ಕೊರವಂಗಲ

– ಕಲ್ಲುಗಳು ಕಥೆ ಹೇಳಿದಾಗ…

ಕಾಲ ಕಾಲದಿಂದಲೂ ನಮಗೆ ನಮ್ಮ ತನ ಮತ್ತು ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವಲ್ಲಿ ಅನೇಕ ತಂದೆ ತಾಯಿಯರು ಗುರು-ಹಿರಿಯರು ಸಾಕಷ್ಟು ರೀತಿಯಲ್ಲಿ  ಶ್ರಮಪಡುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ನಾವು ಕಲಿಯುವುದಕ್ಕೆ ಕಲಿಸುವುದಕ್ಕೆ ಶ್ರಮಪಡುವ ಕಾಲ ಬಂದಿದೆ. ಇದಕ್ಕೆ ಮೂಲ ಕಾರಣ ಯಾವುದು ಎಂದು ಹುಡುಕುವುದು ಮೂರ್ಖತನ ಏಕೆಂದರೆ ಇದಕ್ಕೆ ಇರುವ ಮೂಲ ಕಾರಣಗಳು ಒಂದಲ್ಲ ಎರಡಲ್ಲ ಅನೇಕ ರೀತಿಯ ಜಾಗತೀಕರಣ ಮತ್ತು ಮಕ್ಕಳಿಗೆ ಸರಿಯಾದ ಹಾಗು ಮಹತ್ತರ ಶಿಕ್ಷಣ ಮತ್ತು ಎಲದಕ್ಕೂ ಮೊದಲು ನಮ್ಮಲಿರುವ ಆಸಕ್ತಿ ಕಡಿಮೆಯಾಗಿರುವುದು. ಬೇರೆ ದೇಶದ ಬೇರೆ ಭಾಷೆಯ ಬೇರೆ ಉಡುಗೆ ತೊಡುಗೆಗಳು ರೀತಿ ನೀತಿಗಳು ನಮ್ಮಲಿರುವ ಅತಿಶ್ರೇಷ್ಠತೆಯನ್ನು ಮೀರುವಂತೆ ನಮ್ಮ ಕಣ್ಣಿಗೆ ಕಾಣುತ್ತದೆ. ಇದರಿಂದಾಗಿ ಜನರ ಮನಸ್ಸು ನಮ್ಮಲ್ಲಿಗಿಂತ ಬೇರೆಡೆಗೆ ಕೊಂಡೊಯ್ಯುವುದು ಸಹಜ. ಈ ಪ್ರಕ್ರಿಯೆಯಲ್ಲಿ ನಮ್ಮಲಿರುವ ಎಷ್ಟೋ ಜನ ನಮ್ಮ ರಾಜ್ಯದ ವೈಭವದ ಇತಿಹಾಸವನ್ನು ಅರಿಯದೆ ಕೆರೆಗಳಲ್ಲಿ ಹೂಳೆತ್ತುವಾಗ ಅಥವಾ ಮನೆ ಕಟ್ಟಲು ಪಾಯ ತೋಡುವಾಗ ಸಿಕ್ಕ ಎಷ್ಟೋ ಕಲ್ಲುಗಳು ಚಪ್ಪಡಿಗಳಿಗೆ ಮತ್ತು ಮೋರಿ ದಾಟುವ ಕಲ್ಲುಗಳಾಗಿ ಬಳಸಿಕೊಂಡಿರುವುದು ಸತ್ಯ ಮತ್ತು ವಿಪರ್ಯಾಸ. ಇಂತಹ ಸ್ಥಳಗಳನ್ನು ಹುಡುಕಿ ಅದರ ಮಹತ್ವವನ್ನು ಅರಿತು ಶಾಸನದ ಕಲ್ಲುಗಳು ಮತ್ತು ಕೆತ್ತನೆಯ ಕಲ್ಲುಗಳನ್ನು ತಂದು ಅದನ್ನು ಸರ್ಕಾರಕ್ಕೆ ಕೊಡುವ ಕಾರ್ಯ ಅಥವಾ ಅದನ್ನು ಸಂರಕ್ಷಿಸುವ ಕಾರ್ಯಗಳು ನಾವು ಪ್ರತಿದಿನ ನೋಡುತ್ತಿರುತ್ತೇವೆ. ಈ ರೀತಿಯ ಕಲ್ಲುಗಳು ಅಥವಾ ಶಾಸನಗಳು ಸಿಗುವುದನ್ನು ಅನೇಕರು ಕಣ್ಣಾರೆ ನೋಡಿದ್ದಾರೆ ಮತ್ತು ಕಂಡವರಿಂದ ಕೇಳಿದ್ದಾರೆ. ಆದರೆ ಇಂತಹ ವಿಷಯಗಳು ಮಾಧ್ಯಮಗಳಿಗೆ TRP ತರದಿರುವ ಕಾರಣ ಪ್ರಸಾರವಾಗದಿರುವುದು ಸಾಮಾನ್ಯ.

ಇವತ್ತಿನ ದಿನ ಯಾರೇ ಆಗಲಿ ತಾವಾಯಿತು ತಮ್ಮ ಕೆಲಸವಾಯಿತು ಅಂತ ಬದುಕುತ್ತಿದ್ದಾರೆ, ಅದರಲ್ಲೂ ಕೊರೊನ ಎಂಬ ಮಹಾಮಾರಿ ಬಂದಮೇಲಂತೂ ಇನ್ನೊಬ್ಬರ ಜೊತೆ ಮಾತನಾಡುವುದಕ್ಕೂ ಹೆದರುವ ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಇಂತಹ ಸಮಯದಲ್ಲಿ ಉಪಯುಕ್ತ ಮಾಹಿತಿಗಾಗಿ ಸಾಮಾಜಿಕ ಜಾಲತಾಣಗಳು ಮೊದಲಿಗೆ ಬರುತ್ತದೆ ಆದರೆ ಮನುಷ್ಯನು ಮತ್ತಷ್ಟು ಸೋಂಬೇರಿಯನ್ನಾಗಿ ಮಾಡುವ ಮಟ್ಟಕ್ಕೆ ಜಾಲತಾಣಗಳು ಕೂಡ ಇಳಿದಿವೆ. ಇದೆ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಅದೊಂದು ದಿನ ಒಂದು ಮನಮೋಹಕ ಮತ್ತು ಅಪರೂಪದ ಒಂದು ದೇವಸ್ಥಾನವನ್ನು ನೋಡಿದೆ. ಅದು ಸಾಮಾನ್ಯ ದೇವಸ್ಥಾನವಲ್ಲ ಬದಲಿಗೆ ಪುರಾತನ ಇತಿಹಾಸವುಳ್ಳ 800 ವರ್ಷಗಳ ಹಿಂದಿನ ದೇವಸ್ಥಾನವಾಗಿತ್ತು. ತಕ್ಷಣ ಅದನ್ನು ನೋಡಬೇಕೆಂದು ಗೂಗಲ್ ಮ್ಯಾಪ್ ನಲ್ಲಿ ಪಿನ್ ಮಾಡಿ ಹುಡುಕಿ ಹೊರಟೆ. ಸಂಜೆ ಮನೆ ಬಿಟ್ಟು ಹಾಸನದ ಸಮೀಪದಲ್ಲಿ ಒಂದು ರೂಮ್ ಬುಕ್ ಮಾಡಿ ಅಲ್ಲೇ ರಾತ್ರಿ ತಂಗಿದ್ದು ಮರು ದಿನ ಬೆಳಗ್ಗೆ ಜಾಗವನ್ನು ಹುಡುಕಿ ಹೊರಟೆ. ಆ ದೇವಸ್ಥಾನ ಇದ್ದದ್ದು ಹಾಸನದಿಂದ ಸುಮಾರು 10 ಕಿ.ಮೀ ದೂರದ ಕೊರವಂಗಲ ಎಂಬ ಪುಟ್ಟ ಗ್ರಾಮದಲ್ಲಿ. ಕೊರವಂಗಲ ಗ್ರಾಮಕ್ಕೇನೋ ಹೋಗಿದ್ದಾಯಿತು ಆದರೆ ಆ ದೇವಸ್ಥಾನ ಹುಡುಕುವುದಕ್ಕೆ ತುಂಬಾ ಸಮಯ ಹಿಡಿಯಿತು. ಊರ ಮುಖ್ಯ ರಸ್ತೆಯಲ್ಲಿ ನಿಂತು ಎಡಭಾಗಕ್ಕೆ ತಿರುಗಿನೋಡಿದರೆ ಒಂದು ದಿಬ್ಬದ ಮೇಲೆ ಪುಟ್ಟ ದೇವಸ್ತಾನದಂತೆ ಕಾಣುತ್ತದೆ ಹಾಗಾಗಿ ತಟ್ಟಂತೆ ಕಣ್ಣಿಗೆ ಬೀಳುವುದು ಕೂಡ ಸ್ವಲ್ಪ ಕಷ್ಟ. ಹಾಗೂ ಹೀಗೋ ಹೇಗೋ ಏನೋ ಮಾಡಿ ಒಳಗೆ ಪ್ರವೇಶಿಸಿದೆ. ಅಲ್ಲೇ ಇದ್ದ ಒಬ್ಬ ವ್ಯಕ್ತಿ “ಯಾಕ್ ಸ್ವಾಮಿ ಗೋಡೆ ಹಾರ್ತಿದ್ದೀರಾ ಇನ್ನೊಂದು ರಸ್ತೆ ಇಂದ ಬನ್ನಿ ಗೇಟ್ ಓಪನ್ ಇದೆ” ಎಂದ. ಆ ದೇವಸ್ಥಾನಕ್ಕೆ ಇನ್ನೊಂದು ಗೇಟ್ ಕೂಡ ಇದೆ ಅಂತ ತಿಳಿದ್ದಿದೆ ಆಗ, ಒಂದೊಮ್ಮೆ ಹುಸಿ ನಕ್ಕಿ ನಂತರ ದೇವಾಲಯದ ಒಳಗೆ ಹೋದೆ. ಈ ಎಲ್ಲಾ ಜಂಜಾಟಗಳು ಮುಗಿಸಿ ಬಂದು ನಿಂತು ಒಂದು ಬಾರಿ ತಲೆ ಎತ್ತಿ ನೋಡಿದರೆ ಭವ್ಯವಾದ ಸುಂದರ ಶ್ರೇಷ್ಠ ಮನಮೋಹಕ ಶಿಲ್ಪಕಲೆಯುಳ್ಳ ಹೊಯ್ಸಳರ ಕಾಲದ ದೇವಾಲಯವು ಕಣ್ಣ ಮುಂದೆ ರಾರಾಜಿಸುತ್ತಿತ್ತು.

ದೇವಾಲಯದ ಮುಂಭಾಗ
ಹೊಯ್ಸಳರ ಲಾಂಛನ

ಒಂದೊಂದು ಶಿಲೆಯು ಪುರಾತನ ಇತಿಹಾಸ, ಅದರ ವೈಭವತೆ ಮತ್ತು ನಾನು ಚಿಕ್ಕವಯಸ್ಸಿನಲ್ಲಿದ್ದಾಗ ಓದಿದ್ದ ಎಷ್ಟೋ ಕಥೆಗಳು ಕಲ್ಲಿನಲ್ಲಿ ಕೆತ್ತನೆಗಳಾಗಿ ಶಿಲ್ಪಕಲೆಗಳಾಗಿ ವಿಜೃಂಬಿಸುತ್ತಿತ್ತು. ಆ ಕಲ್ಲುಗಳನ್ನು ಕೆತ್ತಿದ ಕೈಗಳು ಅದನ್ನು ಮಾಡಿಸಿದ ರಾಜರ ಗಾಂಭೀರ್ಯತೆ ಅತೀ ಸೂಕ್ಷ್ಮವಾದ ಪುಟ್ಟ ಪುಟ್ಟ ವಿಷಯಗಳನ್ನು ಸಮಗ್ರವಾಗಿ ತೋರಿಸಿದ ಎಲ್ಲರೂ ಕೂಡ ಅವರದ್ದೇ ಆದ ಆಕಾರದಲ್ಲಿ ನನ್ನ ಕಣ್ಣ ಮುಂದೆ ನಿಂತಿದ್ದರು. ಉಸಿರು ಬಿಗಿ ಹಿಡಿದು ತಲೆಯೆತ್ತಿ ನೋಡಿದರಷ್ಟು ಶಿಲ್ಪಕಲೆಗಳು ಅದನ್ನು ನೋಡಿ ನಿಬ್ಬೆರಗಾಗಿ ನಿಂತಿದ್ದ ನನನ್ನು ಎಚ್ಚರಿಸಿದ್ದು ಅಲ್ಲಿನ ಗೈಡ್ ಆಗಿದ್ದ ಶಶಿಕುಮಾರ್ ರವರು “ಸರ್ ಇಷ್ಟಕ್ಕೆ ಹೀಗೆ ನಿಂತಿದ್ದೀರಲ್ಲ ಒಳಗೆ ಬಂದು ನೋಡಿದರೆ ಇನ್ನೇನಾಗುತ್ತೋ” ಎಂದು ವ್ಯಂಗ್ಯ ಮಾಡುತ್ತಾ ಒಳಗೆ ಕರೆದುಕೊಂಡು ಹೋದರು.

ಶಶಿಕುಮಾರ್ ರವರು ನನಗಿರುವ ಆಸಕ್ತಿಯನ್ನು ನೋಡುತ್ತಿದಂತೆ ಅರಿತುಕೊಂಡು. “ಈ ಇಡೀ ದೇವಾಲಯದ ಬಗ್ಗೆ ನನಗೆ ಗೊತ್ತಿರುವಷ್ಟು ನಿಮಗೆ ಹೇಳುತ್ತೇನೆ ಬನ್ನಿ” ಎಂದರು. ಅವರು ಹಾಗೆ ಹೇಳಿದ ಮರುಕ್ಷಣವೇ ನಾನು ಹೊತ್ತು ತಂದ ಬ್ಯಾಗನ್ನು ಅಲ್ಲೇ ಪಕ್ಕದಲ್ಲೇ ಇಟ್ಟು ಕ್ಯಾಮೆರಾ ಹಿಡಿದು ಅವರ ಹಿಂದೆ ಹೊರಟೆ. ಶಶಿಕುಮಾರ್ ರವರು ತಿಳಿಸಿದ ಅಷ್ಟು ಮಾಹಿತಿಯನ್ನು ನಾನು ನಿಮಗೆ ತಿಳಿಸಬೇಕು ಎನ್ನುವುದೇ ನನ್ನ ಪುಟ್ಟ ಆಸೆ.

ಕ್ರಿ.ಶ 1173 ದಲ್ಲಿ ಹೊಯ್ಸಳರ ಕಾಲದಲ್ಲಿ ಭೂಚಿರಾಜ ಎನ್ನುವರು ಪ್ರಧಾನಿಯಾಗಿ ಆಳುತ್ತಿದ್ದಂತ ಸಮಯದಲ್ಲಿ ವೀರ ಬಲ್ಲಾಳ-2 ರ ಪಟ್ಟಾಭಿಷೇಕಕ್ಕೆ ಈ ದೇವಸ್ಥಾನವನ್ನು ನಿರ್ಮಾಣ ಮಾಡಿ ಅದನ್ನು ಉಡುಗೊರೆಯಾಗಿ ಕೊಟ್ಟಿರುವ ಇತಿಹಾಸ ಈ ದೇವಾಲಯದ್ದು. ಹಾಗಾಗಿ ಇಲ್ಲಿರುವ ಶಿವನ ಲಿಂಗಕ್ಕೆ ಭೂಚೇಶ್ವರ ಎಂಬ ಹೆಸರು ಬಂದಿದೆ. ಇದರ ಎದುರಿಗೆ ಕಲ್ಲಿನಲ್ಲಿ ಮಾಡಿರುವ ನಂದಿ ವಿಗ್ರಹವು ಈಗಲೂ ಕೂಡ ಒಂದು ಸುತ್ತು ಸುತ್ತುತ್ತದೆ. ಯಾವುದೇ ಸದ್ದಿಲ್ಲದೇ ತುಂಬ ಸೂಕ್ಷ್ಮವಾಗಿ ಸರಳವಾಗಿ ಸುತ್ತುವ ಈ ನಂದಿ ವಿಗ್ರಹವನ್ನು ನೋಡಿ ಒಂದು ಕ್ಷಣ ಮೈ ಜುಮ್ ಎನ್ನುವಂತಾಯಿತು.

ಭೂಚೇಶ್ವರ ಸನ್ನಿಧಿ

ಶಿವನ ಗುಡಿಯ ಮುಂಭಾಗ ಅಂದರೆ ನಂದಿ ಇರುವ ಜಾಗದಲ್ಲೇ ಒಂದು ನವರಂಗ ಮಂಟಪವಿದೆ ಈ ಮಂಟಪವು ಒಂಬತ್ತು ವಿವಿಧ ರೀತಿಯ ಶೈಲಿಯಲ್ಲಿ ಕೆತ್ತಲ್ಪಟ್ಟ 9 ಪುಟ್ಟ ಪುಟ್ಟ ಮಂಟಪಗಳ ಸೇರಿದ ನವರಂಗ  ಮಂಟಪ. ಮೊದಲನೆಯ ಮಂಟಪದೊಳಗೆ ತಲೆಯೆತ್ತೆ ನೋಡಿದರೆ ಚಿಕ್ಕ ಕಲ್ಲಿನ ಮೇಲೆ ಶಿವನು ತಾಂಡವ ನೃತ್ಯ ಆಡುತ್ತಿರುವ ದೃಶ್ಯ ಕಾಣಬಹುದು. ಮುಂದಿನ ಮಂಟಪಕ್ಕೆ ಹೆಜ್ಜೆ ಇಟ್ಟಂತೆ ತಲೆ ಎತ್ತಿ ನೋಡಿದರೆ ಸಕಲೇಶಪುರದ ಮಂಜಾರಾಬಾದ್ ಕೋಟೆಯ ರೂಪದಲ್ಲಿ ಅಂದರೆ ನಕ್ಷತ್ರದ ರೂಪದಲ್ಲಿನ ಕೆತ್ತನೆ ಕಾಣಬಹುದು. ಇದರ ಅರ್ಥವೇನೆಂದರೆ ಆಗಿನ ಕಾಲದಲ್ಲಿ ಕಟ್ಟುತ್ತಿದ್ದ ಕೋಟೆ ಅಥವಾ ದೇವಾಲಯವು ಯಾವುದೇ ಭೂಕಂಪ ಅಥವ ಅಹಿತಕರ ಘಟನೆಗಳು ನಡೆದರು ಕೂಡ ಒಂದು ಭಾಗ ಬಿದ್ದರು ಇನ್ನೊಂದು ಭಾಗ ಬೀಳದಂತೆ ಬಹಳ ಎಚ್ಚರ ವಹಿಸಿ ನಕ್ಷತ್ರದ ರೂಪದಲ್ಲಿ ನಿರ್ಮಾಣ ಮಾಡುತ್ತಿದ್ದರು, ಇದು ಬೇರೆ ಬೇರೆ ರಾಜರ ಆಳ್ವಿಕೆಯ ಸಮಯಕ್ಕೆ ತಕ್ಕಂತೆ ಕಟ್ಟುವ ಶೈಲಿಗಳು ಕೂಡ ಬದಲಾಗುವುದನ್ನು ದಾಖಲೆಗಳಲ್ಲಿ ಕಾಣಬಹುದು. ಇನ್ನು ಮುಂದಕ್ಕೆ ಸಾಗಿದಂತೆ ಬಾಳೆಮೋತಿಯ ಕೆತ್ತನೆ ಕಾಣಬಹುದು ಇದರ ವಿಶೇಷತೆ ಏನೆಂದರೆ ಈ ಬಾಳೆಮೋತಿಯ ಕೊನೆಯ ಕಲ್ಲಿನ ಸುತ್ತ ನವಗ್ರಹಗಳ ಕೆತ್ತನೆ ಕಾಣಬಹುದು ಮತ್ತು ಆ ಕಲ್ಲಿನ ಕೆತ್ತನೆಯ ನಡುವೆ ಬೆರಳುಗಳು ಆಡಿಸುವಷ್ಟು ಜಾಗ ಇರುವುದು ವಿಶೇಷ ಹೀಗೆ ಮಂಟಪಗಳು ಒಂದಕ್ಕಿಂತ ಒಂದರಂತೆ ವಿಶೇಷವಾಗಿ ಮತ್ತು ವಿಭಿನ್ನವಾಗಿ ಅರ್ಥಗರ್ಭಿತವಾಗಿ ನಿರ್ಮಿಸಿರುವುದು ಹೊಯ್ಸಳರ ವಾಸ್ತುಶಿಲ್ಪದ ಅದ್ಬುತ.

ಮೊದಲ ನವರಂಗ ಮಂಟಪ
ನವರಂಗ ಮಂಟಪದಲ್ಲಿ ಶಿವ ತಾಂಡವ
ಸಕಲೇಶಪುರದ ಮಂಜರಾಬಾದ್ ಕೋಟೆಯ ಆಕಾರ
ಬಾಳೆಮೂತಿಯಲ್ಲಿ ಮಂಟಪದಲ್ಲಿ ನವಗ್ರಹ ಕೆತ್ತನೆ

ಈ ಮಂಟಪದ ಒಳಗೆ ಸುತ್ತಲೂ ವಿಗ್ರಹಗಳು ಇಡುವ ಜಾಗಗಳು ಕಾಣಬಹುದು ಆದರೆ ವಿಗ್ರಹಗಳು ಮಾತ್ರ ಇಲ್ಲ ಏಕೆಂದರೆ ಅದರೊಳಗೆ ಇದ್ದ ವಿಗ್ರಹಗಳನ್ನು ಕೂಡ ದುಡ್ಡಿನ ದುರಾಸೆಗೆ ಕದ್ದು ಮಾರುವ ಜನರ ನಡುವೆ ಉಳಿದಷ್ಟೂ ಉಳಿಸಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ. ಈ ಒಂದು ಜಾಗದಲ್ಲಿ ಸಪ್ತಮಾತ್ರಿಕೆಯರ ವಿಗ್ರಹವನ್ನು ಕಾಣಬಹುದು. ಗಂಗರಸರ ಕಾಲದಲ್ಲಿಯೂ ಕೂಡ ಸಪ್ತಮಾತ್ರಿಕೆಯರ ವಿಗ್ರಹವನ್ನು ನೆಲಮಂಗಲದ ಮಾನ್ಯಪುರದಲ್ಲಿ ದೊರಕಿದ್ದು ಸರ್ಕಾರದ ನಿರ್ಲಕ್ಷ್ಯದಿಂದ ದಾರಿಯ ಬದಿಯಲ್ಲಿ ದಿಕ್ಕಿಲ್ಲದ ಹಾಗೆ ಇರುವುದನ್ನು ಕಾಣಬಹುದು. ಅದೇ ರೀತಿಯ ಸಪ್ತಮಾತ್ರಿಕೆಯರ ವಿಗ್ರಹ ಹೊಯ್ಸಳರ ಕಾಲದಲ್ಲಿ ಕೆತ್ತಿರುವುದಾಗಿದೆ, ಇದರಲ್ಲಿ ಒಂಬತ್ತು ವಿಗ್ರಹಗಳಿದ್ದು ಮೊದಲನೆಯ ಹಾಗು ಕೊನೆಯ ಎರಡು ವಿಗ್ರಹಗಳು ಗಣಪತಿ ಹಾಗು ಗರುಡ ಮತ್ತು ಮಿಕ್ಕ ಏಳು ವಿಗ್ರಹಗಳು ಸಪ್ತಮಾತ್ರಿಕೆಯರ ವಿಗ್ರಹವಾಗಿರುತ್ತದೆ.

ಸಪ್ತಮಾತ್ರಿಕೆಯರ ವಿಗ್ರಹ

ಮುಂದಿನ ವಿಗ್ರಹವಾಗಿ ಇದ್ದದ್ದು ಸರಸ್ವತಿ, ಬಲಗೈಯಲ್ಲಿ ಜಪಮಣಿ, ಎಡಗೈಯಲ್ಲಿ ತಾಳೆಗರಿ ಹಾಗು ತಾಳೆಗರಿಯ ತೂಕ ಹೆಚ್ಚಿದಾಗ ಅಂಗೈ ಬಾಗುವಂತೆ ಬಹಳ ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿದೆ. ಮುತ್ತಿನ ಕಿರೀಟ ಹಾಗು ಇನ್ನೆರಡು ಕೈಗಳಲ್ಲಿ ಅಂಕುಶ ಮತ್ತು ದಂಡ, ಕತ್ತಿನಲ್ಲಿ ಸರಮಾಲೆ, ತೋಳುಬಂದಿಗಳು, ಸೊಂಟದಲ್ಲಿ ಡಾಬು, ಕೈಯಲ್ಲಿ ಖಡ್ಗ, ಕಾಲಿನಲ್ಲಿ ಕಾಲ್ಗೆಜ್ಜೆ. ಇದೆಲವನ್ನು ಹೊಂದಿರುವ ಸರಸ್ವತಿ ನಿಜವಾಗಲೂ ತೊಟ್ಟ ಬಂಗಾರಕ್ಕಿಂತ ಅತಿಶ್ರೇಷ್ಠವಾಗಿ ಮತ್ತು ಸುಂದರವಾಗಿ ಕಂಡಳು. ಇವಳಿಗೆ ಗಾಳಿ ಬೀಸುವುದಕ್ಕೆ ಅಕ್ಕಪಕ್ಕದಲ್ಲಿ ಚಾಮ್ರದಾರಿಯರನ್ನು ಸಹ ಕಾಣಬಹುದು. ಇದರ ಪಕ್ಕದಲ್ಲಿರುವ ಮಂಟಪದಲ್ಲಿ ತಲೆಯೆತ್ತಿನೋಡಿದರೆ ಅಷ್ಟದಿಕ್ಪಾಲಕರು ವಾಹನವನ್ನೇರಿ ಕುಳಿತು ಎಂಟು ದಿಕ್ಕುಗಳನ್ನು ಕಾಯುತ್ತಿರುವುದನ್ನು ಕಾಣಬಹುದು. ಇದರ ಮೇಲಿರುವ ಎರಡನೆಯ ಕಲ್ಲಿನಲ್ಲಿ ಗಣಕೂಟಗಳನ್ನು ಕೆತ್ತಲಾಗಿದೆ. ಈ ಎಲ್ಲ ಕಲ್ಲುಗಳು ಒಂದಕ್ಕೊಂದರಂತೆ ಅಂಟಿಕೊಂಡು ಈಗಲೂ ಸಹ ಬೀಳದೆ ಇರುವುದಕ್ಕೆ ಮೂಲ ಕಾರಣ ಅದನ್ನು ಜೋಡಿಸಿರುವ ರೀತಿ ಇದನ್ನು ಒಂದಕ್ಕೊಂದು ಅಂಟಿಕೊಂಡಂತೆ (Interlocking system) ಅಂತ ಕೂಡ ಕರೆಯುತ್ತಾರೆ. ಆಗಿನ ಕಾಲದಲ್ಲಿ ಕಬ್ಬಿಣ ಬಳಸಿ ಒಳಗಿನಿಂದ ಎರಡು ಕಲ್ಲುಗಳು ಸಹ ಸಣ್ಣ ಜಾಗವು ಇಲ್ಲದೆ ಅಂಟಿಕೊಳ್ಳುವಂತೆ ಜೋಡಿಸಿರುವ ಶಿಲ್ಪಕಲೆ ಅಚ್ಚರಿಯೇ ಸರಿ.

ಸರಸ್ವತಿ ವಿಗ್ರಹ
ಅಷ್ಟದಿಕ್ಪಾಲಕರು ಮತ್ತು ಗಣಕೂಟಗಳು

ಶಿವನ ದೇವಾಲಯದ ಎದುರಿಗಾದಂತೆ ಸೂರ್ಯವಿಗ್ರಹವೊಂದಿದೆ ಇದನ್ನು ಶಿವನ ಎದುರು ನಿಲ್ಲಿಸಿರುವ ಉದ್ದೇಶವೇನೆಂದರೆ, ಶಿವನ ಹಣೆಯ ಮೇಲಿನ ವಿಭೂತಿಯ ತ್ರಿಪಟ್ಟಿ ಸೂರ್ಯನ ಬಿಂಬ ಬಿದ್ದಮೇಲೆ ಪ್ರಕಾಶವಾಗುತ್ತದೆ ಎನ್ನುವ ಕಾರಣಕ್ಕೆ ಶಿವನ ಲಿಂಗದ ಎದುರಿಗೆ ಸೂರ್ಯ ವಿಗ್ರಹವನ್ನು ಕೆತ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಈಗ ಸೂರ್ಯವಿಗ್ರಹ ಭಿನ್ನವಾಗಿರುವ ಕಾರಣಕ್ಕೆ ಅದನ್ನು ಪೂಜಿಸದೆ ಇಡಲಾಗಿದೆ. ಕೆಳಗಿನ ಚಿತ್ರದಲ್ಲಿ ಸೂರ್ಯನ ವಾಹನ ಕುದುರೆ ಅದರ ಮೇಲೆ ವರುಣ ಹಾಗು ಅಕ್ಕ ಪಕ್ಕದಲ್ಲಿ ಕಾಣುವ ಶಿಲ್ಪಗಳು ಸೂರ್ಯನ ಹೆಂಡತಿ ಸಂಧ್ಯ ಮತ್ತು ಛಾಯ. ಸೂರ್ಯನ ಕೈಬೆರಳುಗಳ ಉಗುರುಗಳನ್ನು ಗಮನಿಸಿದರೆ ಈಗಿನ ನವಯುವತಿಯರು ಹಾಗು ವಯಸ್ಸಾದರೂ ಯುವತಿಯರಂತೆ ನಟಿಸುವ ಹೆಂಗಸರ ಚೂಪಾದ ಉಗುರುಗಳು ಈಗ ಅಲಂಕಾರವಾದರೆ ಆಗ ಅದು ಕಲ್ಲಿನ ಕೆತ್ತನೆಯಲ್ಲಿ ಅಲಂಕಾರದಂತೆ ತೋರಿಸಿದ್ದಾರೆ ಹಾಗು ಸೂರ್ಯನ ಭುಜದ ಬಲಭಾಗದಲ್ಲಿ ಗಮನಿಸಿದರೆ ಶಾರ್ದೂಲ್ಲ ಕೆತ್ತನೆಯನ್ನು ಕಾಣಬಹುದು ಈ ಶಾರ್ದೂಲ್ಲ ರಾಜನಾದವನ ಏಳು ಗುಣಗಳನ್ನು ಪ್ರತಿಬಿಂಬಿಸುವ ಒಂದು ಪ್ರಾಣಿಯಾಗಿರುತ್ತದೆ. ಹಾಗು ಸೂರ್ಯನ ಕೈಯಲ್ಲಿರುವ ಒಂದು ಕೆತ್ತನೆಯ ವಿನ್ಯಾಸವನ್ನು ಗಮನಿಸಿದರೆ ಅದು ಅತೀ ಸೂಕ್ಷ್ಮ ಸಣ್ಣ ಸಣ್ಣ ರಂಧ್ರಗಳನ್ನು ಹೊಂದಿದೆ ಮುಂದಿನ ಭಾಗದಿಂದ ಬೆಳಕು ಬಿಟ್ಟರೆ ಹಿಂದಿನ ಅದೇ ರೀತಿಯ ಇನ್ನೊಂದು ವಿನ್ಯಾಸಕ್ಕೆ ಸರಿಯಾಗಿ ಪ್ರತಿಬಿಂಬವಾಗುತ್ತದೆ ಇದು ವಿನ್ಯಾಸದ ವೈಶಿಷ್ಟ್ಯತೆ. ಸೂರ್ಯನ ಹಿಂಬದಿಯ ಪ್ರಭಾವಲಿಯ ಕೊನೆಯಲ್ಲಿ ಗಮನಿಸಿದರೆ ನವಗ್ರಹಗಳನ್ನು ಕಾಣಬಹುದು ರಾಹು ಮತ್ತು ಕೇತು ಇದರಲ್ಲಿ ಕಾಣುವುದಿಲ್ಲ ಏಕೆಂದರೆ ಈ ಎರಡು ಗ್ರಹಗಳನ್ನು ದೈವಕ್ಕೆ ದುಷ್ಟ ಎಂದು ಪರಿಗಣಿಸಿಲಾಗಿದೆ ಹಾಗಾಗಿ ಇಲ್ಲಿ ಬರಿ ಆರು ಗ್ರಹಗಳನ್ನು ಕಾಣಬಹುದು ಸೂರ್ಯನು ಸೇರಿದರೆ ಏಳು ಗ್ರಹಗಳಾಗುವಂತೆ ಕೆತ್ತನೆಯ ವಿನ್ಯಾಸ ನಡೆದಿದೆ. ಇದಿಷ್ಟು ಒಳಗಡೆ ಇರುವ ಸಂಪೂರ್ಣ ಚಿತ್ರಕಾವ್ಯ ಈಗ ಹೊರಗಡೆ ಬಂದರೆ ಸಾಕಷ್ಟು ರೀತಿಯ ಕಥೆಗಳನ್ನು ಕಾಣಬಹುದು.

ಸೂರ್ಯ ವಿಗ್ರಹ
ಸೂರ್ಯ ವಿಗ್ರಹ ಮತ್ತು ನವಗ್ರಹಗಳು
ಸೂರ್ಯನ ಪತ್ನಿಯರು ಸಂಧ್ಯ ಮತ್ತು ಛಾಯಾ

ಮೊದಲನೆಯದಾಗಿ ಗಣೇಶನ ಕೆತ್ತನೆ ಮತ್ತು ಕೆಳಗಡೆ ವಾಹನವಾದ ಇಲಿ, ಮತ್ತು ಮುಂದಿನ ಚಿತ್ರವಾದದ್ದು ಅರ್ಜುನ ಈ ಅರ್ಜುನನ ಕಥೆ ನಾವೆಲ್ಲರೂ ಸಾಮಾನ್ಯವಾಗಿ ನೋಡಿರುವುದು ನಮ್ಮ ಅಣ್ಣಾವ್ರು ಡಾ. ರಾಜ್ ಕುಮಾರ್ ಅಭಿನಯದ ಬಬ್ರುವಾಹನ ಚಿತ್ರದಲ್ಲಿ. ಹೌದು ಅದೇ ಕಥೆಯ ಒಂದು ತುಣುಕು ಇಲ್ಲಿ ನೋಡಬಹುದು.

ಗಣೇಶನ ಮೂರ್ತಿ
ಅರ್ಜುನನ ಬಿಲ್ಲು ಬಾಣದ ಪ್ರದರ್ಶನ
ಮಹಿಷಾಸುರ

ಕೆಳಗಡೆ ಬಟ್ಟಲಿನಲ್ಲಿ ಇರುವ ಎಣ್ಣೆಯನ್ನು ನೋಡುತ್ತಾ ಮೇಲಿರುವ ಮೀನಿನ ಕಣ್ಣಿಗೆ ಗುರಿ ಮಾಡಿ ಹೊಡೆಯುವ ಅರ್ಜುನನ ಬಿಲ್ಲು ಬಾಣದ ಪರಾಕ್ರಮ ತೋರಿಸುವ ದೃಶ್ಯವಿದು. ನಂತರ ಸಿಗುವುದು ಮಹಿಷಾಸುರನ ಕೆತ್ತನೆ, ನಂತರ ಮುಂದೆ ಸಾಗಿದಂತೆ ನಮ್ಮ ಡಾ. ರಾಜ್ ಕುಮಾರ್ ಅಭಿನಯದ ಭಕ್ತಪ್ರಹ್ಲಾದ ಚಿತ್ರದಲ್ಲಿ ಬರುವ ಕೊನೆಯ ಭಾಗದ ಒಂದು ಅಮೂಲ್ಯ ದೃಶ್ಯದ ಚಿತ್ರಕಾವ್ಯ ನೋಡಬಹುದು. ಭಕ್ತಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶುಪುವಿನ ಪಾತ್ರ ಡಾ. ರಾಜ್ ಕುಮಾರ್ ಅಲ್ಲದೆ ಬೇರೆ ಯಾರೇ ಮಾಡಿದರು ಆ ಪಾತ್ರದ ವಿಶೇಷತೆ, ಗಾಂಭೀರ್ಯ ಮತ್ತು ಭಯಂಕರ ಈ ಎಲ್ಲಾ ಗುಣಗಳು ಕಾಣಲು ಸಾಧ್ಯವಾಗುತ್ತಿರಲಿಲ್ಲ. ನಾರಾಯಣನ ದರ್ಶನಕ್ಕೆಂದು ಬಂದ ತಪೋ ಮುನಿಗಳನ್ನು ಒಳಗಡೆ ಬಿಡದೆ ತಡೆದ ಇಬ್ಬರು ದ್ವಾರಪಾಲಕರು ಮುನಿಗಳ ಶಾಪಕ್ಕೆ ಗುರಿಯಾಗುತ್ತಾರೆ ನಂತರ ಶಾಪದಿಂದ ಮುಕ್ತಿ ಹೊಂದಲು ನಾರಾಯಣನ ಮೊರೆ ಹೋದಾಗ ಶ್ರೀ ನಾರಾಯಣನು ದ್ವಾರಪಾಲಕರಿಗೆ ನೀವು ಮಿತ್ರರಾಗಿ ಏಳು ಜನ್ಮ ತಾಳಿ ನನ್ನ ಸನ್ನಿದಿಗೆ ಬರುವಿರೋ ಅಥವಾ ಶತ್ರುಗಳಾಗಿ ಮೂರು ಜನ್ಮ ತಾಳಿ ನನ್ನ ಸನ್ನಿದಿಗೆ ಬರುವಿರೋ ಎಂದು ಕೇಳಿದಾಗ ದ್ವಾರಪಾಲಕರು ನಾವು ನಿನ್ನ ಶತ್ರುಗಳಾದರು ಸರಿಯೇ ನಿನ್ನ ಸನ್ನಿಧಿಯನ್ನು ಬಿಟ್ಟು ಬಹಳ ಕಾಲ ಇರಲಾರೆವು ಎಂದು ಹೇಳಿ ಶಾಪ ವಿಮೋಚನೆಗಾಗಿ ನಾರಾಯಣನ ಶತ್ರುಗಳಾಗಿ ಭೂಮಿಯಲ್ಲಿ ಜನ್ಮ ತಾಳುತ್ತಾರೆ.

ಆ ಇಬ್ಬರಲ್ಲಿ ಒಬ್ಬನೇ ಹಿರಣ್ಯಕಶಿಪು ಇವನೇ ನಾರಾಯಣನ ವೈರಿ, ಅವನ ಮಗನಾಗಿ ಹುಟ್ಟಿದವನೇ ಪ್ರಹ್ಲಾದ, ನಾರಾಯಣನ ಪರಮ ಭಕ್ತ. ನನ್ನ ಮಗನೆ ನನ್ನ ವೈರಿಯನ್ನು ಆರಾಧಿಸುತ್ತಾನಲ್ಲ ಎಂದು ಕೋಪಗೊಂಡ ಹಿರಣ್ಯಕಶಿಪು ಭಕ್ತ ಪ್ರಹ್ಲಾದನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಅದೇ ನೀವು ಇಲ್ಲಿ ನೋಡುತ್ತಿರುವ ದೃಶ್ಯ. ಹಿರಣ್ಯಕಶಿಪು ಪ್ರಹ್ಲಾದನನ್ನು ಎಳೆದು ಕೊಂಡೊಯುತ್ತಿರುವುದು, ಬೆಂಕಿಯಲ್ಲಿ ಸುಡುತ್ತಿರುವುದು, ಆನೆಯ ಕೈಯಲ್ಲಿ ತುಳಿಸುತ್ತಿರುವುದು, ಬೆಟ್ಟದಿಂದ ನೂಕುತ್ತಿರುವುದು, ಹಾವಿನ ಕೈಯಲ್ಲಿ ಕಚ್ಚಿಸುತ್ತಿರುವುದು. ನಂತರ ಪ್ರಹ್ಲಾದನನ್ನು ಯಾವುದರಿಂದಲೂ ಸಾಯಿಸಲು ಸಾಧ್ಯವಾಗಲಿಲ್ಲ ಇದನೆಲ್ಲ ಕಂಡ ನಾರಾಯಣ ಹಿರಣ್ಯಕಶುಪುವಿನ ಅಟ್ಟಹಾಸ ಮಟ್ಟಹಾಕಲೆಂದು ಕಂಭದಿಂದ ನರಸಿಂಹ ರೂಪ ತಾಳಿ ಬಂದು ಅವನ ಹೊಟ್ಟೆ ಬಗೆದು ಕರುಳನ್ನು ಮಾಲೆಯನ್ನಾಗಿ ಮಾಡಿ ಕೊರಳಿಗೆ ಹಾಕಿ ಕೋಪದಿಂದ ಉಗ್ರ ರೂಪ ತೋರುತ್ತಿರುವ ದೃಶ್ಯ.

ಪ್ರಹ್ಲಾದನನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ
ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಡುತ್ತಿರುವ ದೃಶ್ಯ
ಪ್ರಹ್ಲಾದನನ್ನು ಆನೆಯ ಕಾಲಲ್ಲಿ ತುಳಿಸುತ್ತಿರುವುದು ಮತ್ತು ಬೆಟ್ಟದಿಂದ ನೂಕುತ್ತಿರುವ ದೃಶ್ಯ
ಪ್ರಹ್ಲಾದನನ್ನು ಹಾವಿನ ಕೈಯಲ್ಲಿ ಕಚ್ಚಿಸುತ್ತಿರುವ ದೃಶ್ಯ
ಹಿರಣ್ಯಕಶಿಪು ಕೋಪಕ್ಕೆ ನಾರಾಯಣನು ಕಂಭವನ್ನು ಸೀಳಿಕೊಂಡು ಬರುತ್ತಿರುವ ದೃಶ್ಯ
ಉಗ್ರನರಸಿಂಹ ರೂಪ

ಕೆಳಭಾಗದಲ್ಲಿ ವಿಷ್ಣುವಿನ ವಾಹನ ಗರುಡ ಕೈ ಮುಗಿಯುತ್ತಾ ನಿಂತಿರುವುದು, ಎಡಭಾಗದಲ್ಲಿ ನಾರಾಯಣನು ಶಾಂತನಾಗಲೆಂದು ಪ್ರಹ್ಲಾದ ಕೈ ಮುಗಿದು ಬೇಡುತ್ತಿರುವುದು, ಬಲಭಾಗದಲ್ಲಿ ಚಾಮ್ರದಾರಿಯರು ನಾರಾಯಣನಿಗೆ ಗಾಳಿಬೀಸುತ್ತಾ ನಿಂತಿರುವುದು ಹಾಗು ಇನ್ನೊಂದು ದೃಶ್ಯದಲ್ಲಿ ನರಸಿಂಹನ ಕೋಪವನ್ನು ಶಾಂತಗೊಳಿಸಲು ಡೋಲು ಡಮರುಗ ಬಾರಿಸುತ್ತಿರುವುದು. ಇದೆ ನರಸಿಂಹನು ಯೋಗನರಸಿಂಹ ಅವತಾರದ ಕೆತ್ತನೆಯನ್ನು ಗುಡಿಯ ಮೇಲೆ ಕಾಣಬಹುದು ಹಾಗು ವಾಹನವಾದ ಗರುಡ ಮತ್ತು ಅಕ್ಕಪಕ್ಕದಲ್ಲಿ ಶಾರ್ದೂಲ್ಲ ಹಾಗು ಕೊನೆಯಲ್ಲಿ ಹೊಯ್ಸಳರ ಲಾಂಛನಗಳನ್ನು ಸಹ ಕಾಣಬಹುದು.

ಯೋಗನರಸಿಂಹ ರೂಪ
ಗಜಚರ್ಮಧಾರ
ವರಾಹಿ
ವರಾಹ

ಈ ದೃಶ್ಯದಲ್ಲಿ ಕಾಣುವುದು ಶಿವ ಆದರೆ ಶಿವನ ಅವತಾರ ಗಜಚರ್ಮಧಾರ. ಆನೆಯ ಚರ್ಮವನ್ನು ಹೊದಿಕೆ ಮಾಡಿಕೊಂಡು ನಾಟ್ಯವಾಡುತ್ತಿರುವ ಶಿವ. ಇನ್ನೊಂದು ದೃಶ್ಯದಲ್ಲಿ ನಾರಾಯಣನ ವರಾಹಿ ಮತ್ತು ವರಾಹ ಅವತಾರ ಅದರಲ್ಲಿ ವರಾಹ ತನ್ನ ಹೆಗಲಮೇಲೆ ಭೂದೇವಿಯನ್ನು ಹೊತ್ತುಕೊಂಡೊಯ್ಯುವ ದೃಶ್ಯ. ಮುಂದೆ ನಡೆದಂತೆ ಶಿವ ಮತ್ತು ಪಾರ್ವತಿಯರ ಶಿಲ್ಪಿ ಕೆತ್ತನೆ ಹಾಗು ಕೆಳಗೆ ಶಿವನ ವಾಹನವಾದ ನಂದಿ ಇದರ ಬಲಭಾಗಕ್ಕೆ ಬ್ರಹ್ಮ ಮತ್ತು ಸರಸ್ವತಿ.

ಶಿವ ಮತ್ತು ಪಾರ್ವತಿ
ಬ್ರಹ್ಮ ಮತ್ತು ಸರಸ್ವತಿ
ಕಲ್ಲುಗಳ ಶಕ್ತಿ ಕುಂದುತ್ತಿರುವುದು

ಈಗ ಕಾಣುವ ದೃಶ್ಯದಲ್ಲಿ ಎಲ್ಲರೂ ಸೂಕ್ಷ್ಮವಾಗಿ ಗಮನಿಸಿದರೆ ಕಲ್ಲುಗಳ ಶಕ್ತಿಯನ್ನು ನೋಡಬಹುದು, ಎಲ್ಲವನ್ನು ಕೆತ್ತನೆ ಮಾಡಿರುವುದು ಒಂದೇ ಕಲ್ಲಿನಿಂದ ಅಲ್ಲ ಬದಲಾಗಿ ಒಂದೊಂದು ವಿಗ್ರಹಗಳು ಒಂದೊಂದು ಕಲ್ಲಿನಿಂದ ಕೆತ್ತನೆ ಮಾಡಿ ಅದನ್ನು ಒಳಗಡೆ ಕಬ್ಬಿಣದ ಸಹಾಯದಿಂದ ಒಂದಕೊಂದು ಅಂಟಿಕೊಂಡಂತೆ ಜೋಡಿಸಿರುವುದು. ಕಲ್ಲಿನಲ್ಲಿ ಎಷ್ಟು ಶಕ್ತಿ ಇರುತ್ತದೆಯೋ ಅಲ್ಲಿಯವರೆಗೂ ಅದು ವಿಗ್ರಹವಾಗಿ ಉಳಿದಿರುತ್ತದೆ ಶಕ್ತಿ ಕಡಿಮೆಯಾದಂತೆ ತಾನಾಗಿ ತಾನೇ ಉದುರುತ್ತಾ ಹೋಗುತ್ತದೆ. ಹೀಗೆ ಮುಂದಕ್ಕೆ ಸಾಗಿದಂತೆ ನಮಗೆ ಕಾಣುವುದು ಒಂದು ಹೆಣ್ಣು ಅಲಂಕಾರ ಮಾಡಿ ಕೊಳ್ಳುತ್ತಿರುವ ದೃಶ್ಯ, ತಲೆಯಲ್ಲಿ ಹೈರ್ಪಿನ್, ಕೈಯಲ್ಲಿ ಕುಂಕುಮದ ಬಟ್ಟಲು, ಕಾಲಿನಲ್ಲಿ ಹೀಲ್ಸ್ ಚಪ್ಪಲಿ ಹಾಗು ಕಾಲು ಗೆಜ್ಜೆ, ಕೈಯಲ್ಲಿ ಖಡ್ಗ, ತೋಳಿನಲ್ಲಿ ತೋಳುಬಂದಿ, ಕತ್ತಿನಲ್ಲಿ ಸರಮಾಲೆ, ಕಿವಿಯಲ್ಲಿ ಓಲೆ ಹಾಗು ಹಿಂಬದಿಯಲ್ಲಿ ಕಾಣುವ ಕೂದಲಿನ ಚಿತ್ರಣ ಇದೆಲ್ಲವನ್ನು ಮಾಡುತ್ತಿರುವ ಮಹಿಳೆ ನಾಚುತ್ತ ಬಿಂಕದಿ ನಿಂತ್ತಿದಾಳೆ. ನಮ್ಮ ಪೂರ್ವಿಕರು ಪರಾಕ್ರಮಿಗಳು ಮಾತ್ರ ಅಲ್ಲ ರಸಿಕತೆಯುಳ್ಳ ರಾಜರು ಹೌದು ಎಂದು ನಿರೂಪಿಸಲು ಇದೊಂದೇ ದೃಶ್ಯ ಸಾಕು. ಆ ಹೆಣ್ಣಿನ ವೈಭವತೆ ಮತ್ತು ಸೌಂದರ್ಯ ಹಾಗು ಪ್ರತಿಯೊಂದು ಹೆಣ್ಣನ್ನು ಪ್ರತಿಬಿಂಬಿಸುವ ನೈಜ ದೃಶ್ಯ ನೋಡುತ್ತಿದಂತೆ ಗಾಂಭೀರ್ಯತೆ ಹಾಗು ಗೌರವ ಎರಡೂ ಮನದಲ್ಲಿ ಮೂಡುವಂತೆ ಕೆತ್ತನೆಗಳನ್ನು ಮಾಡಿದ ಶಿಲ್ಪಿಗೆ ಹಾಗು ರಾಜರುಗಳಿಗೆ ಒಂದು ನಮನಗಳು.

ಹೆಣ್ಣು ಅಲಂಕಾರ ಮಾಡಿಕೊಳ್ಳುತ್ತಿರುವುದು
ನಟರಾಜನ ನಾಟ್ಯ
ವಿಷ್ಣುವಿನ ನಾಭಿಯಿಂದ ಹುಟ್ಟಿದ ಬ್ರಹ್ಮ
ಕೃಷ್ಣನ ಕಾಳಿಂಗ ಮರ್ಧನ

ಮುಂದಿನ ಕೆತ್ತನೆಯಲ್ಲಿ ಕಾಣುವುದು ನಟರಾಜ ನಾಟ್ಯ ಮಾಡುತ್ತಿರುವ ದೃಶ್ಯ ನಂತರ ಬರುವುದು ಬ್ರಹ್ಮ ಹುಟ್ಟಿದ ಕಥೆ. ಪುರಾಣದಲ್ಲಿ ಹೇಳಿದಂತೆ ಬ್ರಹ್ಮ ಹುಟ್ಟಿದ್ದು ವಿಷ್ಣುವಿನ ನಾಬಿಯಿಂದ ಎಂದು. ಸಮುದ್ರದಲ್ಲಿ ಏಳುಎಡೆಯ ಸರ್ಪದ ಕೆಳಗೆ ಮಲಗಿದ್ದಾಗ ವಿಷ್ಣುವಿನ ನಾಬಿಯ ಕರುಳ ಬಳ್ಳಿಯಿಂದ ಹುಟ್ಟಿದ ಬ್ರಹ್ಮನ ದೃಶ್ಯ ಇಲ್ಲಿ ಕಾಣಬಹುದು. ಮುಂದಿನ ದೃಶ್ಯ ಶ್ರೀಕೃಷ್ಣನು ಏಳುಎಡೆಯ ಸರ್ಪದ ತಲೆ ಮೇಲೆ ಕಾಲಿಟ್ಟು ಕಾಳಿಂಗ ಮರ್ಧನ ಮಾಡುತ್ತಿರುವ ದೃಶ್ಯ.

ಪಕ್ಕದಲ್ಲೇ ಇನ್ನೊಂದು ಕೆತ್ತನೆಯಲ್ಲಿ ಶ್ರೀ ಕೃಷ್ಣನು ಕೊಳಲನ್ನು ಊದುತ್ತಿರುವಾಗ ಗೋವುಗಳೆಲ್ಲಾ ಬಂದು ನಿಂತಿರುವ ದೃಶ್ಯ ಹಾಗು ಮುಂದಿನ ಚಿತ್ರದಲ್ಲಿ ತುಂಟ ಕೃಷ್ಣನು ಅಟ್ಟದಮೇಲೆ ಕಟ್ಟಿರುವ ಮಡಿಕೆಯಲ್ಲಿ ಬೆಣ್ಣೆ ಕದಿಯುತ್ತಿರುವ ದೃಶ್ಯ, ಮುಂದೆ ಸಾಗಿದಂತೆ ನಾಗ ಮತ್ತು ನಾಗಿಣಿ, ಇನ್ನೊಂದೆಡೆ ವಾಮನಿಗೆ ಭೂದೇವಿ ಧಾರೆಯೆರೆದು ಕೊಡುತ್ತಿರುವ ಒಂದು ನೋಟ. ಇದರ ನಂತರ ಬಲಿಚಕ್ರವರ್ತಿಯ ಕಥೆಯನ್ನು ಸಹ ನೋಡಬಹುದು. ಬಲಿಚಕ್ರವರ್ತಿ ತಪಸ್ಸು ಮಾಡಿ ವರಗಳನ್ನು ಕೇಳುವಾಗ ವಿಷ್ಣುವಿನ ಮೂರು ಪಾದಗಳನ್ನ ಕೇಳುತ್ತಾನೆ ಮೊದಲೆನೆಯದ್ದು ಭೂಮಿಗೆ ಎರಡನೆಯದ್ದು ಆಕಾಶಕ್ಕೆ ಮೂರನೆಯದ್ದು ತನ್ನ ತಲೆಮೇಲೆ ಪಾದ ಇಡುವಂತೆ ಕೇಳುತ್ತಾನೆ. ಇದರಲ್ಲಿ ವಿಷ್ಣು ಎರಡನೆಯ ಪಾದ ಆಕಾಶಕ್ಕೆ ಇಡುವಾಗ ಬ್ರಹ್ಮ ತನ್ನ ಪಾದಗಳಿಗೆ ನೀರು ಹಾಕುತ್ತಿರುವ ದೃಶ್ಯ.

ಗೋಕುಲದಲ್ಲಿ ಶ್ರೀಕೃಷ್ಣ
ಬೆಣ್ಣೆ ಕದಿಯುತ್ತಿರುವ ಶ್ರೀಕೃಷ್ಣ
ನಾಗ ಮತ್ತು ನಾಗಿಣಿ
ವಾಮನಿಗೆ ಭೂದೇವಿ ಧಾರೆಯೆರೆದು ಕೊಡುತ್ತಿರುವುದು
ಬಲಿಚಕ್ರವತಿಯ ಮೂರು ಪಾದಗಳಲ್ಲಿ ಎರಡನೇ ಪಾದ ಆಕಾಶಕ್ಕೆ ಇಟ್ಟಾಗ ಬ್ರಹ್ಮ ಪಾದಗಳಿಗೆ ನೀರು ಹಾಕಿ ನಮಸ್ಕರಿಸುತ್ತಿರುವುದು

ಮುಂದೆ ಸಾಗಿದಂತೆ ಪುರಾಣದಲ್ಲಿ ರಾವಣನ ಕಥೆಯು ಕೂಡ ಇಲ್ಲಿ ನೋಡಬಹುದು. ರಾವಣ ಕುಬೇರನನ್ನು ಸೋಲಿಸಿ ಲಂಕೆಗೆ ಪುಷ್ಪಕ ವಿಮಾನದಲ್ಲಿ ಹಿಂತಿರುಗುವಾಗ ಅಡ್ಡ ಬಂದ ಕೈಲಾಸ ಪರ್ವತವನ್ನು ನೋಡಿದ ಆದರೆ ಅಲ್ಲೇ ಶಿವ ಮತ್ತು ಪಾರ್ವತಿ ಏಕಾಂತದಲ್ಲಿ ಇರುವುದನ್ನು ಅರಿಯದೆ ಪರ್ವತವನ್ನು ಪಕ್ಕಕ್ಕೆ ಇಟ್ಟು ಮುಂದೆ ಸಾಗುತೇನೆ ಎಂದು ಕೈಲಾಸ ಪರ್ವತವನ್ನು ಎತ್ತುವಾಗ ಪರ್ವತ ಅಲ್ಲಾಡತೊಡಗಿತು ಆಗ ಕೋಪಗೊಂಡ ಶಿವ ಮತ್ತು ಪಾರ್ವತಿ ಇದಕ್ಕೆ ರಾವಣನೇ ಕಾರಣ ಎಂದು ಶಿವನು ತನ್ನ ಕಾಲಿನ ಹೆಬ್ಬೆಟ್ಟಿನಿಂದ ಪರ್ವತವನ್ನು ತುಳಿಯುತ್ತಿದ್ದಾಗ ರಾವಣನು ಪರ್ವತದ ಭಾರಕ್ಕೆ ಕಿರುಚಿ ನರಳಾಡುತ್ತಿರುವ ದೃಶ್ಯ ಈ ಕೆತ್ತನೆಯಲ್ಲಿ ಕಾಣಬಹುದು

ರಾವಣ ಕೈಲಾಸ ಪರ್ವತ ಎತ್ತಿದ ದೃಶ್ಯ
ದೇವಸ್ಥಾನದ ಎಡಭಾಗ

ಇನ್ನೊಂದು ಕಡೆ ಯೋಗಾನರಸಿಂಹನನ್ನು ನೋಡಿದಂತೆ ಅದರ ವಿರುದ್ಧ ದಿಕ್ಕಿನಲ್ಲಿ ಶಿವ ಪಾರ್ವತಿಯನ್ನು ನೋಡಬಹುದು ಮಧ್ಯದಲ್ಲಿ ಶಿವ ಮತ್ತು ಪಾರ್ವತಿ ಬಲಗಡೆ ಬ್ರಹ್ಮ ಮತ್ತು ಗಣೇಶ ಹಾಗೆ ಎಡಗಡೆ ವಿಷ್ಣು ಮತ್ತು ಸುಬ್ರಮಣ್ಯ ಸ್ವಾಮಿ ಮತ್ತು ಶಿವನ ಕೆಳಗೆ ವಾಹನವಾದ ನಂದಿಯನ್ನು ಕಾಣಬಹುದು ಹಾಗೆ ಗುಡಿಯ ಮೇಲೆ ಕಳಸದ ಜೊತೆ ಹೊಯ್ಸಳರ ಲಾಂಛನವನ್ನು ಕೂಡ ಕಾಣಬಹುದು.

ನಂತರ ಬರುವುದು ಮತ್ಸಕನ್ಯೆಯ ಕೆತ್ತನೆ. ಇವರಿಗೆ ಹುಟ್ಟಿದಾಗಿನಿಂದ ವಿಷಹಾಕಿ ಬೆಳೆಸಿರುತ್ತಾರೆ ಇವರಿಗೆ ಮೈ ತುಂಬ ವಿಷ, ರಾಜರು ಇನ್ನೊಬ್ಬರ ಮೇಲೆ ಸೇಡು ತೀರಿಸಿಕೊಳ್ಳುವಾಗ ಇವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇನ್ನೊಂದು ಆಶ್ಚರ್ಯಕರ ಸಂಗತಿ ಏನೆಂದರೆ ರಾಜರ ಆಳ್ವಿಕೆ ಇದ್ದಂತ ಸಮಯದಲ್ಲಿ ನ್ಯಾಯಾಧೀಶರ ಒಂದು ಕೆತ್ತನೆಯನ್ನು ಸಹ ನೋಡಬಹುದು. ಹೊಯ್ಸಳರ ಕಾಲದಲ್ಲಿ ರಾಜರ ನಿರ್ಧಾರವೇ ಕೊನೆಯ ನಿರ್ಧಾರ ಆದರೆ ಅಲ್ಲಿ ನ್ಯಾಯಾಧೀಶರ ಕೆತ್ತನೆಯನ್ನು ನೋಡಿದರೆ ಮುಂದಿನ ಪೀಳಿಗೆಗೆ ನ್ಯಾಯಾಧೀಶರು ಕೂಡ ಇರಬೇಕು ಎಂಬ ಮುಂದಾಲೋಚನೆಯೋ ಅಥವಾ ಆ ಸಮಯದಲ್ಲೇ ನ್ಯಾಯಾಧೀಶರು ಇದ್ದ ಪ್ರತಿಬಿಂಬವೋ ಗೊತ್ತಿಲ್ಲ ಆದರೆ ಬ್ರಿಟೀಷರ ನ್ಯಾಯಾಧೀಶರು ಇರುವ ರೀತಿಯಲ್ಲೇ ಒಂದು ಕೋಟು ತಲೆಯಮೇಲೆ ಒಂದು ಬಟ್ಟೆ ಹಾಗು ಕೈಯಲ್ಲಿ ಪಾಶವನ್ನು ಸಹ ನೋಡಬಹುದು. ಮುಂದಿನ ದೃಶ್ಯದಲ್ಲಿ ಗರುಡ ಕೈಮುಗಿಯುತ್ತ ನಿಂತಿರುವುದು ಮತ್ತು ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಹೊತ್ತು ನಿಂತಿರುವ ಅದ್ಭುತವಾದ ಮನಮೋಹಕ ದೃಶ್ಯ. ಹಾಗು ಮುಂದಿನ ದೃಶ್ಯ ನಂದಿಕೇಶ್ವರ ಶಿವ ಮತ್ತು ಪಾರ್ವತಿಯನ್ನು ಹೊತ್ತು ನಡೆಯುತ್ತಿರುವ ನೋಟ.

ವಿಷಕನ್ಯೆ
ನ್ಯಾಯಾಧೀಶರು
ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಹೊತ್ತು ನಿಂತಿರುವುದು
ನಂದಿಕೇಶ್ವರ
ಮಹಿಷಾಸುರನನ್ನು ಸಂಹಾರ ಮಾಡುತ್ತಿರುವ ಚಾಮುಂಡಿ
ಸುಬ್ರಮಣ್ಯ ಸ್ವಾಮಿ
ಭೀಮ

ಮುಂದಿನ ದೃಶ್ಯದಲ್ಲಿ ನೋಡುವುದು ಮಹಿಶಾಸುರ ಕೋಣದ ರೂಪದಲ್ಲಿ ಬಂದಾಗ ಚಾಮುಂಡಿ ಸಂಹಾರ ಮಾಡಿದ ದೃಶ್ಯ. ಮುಂದಿನ ದೃಶ್ಯ ಸುಬ್ರಮಣ್ಯ ಸ್ವಾಮಿಯ ಕೆತ್ತನೆಯಾಗಿದೆ ನಂತರ ಬರುವುದು ಭೀಮ, ಅವನ ಗುಂಗುರು ಕೂದಲು ಸಹ ಸೇರಿ ಕೆತ್ತಿರುವುದು ಬಹಳ ವಿಶಿಷ್ಟಕರ ಸಂಗತಿ

ಇದರ ನಂತರ ಬರುವುದು ಕಾಲಭೈರವನ ಕಥೆ. ಅಂಧಕಾಸುರ ಎಂಬ ರಾಕ್ಷಸನನ್ನು ಸಂಹರಿಸಲು ಶಿವನು ಕಾಲಭೈರವನ ರೂಪ ತಾಳಿ ಅಂಧಕಾಸುರನ ರುಂಡವನ್ನು ಕತ್ತರಿಸಿ ಅವನ ತಲೆಯನ್ನು ಎಡಗೈಯಲ್ಲಿ ಹಿಡಿದಾಗ ಕಾಲಭೈರವನ ವಾಹನವಾದ ಶ್ವಾನ ಅಂದರೆ ನಾಯಿ ರಕ್ತ ಕುಡಿಯುವುದಕ್ಕೆ ಎಗರುತ್ತಿರುವಾಗ ಬೇತಾಳಗಳು ತಡೆಯುತ್ತಿರುವ ಅಪರೂಪದ ದೃಶ್ಯ. ಕಾಲಭೈರವನಿಗೆಂದೇ ಒಂದು ಪ್ರತ್ಯೇಕ ಗುಡಿ ಇದೆ ಆದರೆ ಆ ದೊಡ್ಡ ವಿಗ್ರಹ ಕೂಡ ಭಿನ್ನವಾಗಿರುವ ಕಾರಣ ಪೂಜೆ ನಡೆಯುವುದಿಲ್ಲ. ಆ ಕಾಲಭೈರವನ ಎದುರಿಗೆ ಕಾಳಿಯ ವಿಗ್ರಹವಿದೆ, ಇದರ ಅರ್ಥವೇನೆಂದರೆ ಕಾಲಭೈರವ ಅಲೆಮಾರಿ ಆತ ಯಾವಾಗ ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯುವುದಿಲ್ಲ ಹಾಗಾಗಿ ಅವನನ್ನ ಕಾಯುವುದಕ್ಕೆ ಕಾಳಿ ಎದುರು ಕುಳಿತಿರುತ್ತಾಳೆ. ದುಷ್ಟ ಸಂಹಾರವಾದಮೇಲೆ ಕಾಲಭೈರವ ತಲೆ ತಂದು ಕಾಳಿಯ ಬಳಿ ಇಡುತ್ತಾನೆ ಅದರಂತೆಯೇ ಈ ಚಿತ್ರದಲ್ಲಿ ಕಾಳಿಯ ಎಡಭಾಗದಲ್ಲಿ ಕೆಳಗೆ ಒಂದು ರುಂಡ ಕಾಣಬಹುದು. ಹಾಗೆ ಗಮನಿಸಿದರೆ ಕಾಳಿಯ ಎಡಕ್ಕೆ ಒಂದು ಕೆತ್ತನೆ ಇದೆ ಆದರೆ ಬಲಗಡೆ ಇಲ್ಲ ಆದರೆ ಆ ಕಲ್ಲಿನ ಮೇಲೆ ಒಂದು ನಕ್ಷೆಯನ್ನು ಕಾಣಬಹುದು. ಇದನ್ನು ಬೇಕಂತಲೆ ಕಾಲಿ ಬಿಟ್ಟಿರುವ ಕಲ್ಲು, ಮುಂದಿನ ಪೀಳಿಗೆಯವರು ಇದೆ ರೀತಿ ಕೆತ್ತಿ ತೋರಿಸಲಿ ಎಂದು ಸವಾಲು ಹಾಕಿ ಬಿಟ್ಟಿರುವ ನಕ್ಷೆ ಕಲ್ಲು ಅದು. ಕೇಳುವುದಕ್ಕೆ ಮೈ ರೋಮಾಂಚನವಾಗುತ್ತೆ ಅಲ್ವಾ?

ಕಾಲಭೈರವನ ಕೆತ್ತನೆ
ಕಾಲಭೈರವನ ವಿಗ್ರಹ
ಕಾಳಿ ಮತ್ತು ಬಲಭಾಗದಲ್ಲಿ ನೀಲಿನಕ್ಷೆ ಬರೆದು ಸವಾಲು ಹಾಕಿ ಬಿಟ್ಟಿರುವ ದೃಶ್ಯ

ಇನ್ನು ಮುಂದಕ್ಕೆ ನಡೆದಂತೆ ನಮಗೆ ಕಾಣುವುದು ನಾಟ್ಯ ಮಾಡುತ್ತಿರುವ ಗಣೇಶನ ಮೂರ್ತಿ. ಈ ಗಣೇಶ ಮೂರ್ತಿ ಆರು ಕೈಗಳುಳ್ಳದ್ದಾಗಿದೆ, ಹಾಗು ಅಕ್ಕ ಪಕ್ಕದಲ್ಲಿ ಚಾಮ್ರದಾರಿಯರು ಗಾಳಿಬೀಸುತ್ತಿರುವುದು ಹಾಗು ಡೋಲು ಡಮರುಗ ಬಾರಿಸುತ್ತಿರುವ ದೃಶ್ಯಗಳನ್ನು ಕಾಣಬಹುದು.

ನಾಟ್ಯ ಮಾಡುತ್ತಿರುವ ಗಣೇಶ

ಮುಂದಿನ ಚಿತ್ರದಲ್ಲಿ ಮತ್ತೊಂದು ಸೂರ್ಯ ಕೆತ್ತನೆಯನ್ನು ಕಾಣಬಹುದು ಇದು ಏಳು ಕುದುರೆಗಳ ರಥವೇರಿ ಬರುತ್ತಿರುವ ದೃಶ್ಯ ಈ ಸೂರ್ಯ ಬರಿ ಕೆತ್ತನೆಯಾಗಿದ್ದು ಪೂಜಿಸಲ್ಪಡುವುದಿಲ್ಲ. ಇದರ ನಂತರ ಬರುವುದು ಒಂದೇ ಕಲ್ಲಿನಲ್ಲಿ ಕೆತ್ತಿರುವ ಅಪರೂಪದ ಕಥೆ ಹಾಗು ಇದನ್ನು ಗಜೇಂದ್ರ ಮೋಕ್ಷ ಎಂದು ಕರೆಯುತ್ತಾರೆ.

ಗಜೇಂದ್ರ ಮೋಕ್ಷ
ಅಹಂಕಾರ ಮಧನ ಅಥವಾ ಆಹಾರ ಸರಪಳಿ

ಕೆಳಗಿರುವ ಋಷಿಮುನಿಗಳಿಂದ ಮೇಲಿರುವ ವಿಷ್ಣುವಿನ ಸುದರ್ಶನ ಚಕ್ರದವರೆಗೆ ಈ ಕಥೆಯನ್ನು ವಿವರಿಸಲಾಗಿದೆ. ಕೆಳಗೆ ಋಷಿಮುನಿಗಳು ತಪಸ್ಸಿಗೆ ಕುಳಿತ್ತಿದಾಗ ಇಂದ್ರನು ಮೊಸಳೆಯ ರೂಪದಲ್ಲಿ ತಪಸ್ಸನ್ನು ಭಂಗ ಪಡಿಸಲು ಬರುತ್ತಾನೆ ಅದನ್ನು ತಡೆಯಲು ಆನೆ ಬರುತ್ತದೆ. ಆ ಆನೆ ಪಕ್ಕದಲ್ಲೇ ಇದ್ದ ಒಂದು ಕೊಳದಲ್ಲಿ ತಾವರೆಹೂವನ್ನು ಸೊಂಡಿಲಿನಲ್ಲಿ ಕಿತ್ತು ಹಿಡಿದು ವಿಷ್ಣುವನ್ನು ಕರೆಯುತ್ತದೆ. ಆಗ ವಿಷ್ಣುವಿನ ವಾಹನವಾದ ಗರುಡ ವಿಷ್ಣುವನ್ನು ಹೊತ್ತು ತಂದಾಗ ವಿಷ್ಣು ಅದನ್ನು ನೋಡಿ ಕೋಪಗೊಂಡು ಕೈಯಲ್ಲಿದ್ದ ಸುದರ್ಶನ ಚಕ್ರವನ್ನು ಬಿಟ್ಟು ಇಂದ್ರನಿಗೆ ಹೊಡೆಯುತ್ತಾನೆ. ಆಗ ಇಂದ್ರನು ವಿಷ್ಣುವಿಗೆ ತಪ್ಪಾಯಿತು ಎಂದು ಕೈಮುಗಿದು ಕೇಳುತ್ತಿರುವ ಕಥೆ. ಋಷಿಮುನಿಗಳು ಇಂದ್ರನ ಸ್ಥಾನಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ ಎಂದು ತಿಳಿದ ಇಂದ್ರ ಎಲ್ಲಿ ತನ್ನ ಸ್ಥಾನ ಹೋಗುತ್ತದೋ ಎಂದು ಹೆದರಿ ಅವರ ತಪಸ್ಸನ್ನು ಭಂಗ ಪಡಿಸಲು ಮಾಡಿದ ತಂತ್ರಕ್ಕೆ ವಿಷ್ಣುವಿನ ಸುದರ್ಶನ ಚಕ್ರಕ್ಕೆ ಗುರಿಯಾಗುವ ಅಮೋಘ ಕಥೆಯನ್ನು ಈ ಒಂದು ಪುಟ್ಟ ಕಲ್ಲಿನಲ್ಲಿ ತೋರಿಸಿರುವುದೇ ಅಚ್ಚರಿ ಇದೆಲದಕ್ಕೂ ಕಾರಣ ಗಜೇಂದ್ರನೇ ಆಗಿರುವುದರಿಂದ ಇದನ್ನು ಗಜೇಂದ್ರಮೋಕ್ಷ ಎಂದು ಕರೆಯುತ್ತಾರೆ. ಮುಂದಿನ ಕೆತ್ತನೆಯಲ್ಲಿ ಶಿವ ಮತ್ತು ಪಾರ್ವತಿ ಹಾಗು ಅಕ್ಕ ಪಕ್ಕದಲ್ಲಿ ಚಾಮ್ರದಾರಿಯರನ್ನು ಕಾಣಬಹುದು. ಮತ್ತೊಂದು ಕಲ್ಲಿನಲ್ಲಿ ಗಜೇಂದ್ರ ಮೋಕ್ಷದ ರೀತಿಯಲ್ಲೇ ಇನ್ನೊಂದು ಕೆತ್ತನೆ ಇದೆ. ಇದು ಮನುಷ್ಯ ತಾನೇ ದೊಡ್ಡವನು ಎಂದು ಬೀಗುವ ಅಹಂಕಾರವನ್ನು ಮಟ್ಟ ಹಾಕುವ ಒಂದು ಚಿತ್ರವಾದರೆ ಇನ್ನೊಂದು ಅರ್ಥದಲ್ಲಿ ಆಹಾರ ಸರಪಳಿಯನ್ನು ವರ್ಣಿಸುವ ಚಿತ್ರವಾಗಿದೆ. ಕೆಳಗೆ ಒಬ್ಬ ಪುಟ್ಟ ಬಾಲಕ ಇರುತ್ತಾನೆ ಆ ಮಕ್ಕಳ ಮುಂದೆ ಮನುಷ್ಯ ತಾನೇ ದೊಡ್ಡವನು ಎಂದು ಬೀಗುತ್ತಾನೆ ಅವನ ನಂತರ ಜಿಂಕೆಗಳು ಮನುಷ್ಯನಿಗಿಂತ ತಾನೇ ಸುಂದರ ಎಂದು ಅಹಂಕಾರ ತೋರಿಸಿದರೆ ಜಿಂಕೆಯನ್ನು ನುಂಗುತ್ತಾ ಹಾವು, ಹಾವನ್ನು ತುಳಿಯುತ್ತಾ ಆನೆ, ಆನೆಯನ್ನು ತಿನ್ನುತ್ತಾ ಹುಲಿ ಹಾಗು ಹುಲಿಯನ್ನು ತಿನ್ನುತ್ತಾ ಶರಭ ಮತ್ತು ಕೊನೆಯಲ್ಲಿ ಶರಭವನ್ನು ಎರಡು ತಲೆಯುಳ್ಳ ಗಂಡಭೇರುಂಡ ಕಚ್ಚಿ ಎತ್ತಿಕೊಂಡು ಹೋಗುತ್ತಾ ಎಲ್ಲರಿಗಿಂತ ತಾನೇ ದೊಡ್ಡವನು ಎಂದು ಹೇಳುತ್ತಿರುವ ಅತೀ ಸುಂದರವಾಗಿ ವರ್ಣಿಸಲ್ಪಟ್ಟ ದೃಶ್ಯ.

ಕೊನೆಯದಾಗಿ ಈಗ ನೋಡುವ ದೃಶ್ಯ ಈ ಇಡೀ ದೇವಸ್ಥಾನದ ಸಂಪೂರ್ಣ ವರ್ಣನೆ ಬರೆದಿರುವ ಶಾಸನದ ಕಲ್ಲು. ಯಾವುದೇ ಇತಿಹಾಸ ಪ್ರಸಿದ್ಧ ಪ್ರದೇಶಗಳಿಗೆ ಭೇಟಿಕೊಟ್ಟರೆ ಅಲ್ಲಿ ಇದೆ ರೀತಿಯ ಶಾಸನಗಳನ್ನ ಕಾಣಬಹುದು, ಅದು ಆ ಜಾಗದ ಮಹತ್ವ ಮತ್ತು ಇತಿಹಾಸವನ್ನು ತಿಳಿಸಿಕೊಡುವ ಕಲ್ಲು. ಅಂದಿನ ಬೆಳವಣಿಗೆಗಳು ಸ್ತಬ್ಧವಾಗಿ ಇಂದು ಬರೀ ಸಂರಕ್ಷಣೆಗೆ ಎಂದೇ ಮೀಸಲಾಗಿದೆ.

ಶಾಸನ ಕಲ್ಲು

ಹೀಗೆ ಭೂಚಿಕೇಶ್ವರ ಎಂಬ ಒಂದು ಪುಟ್ಟ ದೇವಾಲಯ ಒಂದು ಸಮಗ್ರ ಚರಿತ್ರೆ ಹೊಂದಿರುವ ಘತಕಾಲದ ವೈಭವವನ್ನು ತನ್ನ ಗೋಡೆಯಮೇಲೆ ಅಲಂಕರಿಸಿಕೊಂಡು ಬಂದವರಿಗೆ ಕೈ ಬೀಸಿ ಕರೆದು ತನ್ನ ಕಥೆಯನ್ನು ಹೇಳುತ್ತಾ ಹೋಗುತ್ತದೆ.

ಈ ಪ್ರದೇಶಕ್ಕೆ ಭೇಟಿಕೊಟ್ಟಾಗ ಅದರ ಸಂಪೂರ್ಣ ಇತಿಹಾಸ, ಕೆತ್ತನೆ ಹಾಗು ಶಿಲ್ಪಕಲೆಗಳ ಕಥೆಯನ್ನು ನಮಗೆ ತಿಳಿಸಿಕೊಟ್ಟ ಶಶಿಕುಮಾರ್ (ಗೈಡ್) ರವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಹೀಗೆ ನಾವು ಕಂಡು ಕಾಣದೆ ನಮ್ಮ ಸುತ್ತಮುತ್ತಲಿನಲ್ಲಿ ಇತಿಹಾಸ ಪರಂಪರೆಯುಳ್ಳ ಎಷ್ಟೋ ಕಥೆಗಳು ಮಣ್ಣಿನ ಅಡಿಯಲ್ಲಿ ಹೂತು ಹೋಗಿದೆ. ನಮ್ಮ ಈ ಬ್ಯುಸಿಯ ದಿನಗಳಲ್ಲಿ ಸ್ವಲ್ಪ ಸಮಯ ಸಿಕ್ಕಾಗ ಕಾಲಹರಣ ಮಾಡುವ ಬದಲು ಇಂತಹ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಪಟ್ಟರೆ ಹೂತುಹೋದ ಇತಿಹಾಸವು ಮತ್ತೆ ಮೇಲೆದ್ದು ತನ್ನ ವೈಭವವನ್ನು ಪ್ರದರ್ಶಿಸುತ್ತದೆ. ನಾವು ಮತ್ತು ನಮ್ಮ ಮುಂದಿನ ಪೀಳಿಗೆಯವರು ಪಾಶ್ಚತ್ಯ ದೇಶದ ಸೊಬಗಿಗೆ ಮಾರುಹೋಗುವ ಬದಲು ನಮ್ಮಲ್ಲಿರುವ ಅತ್ಯಂತ ಸುಂದರ ಶ್ರೇಷ್ಠ ಹಾಗು ಅರ್ಥಗರ್ಭಿತ ಸಂಸ್ಕೃತಿಯನ್ನು ತಿಳಿದು ತಿಳಿಸಿಕೊಟ್ಟರೆ ಅದಕ್ಕಿಂತ ಮಹತ್ತರವಾದ ಕೆಲಸ ಇನ್ನೊಂದಿಲ್ಲ. ಚರಿತ್ರೆಯನ್ನು ಉಳಿಸುವುದೇ ಒಂದು ದೊಡ್ಡ ಚರಿತ್ರೆಯಾದರೆ ನಾವು ನೀವು ಮಾಡುವ ಕೆಲಸಗಳು ಚರಿತ್ರೆಯ ಪುಟಗಳಲ್ಲಿ ಉಳಿಯುವುದಾದರೂ ಹೇಗೆ???…

-ಕೃಷ್ಣ ಮೂರ್ತಿ. ಕೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close