗಳ ಸಾಲಿನಲ್ಲಿ ಚಿತ್ರದುರ್ಗವು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ.
ಚಿತ್ರದುರ್ಗದ ಪರಿಕಲ್ಪನೆ ಬರಿ ಅದರ ಕೋಟೆ ಅಥವ ವೀರವನಿತೆಯಾದ ಓಬ್ಬವ್ವಳಿಗೆ ಮಾತ್ರ ಸೀಮಿತವಾಗಿಲ್ಲ ಅದರ ಹಿಂದಿನ ದೊಡ್ಡ ಇತಿಹಾಸವನ್ನ ಒಂದು ಪುಟ್ಟ ಕಥೆಯಲ್ಲಿ ಹೇಳುವುದು ನನ್ನ ಪ್ರಯತ್ನ. ಚಿತ್ರದುರ್ಗವು ಕರ್ನಾಟಕದ ಒಂದು ಪುಟ್ಟ ನಗರವಾಗಿದ್ದರು ಅದರ ಘನತೆಗೆ ಕೊರತೆಯಿಲ್ಲ. ದುರ್ಗ ಎಂಬ ಹೆಸರಿನಲ್ಲೇ ಇಡೀ ರಾಜ್ಯ ಹಾಗು ರಾಷ್ಟ್ರದ ಗಮನ ಸೆಳೆಯುವುದರಲ್ಲಿ ಎತ್ತಿದ ಕೈ.
ಚಿತ್ರದುರ್ಗವು ಕ್ರಿ.ಶ 2 ನೇ ಶತಮಾನದಲ್ಲಿ ಶಾತವಾಹನರ ಆಳ್ವಿಕೆಗೆ ಸಿಗುತ್ತದೆ. ಅದರ ನಂತರ ಬನವಾಸಿಯ ಕದಂಬರಿಗೆ, ನಂತರ ಚಾಲುಕ್ಯರಿಗೆ, ಪಲ್ಲವರಿಗೆ, ರಾಷ್ಟ್ರಕೂಟ, ಚೋಳರು, ವಿಜಯನಗರ, ಪಾಳೇಗಾರರು, ಹೈದರಾಲಿ, ಟಿಪ್ಪು ಸುಲ್ತಾನ ಮತ್ತು ಕೊಂಚ ಮಟ್ಟಕ್ಕೆ ಬ್ರಿಟೀಷರ ಆಳ್ವಿಯಕೆಯಲ್ಲಿ ನಂತರ ಮೈಸೂರಿನ ಒಡೆಯರ ಕೈಗೆ ಬಂದು ತಲುಪುತ್ತದೆ. ಹೀಗೆ ನೋಡಿದರೆ ಚಿತ್ರದುರ್ಗಕ್ಕೆ ಸಾವಿರ ವರ್ಷಗಳ ಇತಿಹಾಸ ಎಷ್ಟೋ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಚಿತ್ರದುರ್ಗವು ಇಷ್ಟು ರಾಜರ ಆಳ್ವಿಕೆಯಲ್ಲಿದ್ದರೂ ಇದರ ಮೆರುಗು ಅಥವ ಘನತೆ ಹೆಚ್ಚಿದ್ದು ಮಾತ್ರ ಪಾಳೇಗಾರರ ಆಳ್ವಿಕೆಯಲ್ಲಿದ್ದಾಗ ಎಂದರೆ ತಪ್ಪಾಗಲಾರದು. ಈ ಕೋಟೆ ಕಟ್ಟುವುದಕ್ಕೆ ಶುರು ಮಾಡಿದ್ದೇನೋ ಆಯಿತು ಆದರೆ ಅದನ್ನು ಮುಗಿಸುವುದಕ್ಕೆ 211 ವರ್ಷಗಳ ಕಾಲ ಸಮಯ ಹಿಡಿಯಿತು, ಕೋಟೆಯ ಭದ್ರತೆ ಹಾಗು ದೇವಾಲಯಗಳ ರಕ್ಷಣೆ ಮತ್ತು ಬೆಳವಣಿಗೆ ಹೆಚ್ಚಾಗಿದ್ದು ಇವರ ಆಳ್ವಿಕೆಯಲ್ಲಿಯೇ. ರಾಜಕೀಯವಾಗಿಯೂ ಕೂಡ ಚಿತ್ರದುರ್ಗವು ತನ್ನದೇ ಆದ ಚಾಪನ್ನು ಮೂಡಿಸಿತ್ತು. ಪಾಳೇಗಾರರ ರಾಜಧಾನಿಯಾಗಿ ಚಿತ್ರದುರ್ಗವು ಮಿಂಚಿನ ವೇಗದಲ್ಲಿ ಬೆಳೆಯತೊಡಗಿತ್ತು. ಈ ಸಂದರ್ಭದಲ್ಲಿ ಮದಕರಿನಾಯಕನ ಪಾತ್ರವು ಬಹಳಷ್ಟಿದೆ. ಚಿಕ್ಕ ವಯಸ್ಸಿನಲ್ಲೇ ಅಂದರೆ ಹರೆಯದ 12 ರ ವಯಸ್ಸಿನಲ್ಲೇ ಅಕ್ಕ ಪಕ್ಕದ ರಾಜ್ಯದ ಆಕ್ರಮಣಕ್ಕೆ ಹೆದರದೆ ಮುನ್ನುಗ್ಗಿ ಜಯ ಸಾಧಿಸಿ ಸಣ್ಣವಯಸ್ಸಿನಲ್ಲೇ ರಾಜತಾಂತ್ರಿಕಥೆಯ ಭಿನ್ನಗಳನ್ನು ಅರಿತು ಬೆಳೆದು ವೀರಮದಕರಿ ಎಂದೇ ಹೆಸರುವಾಸಿಯಾದ ಅಚ್ಚಳಿಯದ ಮಹಾನಾಯಕ.
ಚಿತ್ರದುರ್ಗ ಕೋಟೆಯು ಜನರ ಒಂದು ಪ್ರವಾಸಿ ತಾಣವಾದರೂ ಅದರ ಇತಿಹಾಸ ಹಾಗು ಕೋಟೆಯ ಒಂದೊಂದು ಭಾಗವನ್ನು ತಿಳಿದುಕೊಳ್ಳುವುದು ಎಂದರೆ ಯಾರಿಗೆ ತಾನೆ ಇಷ್ಟ ಆಗೋಲ್ಲ. ಇದರ ವೈಶಿಷ್ಟ್ಯತೆಯನ್ನು ಕೋಟೆಯ ಶುರುವಿನಿಂದ ಮುಗಿಯುಯ ವರೆಗು ಅದರ ಸ್ವಾರಸ್ಯಪೂರ್ಣವಾದ ಇತಿಹಾಸವನ್ನು ನಿಮಗೆ ಚಿತ್ರಗಳ ಮೂಲಕ ತಿಳಿಸುವುದೇ ನನ್ನ ಒಂದು ಪುಟ್ಟ ಆಸೆ
ಮೊದಲಿಗೆ ಕೋಟೆ ಪ್ರವೇಶಿಸುತ್ತಿದಂತೆ ಎಡಭಾಗದಲ್ಲಿ ಒಂದು ಹಾವಿನ ಕಲ್ಲಿನ ಕೆತ್ತನೆಯನ್ನು ನೋಡಬಹುದು ಅದರ ಅರ್ಥ ಕೋಟೆಯನ್ನು ನಿರ್ಮಾಣ ಮಾಡಿರುವ ರೀತಿಯನ್ನು ಪ್ರತಿಬಿಂಬಿಸುತ್ತದೆ. ಅಂದರೆ ಇಡೀ ಕೋಟೆಯ ದಾರಿ ಶುರುವಿನಿಂದ ಮುಗಿಯುವ ವರೆಗು ಹಾವಿನ ರೀತಿಯಲ್ಲಿ ದಾರಿ ಸಾಗುತ್ತದೆ ಎಂದರ್ಥ. ಈ ಕೋಟೆಯನ್ನು ಈ ರೀತಿ ಹಾವಿನ ಆಕಾರದಲ್ಲಿ ನಿರ್ಮಾಣ ಮಾಡಿರುವ ಕಾರಣ ಏನಂದರೆ ಶತ್ರು ಸೈನ್ಯ ಏನಾದರೂ ಕೋಟೆಯ ಒಳಗೆ ನುಗ್ಗಿದರೆ ಅವರಿಗೆ ಒಳಗೆ ಬರುವ ದಾರಿ ಹಾಗು ಹೊರಗೆ ಹೋಗುವ ದಾರಿ ಎರಡು ಕೂಡ ಗೊಂದಲ ಸೃಷ್ಟಿ ಮಾಡುವ ಮೂಲ ಉದ್ದೇಶವಾಗಿರುತ್ತದೆ.
ಈ ಕಲ್ಲಿನ ಕೋಟೆಗೆ ಒಟ್ಟು 7 ಬಾಗಿಲು ಇರುತ್ತದೆ. ಮೊದಲನೆಯದು ರಂಗಯ್ಯನ ಬಾಗಿಲು, ಸರ್ಕಾರದ ಕೆಲವೊಂದು ಕಾರಣಗಳಿಂದ ಈ ಬಾಗಿಲು ಮುಚ್ಚಿರುತ್ತದೆ ಹಾಗು ಎರಡನೆಯ ಬಾಗಿಲು ಆನೆ ಬಾಗಿಲು ಇದು ನಗರದ ಮಧ್ಯದಿಂದ ಪ್ರವೇಶ ಇರುವ ಕಾರಣ ಅದನ್ನು ಮುಚ್ಚಲಾಗಿದೆ. ಈಗ ಎಲ್ಲರೂ ಸಾಮಾನ್ಯವಾಗಿ ಕೋಟೆಗೆ ಪ್ರವೇಶ ಮಾಡುವುದು ಮೂರನೆಯ ಬಾಗಿಲಿನಿಂದ ಅಂದರೆ ಕಾಮನ ಬಾಗಿಲು (ಇದು ಮತ್ತಿತಿಮ್ಮಣ್ಣ ನಾಯಕರ ವಂಶಸ್ಥರ ಹೆಸರು). ಇದರ ಪ್ರವೇಶ ಮಾಡುತ್ತಿದ್ದಂತೆ ಶಂಖ ಮತ್ತು ಚಕ್ರ ಎರಡರ ಕಲ್ಲುಗಳನ್ನ ಅಕ್ಕಪಕ್ಕದ ಗೋಡೆಯ ಮೇಲೆ ಕಾಣಬಹುದು. ಇದೊಂದು ಹಿಂದೂ ಸಂಪ್ರದಾಯದಲ್ಲಿ ಶ್ರೇಷ್ಠತೆಗೆ ಹೆಸರಾಗಿದೆ.
DSC03006
ಚಕ್ರ ಕಲ್ಲು
chitradurga 13
ಹಾವಿನ ಕಲ್ಲು
ಇದರ ನಂತರ ಬರುವುದು ನಾಲ್ಕನೆಯ ಬಾಗಿಲು ಅಂದರೆ ವೀರಭದ್ರ ಬಾಗಿಲು, ವೀರಭದ್ರ ಸ್ವಾಮಿಯ ದೇವಸ್ಥಾನವು ಕೂಡ ಎಡಭಾಗದಲ್ಲಿ ಕಾಣಬಹುದಾಗಿದೆ. ನಂತರ ಮುಂದೆ ನಡೆದಂತೆ ಎಡಭಾಗದಲ್ಲಿ ಬಾಗಿಲು ಕಾಯುವುದಕ್ಕೆಂದೇ ಮೀಸಲಾಗಿ ಸೈನಿಕರಿಗೊಂದು ಕಲ್ಲಿನ ಕೆಳಗೆ ಒಂದು ಗುಹೆ ಇದೆ ಅದರ ಎದುರಿಗೆ ಒಂದು ಹೊಂಗೆ ಎಣ್ಣೆಯ ಹೊಂಡ ಇದ್ದು ಪ್ರತಿದಿನ ಕೋಟೆಯ ಬಾಗಿಲಿನಲ್ಲಿ ಪಂಜನ್ನು ಹಚ್ಚಿ ಇಡುವುದಕ್ಕೆ ಮೀಸಲು ಮಾಡಲಾಗಿತ್ತು. ಕೋಟೆಯ ಕಲ್ಲಿನ ಗೋಡೆಯ ಮೇಲೆ ಸಿಮೆಂಟ್ ನ ಪ್ಲಾಸ್ಟಿಂಗ್ ಬಳಿದಿರುವ ಹಾಗೆ ಕೆಲವೊಂದು ಕಡೆ ಕಾಣಬಹುದು ಆದರೆ ಅದು ಈಗಿನ ಕಾಲದ ಸಿಮೆಂಟ್ ಅಲ್ಲ ಮತ್ತು ಕಲ್ಲಿನ ಗೋಡೆಗೆ ಅದರ ಅಗತ್ಯವೂ ಕೂಡ ಇಲ್ಲ. ಅದನ್ನು ಕೋಟೆ ನಿರ್ಮಾಣ ಸಮಯದಲ್ಲಿ ಮಾಡಿರುವ ಕಾರಣವೇನೆಂದರೆ ಶತ್ರು ಸೈನ್ಯ ಕೋಟೆಯ ಮೇಲೆ ಆಕ್ರಮಣ ಮಾಡುವಾಗ “ಉಡ” ಎಂಬ ಪ್ರಾಣಿಯನ್ನು ಗೋಡೆಯಮೇಲೆ ಎಸೆಯುತ್ತಾರೆ ಅದರ ವೈಶಿಷ್ಟ್ಯತೆ ಏನೆಂದರೆ ಎಂಥಹ ಕಲ್ಲು ಇದ್ದರು ಕೂಡ ಉಡ ಪ್ರಾಣಿಯು ಅದರ ಮೇಲೆ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ ಆಗ ಅದರ ಸಹಾಯದಿಂದ ಶತ್ರು ಸೈನ್ಯ ಕೋಟೆಯ ಒಳಗೆ ಪ್ರವೇಶಿಸುವ ಸಾಧ್ಯತೆಗಳು ಬಹಳ ಇದೆ ಆದರ ಸಲುವಾಗಿ ಈ ರೀತಿಯ ಪ್ಲಾಸ್ಟಿಂಗ್ ಅಲ್ಲಲ್ಲಿ ಮಾಡಿ ಉಡ ಕಲ್ಲಿನ ಮೇಲೆ ಅಂಟಿಕೊಳ್ಳಲು ಆಸ್ಪದ ಕೊಡದಂತೆ ಕೋಟೆಯ ರಕ್ಷಣೆ ಮಾಡಲಾಗುತ್ತದೆ.
DSC03016
ವೀರಭದ್ರ ಬಾಗಿಲು
chitradurga
ವೀರಭದ್ರ ದೇವಾಲಯ
DSC03018
ಉಡ ಅಂಟಿಕೊಳ್ಳದಂತೆ ಪಟ್ಟಿ ಬಳಿಯುತ್ತಿದ್ದ ಜಾಗ
ಮುಂದೆ ಸಾಗಿದಂತೆ ಐದನೆಯ ಬಾಗಿಲು ಸಿದ್ಧಯ್ಯನ ಬಾಗಿಲು ಮತ್ತು ಆರನೇ ಬಾಗಿಲಾಗಿ ಉಚ್ಛಂಗಿ ಬಾಗಿಲು ಮತ್ತು ಕೊನೆಯ ಏಳನೇ ಬಾಗಿಲಾಗಿ ಕಸ್ತೂರಿ ರಂಗಪ್ಪ ಬಾಗಿಲು. ಈ ಕೊನೆಯ ಬಾಗಿಲ ವಿಶೇಷತೆ ಏನೆಂದರೆ ಇದರ ಕಂಬಗಳಲ್ಲಿ ಕಳಸದ ಕೆತ್ತನೆಯನ್ನು ಕಾಣಬಹುದು ಅದನ್ನು “ಪೂರ್ಣಕುಂಭ ಮಂಗಳ ಕಳಸ” ಎಂದು ಕರೆಯುತ್ತಾರೆ ಇದರ ಶೈಲಿಯು ಹಿಂದೂ ಇಸ್ಲಾಮಿಕ್ ಶಿಲ್ಪಕಲೆಯ ಆಕಾರದಲ್ಲಿರುವುದು ಒಂದು ವಿಶಿಷ್ಟ ಸಂಗತಿ.
chitradurga 3
ಕಸ್ತೂರಿ ರಂಗಪ್ಪನ ಬಾಗಿಲು ಹಿಂದೂ ಇಸ್ಲಾಮಿಕ್ ಶೈಲಿಯಲ್ಲಿ
DSC03025
ಪೂರ್ಣಕುಂಭ ಮಂಗಳ ಕಳಸ
ಈ ಬಾಗಿಲಿನ ಒಳಗೆ ಪ್ರವೇಶಿಸುತ್ತಿದಂತೆ ಎಡಭಾಗಕ್ಕೆ ನೋಡಿದರೆ ಪ್ರಾಚೀನ ಕಾಲದಲ್ಲಿ ನಾಣ್ಯಗಳ ಮೇಲೆ ಬರುತ್ತಿದ್ದ ಚಿತ್ರಗಳ ಒಂದಂಚು ಕಾಣಬಹುದು. ಇದು ಕೋಟೆಯ ಆಳಿದ ರಾಜರ ಉಲ್ಲೇಖಿಸಿದ ಒಂದು ಗುರುತು ಕೂಡ ಹೌದು ಇದನ್ನು ಹೇಳುವುದಕ್ಕಿಂತ ನೋಡುವುದರಲ್ಲಿ ಬಹಳ ಅರ್ಥವಿದೆ ಏಕೆಂದರೆ ಅದನ್ನು ನೋಡಿದ ಕೂಡಲೆ ಆ ಕಾಲದ ರಾಜರ ಗೌರವ ಘನತೆಗಳು ಕಣ್ಣ ಮುಂದೆ ಬಂದು ಒಂದು ಕ್ಷಣ ಮಿಂಚಿನಂತೆ ಬಂದು ಹೋಗುತ್ತದೆ.
DSC03038
ನಾಣ್ಯಗಳ ಕಲ್ಲಿನ ಕೆತ್ತನೆ 1
DSC03036
ನಾಣ್ಯಗಳ ಕಲ್ಲಿನ ಕೆತ್ತನೆ 2

 

ಇದರ ಮುಂಬದಿಯೇ ಒಂದು ಬೃಹದಾಕಾರವಾಗಿರುವ ಕಲ್ಲನ್ನು ಸಹ ಕಾಣಬಹುದಾಗಿದೆ ಈ ಕಲ್ಲಿನ ಮಹತ್ವ ಏನೆಂದರೆ ಈ ಇಡೀ ಕೋಟೆ ಕಟ್ಟಿದ ಕಲ್ಲುಗಳು ಎಲ್ಲಿಂದಲೋ ತಂದು ಕೋಟೆ ಕಟ್ಟಿದಂತೂ ಅಲ್ಲ ಬದಲು ಅಲ್ಲೇ ಇರುವ ಕಲ್ಲುಗಳನ್ನು ಕಡಿದು ಅದರ ಬಳಕೆಗೆ ಬೇಕಂತೆ ಉಪಯೋಗಿಸಿ ಕೋಟೆಯ ನಿರ್ಮಾಣ ಮಾಡಲಾಗಿದೆ ಹೀಗೆ ಕಾಣುವ ಎಷ್ಟೋ ದೊಡ್ಡ ದೊಡ್ಡ ಕಲ್ಲುಗಳು ಇಲ್ಲಿನ ಇತಿಹಾಸವನ್ನು ಹೇಳುತ್ತದೆ. ಹೀಗೆಯೇ ಕೋಟೆಯ ಮುಖ್ಯ ಸ್ಥಳ ಸೈನಿಕರಿಗೆ ಬೇಕಾದ ಉಪಯುಕ್ತ ಸ್ಥಳ ಅಂದರೆ ಗರಡಿ ಮನೆಯ ನಿರ್ಮಾಣ ಮಾಡಿರುವುದು ಈ ಬೃಹದಾಕಾರವಾದ ಒಂದು ಕಲ್ಲಿನಿಂದಲೆ. ಈ ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವ ಕಲ್ಲಿನ ಮೇಲೆ ಉಳಿ ಪೆಟ್ಟು ಅಥವ ಒಡೆದ ಗುರುತುಗಳಿವೆ ಅದೇನೆಂದರೆ ಕಲ್ಲು ಸಮಭಾಗವಾಗುವಂತೆ ಅದಕ್ಕೆ ಬೇಕಾದ ಅಸ್ತ್ರಗಳನ್ನು ಬಳಸಿ ಈ ಬೃಹದಾಕಾರವಾದ ಬಂಡೆಯನ್ನು ಸೀಳಿ ಅದರ ಅರ್ಧ ಭಾಗವನ್ನು ಸಂಪೂರ್ಣವಾಗಿ ಗರಡಿ ಮನೆಯ ಸಂಸ್ಥಾಪನೆಗೆ ಮೀಸಲು ಮಾಡಲಾಯಿತು. ಈಗಿನ ತಂತ್ರಜ್ಞಾನವು ಎಷ್ಟೇ ಬೆಳೆದರು ಆಗಿನ ಕಾಲದ ಅದ್ಬುತಗಳನ್ನು ಸೃಷ್ಟಿಸುವುದು ಅಸಾಧ್ಯ. ತಂತ್ರಜ್ಞಾನ ಮುಂದುವರಿದಿದೆ ಆದರೆ ರಾಜರ ಚಿಂತನೆಗಳಿಗೆ ಸರಿಸಾಟಿಯಾಗದೆ ಅದರ ಮೌಲ್ಯಗಳಲ್ಲಿ ಹಿಂದುಳಿದಿದೆ. ಈ ಕೋಟೆಯ ಸುತ್ತ 32 ಕಾವಲು ಗೋಪುರಗಳಿದ್ದರೆ ಪ್ರತಿಯೊಂದು ಕಡೆಯಲ್ಲಿಯೂ ಗನ್ ಪಾಯಿಂಟ್ ಗಳನ್ನ ಕಾಣಬಹುದು. ಕೋಟೆಯು ಕಲ್ಲಿನಿಂದಲೇ ಕಟ್ಟಿದ್ದರು ಕೂಡ ಅದನ್ನು ಕಾವಲು ಕಾಯುವುದಕ್ಕೆ ಸೈನಿಕರು ಬೇಕೇ ಬೇಕು ಅದು ಸೈನಿಕರ ಮಹತ್ವ ಎಂದರೆ ತಪ್ಪಾಗಲಾರದು
DSC03043
ಸಮಭಾಗವಾಗಿ ಸೀಳಿದ ಕಲ್ಲು
DSC03140
ಗರಡಿ ಮನೆ
chitradurga 1
ಕಾವಲು ಗೋಪುರ
chitradurga 2
ಗನ್ ಪಾಯಿಂಟ್
ಈ ಕೋಟೆಗೆ ಚಿತ್ರದುರ್ಗ ಎಂಬ ಹೆಸರು ಬರುವುದಕ್ಕೂ ಒಂದು ಕಾರಣವಿದೆ. ಕೋಟೆಯಲ್ಲಿ ನಿಂತು ಸುತ್ತ ಮುತ್ತ ಕಣ್ಣಾಡಿಸಿದರೆ ಕೆಲವೊಂದಷ್ಟು ದೊಡ್ಡ ದೊಡ್ಡ ಕಲ್ಲುಗಳನ್ನು ಕಾಣಬಹುದು ಅದು ಒಂದೊಂದು ಪ್ರಾಣಿಯ ಆಕಾರ ಅಥವ ಯಾವುದಾದರು ವಸ್ತುವಿನ ಪ್ರತಿಬಿಂಬದಂತೆ ಕಾಣುತ್ತದೆ. ಒಂದು ಕಡೆ ಕಲ್ಲು ಆನೆಯ ರೂಪದಲ್ಲಿ ಕಂಡರೆ ಮತ್ತೊಂದು ಕಡೆ ಕಪ್ಪೆಯ ಆಕಾರದಲ್ಲಿ, ಮತ್ತೊಂದು ಕಡೆ ಹಡಗು ಹಾಗು ಮೊಲಗಳಂತೆ ಕಾಣುತ್ತದೆ, ಈ ಕಾರಣದಿಂದಲೇ ಏಳು ಸುತ್ತಿನ ಕೋಟೆಗೆ ಚಿತ್ರಕಲಾದುರ್ಗ ಎಂಬ ಹೆಸರು ಬಂತು ಆದರೆ ಅದು ಕಾಲ ಉರುಳಿದಂತೆ ಹೆಸರುಗಳು ಕೂಡ ಹೊಸ ರೂಪತಾಳತೊಡಗಿತು. ಚಿತ್ರಕಾಲದುರ್ಗವು ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಚಿತ್ತಲ್ ದರ್ಗ ಎಂದು ಕರೆಯತೊಡಗಿದರು. ಸ್ವಾತಂತ್ರ ಬಂದ ನಂತರ ಜನರ ಮಾತಿನ ಶೈಲಿಯಲ್ಲಿ ದುರ್ಗ ಎಂದು ಕರೆಯತೊಡಗಿದರು. ಅದರಂತೆಯೇ ಸರ್ಕಾರದ ಎಲ್ಲ ದಾಖಲೆಗಳಲ್ಲಿ ಚಿತ್ರದುರ್ಗ ಎಂದು ಉಲ್ಲೇಖವಾಗಿದೆ. ಹೀಗೆ ಹೆಸರಿಗೆ ಒಂದು ಇತಿಹಾಸ ಹೊಂದಿರುವ ಅದ್ಬುತ ಸ್ಥಳ ಚಿತ್ರದುರ್ಗ.
DSC03046
ಆನೆ ಆಕಾರದ ಕಲ್ಲು
chitradurga 4
ಹಡಗಿನ ಆಕಾರದ ಕಲ್ಲು
DSC03050
ಮೊಲದ ಆಕಾರದ ಕಲ್ಲು
DSC03047
ಕಪ್ಪೆಯ ಆಕಾರದ ಕಲ್ಲು
ಮುಂದೆ ನಡೆದಂತೆ ಕಾಣುವುದು ಒಂದು ದೇವಸ್ಥಾನ. ಇದು ಕೋಟೆಯ ಏಳು ಬಾಗಿಲುಗಳು ದಾಟಿ ಬಂದಮೇಲೆ ಕಾಣುವ ಪೂರ್ವಾಭಿಮುಖವಾಗಿ ನಿಂತಿರುವ ಏಕಾಂತೇಶ್ವರಿ ದೇವಾಲಯ ಇದು ಬಹಳ ಮುಖ್ಯ ಹಾಗು ಶ್ರೇಷ್ಟ ದೇವಾಲಯವು ಕೂಡ ಆಗಿದೆ. ಕೋಟೆಯ ಆಳ್ವಿಕೆಯ ಸಮಯದಲ್ಲಿ ಪ್ರತಿಯೊಬ್ಬ ಸೈನಿಕನು ಕೂಡ ಪ್ರತಿದಿನ ಬಂದು ದೇವರ ಆಶೀರ್ವಾದ ಪಡೆದು ಮುಂದಿನ ಕೆಲಸ ನಡೆಸಬೇಕು ಎಂಬ ನಿಯಮವು ಕೂಡ ಉಂಟು. ಆದರೆ ಈ ದೇವಾಲಯಕ್ಕೆ ಪ್ರತಿದಿನ ಒಬ್ಬ ಮಹಿಳೆ ಊರಿನಿಂದ ದೇವಾಲಯಕ್ಕೆ ಹಾಲು ಕೊಡುವ ರೂಡಿಯು ಇತ್ತು ಆದರೆ ಅದರ ಉಲ್ಲೇಖವು ಬಹಳ ಕಡಿಮೆ
ಏಕಾಂತೇಶ್ವರಿ ದೇವಾಲಯದ ಹಿಂಭಾಗಕ್ಕೆ ಪಾಲ್ಗುಣೇಶ್ವರ ದೇವಾಲಯವಿದೆ. ಈ ದೇವಾಲಯದ ಎದುರಿಗೆ ಆದಂತೆ ಸಂಪಿಗೆ ಸಿದ್ದೇಶ್ವರ ದೇವಾಲಯವು ಇದೆ. ಪಾಲ್ಗುಣೇಶ್ವರ ದೇವಾಲಯವು ಕೋಟೆಯ ಮೂಲ ಮತ್ತು ಪ್ರಧಾನ ದೇವಾಲಯವಾಗಿದೆ. ರಾಜರ ಆಳ್ವಿಕೆಯ ಸಮಯದಲ್ಲಿ ಪ್ರತಿವರ್ಷವೂ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ದೇವಾಲಯದ ಮುಂದೆ ಈಗಲೂ ಕೂಡ ದೀಪದ ಕಂಬ ಮತ್ತು ಉಯ್ಯಾಲೆ ಕಂಬಗಳು ಕಾಣಬಹುದಾಗಿದೆ ಇದರ ವಿಶೇಷತೆ ಏನೆಂದರೆ ಜಾತ್ರೆಯ ಸಮಯದಲ್ಲಿ ರಾಜರು ಬಂದು ದೇವರಿಗೆ ಪೂಜೆ ಸಲ್ಲಿಸಿದ ನಂತರ ಒಬ್ಬನನ್ನು ಆಯ್ಕೆ ಮಾಡಿ ದೀಪದ ಕಂಬದ ಮೇಲೆ ಇರುವ ಸಣ್ಣ ಕಲ್ಲುಗಳ ಸಹಾಯದಿಂದ ಕಂಭದ ಮೇಲೆ ಹತ್ತಿ ದೀಪ ಹಚ್ಚುತ್ತಾರೆ. ಈ ದೀಪವು ಸುತ್ತಮುತ್ತಲಿನ ಹಳ್ಳಿಗೆ ರಾಜರು ಪೂಜೆ ಮುಗಿಸಿದ್ದಾರೆ ಎಂದು ಸೂಚನೆ ಕೊಡುತ್ತದೆ. ಈ ದೀಪದ ಜ್ಯೋತಿ ಬೆಳಗಿದ ನಂತರವಷ್ಟೇ ಹಳ್ಳಿಯ ಜನ ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚಿ ಪೂಜೆ ಮಾಡಿ ಹಬ್ಬ ಆಚರಿಸುತ್ತಿದ್ದರು ಇದು ಪುರಾತನ ಕಾಲದಿಂದಲೂ ನಡೆದು ಬಂದಿರುವ ಪದ್ಧತಿ. ಇದರ ಜೊತೆಯಲ್ಲೇ ಇರುವ ಉಯ್ಯಾಲೆ ಕಂಬವು ಕೂಡ ದೇವರಿಗೆಂದೇ ಮೀಸಲಾಗಿಟ್ಟಿದ್ದರು. ಉತ್ಸವ ಮೂರ್ತಿ ಅಥವ ಮೆರವಣಿಗೆ ದೇವರು ಎಂದು ಏನು ಕರೆಯುತ್ತೀವೋ ಆ ದೇವರನ್ನು ಆ ಜಾಗದಲ್ಲಿ ತಂದು ಕೂರಿಸಿ ಉಯ್ಯಾಲೆ ತೂಗಿ ನಂತರ ಉತ್ಸವಕ್ಕೆ ಕರೆದೊಯುತ್ತಿದ್ದರು. ಈ ಎರಡು ಕಂಬಗಳ ಪಕ್ಕದಲ್ಲಿ ಹೊಕಳಿ ಹೊಂಡ ಕೂಡ ಕಾಣಬಹುದು. ಹೊಕಳಿ ಹಬ್ಬದ ಸಮಯದಲ್ಲಿ ಈ ಹೊಂಡದಲ್ಲಿ ಬಣ್ಣ ನೀರು ಮಿಶ್ರಣ ಮಾಡಿ ಹೊಕಳಿ ಆಟ ಆಡುವುದು ಕೂಡ ವಾಡಿಕೆಯಾಗಿತ್ತು.
chitradurga 5
ಉಯ್ಯಾಲೆ ಕಂಭ
chitradurga 6
ದೀಪದ ಕಂಭ
chitradurga 12
ಸಂಪಿಗೆ ಸಿದ್ದೇಶ್ವರ ದೇವಾಲಯದ ಹೆಬ್ಬಾಗಿಲು
ಹಾ ಈ ಎಲ್ಲದರ ಮಧ್ಯೆ ಒಂದು ಮಾತು ಮರೆತ್ತಿದ್ದೆ. ಕೋಟೆಯಲ್ಲಿ ಕೆಲವೊಂದು ಕಡೆ ಕಲ್ಲಿನ ಮೇಲೆ ಮೀನಿನ ಚಿತ್ರದ ಕೆತ್ತನೆಯನ್ನು ಕಾಣಬಹುದು ಏನಿದು ಮೀನು ಎಂದು ಆಶ್ಚರ್ಯವಾಗಬಹುದು. ಇದರ ಅರ್ಥ ಸೈನಿಕರು ಪ್ರತಿನಿತ್ಯ ಎಲ್ಲಾ ದಿಕ್ಕಿನಿಂದಲೂ ಕೋಟೆಯನ್ನು ಕಾಯುತ್ತಿರಬೇಕು ಹಾಗು ಕೋಟೆಯ ಉದ್ದಗಲ ತುಂಬಾ ದೊಡ್ಡದಾಗಿರುವ ಕಾರಣ ನೀರಿನ ಅವಶ್ಯಕತೆ ತುಂಬಾ ಅಗತ್ಯ ಆ ಕಾರಣದಿಂದ ಕೆಲವೊಂದು ಕಡೆ ಕುಡಿಯುವ ನೀರಿಗೆ ಹೊಂಡ ಮಾಡಿದ್ದರು ಮತ್ತು ಆ ಹೊಂಡಕ್ಕೆ ದಾರಿ ತೋರುವಂತೆ ಕಲ್ಲಿನ ಮೇಲೆ ಮೀನಿನ ಕೆತ್ತನೆ ಮಾಡುತ್ತಿದ್ದರು, ಮೀನು ಯಾವ ದಿಕ್ಕಿಗೆ ಮುಖ ಮಾಡಿರುತ್ತದೆಯೋ ಆ ದಿಕ್ಕಿನಲ್ಲಿ ನೀರು ಸಿಗುವುದು ಎಂಬ ಸೂಚನೆ ಕೊಡುತ್ತದೆ, ಅದರಂತೆಯೇ ಎರಡು ಮೀನುಗಳು ಮುಖಾಮುಖಿ ಎದುರಾಗಿರುವ ಕಲ್ಲಿನ ಕೆತ್ತನೆಯು ಕುಡಿಯುವ ನೀರಿನ ಹೊಂಡದ ಸೂಚನೆಯಾಗಿರುತ್ತದೆ. ಹೀಗೆ ಬಹಳ ಕಟ್ಟುನಿಟ್ಟಾಗಿ ಮತ್ತು ಅರ್ಥಗರ್ಭಿತವಾಗಿ ಕೋಟೆಯನ್ನು ಕಟ್ಟಿರುವುದು ಅಚ್ಚರಿಯ ಸಂಗತಿ.
DSC03054
ಮೀನಿನ ಕೆತ್ತನೆ
DSC03052
ನೀರು ಸಿಗುವ ಜಾಗ
ಇನ್ನು ಮುಂದೆ ಸಾಗಿದಂತೆ ಎಡಭಾಗಕ್ಕೆ ಹಿಡಿಂಬೇಶ್ವರ ದೇವಾಲಯವಿದೆ. ಈ ದೇವಾಲಯದ ಹಿಂದೆಯೂ ಒಂದು ಇತಿಹಾಸವಿದೆ. ಭಾರತದಲ್ಲಿ ಮೊದಲ ಹಿಡಿಂಬೇಶ್ವರ ದೇವಾಲಯವು ಹಿಮಾಚಲ ಪ್ರದೇಶದಲ್ಲಿದ್ದರೆ ಎರಡನೆಯದ್ದು ಚಿತ್ರದುರ್ಗದ ಕೋಟೆಯೊಳಗೆ ಕಾಣಬಹುದು. ಹಿಡಿಂಬ ಎಂಬ ಒಬ್ಬ ಬೃಹದಾಕಾರವಾದ ಮೈಕಟ್ಟನ್ನು ಹೊಂದಿದ್ದ ರಾಕ್ಷಸನು ತನ್ನ ಸಹೋದರಿ ಹಿಡಿಂಬೆಯ ಜೊತೆ ವಾಸವಾಗಿದ್ದ, ಪಂಚ ಪಾಂಡವರಲ್ಲಿ ಒಬ್ಬನಾದ ಭೀಮನು ಹಿಡಿಂಬ ನ ಜೊತೆ ಕಾಳಗದಲ್ಲಿ ಗೆದ್ದು ಅವನು ಸತ್ತ ನಂತರ ತನ್ನ ತಂಗಿ ಹಿಡಿಂಬಿ ಯನ್ನು ಮದುವೆಯಾಗಿ ಘಟೋತ್ಗಜ ಎಂಬ ಮಗುವಿಗೆ ಜನನ ನೀಡುತ್ತಾರೆ ಎಂಬ ಉಲ್ಲೇಖವು ಮಹಾಭಾರತದಲ್ಲಿ ಕಾಣಬಹುದು ಮತ್ತು ಅದರಂತೆಯೇ ಹಿಡಿಂಬೇಶ್ವರ ದೇವಾಲಯದ ಮುಂದೆ ಇರುವ ಕಂಬದಲ್ಲಿ ಏಕಶಿಲೆ ಮತ್ತು ಅದರ ಕುರುಹುಗಳನ್ನು ಕೂಡ ಕಾಣಬಹುದು.
ಇನ್ನು ಮುಂದೆ ಸಾಗಿದಂತೆ ತುಪ್ಪದ ಕೊಳ ಹಾಗು ಮೃಗರಾಜೇಂದ್ರ ಮಠ ಕೂಡ ಕಾಣಬಹುದು. ತುಪ್ಪದ ಕೊಳದ ಬಗ್ಗೆ ನಂತರ ಹೇಳುತ್ತೇನೆ. ಸೈನಿಕರು ಮತ್ತು ಕೋಟೆಯನ್ನೆ ನಂಬಿ ಬದುಕುತ್ತಿದ್ದ ಎಷ್ಟೋ ಜನರಿಗೆ ಮೃಗರಾಜೇಂದ್ರ ಮಠವು ಆಶ್ರಯ ನೀಡುತ್ತಿತ್ತು. ನಿತ್ಯ ಮಠದಲ್ಲಿ ಅನ್ನದಾಸೋಹ ಮತ್ತು ವಿಧ್ಯಾಭ್ಯಾಸ ಹಾಗು ಪೂಜೆ ಇಂತಹ ಹಲವು ಚಟುವಟಿಕೆಗಳು ಪುರಾತನ ಕಾಲದಲ್ಲಿ ನಡೆಯುತ್ತಿತ್ತು. ಇದರ ಮುಂಭಾಗಕ್ಕೆ ನಾಣ್ಯ ತಯಾರಿಸುವ ಒಂದು ಕಛೇರಿ ಕೂಡ ಇತ್ತು. ಕಥೆ ಶುರುವಾದಾಗ ಕಸ್ತೂರಿರಂಗಪ್ಪನ ಬಾಗಿಲ ಬಳಿ ಒಂದು ನಾಣ್ಯದ ಕೆತ್ತನೆ ಬಗ್ಗೆ ಹೇಳಿದ್ದೆ ನೆನಪಿದೆಯಾ? ಹಾ ಅದೇ ನಾಣ್ಯ ತಯಾರಿಸುತ್ತಿದ್ದ ಜಾಗ ಅದು. ಅಲ್ಲಿ ತಯಾರಿಸಿದ ನಾಣ್ಯಗಳನ್ನು ರಾಜರು ಜನರ ಒಳಿತಿಗಾಗಿ ಬಳಸುತ್ತಿದ್ದರು ಮತ್ತು ಮುದ್ರಿಸಿದ ನಾಣ್ಯಗಳನ್ನು ಶೇಖರಣೆಗೆಂದೇ ಒಂದು ಸೂಕ್ತವಾದ ಜಾಗ ಬೇಕಾಗಿತ್ತು ಅದರ ಹುಡುಕಾಟದಲ್ಲೇ ಸಿಕ್ಕಿದ್ದು ದೇವರ ಸನ್ನಿಧಿ. ಏನಿದು ದೇವರ ಸನ್ನಿಧಿ ಅಂತ ಯೋಚಿಸುತ್ತಿದ್ದೀರ? ಹಾ ಇದರಲ್ಲೊಂದು ಮರ್ಮವಿದೆ ಅದೇನೆಂದರೆ ಕೋಟೆಯ ಮೇಲೆ ಯಾರೇ ಆಕ್ರಮಣ ಮಾಡಿದರು ದೇವರ ಸನ್ನಿಧಿಯಲ್ಲಿ ಇರುವ ಆಭರಣಗಳನ್ನು ದೋಚುತ್ತಿದ್ದರೆ ಹೊರತು ದೇವರ ವಿಗ್ರಹ ಮಾತ್ರ ಭಿನ್ನ ಮಾಡುತ್ತಿರಲಿಲ್ಲ ಆದರೆ ಬೇರೆ ಧರ್ಮದವರು ಆಕ್ರಮಣ ಮಾಡಿದರೆ ವಿಗ್ರಹಗಳನ್ನು ಒಡೆದುಹಾಕುತ್ತಿದ್ದರು ಅದರ ಕಥೆ ಬೇರೆ ಬಿಡಿ. ಆದರೆ ಸಾಮಾನ್ಯವಾಗಿ ಇನ್ನೊಬ್ಬ ರಾಜ ಆಕ್ರಮಣ ಮಾಡಿದಾಗ ವಿಗ್ರಹಗಳನ್ನು ಮುಟ್ಟುತ್ತಿರಲಿಲ್ಲ ಅದು ರಾಜ ಧರ್ಮವಾಗಿತ್ತು ಆ ಕಾರಣದಿಂದ ಪುಟ್ಟ ದೇವರ ಗುಡಿಯೊಂದನ್ನು ನಿರ್ಮಿಸಿ ಆ ದೇವರ ಕೆಳಗೆ ಒಂದು ಜಾಗ ಮಾಡಿ ಅಲ್ಲಿ ಮುದ್ರಣ ಮಾಡಿದ ನಾಣ್ಯಗಳನ್ನು ಶೇಖರಿಸಿ ಇಡುತ್ತಿದ್ದರು. ಇದು ರಾಜರಿಗೆ ಮಾತ್ರ ತಿಳಿದಿದ್ದ ನಿಗೂಢ ಸತ್ಯ. ಈ ಒಂದು ಪುಟ್ಟ ಗುಡಿ ಈಗಲೂ ಕೂಡ ಕೋಟೆಯ ಒಳಗೆ ಕಾಣಬಹುದಾಗಿದೆ.
chitradurga 7
ಹಿಡಿಂಬೇಶ್ವರ ದೇವಾಲಯ
chitradurga 9
ಮೃಗರಾಜೇಂದ್ರ ಮಠ
chitradurga 10
ನಾಣ್ಯಗಳನ್ನು ತಯಾರಿಸುತ್ತಿದ್ದ ಕಛೇರಿ
DSC03067
ನಾಣ್ಯಗಳನ್ನು ಕೂಡಿ ಇಡುತ್ತಿದ್ದ ದೇವರ ಗುಡಿ

 

ಇನ್ನು ತುಪ್ಪದ ಕೊಳಕ್ಕೆ ಬಂದರೆ ಅದು ಒಂದು ರಾಜತಾಂತ್ರಿಕ ಗೆಲುವಿಗಾಗಿ ಬಳಸುತ್ತಿದ್ದ ತಂತ್ರಗಳಾಗಿತ್ತು. ಅದೇನಪ್ಪ ಅಂದ್ರೆ ಈ ದೇವಾಲಯ ಹಾಗು ನಾಣ್ಯ ಮುದ್ರಿತ ಸ್ಥಳಗಳಲ್ಲಿ ಆಕ್ರಮಣ ಹೆಚ್ಚು ಆದ್ದರಿಂದ ಇಲ್ಲಿ ಭದ್ರತೆ ಕೂಡ ಅಷ್ಟೇ ಹೆಚ್ಚಾಗಿರಬೇಕು. ಆದ ಕಾರಣ ಈ ಜಾಗದಲ್ಲಿ ಕೊಳವೊಂದನ್ನು ನಿರ್ಮಿಸಿ ಅದರಲ್ಲಿ ತುಪ್ಪವನ್ನು ಶೇಖರಿಸಿ ಇಡುತ್ತಿದ್ದರು. ಕೋಟೆಯ ಮೇಲೆ ಆಕ್ರಮಣವಾದರೆ ಎಲವನ್ನು ಕಳೆದುಕೊಂಡಾಗ ರಾಜನಿಗೆ ಏನು ಉಳಿದಿಲ್ಲ ಎಂದು ತಿಳಿದ ನಂತರ ಪ್ರಾಣ ಉಳಿಸಿಕೊಳ್ಳಲು ತುಪ್ಪದ ಕೊಳ ಉಪಯೋಗಿಸುತ್ತಿದ್ದರು. ಎಲ್ಲಾ ಸೈನಿಕರು ಸೀಸೆ (ಬಾಟಲಿ) ಯಲ್ಲಿ ತುಪ್ಪವನ್ನು ತುಂಬಿಕೊಂಡು ಕೋಟೆಯ ಇಳಿಜಾರಿನ ಬಂಡೆಯ ಮೇಲೆ ತಪ್ಪಿಸಿಕೊಂಡು ಕೋಟೆಯಿಂದ ಆಚೆಗೆ ಹೋಗುವ ಸಮಯದಲ್ಲಿ ಬಾಟಲಿಯಲ್ಲಿ ಇರುವ ತುಪ್ಪವನ್ನು ಅವರು ಬಂಡೆಯ ಮೇಲೆ ಹತ್ತುತ್ತಿದಂತೆ ಕೆಳಗೆ ಚೆಲ್ಲುತ್ತಾ ಹತ್ತುತ್ತಾರೆ ಆದ್ದರಿಂದ ಆಕ್ರಮಣ ಮಾಡಿದ ಸೈನಿಕರು ಮತ್ತೆ ಆ ಬಂಡೆಯ ಮೇಲೆ ಹತ್ತುವಾಗ ಜಾರಿಬೀಳುವಂತಾಗುತ್ತದೆ ಇದರಿಂದ ಕೋಟೆಯ ಆಕ್ರಮಣದಿಂದ ತಪ್ಪಿಸಿಕೊಳ್ಳಲು ರಾಜತಾಂತ್ರಿಕವಾಗಿ ಕೊನೆಯ ಅಸ್ತ್ರವೆಂದು ಬಳಸುತ್ತಿದ್ದರು. ಇದಕ್ಕೆ ಎಣ್ಣೆಯನ್ನೇ ಬಳಸಬಹುದು ಅಲ್ಲವೇ ಎಂದು ಪ್ರಶ್ನೆ ಮೂಡುವುದು ಸಹಜ ಅದನ್ನು ಬಳಸದಿರುವ ಕಾರಣ ಆ ಸಮಯಕ್ಕೆ ಆಗಲೇ ಎಣ್ಣೆಯ ಅಸ್ತ್ರ ಬಳಸಿದರೆ ಅದರಿಂದ ತಪ್ಪಿಸಿಕೊಳ್ಳುವ ತಂತ್ರವು ಎಲ್ಲರಿಗು ತಿಳಿದಿತ್ತು ಹಾಗಾಗಿ ತುಪ್ಪದ ಹೊಸ ಗಾಳ ಬಳಸುತ್ತಿದ್ದರು.
chitradurga 8
ತುಪ್ಪದ ಕೊಳ
ಇನ್ನು ಮುಂದೆ ಸಾಗಿದಂತೆ ಎರಡು ಹೊಂಡಗಳು ಸಿಗುತ್ತದೆ. ಅದರ ಹೆಸರು ಅಕ್ಕ ತಂಗಿ ಹೊಂಡ ಎಂದು ಕರೆಯುತ್ತಾರೆ ಇದಕ್ಕೆ ಅಕ್ಕ ತಂಗಿ ಎಂಬ ಹೆಸರು ಬರುವುದಕ್ಕೆ ಒಂದು ಕಾರಣಗಳಿವೆ. ಚರಿತ್ರೆಯಲ್ಲಿ ಅಕ್ಕ ತಂಗಿಯರ ಮುಖ್ಯಪಾತ್ರವಿದ್ದು ರಾಜರು ಬೇಕೆಂದೆಲೆ ಅವರ ಹೆಸರು ಚಿರಸ್ಮರಣಿಯಾಗಲೆಂದು ಈ ಎರಡು ಹೊಂಡಕ್ಕೆ ಅಕ್ಕ ತಂಗಿ ಹೊಂಡ ಎಂದು ಹೆಸರು ಇಟ್ಟರು. ಈ ಹೊಂಡದ ವಿಶೇಷತೆ ಏನೆಂದರೆ ಎಷ್ಟು ಮಳೆಯಾದರು ಎಂದಿಗೂ ತುಂಬದಂತ ಹೊಂಡಗಳು ಇವು. ಮೇಲಿನ ಹೊಂಡಕ್ಕೆ ಅಕ್ಕ ಹೊಂಡ ಮತ್ತು ಕೆಳಗಿನದಕ್ಕೆ ತಂಗಿ ಹೊಂಡ ಎಂದು ಕರೆಯುತ್ತಾರೆ. ಮಳೆ ಎಷ್ಟೇ ಜೋರಾಗಿ ಸುರಿದರು ಹೊಂಡದಲ್ಲಿ ನೀರು ಹೆಚ್ಚುತ್ತಿದಂತೆ ಕೆಳಗಿನ ಹೊಂಡಕ್ಕೆ ನೀರು ಹಾಳಾಗದಂತೆ ಹರಿದು ಬರುವುದಕ್ಕೆ ಒಂದು ಕಾಲುವೆ ರೂಪಿಸಿದ್ದರು ಇದರ ಕಾರಣವಾಗಿ ಹೊಂಡಗಳು ತುಂಬದಂತೆ ಹಾಗು ಬತ್ತಿಹೋಗದಂತೆ ವರ್ಷಗಟ್ಟಲೆ ನೀರು ಶೇಖರಣೆ ಮಾಡುತ್ತಿದ್ದರು. ಈ ಹೊಂಡಗಳಲ್ಲಿ ದೇವಸ್ಥಾನಗಳು ಕೂಡ ಇದೆ ಆದರೆ ಕೋಟೆಯ ಮೇಲೆ ಹೈದರಾಲಿ ಸೈನ್ಯ ಆಕ್ರಮಣ ಮಾಡಿದಾಗ ದೇವರುಗಳ ವಿಗ್ರಹಗಳನ್ನು ನಾಶ ಮಾಡಿದ ಕಾರಣ ಪೂಜೆ ಸಲ್ಲಿಸುವುದು ನಿಲ್ಲಿಸಲಾಯಿತು. ಹಿಂದೂ ಸಂಪ್ರದಾಯದಲ್ಲಿ ಭಿನ್ನವಾದ ವಿಗ್ರಹಗಳಿಗೆ ಪೂಜೆ ಸಲ್ಲಿಸಬಾರದು ಎಂಬ ವಾಡಿಕೆ ಇದೆ.
DSC03073
ಅಕ್ಕ ಹೊಂಡ
DSC03075
ತಂಗಿ ಹೊಂಡದಲ್ಲಿ ದೇವಾಲಯ
ಟಿಪ್ಪು ಸುಲ್ತಾನರ ಆಳ್ವಿಕೆಯ ಸಮಯದಲ್ಲಿ ಒಂದು ಕಚೇರಿಯನ್ನು ನಿರ್ಮಿಸಲಾಯಿತು ಇದಕ್ಕೆ ಸರಿಸಮಾನವಾಗಿ ಒಂದು ವಿಸ್ತಾರವಾದ ಆಯುಧ ಶಾಲೆಯನ್ನು ಕೂಡ ನಿರ್ಮಾಣ ಮಾಡಲಾಯಿತು. ಇದರಲ್ಲಿ ಒಂದು ದೊಡ್ಡದಾದ ಮದ್ದು ತಯಾರಿಸುವ ಕಲ್ಲನ್ನು ಕೂಡ ತಯಾರಿ ಮಾಡಲಾಯಿತು ಮತ್ತು ಇದಕ್ಕೆ “ಮದ್ದು ಬೀಸುವ ಕಲ್ಲು” ಎಂದು ಹೆಸರಿಡಲಾಯಿತು. ಈ ಜಾಗದಲ್ಲೇ ಸಿಡಿಮದ್ದು ಮತ್ತು ಕೋವಿಮದ್ದುಗಳನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಸಮಯದಲ್ಲಿ ತಯಾರಿ ಮಾಡುತ್ತಿದ್ದರು.
ಅಕ್ಕ ತಂಗಿ ಹೊಂಡದಿಂದ ಹರಿದು ಬರುತ್ತಿದ್ದ ಶುದ್ಧ ನೀರು ಕೋಟೆಯ ಕೊನೆಯ ವರೆಗು ತಲುಪುತಿತ್ತು ಆ ಕೊನೆಯ ಜಾಗವೇ ಸೈನಿಕರು ವಾಸವಾಗಿದ್ದ ಸ್ಥಳವಾಗಿತ್ತು. ಅದರಲ್ಲಿ ಒನಕೆ ಓಬ್ಬವ್ವಳ ಮನೆಯು ಕೂಡ ಒಂದು.
ಹೌದು ಒನಕೆ ಓಬ್ಬವ್ವ ಎಂಬ ವೀರ ಮಹಿಳೆ ವಾಸವಿದ್ದ ಒಂದು ಗುಹೆ ಇದೇ ಜಾಗದಲ್ಲಿ ಈಗಲೂ ಕೂಡ ಕಾಣಬಹುದಾಗಿದೆ. ವನಕೆ ಓಬ್ಬವ್ವ ಒಬ್ಬ ಸಾಮಾನ್ಯ ಮಹಿಳೆ ಅವಳ ಗಂಡ ಮುದ್ದ ಹನುಮ ಸೈನಿಕನಾಗಿ ಕೋಟೆಯ ಕಾವಲು ಕಾಯುತ್ತಿದ್ದ. ಮಧ್ಯಾಹ್ನದ ಸಮಯದಲ್ಲಿ ಊಟಕ್ಕೆಂದು ಮನೆಗೆ ಬಂದ, ಅಡುಗೆ ತಯಾರಿ ಮಾಡಿ ಕಾಯುತ್ತಾ ಕುಳಿತ್ತಿದ್ದ ಓಬ್ಬವ್ವ ಮನೆಗೆ ಬಂದ ಯಜಮಾನನಿಗೆ ಊಟ ಬಡಿಸಿದಳು ಆದರೆ ಕುಡಿಯಲು ನೀರು ಖಾಲಿಯಾಗಿತ್ತು ಆದ ಕಾರಣ ನೀರು ತರಲೆಂದು “ನೀರ್ ದೋಣಿ” ಎಂಬ ನೀರು ಹರಿದು ಬರುವ ಜಾಗಕ್ಕೆ ಬರುವಾಗ ಕೋಟೆಯ ಒಳಗೆ ಒಂದು ಸುರಂಗ ಮಾರ್ಗದಿಂದ ಹೈದರಾಲಿ ಸೈನ್ಯವು ನುಗ್ಗಿ ಬರುತ್ತಿದನ್ನು ಗಮನಿಸಿದಳು ಕೂಡಲೆ ಗಂಡನಿಗೆ ತಿಳಿಸಲು ಹೊರಟಾಗ “ಗಂಡ ಊಟ ಮಾಡುತ್ತಿದ್ದಾನೆ ಅರ್ಧ ಊಟದಿಂದ ಎದ್ದು ಬರುವುದು ಶೋಭೆಯಲ್ಲ” ಎಂದು ಅರಿತ್ತಿದ್ದ ಓಬ್ಬವ್ವ ತಾನೇ ಯುದ್ಧಕ್ಕೆ ಸಿದ್ಧಳಾಗಿ ಅವಳ ಅಸ್ತ್ರವಾಗಿ ಒನಕೆಯೊಂದನ್ನು ಹಿಡಿದು ಎದೆಗುಂದದೆ ಮುನ್ನುಗ್ಗಿ ಹೊರಟಳು ಅಷ್ಟರಲ್ಲಿ ಕೆಲವು ಸೈನಿಕರು ಕೋಟೆಯ ಒಳಕ್ಕೆ ಪ್ರವೇಶಿಸಿದ್ದರು.
ಇನ್ನು ಕೆಲವರು ಸುರಂಗದಿಂದ ಒಳಕ್ಕೆ ಬರುತ್ತಿದಂತೆ ಒಬ್ಬೊಬ್ಬರನ್ನಾಗಿ ಒನಕೆ ಇಂದ ತಲೆಮೇಲೆ ಹೊಡೆದು ಸಾಯಿಸಿ ಹೆಣದ ರಾಶಿಯನ್ನೇ ಬದಿಗಿಟ್ಟಳು. ಊಟ ಮುಗಿಸಿ ಹೊರಗೆ ಬಂದ ಮುದ್ದ ಹನುಮ ಶತ್ರುಗಳ ರಕ್ತ ಓಬ್ಬವ್ವಳ ಮೇಲೆ ನೋಡಿ ಮತ್ತು ಪಕ್ಕದಲ್ಲೇ ಇದ್ದ ಹೆಣದ ರಾಶಿಯನ್ನು ನೋಡಿ ಬೆರಗಾದ ಕೂಡಲೆ ಕಹಳೆ ಊದಿ ಕೂಗಿ ಕೋಟೆಯ ಸೈನಿಕರನ್ನು ಎಚ್ಚರಿಸಿ ಯುದ್ಧಕ್ಕೆ ಸಿದ್ಧರಾಗುವಂತೆ ಸೂಚಿಸಿದ. ಆಗ ಮದಕರಿನಾಯಕ ರಾಜನಾಗಿದ್ದ ಸಮಯ, ಕಹಳೆಯ ಸದ್ದಿಗೆ ಎಲ್ಲರೂ ಓಡಿ ಬಂದರು ಆದರೆ ಮೊದಲೇ ಒಳಕ್ಕೆ ನುಗ್ಗಿದ ಕೆಲವು ಶತ್ರು ಸೈನಿಕರು ಎಚ್ಚೆತ್ತುಕೊಂಡು ಹಿಂತಿರುಗಿದಾಗ ಹೆಣದ ರಾಶಿಯನ್ನು ನೋಡಿ ಓಬ್ಬವ್ವಳೇ ಇದಕ್ಕೆಲ್ಲ ಕಾರಣ ಎಂದು ಖಚಿತಪಡಿಸಿ ಹಿಂದೆಯಿಂದ ಬಂದು ಅವಳ ಬೆನ್ನಿಗೆ ಕತ್ತಿಯಿಂದ ಇರಿದು ಅವಳ ಸಾವಿಗೆ ಕಾರಣರಾದರು. ಓಬ್ಬವ್ವಳ ಈ ಧೈರ್ಯ ಸಾಹಸಕ್ಕೆ ಕೋಟೆ ಅಂದಿಗೆ ಉಳಿದರು ಮತ್ತೆ ಹೈದೆರಾಲಿಯ ಸೈನ್ಯ ಮದಕರಿನಾಯಕನ ಮೇಲೆ 1779 ರಲ್ಲಿ ಆಕ್ರಮಣ ಮಾಡಿದಾಗ ಕೋಟೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
chitradurga 11
ನೀರ್ ದೋಣಿ
DSC03093
ಸುರಂಗ
ಯಾರೇ ಇರಲಿ ಯಾವುದೇ ಕ್ಷಣವಿರಲಿ ದೇಶ ಮತ್ತು ನಾಡು ಎಂಬ ವಿಚಾರ ಬರುತ್ತಿದ್ದಂತೆ ಅದರ ರಕ್ಷಣೆಗೆ ಎಂತಹವರಾದರು ಸಿದ್ಧರಾಗಿರಬೇಕು. ಒಂದು ಹೆಣ್ಣಿನ ಧೈರ್ಯ ಸಾಹಸಕ್ಕೆ ಸರಿಸಾಟಿಯಿಲ್ಲ ಎಂದು ಸಾರಿ ಹೇಳಿ ಮತ್ತೊಂದು ಹಿರಿಮೆಯ ಗರಿಯಾಗಿ ಮಣಿದ ಓಬ್ಬವ್ವ ಚರಿತ್ರೆಯ ಇತಿಹಾಸ ಪುಟಗಳಲ್ಲಿ ಸೇರುತ್ತಾಳೆ.
ಕೋಟೆಯನ್ನು ಭದ್ರಮಾಡುವ ನಿಟ್ಟಿನಲ್ಲಿ ಸಾವಿರ ಯೋಜನೆಗಳನ್ನು ರೂಪಿಸಿ ಬೆಳೆಸಿ ಉಳಿಸಿಕೊಂಡು ಬಂದರು ಒಂದು ಸಣ್ಣ ಸುರಂಗ ಇಡೀ ಕೋಟೆಯ ಆಕ್ರಮಣಕ್ಕೆ ಕಾರಣವಾಯಿತು. ಆಸೆ ದುರಾಸೆಗಳಿಂದ ರಾಜ್ಯ ರಾಜ್ಯಗಳು ಸೈನ್ಯಕ್ಕೆ ಸೈನ್ಯವೇ ಸಾವಿಗೀಡಾಯಿತು ಆದರೆ ಉಳಿಸಿಕೊಳ್ಳುವ ಶಕ್ತಿ ಧೀಮಂತಿಕೆ ಮತ್ತು ಧೈರ್ಯ ಎಲ್ಲರಿಗು ಬಂದರೆ ಅವರ ದೇಶಕ್ಕೆ ಅವರ ರಾಜ್ಯಕ್ಕೆ ಅವರ ಕುಟುಂಬಕ್ಕೆ ಅವರೇ ಸೈನಿಕರು
ಸಾಧನೆ ಮಾಡುವುದಕ್ಕೆ ವರುಷಗಳಕಾಲ ಶ್ರಮ ಪಡಬೇಕು ಅದರ ಜೊತೆ ಸಮಯಕ್ಕೆ ಸರಿಯಾದ ನಿರ್ಧಾರ ಮತ್ತು ಕೆಚ್ಚೆದೆಯಿಂದ ಮುನ್ನುಗ್ಗುವ ಧೈರ್ಯ ಇದ್ದರೆ ಇತಿಹಾಸದ ಪುಟಗಳಲ್ಲಿ ಹೆಸರು ದಾಖಲಾಗಿ ಓದುವ ಉಸಿರಿಗು ಸ್ಪೂರ್ತಿಯಾಗುತ್ತದೆ.
ಕೃಷ್ಣ ಮೂರ್ತಿ. ಕೆ
Categories Short StoriesTags , , ,

14 thoughts on “ಕೋಟೆಯ ಹೆಜ್ಜೆಗಳು

 1. ಗುರುಪ್ರೀತ್ May 4, 2020 — 12:32

  ಕರ್ನಾಟಕದ ಇತಿಹಾಸ ಅಪಾರವಾದ್ದದ್ದು ಅನೇಕ ರಾಜ ವಂಶಸ್ಥರು ಪಾಳೆಗಾರರು ಕರ್ನಾಟಕವನ್ನು ಆಳಿದ್ದಾರೆ ಕರ್ನಾಟಕಕ್ಕೆ ಅವರ ಸೇವೆ ಕೊಡುಗೆ ಬೆಲೆ ಕಟ್ಟಲು ಅಸಾಧ್ಯ ಇದರಲ್ಲಿ ಚಿತ್ರದುರ್ಗವು ಪ್ರಮುಖ ಪಾತ್ರ ವಹಿಸುತ್ತದೆ ಚಿತ್ರದುರ್ಗ ಎಂದರೆ ಮೊದಲಿಗೆ ನೆನಪು ಬರುವುದು ಕಲ್ಲಿನ ಕೋಟೆ, ಒನಕೆ ಓಬವ್ವ, ಮದಕರಿ ನಾಯಕ ಚಿತ್ರದುರ್ಗದ ಕಲ್ಲಿನ ಕೋಟೆಯ ಇತಿಹಾಸವನ್ನು ಅದರ ವಿಶಿಷ್ಟತೆಯನ್ನು ಬಹಳ ಸೊಗಸಾಗಿ ವಿವರಿಸಿದ್ದೀರಿ ಹಾಗು ಚಿತ್ರಿಸಿದ್ದೀರಿ ಎಷ್ಟೋ ಗೊತ್ತಿಲ್ಲದ ಸಂಗತಿಗಳು ಇದರಿಂದ ತಿಳಿದ್ದಿದ್ದೇನೆ ಎಲ್ಲಾ ಕನ್ನಡಿಗರು ಇದನ್ನು ಓದಿ ಕರ್ನಾಟಕದ ಇತಿಹಾಸವನ್ನು ತಿಳಿಯಬೇಕು ಮತ್ತು ಇದನ್ನು ಅದ್ಭುತವಾಗಿ ತಿಳಿಸುತ್ತಿರುವ ನಮ್ಮ ಕನ್ನಡಿಗನಿಗೆ ಪ್ರೋತ್ಸಾಹಿಸಬೇಕು
  ಜೈ ಕರ್ನಾಟಕ 💛❤

  Liked by 1 person

  1. ಧನ್ಯವಾದಗಳು ಗುರುಪ್ರೀತ್. ಕನ್ನಡಕ್ಕಾಗಿ ಪ್ರತಿದಿನ ಪ್ರತಿಕ್ಷಣ ಹೋರಾಡುವ ನಿಮ್ಮಂತವರಿಂದ ಈ ಪ್ರತಿಕ್ರಿಯೆ ನನಗೆ ಬಹಳ ಖುಷಿ ಕೊಟ್ಟಿದೆ.

   Like

 2. Hruday Darshan April 22, 2020 — 04:26

  Thumba chanagi bardidira.. namg gothidu bari chithradurga Dali obava na kathe bitre… Enu gothirlila. Yalo school Alli trip ge karkondu bandga guide helida vishya adhu swalpa nenpithu. Ega mathe nimindha swalpa thilkolohagaythu… Thumba chanagi , spastavagi Kannada na balike madidira thumba kushi aythu…
  Hege nama janake Ethara gothilde ero history thilsikotidake thumba thumba thanks my dream friend….!
  All the best “KRISHNA MURTHY .K”
  For upcoming projects. And keep smiling 😊….

  Liked by 1 person

  1. Thank you so much hruday. Kanditha namma kannadigarige avaru iro jaagada itihaasa bagge gothirolla. Adara bagge tilisode nanna ee blog na uddesha. Kanditha innu nan travel dairies alli baro kelavond ast jaagagala bagge helodakke prayathna padthini. Dhanyavadagalu

   Like

 3. Chennagide kitti… it’s Interesting and informative… Idunna odh davarige ivag Kallina kote nodbeku antha pakka anstiruthe…yake andre yavude ondu Aithihasika thanagalanna adara vicharagalanna thilide nododakku..adara bagge thilkondu nododakku thumba vathyasa iruthe…
  Ondu request…adre…innu intha bere bere places galamele hosdagi Barithiru…
  Ninna next writing ge ALL THE BEST✌️👍

  Liked by 1 person

  1. Thank you so much goutham. Lines what you said is awesome, tilide nodoku tilkond nodoku vyatyasa ide antha. Kanditha mathe nan travel dairies alli heege kelavond jaaga gala bagge adra itihaasada bagge baryodakke prayatna padthini. Dhanyavadagalu

   Like

 4. Kitty for ur research hats off my bro, excellent ,brilliant, superb, well explained each of the thing, deep researched.
  Kitty it’s really amazing,everything explained in a awesome manner.
  HARD WORK GOES TO SUCCESS WORK.
  it’s my thought to ur epic stry.
  Loving it.

  Liked by 1 person

 5. Vignesh Kumar.c April 19, 2020 — 19:18

  Proud to be an kannadiga and to know the history of our Karnataka

  Liked by 1 person

 6. Hi
  Story good very nice

  Liked by 1 person

 7. Deekshith das.. April 19, 2020 — 16:39

  ತುಂಬಾ ಅದ್ಭುತವಾದ ವರ್ಣನೆ, ಚಿತ್ರಕಲಾದುರ್ಗ.. ಕೋಟೆಯ ಕಡೆ ಮುಂದೊಂದು ದಿನ ಪಯಣ ಬೆಳೆಸಿದರೆ, ನೀವು ಬರೆದ ಸಾಲುಗಳು ಮನಸ್ಸಿನಲ್ಲಿ ಮರುನಿರ್ಮಾಣ ಗೊಳ್ಳುವುದರಲ್ಲಿ ಬೇರೆ ಮಾತಿಲ್ಲ..
  ಕೋಟೆಗೆ ಸಂಬಂಧಿಸಿದ ವಿಷಯಗಳನ್ನೆಲ್ಲಾ ಮನ ಮೆಚ್ಚುವ ಚಿತ್ರಣದ ಜೊತೆ ವಿವರಿಸಿದ್ದು ಬಹಳ ಸುಂದರವಾಗಿ ಮನಸ್ಸಿಗೆ ತಾಕಿತು..

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close