ಎದೆತುಂಬಿ ಬರೆಯುವೆನು…

ಎಸ್ ಪಿ ಬಿ, ಶ್ರೀಪತಿ ಪಂಡಿತಾರಾದ್ಯುಲ ಬಾಲಸುಬ್ರಮಣ್ಯಂ. ಚಿರಪರಿಚಿತರಾಗಿರುವುದು ಎಸ್ ಪಿ ಬಿ ಎಂದು, ಎಸ್ ಪಿ ಬಿ ಎಂದೊಡನೆ ಆ ಹೆಸರಲ್ಲಿನ ಮುಗ್ಗ್ದತೆ, ಒಂದು ಶ್ರೇಷ್ಠತೆ ಮನಸಿನಲ್ಲಿ ಮೂಡುತ್ತದೆ. ಎಲ್ಲರಿಗು ಚಿರಪರಿಚಿತರಾಗಿ ಎಲ್ಲರ ಮನೆ ಮನಗಳಲ್ಲಿ, ತಂದೆ ಮಗಳಿಗೆ ಹಾಡುವ ಹಾಡಲ್ಲಿ, ಮಗ ಅಪ್ಪನಿಗೆ ಹಾಡುವ ಹಾಡಲ್ಲಿ, ಹುಡುಗ ತನ್ನ ಗೆಳತಿಯನ್ನು ಖುಷಿಪಡಿಸುವ ಹಾಡಲ್ಲಿ, ಬೆಳಗಿನ ಸುಪ್ರಭಾತದಲ್ಲಿ, ತಿಳಿಸಂಜೆಯ ತಂಪಲ್ಲಿ, ಕೆಲಸದಲ್ಲಿ, ಮನೆಯಲ್ಲಿ ಎಲ್ಲೆಲ್ಲೂ ನಮಗೆ ಗೊತ್ತಿಲ್ಲದೇ ನಮ್ಮ ಜೊತೆ ಪ್ರತಿದಿನ ಇರುವ ಈ ಅದ್ಬುತ ಕಲಾವಿದ ಎಸ್.ಪಿ.ಬಿ. ಇವರು ನಗು ಮುಖದಲ್ಲೇ ಮಾಡಿದ ಸಾಧನೆಗಳು ಅಪಾರ ಮತ್ತು ಅಗಾಧ. ಈ ವ್ಯಕ್ತಿಯ ಬಗ್ಗೆ ಎಷ್ಟು ಹೇಳಿದರು ಕೊನೆಯಲ್ಲಿ ಒಂದು ಮಾತಿನಿಂದ ಮತ್ತೆ ಚರ್ಚೆಗೆ ವಿಷಯವಾಗಿ ಪುನಃ ಬರುವ ಏಕೈಕ ಕಲಾವಿದ. ಹಲವಾರು ಭಾಷೆಗಳಲ್ಲಿ ಜನರನ್ನು ಹಾಗು ಅವರ ಮನಸ್ಸನ್ನು ಗೆದ್ದಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಒಂದು ಸಣ್ಣ ಲೋಪದೋಷವಿಲ್ಲದಂತೆ ಬದುಕಿ ಮಾದರಿಯಾಗಿ ದೇಶದ ಹೆಸರನ್ನು ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಒಬ್ಬ ಮಹಾನ್ ಕಲಾವಿದ. ಈ ವ್ಯಕ್ತಿ ಬಗ್ಗೆ ಎಷ್ಟೇ ಹೊಗಳಿದರು ಕಡಿಮೆಯೇ ಹೌದು

ಎಸ್ ಪಿ ಬಾಲಸುಬ್ರಮಣ್ಯಂ ರವರು ಹುಟ್ಟಿದ್ದು 4th ಜೂನ್ 1946 ನೆಲ್ಲೂರು, ಆಗ ಅದು ಮದ್ರಾಸ್ ಆಡಳಿತದಲ್ಲಿತ್ತು. ಈಗ ಕೊನೇಟಂಪೇಟ ಅದು ಆಂಧ್ರಪ್ರದೇಶಕ್ಕೆ ಸೇರಿದೆ. ಇವರ ತಂದೆ ಎಸ್ ಪಿ ಸಂಬಮೂರ್ತಿ, ಹರಿಕಥೆ ವಿದ್ವಾಂಸರು ಮತ್ತು ತಾಯಿ ಶಕುಂತಲಮ್ಮ ಇವರಿಗೆ ಹುಟ್ಟಿದ ಐದು ಹೆಣ್ಣು ಮತ್ತು ಮೂರು ಗಂಡು ಮಕ್ಕಳಿಗೆ ಎಸ್ ಪಿ ಬಿ ರವರು ಕೂಡ ಒಬ್ಬರು. ಇದರಲ್ಲಿ ಖ್ಯಾತ ಹಿನ್ನಲೆ ಗಾಯಕಿಯಾದ ಎಸ್ ಪಿ ಶೈಲಜಾ ರವರು ಕೂಡ ಒಡಹುಟ್ಟಿದವರು. ಎಸ್ ಪಿ ಬಿ ರವರ ಹೆಂಡತಿ ಸಾವಿತ್ರಿ ಹಾಗು ಅವರ ಎರಡು ಮಕ್ಕಳು ಪಲ್ಲವಿ ಮತ್ತು ಚರಣ್

ಎಸ್ ಪಿ ಬಿ ರವರ ಸಾಧನೆಯ ಬಗ್ಗೆ ಹೇಳುವುದಾದರೆ. ಇವರು 40,000 ಹಾಡುಗಳನ್ನ ಹಾಡಿದ ಏಕಮಾತ್ರ ಕಲಾವಿದ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಕೊಂಕಣಿ, ಒಡಿಯಾ, ಅಸ್ಸಾಮೀಸ್, ಬಡಗ, ಸಂಸ್ಕೃತಿ, ಬೆಂಗಾಲಿ, ಮರಾಠಿ, ಪಂಜಾಬಿ, ಇಂಗ್ಲಿಷ್ ಮತ್ತು ಹೀಗೆ 15 ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ.

ಎಸ್ ಪಿ ಬಿ ಅವರದ್ದೇ ಆದ ಸ್ವಂತ ಹಾಡುಗಳು ಅಲ್ಲದೆ, ದೇವರನಾಮ, ಚಿತ್ರಗೀತೆಗಳು, ಭಾವಗೀತೆ, ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗೀತೆಗಳನ್ನು ಸಹ ಹಾಡಿದ್ದಾರೆ. ನಟನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಡಬ್ಬಿಂಗ್ ಕಲಾವಿದರಾಗಿಯೂ ಕೂಡ ಕೆಲಸ ಮಾಡಿದ್ದಾರೆ.

ಇವರಿಗೆ ಒದಗಿ ಬಂದಂತ ಪ್ರಶಸ್ತಿಗಳ ಬಗ್ಗೆ ಹೇಳುವುದಾದರೆ, 2001 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2011 ರಲ್ಲಿ ಪದ್ಮಭೂಷಣ ಪ್ರಶಸ್ತಿ, 6 ರಾಷ್ಟ್ರಪ್ರಶಸ್ತಿ, ಮತ್ತು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಿಂದ ಒಟ್ಟು 23 ರಾಜ್ಯಪ್ರಶಸ್ತಿಗಳು ಬಂದಿದೆ. 4 ಡಾಕ್ಟ್ರೇಟ್ ಹಾಗು ಕನ್ನಡ ನಾಡಿನ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವಗಾನಯೋಗಿ ಗೌರವ, ಆಂಧ್ರವಿಶ್ವವಿದ್ಯಾನಿಲಯದಿಂದ ಕಲಾಪ್ರಪೂರ್ಣ ಗೌರವ, ಮಂತ್ರಾಲಯದ ಆಸ್ತಾನಾ ವಿದ್ವಾನ್ ಗೌರವ, ಹಾಗು ತಮಿಳುನಾಡಿನ ಕಲೈಮಾಮಣಿ ಗೌರವ ಹಾಗು ಸಾಂಸ್ಕೃತಿಕ ಕಲಾ ಸಿರಿ ಗೌರವ, ಮುಂಬೈನಲ್ಲಿ ಮಿಯಾನ್ ತಾನ್ಸೇನ್ ಪ್ರಶಸ್ತಿ, ಲತಾ ಮಂಗೇಶ್ಕರ್ ಪ್ರಶಸ್ತಿ, ಕೇರಳದ ಹರಿವರಾಸನಂ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಇಷ್ಟಲ್ಲದೆ, ಒಂದೇ ದಿನದಲ್ಲಿ ಕನ್ನಡದಲ್ಲಿ 17  ಹಾಡುಗಳು, ಒಂದೇ ದಿನದಲ್ಲಿ ತಮಿಳು ಮತ್ತು ತೆಲುಗಿನಲ್ಲಿ 19 ಹಾಡುಗಳು, ಒಂದೇ ದಿನದಲ್ಲಿ ಹಿಂದಿಯಲ್ಲಿ 16  ಹಾಡುಗಳನ್ನ ಹಾಡಿ ಯಾರು ಮುರಿಯದ ಸಾಧನೆ ಮಾಡಿದ್ದಾರೆ. ಇವರ ಸಾಧನೆಯ ಬಗ್ಗೆ ಬರೆಯುವುದಕ್ಕೆ ಓದುವುದಕ್ಕೆ ಸಮಯ ತೆಗೆದುಕೊಂಡರೆ ಈ ಪರಿಯ ಸಾಧನೆ ಮಾಡಿ “ನನ್ನ ಕೈಯಲ್ಲಿ ಏನು ಇಲ್ಲ ಸ್ವಾಮಿ ಎಲ್ಲಾ ಆ ದೇವರ ದಯೆ” ಅಂತ ಹೇಳಿ ಸುಮ್ಮನೆ ಕೂರುವ ಮಹಾನ್ ಚೇತನ

ಎಸ್ ಪಿ ಬಿ ರವರ ತಂದೆ ಹರಿಕಥಾ ವಿದ್ವಾಂಸರು ಹಾಗು ಎಲ್ಲರಿಗೂ ತಿಳಿದಂತೆ ಹರಿಕಥೆ ಪ್ರತಿದಿನ ನಡೆಯುವ ಕಾರ್ಯಕ್ರಮವಲ್ಲ ಯಾವುದಾದರು ಶುಭಕಾರ್ಯ ಅಥವಾ ಜನರ ಕಷ್ಟಗಳ ನಡುವೆ ನಡೆದು ಬರುವ ಒಂದು ಪದ್ದತಿ ಹೊಂದಿರುವುದು ಹರಿಕಥೆಯ ವಿಶೇಷ. ಯಾವುದಾದರು ಕಾರ್ಯಕ್ರಮ ಸಿಕ್ಕರೆ ಮಾತ್ರ ಅದರಿಂದ ದುಡಿಮೆ ಮತ್ತು ಹರಿಕಥೆಯಲ್ಲಿ ದುಡಿದ ಎಲ್ಲರಿಗು ದುಡ್ಡು ಕೊಟ್ಟು ಮಿಕ್ಕಿದ ಹಣದಲ್ಲಿ ಹೆಂಡತಿ ಮಕ್ಕಳನ್ನು ಸಾಕಬೇಕಿತ್ತು. ಅದೊಂದು ರೀತಿಯ ಹೋರಾಟ ಮತ್ತು ಸಾಧನೆ, ಇದನೆಲ್ಲ ಅರಿತ ಎಸ್ ಪಿ ಬಿ ರವರು ತಮ್ಮ ಇಂಜಿನಿಯರಿಂಗ್ ದಿನಗಳಲ್ಲಿ ಸ್ಕಾಲರ್ಶಿಪ್ ನಿಂದ ಓದಲು ಮುಂದಾಗಿ ತಂದೆಯ ಮೇಲಿನ ಭಾರ ಕಡಿಮೆ ಮಾಡಿದರು.

ಎಸ್ ಪಿ ಬಿ ರವರು ಬಾಲ್ಯದಿಂದ ತುಂಟತನ, ಚೇಷ್ಟೆ ಮತ್ತು ಮುಗ್ಗ್ದತೆಯನ್ನು ಹೊತ್ತು ಬೆಳೆದು ಬಂದವರು. ಅವರ ತಾಯಿ ಮತ್ತು ಅಜ್ಜಿ ಇಬ್ಬರು ಸೇರಿದರು ಅವರ ಚೇಷ್ಟೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಓದು, ಆಟ ಪಾಠದ ನಡುವೆಯೇ ಶಾಲೆಯಲ್ಲಿ ಆಯೋಜಿಸುತ್ತಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಎಸ್ ಪಿ ಬಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದರು. ಹಾಡುವುದಕ್ಕೆ ಮತ್ತು ಹಾಡುಗಳನ್ನು ಕೇಳುವುದಕ್ಕೆ ಅವರಿಗೆ ತುಂಬಾ ಇಷ್ಟ. ಇದರ ಬಗ್ಗೆ ಅವರೇ ಹೇಳಿದ ಒಂದು ಪುಟ್ಟ ಘಟನೆ ಹಂಚಿಕೊಳಲ್ಲು ಇಷ್ಟ ಪಡುತ್ತೇನೆ.

ಪ್ರತಿದಿನ ಶಾಲೆಯಿಂದ ಮನೆಗೆ ಹೋಗುವಾಗ ಅವರ ಮನೆಯ ರೈಲ್ವೆ ಸ್ಟೇಷನ್ ಬಳಿ ಒಂದು ಟೀ ಅಂಗಡಿ ಇತ್ತು ಅಲ್ಲಿ ಪ್ರತಿದಿನ ಬೆಳಗಿನಿಂದ ಸಂಜೆಯವರೆಗೂ ಹಿಂದಿ ಹಾಡುಗಳು ರೇಡಿಯೋದಲ್ಲಿ ಪ್ರಸಾರವಾಗುತ್ತಿತ್ತು. ಅದನ್ನ ಕೇಳಬೇಕೆಂದೆ ಎಸ್ ಪಿ ಬಿ ರವರು ಪ್ರತಿದಿನ ಬಂದು ಆ ಅಂಗಡಿಯಲ್ಲಿ ಟೀ ಕುಡಿಯುತ್ತಾ ಹಾಡು ಕೇಳುತ್ತಿದ್ದರು ಆ ಸಮಯದಲ್ಲಿ ಖ್ಯಾತ ಹಿನ್ನಲೆ ಗಾಯಕ ಮೊಹಮ್ಮದ್ ರಫಿ ಇವರು ದಶಕಗಳ ಕಾಲ ಹಾಡುಗಳನ್ನ ಹಾಡಿ ಜನರ ಮನಸ್ಸನ್ನು ಗೆದ್ದವರು. ಅವರ ಹಾಡುಗಳು ಆ ರೇಡಿಯೋದಲ್ಲಿ ಪ್ರಸಾರವಾಗುತ್ತಿತ್ತು. ಆಗ ಎಸ್ ಪಿ ಬಿ ರವರ ಮನಸ್ಸಿನಲ್ಲಿ ಮೊಹಮ್ಮದ್ ರಫಿ ರವರು ಬಹಳ ಪ್ರಭಾವ ಬೀರಿದ್ದರು

ಹೀಗೆ ಅವರ ಬಾಲ್ಯ ಬರಿ ಹಾಡು ಕೇಳಿ ಹಾಡುವುದರಿಂದ ತುಂಬಿದ ದಿನಗಳಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆಂದು ಅವರ ಮಾವನ ಮನೆಗೆ ಹೊರಟರು ಅಲ್ಲಿ ಸುಮಾರು 4-5 ವರ್ಷಗಳ ಕಾಲ ಇದ್ದು ಓದಿದ್ದರು ನಂತರ PUC ಸಮಯದಲ್ಲಿ ಆರೋಗ್ಯ ಸರಿಯಿಲ್ಲದ ಕಾರಣ ಪುನಃ ನೆಲ್ಲೂರಿಗೆ ವಾಪಸ್ಸಾದರು. ಅಲ್ಲಿ ತಮ್ಮ ಗೆಳೆಯರೆಲ್ಲ ಸೇರಿ ಒಂದು ಮಿನಿ ಆರ್ಕೆಸ್ಟ್ರಾ ಶುರು ಮಾಡಿದರು ಈ ಆರ್ಕೆಸ್ಟ್ರಾ ಹಣಕ್ಕಾಗಿ ಮಾಡಿದ್ದಲ್ಲ, ಎಲ್ಲಾ ಸ್ನೇಹಿತರ ಆಸೆ ಸಂಗೀತ ಮತ್ತು ಹಾಡುವುದರ ಸಮಾನ ಯೋಚನೆ ಇದ್ದ ಕಾರಣಕ್ಕೆ ಸಂಗೀತದಲ್ಲಿ ಮುಂದೆ ಬರಬೇಕು ಎಂಬ ಉತ್ಸಾಹದಿಂದ ಶುರುಮಾಡಿದರು. ಅದಕ್ಕೆ ಫಲವೆಂಬಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದರು.

ಇದೆಲ್ಲದರ ನಡುವೆ ಸ್ಪರ್ಧೆಗಳು ಪ್ರಶಸ್ತಿಗಳು ಎಸ್ ಪಿ ಬಿ ರವರಿಗೆ ಸಾಮಾನ್ಯವಾಗಿ ಬಿಟ್ಟಿತ್ತು. ಅದೇ ರೀತಿ ಅವರು ಇಂಜಿನಿಯರಿಂಗ್ ವ್ಯಾಸಂಗ ಮಾಡುತಿದಂತಹ ಸಮಯದಲ್ಲಿ ಅವರ ಬದುಕನ್ನೇ ಬದಲಿಸುವ ಘಟನೆಯೊಂದು ನಡೆಯಿತು. ಅದೇನೆಂದರೆ ಎಂದಿನಂತೆ ಒಂದು ಸ್ಪರ್ಧೆಯಲ್ಲಿ ಎಸ್ ಪಿ ಬಿ ರವರಿಗೆ ಅವಕಾಶ ಸಿಕ್ಕಿತ್ತು. ಆ ಸ್ಪರ್ಧೆಗೆ ಜಾನಕಿಯಮ್ಮ ಅತಿಥಿಯಾಗಿ ಬಂದಿದ್ದರು ಮತ್ತು ಅವರೇ ಪ್ರಶಸ್ತಿಯನ್ನು ಸಹ ಕೊಡಬೇಕಿತ್ತು, ಎಸ್ ಪಿ ಬಿ ರವರು ಸ್ಪರ್ಧೆಯಲ್ಲಿ ಹಾಡಿ ಮುಗಿಸಿ ಬಂದು ಕುಳಿತ್ತಿದ್ದರು ಇನ್ನೇನು ಫಲಿತಾಂಶ ಬಂದಿತು ಅದರಲ್ಲಿ ಎಸ್ ಪಿ ಬಿ ರವರಿಗೆ ಎರಡನೇ ಸ್ಥಾನ ದೊರಕಿತು ಅದರಿಂದ ಎಸ್ ಪಿ ಬಿ ರವರಿಗೆ ಏನು ಯೋಚನೆಯಿಲ್ಲ ಬೇಜಾರಿಲ್ಲ ಏಕೆಂದರೆ ಆಗಾಗಲೇ ಪ್ರಥಮ ಪ್ರಶಸ್ತಿಗಳು ಅವರ ಮಡಿಲಿಗೆ ಸಾಕಷ್ಟು ಬಂದಿದ್ದವು ಎಂದಿನಂತೆ ಪ್ರಶಸ್ತಿಯನ್ನು ವಿನಯಭಾವದಿಂದ ಅವರು ಸ್ವೀಕರಿಸಲು ಮುಂದಾದರು ಆದರೆ ಆ ಕ್ಷಣದಲ್ಲಿ ಜಾನಕಿಯಮ್ಮ ರವರಿಗೆ  ಅಸಮಾಧಾನವಾಗಿತ್ತು. ತಕ್ಷಣ ಜಾನಕಿಯಮ್ಮ “ಇದು ಹೇಗೆ ಸಾಧ್ಯ ಅವರಿಗಿಂತ ಈ ವ್ಯಕ್ತಿ ತುಂಬ ಚೆನ್ನಾಗಿ ಹಾಡಿದ್ದಾರೆ, ಇವರಿಗೆ ಪ್ರಥಮ ಸ್ಥಾನ ನೀಡಬೇಕು” ಎಂದು ಸ್ಪರ್ಧೆಯಲ್ಲಿ ತೀರ್ಪುಗಾರರ ಮುಂದೆ ಕೇಳಿದರು ಆದರೆ ಎಸ್ ಪಿ ಬಿ ರವರು “ಅದರಿಂದ ಏನು ತೊಂದರೆ ಇಲ್ಲ ಬಿಡಿ ಅಮ್ಮ ನನಗಿಂತ ಚೆನ್ನಾಗಿಯೇ ಅವರು ಹಾಡಿದ್ದಾರೆ ಅವರಿಗೆ ಪ್ರಥಮ ಸ್ಥಾನ ಕೊಡಲಿ ಬಿಡಿ” ಎಂದು ಜಾನಕಿಯಮ್ಮ ರವರನ್ನು ಕೇಳಿಕೊಂಡರು. ನಂತರ ವೇದಿಕೆಯಿಂದ ಕೆಳಗಿಳಿದಮೇಲೆ ಜಾನಕಿಯಮ್ಮ ಎಸ್ ಪಿ ಬಿ ರವರ ಬಳಿ ಬಂದು “ನಿನ್ನಲ್ಲಿ ವಿಭಿನ್ನವಾಗಿ ಹಾಡಿಗೆ ಭಾವನೆ ತುಂಬಿ ಹಾಡುವ ಒಂದು ಶಕ್ತಿಯಿದೆ ಅದನ್ನ ಕಳೆದುಕೊಳ್ಳಬೇಡ ಮತ್ತು ಹಾಡು ಹಾಡುವುದನ್ನ ಎಂದಿಗೂ ನಿಲ್ಲಿಸಬೇಡ ನಿನಗೆ ಇದರಲ್ಲಿ ಒಂದು ಒಳ್ಳೆ ಭವಿಷ್ಯ ಇದೆ” ಎಂದು ಹೇಳಿ ಹೋದರು ಇದೆಲ್ಲವನ್ನು ಒಮ್ಮೆ ಮೆಲುಕುಹಾಕಿ ನೋಡಿದ ಎಸ್ ಪಿ ಬಿ ಜಾನಕಿಯಮ್ಮ ನನಗೆ ಪ್ರಥಮ ಸ್ಥಾನ ಸಿಗಬೇಕು, ನನ್ನಲ್ಲಿ ಏನೋ ಒಂದು ಪ್ರತಿಭೆ ಇದೆ ಅಂತ ಹೇಳಿದ್ದಾದರೂ ಯಾಕೆ ? ಎಲ್ಲರೂ ಹಾಡಿದ ಹಾಗೆ ನಾನು ಕೂಡ ಹಾಡಿದೆ ಅಲ್ವ ಆದರೆ ನನನ್ನೇ ಗುರುತಿಸಿ ಈ ಮಾತು ಹೇಳಿದ್ದಾದರೂ ಯಾಕೆ? ಎಂದು ತನಗೆ ತಾನೇ ಪ್ರಶ್ನೆ ಮಾಡಿಕೊಂಡರು. ಈ ಒಂದು ಘಟನೆ ಎಸ್ ಪಿ ಬಿ ರವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತ್ತು ಹಾಗು ಜಾನಕಿಯಮ್ಮ ಎಸ್ ಪಿ ಬಿ ರವರ ಮನಸ್ಸಿನಲ್ಲಿ ಅವರ ಭವಿಷ್ಯದ ಒಂದು ಬೀಜ ಬಿತ್ತಿದರು ಅಂತ ಹೇಳಿದರೆ ತಪ್ಪಾಗಲಾರದು.

ಈ ಒಂದು ಘಟನೆ ಎಸ್ ಪಿ ಬಿ ರವರ ಜೀವನದಲ್ಲಿ ಒಂದು ತಿರುವಾದರೆ ಅವರ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಮಹಾನ್ ಚೇತನದ ಅನಾವರಣಕ್ಕೆ ನಾಂದಿ ಹಾಡಿದ ಘಟನೆ ಇನ್ನೊಂದಿದೆ, ಜಾನಕಿಯಮ್ಮ ರವರು ಎಸ್ ಪಿ ಬಿ ರವರ ಮನಸ್ಸಿನಲ್ಲಿ ಒಂದು ಬೀಜ ಬಿತ್ತಿ ಹೋದ ನಂತರ ಅವರಿಗೆ ತುಂಬಾ ಯೋಚನೆಗಳು ಕಾಡುವುದಕ್ಕೆ ಶುರುವಾಯಿತು “ನಾನು ಇಂಜಿನಿಯರಿಂಗ್ ಮಾಡಿ ಒಬ್ಬ ಗಝೆಟ್ಟೆಡ್ ಆಫೀಸರ್ ಆಗಬೇಕೋ ಅಥವ ಹಾಡುವುದರಲ್ಲಿ ನನ್ನ ಬದುಕು ರೂಪಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲಿ ಇರುವಾಗ ಅವರ ಸ್ನೇಹಿತ ಮುರಳಿ ಎಂಬುವರು ಆಂಧ್ರ ಸೋಶಿಯಲ್ ಕಲ್ಚರಲ್- ನೇಶನ್ ವೈಡ್ ಕಾಂಪಿಟೇಷನ್ ಅಲ್ಲಿ 10 ರೂ ಕೊಟ್ಟು ಒಂದು ಟಿಕೆಟ್ ತಂದು ಎಸ್ ಪಿ ಬಿ ರವರಿಗೆ ಕೊಟ್ಟು ” ನೋಡು ನೀನು ಈ ಸ್ಪರ್ಧೆಗೆ ಹಾಡಿದರೆ ನಿನ್ನ ಭವಿಷ್ಯ ಬದಲಾಗುತ್ತೆ ಸಿನಿಮಾ ಹಾಡುಗಳು ಹಾಡುವುದಕ್ಕೆ ಅವಕಾಶ ಸಿಗುತ್ತೆ, ಇಲ್ಲ ಅನ್ನಬೇಡ ಹೋಗು, ಇದರಲ್ಲಿ ಘಂಟಸಾಲ ಮಾಸ್ಟರ್, ದಕ್ಷಿಣ ಮೂರ್ತಿ, ಪೆಂಡ್ಯಾಳ ನಾಗೇಶ್ವರ್ ರಾವ್ ತೀರ್ಪುಗಾರರಾಗಿರುತ್ತಾರೆ

ಎಸ್ ಪಿ ಬಿ: ಇಲ್ಲ ಮುರಳಿ ಸಿನಿಮಾದಲ್ಲಿ ಹಾಡು ಹಾಡುವಷ್ಟು ದೊಡ್ಡ ಪ್ರತಿಭೆ ನನ್ನದಲ್ಲ, ಇದೆಲ್ಲ ಆಗೋದಿಲ್ಲ ಬಿಡು.

ಮುರಳಿ: ಇಲ್ಲ ಬಾಲು ನೀನು ಹೋಗಿ ಒಂದು ಪ್ರಯತ್ನ ಮಾಡು ಮಿಕ್ಕಿದು ದೇವರಿಗೆ ಬಿಟ್ಟಿದು. ಆದರೆ ಅವಕಾಶ ಮಾತ್ರ ಬಿಡಬೇಡ.

ಎಸ್ ಪಿ ಬಿ: “ಅಷ್ಟು ದೊಡ್ಡ ದೊಡ್ಡ ತೀರ್ಪುಗಾರರ ಮುಂದೆ ಹಾಡಿ ಗೆದ್ದು ಸಿನಿಮಾ ಹಾಡು ಹಾಡೋಕೆ ಹೋಗೋದು ಅಂದ್ರೆ ತಮಾಷೆ ವಿಷಯ ಅಲ್ಲ. ಆದರೂ ನೀನು ಹೇಳಿದೆ ಅಂತ ಹೋಗ್ತೀನಿ.” ಅಂತ ಹೇಳಿ ಸ್ಪರ್ಧೆಗೆ ತಯಾರಾಗಿ ಹೋದರು

ಸ್ಪರ್ಧೆಯಲ್ಲಿ ಹೆಸರಿನ ಆರ್ಡರ್ ತಕ್ಕಂತೆ ಸ್ಪರ್ಧಿಗಳನ್ನು ಕರೆದರೂ “A ” ಹೆಸರಲ್ಲಿ ಯಾರು ಇರಲಿಲ್ಲ “B ” ಹೆಸರಲ್ಲಿ ಬಾಲಸುಬ್ರಮಣ್ಯಂ ಎಂದು ಕರೆದರು ಅವರು ಹೋಗಿ ಹಾಡಿ” ಅಬ್ಬಾ ಅಂತೂ ಇಂತೂ ಮುಗಿತು” ಅಂತ ಹೇಳಿ ಬಂದು ಒಂದು ಕಡೆ ಕುಳಿತರು. ಇನ್ನು ಸಾಕಷ್ಟು ಸ್ಪರ್ಧಿಗಳು ಹಾಡು ಹಾಡುವುದನ್ನ ನೋಡಿ ಅದರಿಂದ ಕಲಿತು ಆನಂದಿಸುತ್ತಿದ್ದರು. ತಕ್ಷಣವೇ ಒಬ್ಬ ವ್ಯಕ್ತಿ ಬಂದು ನೀನು ಸಿನಿಮಾಗೆ ಹಾಡುತ್ತೀಯಾ? ನಿನ್ನ ಧ್ವನಿಯಲ್ಲಿ ಏನೋ ಒಂದು ವಿಶೇಷತೆ ಇದೆ. ನಿನಗೆ ನಾನು ಅವಕಾಶ ಕೊಡುತ್ತೇನೆ ಹಾಡುತ್ತೀಯ ಎಂದು ಕೇಳಿದರು.

ಅದಕ್ಕೆ ಎಸ್ ಪಿ ಬಿ: ಸ್ವಾಮಿ ನೀವು ಯಾರು ಅಂತ ಖಂಡಿತ ನನಗೆ ಗೊತ್ತಿಲ್ಲ ಆದರೆ ಸಿನಿಮಾಗೆ ಎಲ್ಲ ಹಾಡಿ ನನಗೆ ಅಭ್ಯಾಸ ಇಲ್ಲ ನೀವು ಹೀಗೆ ಬಂದು ಧಿಡೀರ್ ಅಂತ ಕೇಳಿದರೆ ನಾನು ಏನು ಹೇಳಲಿ

ವ್ಯಕ್ತಿ: ನಿನಗೆ ಅದರ ಯೋಚೆನೆ ಬೇಡ ನಾಳೆ ನನ್ನ ಸ್ಟುಡಿಯೋಗೆ ಬಂದು ನನ್ನನ್ನ ಭೇಟಿ ಮಾಡು ಅಂತ ಹೇಳಿ ಸ್ಟುಡಿಯೋ ವಿಳಾಸ ಹೇಳಿ ಹೊರಟು ಹೋದರು

ಆ ಮಹಾನ್ ವ್ಯಕ್ತಿ ಇನ್ನ್ಯಾರು ಅಲ್ಲ ಎಸ್ ಪಿ ಬಿ ರವರ ಬದುಕಿನ ಹಾದಿಯನ್ನೇ ಬದಲಿಸಿ ಇಂದಿಗೆ ನಮಗೆಲ್ಲರಿಗೂ ಪರಿಚಯವಾಗುವಂತೆ ಮಾಡಿಕೊಟ್ಟ ಮಹಾನ್ ವ್ಯಕ್ತಿ ಎಸ್ ಪಿ ಬಿ ರವರ ಗುರು ಶ್ರೀ ಕೋದಂಡಪಾಣಿ ರವರು

ಮರುದಿನ ಎಸ್ ಪಿ ಬಿ ಮತ್ತು ಅವರ ಸ್ನೇಹಿತ ಮುರಳಿ ಕೋದಂಡಪಾಣಿ ರವರನ್ನು ಭೇಟಿಯಾಗಲು ಹೊರಟರು. ಅವರು ಕೊಟ್ಟ ವಿಳಾಸದಲ್ಲಿ ಬಂದು ನೋಡಿದರೆ ಕೋದಂಡಪಾಣಿಯವರು ಏನೋ ಒತ್ತಡದ ಗಡಿಬಿಡಿಯಲ್ಲಿ ಓಡಾಡುತ್ತಿದ್ದರು. ಕೂಡಲೆ ಅವರ ಬಳಿ ಬಂದು ನಿಂತಾಗ ಅವರೇ ಎಸ್ ಪಿ ಬಿ ರವರನ್ನು ಮಾತನಾಡಿಸಿದರು. ನಂತರ ಅಲ್ಲೇ ಒಂದು ಚಿತ್ರಕ್ಕೆ ಸಂಗೀತ ಸಂಯೋಜನೆ ನಡೆಯುತ್ತಿತ್ತು ಅಲ್ಲಿರುವ ಡೈರೆಕ್ಟರ್ ಬಳಿ ಕರೆದುಕೊಂಡು ಹೋಗಿ ಸರ್ ನೋಡಿ ಈ ಹುಡುಗ ತುಂಬಾ ಒಳ್ಳೆ ಪ್ರತಿಭೆ ತುಂಬ ಚೆನ್ನಾಗಿ ಹಾಡ್ತಾನೆ ಈಗ ನಡೀತಿರೋ ಹಾಡಿಗೆ ಇವರಿಂದಲೇ ಹಾಡಿಸೋಣ ಎಂದು ಕೋದಂಡಪಾಣಿ ರವರು ಡೈರೆಕ್ಟರ್ ನ ಕೇಳಿದಾಗ

ಡೈರೆಕ್ಟರ್: ಈಗಾಗಲೇ ಒಬ್ಬ ಹಾಡುಗಾರನನ್ನ ಹುಡುಕಿದ್ದೀವಲ್ಲ ಈಗ ಸಿನೆಮಾಗೆ ಅವರೇ ಹಾಡಲಿ. ಈ ಹುಡುಗ ಬೇರೆ ಚಿಕ್ಕವನು ಇನ್ನು ಧ್ವನಿ ಚಿಗುರಬೇಕು ಈಗಲೇ ಏನು ಅವಸರ ಮುಂದೆ ನೋಡೋಣ ಬಿಡಿ ಎಂದು ಹಿಂದೇಟು ಹಾಕಿ ಕಳಿಸಿದರು.

ಇದರಿಂದ ಕೋದಂಡಪಾಣಿ ಮತ್ತು ಎಸ್ ಪಿ ಬಿ ಇಬ್ಬರಿಗೂ ಬೇಸರವಾಯಿತು. ಅಲ್ಲಿಂದ ಎಸ್ ಪಿ ಬಿ ಹೊರಟು ಬಂದರು. ಕೋದಂಡಪಾಣಿ ಆ ಹುಡುಗನ ವಿಳಾಸ ಫೋನ್ ನಂಬರ್, ಯಾವ ಕಾಲೇಜು, ಎಂಬ ಯಾವ ಮಾಹಿತಿಯನ್ನು ಕೂಡ  ಪಡೆದಿರಲಿಲ್ಲ. ಎಸ್ ಪಿ ಬಿ ಮುಂದೆ ಸಿನೆಮಾಗೆ ಹಾಡುವ ಕನಸ್ಸನ್ನು ಒಂದು ಮಟ್ಟಕ್ಕೆ ಬಿಟ್ಟಂತೆ ಕಂಡಿತು. ವಿದ್ಯಾಭ್ಯಾಸ ಮುಂದುವರಿಸಿದರು ಎಂದಿನಂತೆ ಸ್ಪರ್ಧೆಗಳಿಗೆ ಭೇಟಿಕೊಡುತ್ತಿದ್ದರು. ಎರಡು ವರ್ಷಗಳೇ ಕಳೆದು ಹೋಯಿತು. ಅದೊಂದು ದಿನ ಎಂದಿನಂತೆ ಕಾಲೇಜಿನ ಕ್ಲಾಸ್ ರೂಮ್ ನಲ್ಲಿ ಎಸ್ ಪಿ ಬಿ ಕುಳಿತು ಪಾಠ ಕೇಳುತ್ತಿದ್ದರು, ಧಿಡೀರ್ ಎಂದು ಕೋದಂಡಪಾಣಿ ರವರು ಬಂದು ಎಸ್ ಪಿ ಬಿ ರವರನ್ನು ಕ್ಲಾಸ್ ರೂಮ್ ನಿಂದ ಕರೆದುಕೊಂಡು ಹೋದರು. ಎಸ್ ಪಿ ಬಿ ರವರ ಬಗ್ಗೆ ಏನು ಮಾಹಿತಿ ಇಲ್ಲದಿದ್ದರೂ ಕೂಡ ಹುಡುಕಿ ಬಂದು ” ನಾಳೆ ವಿಜಯ ಗಾರ್ಡನ್ಸ್ ನಲ್ಲಿ ಒಂದು ರೆಕಾರ್ಡಿಂಗ್ ಇದೆ ಪ್ರೊಡಕ್ಷನ್ ಡಿಪಾರ್ಟ್ಮೆಂಟ್ ನಿಂದ ಒಂದು ಕಾರ್ ಬರುತ್ತೆ ತಪ್ಪದೆ ನಾಳೆ ಮಧ್ಯಾಹ್ನ 2 ಗಂಟೆಗೆ ಬರಬೇಕು ಅಂತ ಹೇಳಿ ಹೋದರು.

ಮರುದಿನ ಎಸ್ ಪಿ ಬಿ ಮತ್ತು ಮುರಳಿ ಇಬ್ಬರು ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ರೆಡಿಯಾಗಿ ಮದ್ಯಾಹ್ನ 1 :30 ಕ್ಕೆ ಗಾಡಿ ಬರುತ್ತೆ ಎಂದು ಕಾಯುತ್ತಿದ್ದರು. 2 ಆಯ್ತು 3 ಆಯ್ತು 4 ಆಯ್ತು ಆದರೆ ಗಾಡಿ ಬರಲೇ ಇಲ್ಲ

ಎಸ್ ಪಿ ಬಿ: ನಮನೆಲ್ಲೋ ಕರೆಯೋಕೆ ಇಷ್ಟ ಇಲ್ಲ ಅನ್ಸುತ್ತೆ ಅದಕ್ಕೆ ಗಾಡಿ ಕಳಿಸಿಲ್ಲ ಬಿಡು

ಮುರಳಿ: ಹಾಗೆಲ್ಲ ಏನು ಇಲ್ಲ, ಏನೋ ತೊಂದರೆ ಆಗಿರಬೇಕು ಸರಿ ನಡಿ ನಾವೇ ಸೈಕಲ್ ತಗೊಂಡು ವಿಜಯ ಗಾರ್ಡನ್ಸ್ ಗೆ ಹೋಗೋಣ ಅಂತ ಹೇಳಿ ಇಬ್ಬರು ಅಲ್ಲಿಂದ ಹೊರಟರು 

ವಿಜಯ ಗಾರ್ಡನ್ಸ್ ಗೇಟ್ ಬಳಿ ಬಂದರು ಅಲ್ಲಿ ದೈತ್ಯವಾದ ಒಬ್ಬ ಸೆಕ್ಯೂರಿಟಿ ಗಾರ್ಡ್ ನಿಂತಿದ್ದ. ಸೈಕಲ್ ನಲ್ಲಿ ಬಂದ ಇವರನ್ನು ಅಡ್ಡಗಟ್ಟಿ

ಸೆಕ್ಯೂರಿಟಿ: ಎಲ್ಲಿಗೆ ಹೋಗುತ್ತಿದ್ದೀರಾ. ಇಲ್ಲಿ ಒಳಗೆ ಯಾರನ್ನು ಬಿಡೋದಿಲ್ಲ

ಎಸ್ ಪಿ ಬಿ: ಸರ್ ನಮನ್ನ ರೆಕಾರ್ಡಿಂಗ್ ಗೆ ಅಂತ ಕೋದಂಡಪಾಣಿಯವರು ಕರೆದಿದ್ದಾರೆ ಸರ್

ಸೆಕ್ಯೂರಿಟಿ: ಒಳಗೆ ಹೋಗ್ಬೇಕು ಅಂತ ಹೀಗೆ ದಿನಕ್ಕೆ ಸುಮಾರು ಜನ ಬಂದು ಹೋಗ್ತಾರೆ. ಈ ಕಥೆಯಲ್ಲಾ ನಾನು ಕೇಳೋದಿಲ್ಲ ನಡೀರಿ ಇಲ್ಲಿಂದ ಅಂತ ಏರು ಧ್ವನಿಯಲ್ಲಿ ಹೇಳಿದರು.

ಎಸ್ ಪಿ ಬಿ: ಸರ್, ಸುಳ್ಳಲ್ಲ ನಿಜವಾಗಲೂ ನಮನ್ನ ರೆಕಾರ್ಡಿಂಗ್ ಗೆ ಕರೆದಿದ್ದಾರೆ. ಒಂದು ಕೆಲಸ ಮಾಡೋಣ, ಸೈಕಲ್ ಜೊತೆ ಮುರಳಿ ಕೂಡ ಎಲ್ಲೇ ಇರ್ತಾನೆ ನಾವು ಒಳಗಡೆ ಹೋಗಿ ಪ್ರೊಡಕ್ಷನ್ ಯೂನಿಟ್ ನಿಂದ ಯಾರನ್ನಾದರೂ ಕರೆದುಕೊಂಡು ಬರ್ತೀನಿ ಅವರು ಹೂ ಅಂದ್ರೆ ನಮನ್ನ ಒಳಗೆ ಬಿಡಿ ಇಲ್ಲ ಅಂದ್ರೆ ಬೇಡ ಅಂತ ಹೇಳಿದರು. ಅದಕ್ಕೆ ಸೆಕ್ಯೂರಿಟಿ ಕೂಡ ಒಪ್ಪಿಕೊಂಡು ಎಸ್ ಪಿ ಬಿ ರವರನ್ನ ಮಾತ್ರ ಒಳಗೆ ಬಿಟ್ಟರು, ಎಸ್ ಪಿ ಬಿ ಒಳಗೆ ಬಂದು ಪ್ರೊಡಕ್ಷನ್ ಯೂನಿಟ್ ನ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದು ಸೆಕ್ಯುರಿಟಿಯ ಬಳಿ ಒಪ್ಪಿಸಿ ಒಳಗೆ ಹೋದರು.

ಈ ಎಲ್ಲ ಜಂಜಾಟಗಳ ನಡುವೆ ಸ್ಟುಡಿಯೋ ಒಳಗೆ ಹೋದರೆ ಕೋದಂಡಪಾಣಿ ರವರು ಗಡಿಬಿಡಿಯಲ್ಲಿ ಓಡಾಡುತ್ತಾ ಎಲ್ಲಾ ವ್ಯವಸ್ಥೆಯನ್ನು ನೋಡುತ್ತಿದ್ದರು ತಕ್ಷಣ ಎಸ್ ಪಿ ಬಿ ರವರನ್ನು ನೋಡಿ

ಕೋದಂಡಪಾಣಿ: ಎಷ್ಟು ಗಂಟೆಗೆ ನಾನು ಬರೋದಕ್ಕೆ ಹೇಳಿದ್ದು ನೀನು ಎಷ್ಟೋತ್ತಿಗೆ ಬರುತ್ತಿದ್ದೀಯ. ಏನು ಈಗಲೇ ದೊಡ್ಡ ಹಾಡುಗಾರ ನೀನು ಅಂತ ತಲೆಗೆ ಬಂದುಬಿಟ್ಟಿದ್ಯ ?

ಎಸ್ ಪಿ ಬಿ: ಸರ್ ಪ್ರೊಡಕ್ಷನ್ ಕಾರ್ ಬರುತ್ತೆ ಅಂದಿದ್ರಿ ಆದ್ರೆ ಬರಲಿಲ್ಲ ಅದಕ್ಕೆ ನಾನೇ ಇಲ್ಲಿ ವರೆಗೂ ಬಂದೆ ಎಂದು ಬಹಳ ವಿನಯಭಾವದಿಂದ ಹೇಳಿದರು

ಕೋದಂಡಪಾಣಿ: ಏನು ಪ್ರೊಡಕ್ಷನ್ ಕಾರ್ ಬರಲಿಲ್ವ, ಸರಿ ಅದು ನಂತರ ನೋಡೋಣ ಬಾ ಎಲ್ಲಾ ನಿನಗೆ ಕಾಯ್ತಾ ಇರೋದು ಎಂದು ರೆಕಾರ್ಡಿಂಗ್ ರೂಮ್ ಗೆ ಕರೆದುಕೊಂಡು ಹೋದರು.

ಒಳಗೆ ನೋಡಿದರೆ ಪಿ ಸುಶೀಲ ರವರು ನಿಂತಿದ್ದಾರೆ ಹೆಸರಾಂತ ಕಲಾವಿದರು ಮ್ಯೂಸಿಷಿಯನ್ ಗಳು ಸಾಲಾಗಿ ಕೂತಿದ್ದಾರೆ ಎಲ್ಲವನ್ನು ನೋಡಿ ಅಚ್ಚರಿಯಾಗಿ ನಿಂತಿದ್ದಾಗ ಕೋದಂಡಪಾಣಿಯವರು ಬಂದು ಹಾಡಿನ ಸಾಹಿತ್ಯದ ಒಂದು ಹಾಳೆಯನ್ನು ಕೊಟ್ಟು ಹೀಗೆ ಹಾಡಬೇಕೆಂದು ಹೇಳಿದರು. ಎಸ್ ಪಿ ಬಿ ರವರ ಆ ಮೊದಲ ಹಾಡಿನ ಚಿತ್ರ “ಮರ್ಯಾದಾ ರಾಮಣ್ಣ”. ಎಸ್ ಪಿ ಬಿ ರವರ ಸಿನಿಮಾರಂಗದ ಹಾಡಿನ ಪಯಣ ಅಲ್ಲಿಂದ ಶುರುವಾಯಿತು. ಇದಾದ ನಂತರದ 8 – 9 ದಿನಗಳಲ್ಲಿ ಅವರು ಕನ್ನಡದ “ನಕ್ಕರೆ ಅದೇ ಸ್ವರ್ಗ” ಎಂಬ ಚಿತ್ರಕ್ಕೆ ಹಾಡನ್ನು ಹಾಡಿದರು. ಇದು ಎಸ್ ಪಿ ಬಿ ರವರು ಕನ್ನಡಕ್ಕೆ ಕೊಟ್ಟ ಮೊದಲ ಕೊಡುಗೆ. ಈ ಹಾಡನ್ನು ಹಾಡುವಾಗ ಎಸ್ ಪಿ ಬಿ ರವರಿಗೆ ಕನ್ನಡ ಬರುತ್ತಿರಲಿಲ್ಲ ಹಾಗು ಕನ್ನಡ ಅಂದ್ರೆ ಒಂದು ಭಾಷೆ ಅಷ್ಟೇ ಅಂತ ಗೊತ್ತಿತ್ತು. ಸಂಗೀತ ನಿರ್ದೇಶಕರು ಪದಗಳನ್ನ ಹೇಗೆ ಉಚ್ಚರಿಸಬೇಕೆಂದು ಹೇಳಿಕೊಡುತ್ತಿದರೋ ಅದರಂತೆಯೇ ಹಾಡಿ ಕನ್ನಡಕ್ಕೆ ಹೆಜ್ಜೆ ಇಟ್ಟರು.

ಒಂದು ಕ್ಷಣ ಮುರಳಿ ಅಥವ ಎಸ್ ಪಿ ಬಿ ರವರು ಯಾಕೋ ಇದು ಆಗುತ್ತಿಲ್ಲ ಬೇಡ ಅಂತ ನಿರ್ಧಾರ ಮಾಡಿ ಹಿಂದೆ ಹೆಜ್ಜೆ ಇಟ್ಟಿದ್ದರೆ ಇಂದಿಗೆ ಎಸ್ ಪಿ ಬಿ ಎಂಬ ಹೆಸರು ಒಂದು ಆಗಾಧವಾದ ಶಕ್ತಿಯಾಗಿ ಬೆಳೆಯುತ್ತಿರಲಿಲ್ಲ.

ಹೀಗೆ ಹಾಡುಗಳು, ಕಾಂಪಿಟಿಷನ್ ಗಳು, ಭಾಷೆ ಕಲಿಯುವುದು ಎಲ್ಲದರ ನಡುವೆ ಇಂಜಿನಿಯರಿಂಗ್ ವ್ಯಾಸಂಗದ ಮೇಲೆ ಗಮನ ಕೊಡುವುದು ಕಷ್ಟಕರವಾಯಿತು. ಆಗ ಅವರ ತಂದೆಯನ್ನು ಕೇಳಿದಾಗ “ನೀನು ಏನಾದರೂ ಮಾಡು ನಾನು ಅಡ್ಡ ಬರೋದಿಲ್ಲ ಆದರೆ ಎರಡು ದೋಣಿಯಲ್ಲಿ ಕಾಲು ಇಡಬೇಡ ಯಾವುದನ್ನ ಮಾಡ್ತಿಯೋ ಅದನ್ನ ಶ್ರದ್ದಾ ಭಕ್ತಿಯಿಂದ ಮಾಡು ಅಷ್ಟೇ” ಎಂದರು

ಇಂಜಿನಿಯರಿಂಗ್ ಓದುತ್ತಿರುವಾಗ ತಂದೆಯ ಕಷ್ಟವನ್ನು ಅರಿತ್ತಿದ್ದಂತ ದಿನಗಳಲ್ಲಿ ತಂದೆಗೆ ಕಷ್ಟವಾಗಬಾರದು ಎಂದು  ಸ್ಕಾಲರ್ ಶಿಪ್ ನಲ್ಲಿ ಓದುತ್ತಿದ್ದರು ಆದರೂ ಸಹ ಮಗನಿಗೆ ಕಷ್ಟವಾಗಬಾರದೆಂದು ತಂದೆ ಪ್ರತಿ ತಿಂಗಳು 80 ರೂ ಖರ್ಚಿಗೆ ಅಂತ ಕಳಿಸುತ್ತಿದ್ದರು. ಇಬ್ಬರ ಮನಸಿನಲ್ಲೂ ಒಂದೇ ಭಾವನೆ, ತಂದೆಗೆ ಕಷ್ಟ ಕೊಡಬಾರದೆಂದು ಮಗ ಹಾಗೆ ಮಗನಿಗೆ ಕಷ್ಟ ಕೊಡಬಾರದು ಎಂದು ತಂದೆ. ಇದರ ಜೊತೆ ಜೊತೆಯಲ್ಲಿ ಹಾಡು ಹಾಡುವುದಕ್ಕೆ ರೆಮುನೆರೇಷನ್ (ಸಂಭಾವನೆ) ಅಂತ 300 ರೂ ಸಿಗುತ್ತಿತ್ತು ಮತ್ತು ಕನ್ನಡದ ಹಾಡಿಗೆ 150 ರೂ ಸಿಗುತ್ತಿತ್ತು. ಆ ಕಾಲದಲ್ಲಿ ಜಾನಕಿಯಮ್ಮ ರವರು 250 ರೂ ರೆಮುನೆರೇಷನ್ ಪಡೆಯುತ್ತಿದ್ದರು. ಹೀಗೆ ಎಸ್ ಪಿ ಬಿ ರವರು ತಂದೆಗೆ ಕಷ್ಟ ಕೊಡಬಾರದು ಅಂತ ಏನೆಲ್ಲಾ ಪ್ರಯತ್ನ ಪಡುತ್ತಿದ್ದರು ಹಾಗು ಅವರ ದುಡಿಮೆಯನ್ನು ಅವರೇ ಸೃಷ್ಟಿಸಿಕೊಂಡರು. ಹೀಗೆ ಕಾಲಸರಿದಂತೆ ಇಂಜಿನಿಯರಿಂಗ್ ಜೊತೆ AMIE ಎಂಬ ಕೋರ್ಸ್ ಕೂಡ ಮಾಡುತ್ತಿದ್ದರು. ನಂತರ ಅವರಿಗೆ ಅರಿವಾದದ್ದು ಹಾಡು ಹಾಡಿಕೊಂಡು ಹೀಗೆ ಸಂಗೀತದ ಹಾದಿಯಲ್ಲಿ ಮುಂದುವರಿದರೆ ಅದೇ ಜೀವನ ರೂಪಿಸುತ್ತದೆ ಎಂದು.

ಅವರ ಆ ಒಂದು ನಿರ್ಧಾರ ಇಂದಿಗೆ ಇಡೀ ಪ್ರಪಂಚವೇ ಅವರನ್ನ ತಿರುಗಿ ನೋಡುವಂತೆ ಮಾಡಿದೆ.

ಈ ಹಾಡಿನ ಪಯಣದಲ್ಲಿ ಎಸ್ ಪಿ ಬಿ ರವರ “ಇಂಜಿನಿಯರಿಂಗ್ ಓದಿ ಒಬ್ಬ ಗಝೆಟ್ಟೆಡ್ ಆಫೀಸರ್ ಆಗಿ ಜೀಪಿನಲ್ಲಿ ತಿರುಗಾಡಬೇಕು” ಎಂಬ ಒಂದು ಕನಸು ಕನಸಾಗಿಯೇ ಉಳಿಯಿತು. ನಂತರ ಇವರು ತೆಲುಗು, ತಮಿಳು, ಕನ್ನಡ, ಹಿಂದಿ, ಹೀಗೆ ಭಾಷೆಯಿಂದ ಭಾಷೆಗೆ ನಾಡಿನಿಂದ ನಾಡಿಗೆ ಹಲವಾರು ಹಾಡುಗಳಿಗೆ ಕಂಠ ನೀಡಿ ಜನರ ಮನಸ್ಸಿನ ಬಾಗಿಲು ತಟ್ಟಿ ಒಳಗೆ ಕೂತು ಮನೆಯ ಒಬ್ಬ ವ್ಯಕ್ತಿಯಾಗಿ ಬದಲಾದರು.

ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕ ಎಂದರೆ ಎಸ್ ಪಿ ಬಿ ಎಂದು ಹೆಸರು ಕೇಳಿಬರುತ್ತಿತ್ತು ಆದರೆ ಉತ್ತರ ಭಾರತದಲ್ಲಿ ಮರಾಠಿ, ಗುಜರಾತಿ, ಪಂಜಾಬಿ, ಬೆಂಗಾಲಿ, ಭೋಜ್ಪುರಿ ಹೀಗೆ ಸಾಕಷ್ಟು ಭಾಷೆಗಳಿದ್ದರು ಹಿಂದಿಯ ಅಬ್ಬರ ಹೆಚ್ಚಾಗಿಯೇ ಇತ್ತು. ಕನ್ನಡ “ತಲೆ ಹರಟೆ” ಪಾಡ್ಕ್ಯಾಸ್ಟ್ ನಲ್ಲಿ ದೀಪ ಗಣೇಶ್ ರವರು ಹೇಳಿದಂತೆ, ಇಂಡಿಯನ್ ಫಿಲಂ ಮ್ಯೂಸಿಕ್ ಅಂತ ಚರ್ಚೆಗಳು ಬಂದರೆ ಅದು ದಕ್ಷಿಣ ಭಾರತದ ವರೆಗೂ ಬರುವುದೇ ಇಲ್ಲ. ಎಲ್ಲಾ ಲತಾ ಮಂಗೇಶ್ಕರ್, ಆಶಾ ಭೋಸಲೆ, ಸುಮನ್ ಕಲ್ಯಾಪುರ್, ಶಂಶಾದ್ ಬೇಗಂ, ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಅನಿಲ್ ಭಿಶ್ವಾಸ್, ಮದನ್ ಮೋಹನ್ ಇವರ ಸುತ್ತಮುತ್ತಲಿನಲ್ಲೆ ಎಲ್ಲಾ ಚರ್ಚೆಗಳು ಮುಗಿದು ಹೋಗುತ್ತೆ, ಏಕೆಂದರೆ ಹಿಂದಿ ಹಾಡಿನ ಜಗತ್ತಿಗೆ ಅವರೇ ಮೈಲಿಗಲ್ಲು ಆಗಿದ್ದರು. ಆದರೆ 1931 ರಲ್ಲಿ “ಆಲಂ ಅರಾ’ ಎಂಬ ಸಿನಿಮಾದಿಂದ ಸಿನಿಮಾ ಸಂಗೀತಕ್ಕೆ ಹೊಸ ಚಾಲನೆ ಸಿಕ್ಕಿತ್ತು ಆದರೆ ಅದೇ ವರ್ಷದಲ್ಲಿ ಕಾಳಿದಾಸ ಎಂಬ ತಮಿಳು ಚಿತ್ರ, ಸತಿಸುಲೋಚನ ಮತ್ತು ಭಕ್ತ ಧ್ರುವ ಎಂಬ ಕನ್ನಡ ಚಿತ್ರ ಕೂಡ ಬಂದಿತ್ತು ಆದರೆ ಈ ದಕ್ಷಿಣ ಭಾರತ ಸಿನಿಮಾ ಸಂಗೀತದ ಮಹತ್ವವನ್ನೇ ಗುರುತಿಸಲಿಲ್ಲ ಬರಿ ಹಿಂದಿಯ ಚಿತ್ರಗಳದ್ದೇ ಮೇಲುಗೈ ಆಗಿತ್ತು.

ಹಿಂದಿ ಸಿನಿಮಾದ ಮೂಲ ಬಂದು ಬಾಂಬೆಯಲ್ಲಿ ನೆಲೆಸಿತ್ತು ಆದರೆ ವಿಪರ್ಯಾಸ ಏನೆಂದರೆ ಬಾಂಬೆ ಬಂದು “ಹಿಂದಿ ಬೆಲ್ಟ್” ನಿಂದ ಬಹಳ ದೂರ ಉಳಿದಿತ್ತು. ಹಾಗೆ ಹಿಂದಿ ಫಿಲಂ ಮ್ಯೂಸಿಕ್ ಅಂತ ಹೇಳೋದಾದರೆ ಅದರ ಕೊಡುಗೆಗಳು ಬಂದು “ಜಯದೇವ್” ಆದರೆ ಅವರು ಬಂದಿದ್ದು ಪಂಜಾಬ್ ನಿಂದ, ಕಯಾಮ್- ಪಂಜಾಬ್, ಅನಿಲ್ ಬಿಶ್ವಾಸ್- ಬಾಂಗ್ಲಾದೇಶ, ನೂರ್ ಜಹಾನ್- ಪಂಜಾಬ್, ಸೈಗಲ್- ಜಮ್ಮು, ಸಿ ರಾಮಚಂದ್ರ- ಮಹಾರಾಷ್ಟ್ರ, ಎಸ್ ಡಿ ಬರ್ಮನ್, ಆರ್ ಡಿ ಬರ್ಮನ್, ಹೇಮಂತ್ ಕುಮಾರ್ ಎಲ್ಲರೂ ಕೂಡ ಬೆಂಗಾಲ್, ಮೊಹಮ್ಮದ್ ರಫಿ- ಪಂಜಾಬ್ ಹೀಗೆ ಎಲ್ಲಾ ಹಿಂದಿ ಭಾಷೆಗೆ, ಹಿಂದಿ ಫಿಲಂ ಮ್ಯೂಸಿಕ್ ಗೆ ಕೊಟ್ಟ ಕೊಡುಗೆ ಯಾವುದು ಹಿಂದಿಯದ್ದಲ್ಲ. ಹಿಂದಿ ಪ್ರಪಂಚಕ್ಕೆ ಬೇರೆ ಬೇರೆ ಪ್ರಾದೇಶಿಕ ಭಾಷೆಗಳ ಕೊಡುಗೆಯಿಂದ ಹಿಂದಿ ಫಿಲಂ ಮ್ಯೂಸಿಕ್ ಬೆಳೆದದ್ದು. ಇದೊಂದು ವಿಪರ್ಯಾಸವೇ ಸರಿ. ಆಗಿನ ಕಾಲದಲ್ಲಿ ಈ ಎಲ್ಲಾ ಹಾಡುಗಾರರು ತಮ್ಮ ತಮ್ಮ ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಹಾಡಿದ್ದರು ತುಂಬ ಹೆಸರು ಕೂಡ ಮಾಡಿದ್ದರು, ಆದರೆ ಹೊರಗಿನ ಪ್ರಪಂಚಕ್ಕೆ ಸಿನಿಮಾ ರಂಗಕ್ಕೆ ಪರಿಚಯವಾಗಬೇಕಾದರೆ ನ್ಯಾಷನಲ್ ಫಿಗರ್ ಅಂತ ಅನ್ನಿಸಿಕೊಳ್ಳೋಕೆ ಹಿಂದಿ ಹಾಡುಗಳನ್ನ ಹಾಡಬೇಕಿತ್ತು ಮತ್ತು ಹಿಂದಿ ಹಾಡುಗಳನ್ನು ಹಾಡಿದವರು ಮಾತ್ರ ಖ್ಯಾತ ಗಾಯಕರು ಅಂತ ಹೇಳಿದ್ದು ಉಂಟು.

ಎಸ್ ಪಿ ಬಿ, ಎಸ್ ಜಾನಕಿ, ಪಿ ಬಿ ಶ್ರೀನಿವಾಸ್, ಪಿ ಸುಶೀಲ ಇವರಿಗೂ ಆಗಿದ್ದು ಅದೇ. ಇವರೆಲ್ಲರೂ ಯಾವ ಮುಂಬೈ ಕಲಾವಿದರಿಗೂ ಕಡಿಮೆ ಇರಲಿಲ್ಲ. ಇವರೆಲ್ಲ 60 – 70 ರ ದಶಕದಲ್ಲಿ ಒಂದೇ ಒಂದು ದಿನ ಬಿಡುವಿರದಷ್ಟು ಕೆಲಸ ಮಾಡಿದ್ದಾರೆ ಮತ್ತು ತುಂಬಾ ಬೇಡಿಕೆ ಇದ್ದಂತ ಕಲಾವಿದರು. ಆದರೆ ಇವರ್ಯಾರು ಕೂಡ ದಕ್ಷಿಣ ಭಾರತವನ್ನ ದಾಟಿ ಹೋಗಿರಲಿಲ್ಲ ಹಾಗಾಗಿ ಯಾರು ಗುರುತಿಸಲೂ ಇಲ್ಲ. ಇದೇ ಕಾರಣಕ್ಕೆ ಎಸ್ ಜಾನಕಿಯವರು ತಮಗೆ ಒದಗಿದ್ದ ಪದ್ಮವಿಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದರು. ಅವರು ಹೇಳಿದ್ದು “ನನಗೆ ಕೊಟ್ಟರೆ ಭಾರತ ರತ್ನ ಪ್ರಶಸ್ತಿಯನ್ನೇ ಕೊಡಬೇಕು ನಾನು ಲತಾ ಮಂಗೇಶ್ಕರ್ ಅಷ್ಟೇ ಕೆಲಸ ಮಾಡಿದ್ದೇನೆ ಮತ್ತು ದಕ್ಷಿಣ ಭಾರತದ ಎಲ್ಲಾ ಸಂಗೀತಗಾರರ ಪರವಾಗಿ ನಾನು ಇದನ್ನ ನಿರಾಕರಿಸ್ತೀನಿ” ಅಂತ ಹೇಳಿದರು ಈ ಮಾತು ನನಗು ಕೂಡ ಒಂದು ಆತ್ಮ ಗೌರವದ ಮಾತು ಅಂತ ಅನ್ನಿಸುತ್ತೆ ಏಕೆಂದರೆ ಹಿಂದಿಯ ಹಾಡುಗಳು ಹಿಂದಿಯದ್ದೇ ಅಲ್ಲದ ಹಾಡುಗಾರರಿಂದ ಮೆರೆದು ಅವರಷ್ಟೇ ಕೆಲಸ ಮಾಡಿರುವ ಎಷ್ಟೋ ಕಲಾವಿದರನ್ನು ಗುರುತಿಸದೇ ಇರುವುದು ದಬ್ಬಾಳಿಕೆ ಎಂದೇ ಹೇಳಲಾಗುತ್ತೆ.

ಈ ಒಂದು ದೊಡ್ಡ ದಬ್ಬಾಳಿಕೆ ಅಥವಾ ಮನೋಭಾವನ್ನ ಮುರಿಯುವುದಕ್ಕೆ ಸಾಧ್ಯವಾಗಿದ್ದು ಎಸ್ ಪಿ ಬಿ ಗೆ ಮಾತ್ರ. ಅದೇನು ಸುಲಭದ ಮಾತಲ್ಲ, ತೆಲುಗಿನಲ್ಲಿ “ಮರೋ ಚರಿತ್ರ” ಎಂಬ ಚಿತ್ರ ಬಂದಿತ್ತು ಅದನ್ನ ಹಿಂದಿಯಲ್ಲಿ ಮಾಡುತ್ತೇನೆ ಅಂತ ಕೆ. ಬಾಲಚಂದರ್ ಹೊರಟರು ಅದು “ಏಕ್ ದುಜೇ ಕೆ ಲಿಯೇ” ಎಂಬ ಹೆಸರಿನಡಿ ಮಾಡಲು ನಿರ್ಧಾರ ಆದಾಗ ಕೆ. ಬಾಲಚಂದರ್ ಎಸ್ ಪಿ ಬಿ ರವರನ್ನ ಬಾಂಬೆಗೆ ಕರೆದುಕೊಂಡು ಹೋದರು. ಈ ಸಿನಿಮಾಕ್ಕೆ ಲಕ್ಷ್ಮಿಕಾಂತ್-ಪ್ಯಾರೇಲಾಲ್ ಸಂಗೀತ ನಿರ್ದೇಶಕರಾಗಿದ್ದರು. ಎಸ್ ಪಿ ಬಿ ಬಂದ ತಕ್ಷಣ ಅವರು ಹೇಳಿದ್ದು ನಮಗೆ ಈ ರೀತಿಯ ಮದ್ರಾಸಿ ಹಾಡುಗಾರರು ಬೇಡ, ಇಲ್ಲಿನ ಹಿಂದಿ ಹಾಡುಗಾರರನ್ನೇ ಇಟ್ಟುಕೊಂಡು ಮಾಡೋಣ ಅಂದರು. ಆದರೆ ಕೆ. ಬಾಲಚಂದರ್ ಇದಕ್ಕೆ ಎಸ್ ಪಿ ಬಿ ರವರೆ ಹಾಡಬೇಕು ಎಂದು ಪಟ್ಟು ಹಿಡಿದು ನಿಂತಾಗ ಅದಕ್ಕೆ ಲಕ್ಷ್ಮಿಕಾಂತ್- ಪ್ಯಾರೇಲಾಲ್ ಒಪ್ಪಿಕೊಂಡು ಲತಾ ಮಂಗೇಶ್ಕರ್ ರವರ ಜೊತೆಗೆ ಎಸ್ ಪಿ ಬಿ ರವರನ್ನು ಹಾಡಿಸಿದರು. ಅಲ್ಲಿಂದ ಹಿಂದಿ ಭಾಷೆಯಲ್ಲಿ ಎಸ್ ಪಿ ಬಿ ರವರ ಅಲೆ ಏಳುವುದಕ್ಕೆ ಶುರುವಾಯಿತು. ಎಸ್ ಪಿ ಬಿ ರವರು ಹಿಂದಿಯ ಜಗತ್ತಿನ ಮನೆ ಮನೆಗಳಲ್ಲಿ ಮಾತಾದರು ಹಾಗು ದೊಡ್ಡ ದೊಡ್ಡ ಮೇರು ಕಲಾವಿದರು ಕೂಡ ಎಸ್ ಪಿ ಬಿ ನನ್ನ ಚಿತ್ರಕ್ಕೆ ಹಾಡಬೇಕು ಎಂದು ಹಠ ಮಾಡುತ್ತಿದ್ದರು. ಹೀಗೆ ಎಸ್ ಪಿ ಬಿ ರವರು ಹಿಂದಿ ಜಗತ್ತಿನ ದಬ್ಬಾಳಿಕೆ ಮುರಿದು, ದಕ್ಷಿಣ ಭಾರತದ ಕಲಾವಿದರನ್ನು ಮೇಲೆತ್ತುವ ದೊಡ್ಡ ಕೆಲಸ ಮಾಡಿದರು. ಈ ಒಂದು ಕಾರಣಕ್ಕೆ ಎಸ್ ಪಿ ಬಿ ರವರನ್ನು ದೈತ್ಯ ಪ್ರತಿಭೆಯೆಂದು ಕರೆದರೂ ತಪ್ಪಾಗಲಾರದು.

ಈ ಎಲ್ಲಾ ವಿಶೇಷ ಮಾಹಿತಿಯನ್ನು ಕೊಟ್ಟಂತ ದೀಪ ಗಣೇಶ್ ಮತ್ತು ಅದನ್ನು ಪಾಡ್ಕ್ಯಾಸ್ಟ್ ಮೂಲಕ ನಮಗೆ ತಿಳಿಸಿದ “ತಲೆ ಹರಟೆ” ಪಾಡ್ಕ್ಯಾಸ್ಟ್ ಕಾರ್ಯಕ್ರಮಕ್ಕೆ ನನ್ನ ನಮನಗಳು

ಹೀಗೆ ಎಸ್ ಪಿ ಬಿ ಅಗಾಧ್ಯವಾಗಿ ಬೆಳೆಯುತ್ತಾ ಹೋದಂತೆ ನೂರಾರು ಪ್ರಶಸ್ತಿಗಳು ಅವರ ಮಡಿಲಿಗೆ ಬರುತ್ತಿತ್ತು. ಅದರಲ್ಲಿ ಶಂಕರಾಭರಣಂ ಎಂಬ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತ್ತು.

ಈ ಶಂಕರಾಭರಣಂ ಚಿತ್ರದ ಸಮಯದಲ್ಲಿ ಒಂದು ಘಟನೆಯನ್ನು ಎಸ್ ಪಿ ಬಿ ನೆನಪಿಸಿಕೊಳ್ಳುತ್ತಾರೆ. ಎಸ್ ಪಿ ಬಿ ಮತ್ತು ಜಾನಕಿ ಒಂದು ಹಾಡನ್ನು ಹಾಡಬೇಕಿತ್ತು. ಆ ದಿನ ಮುಹೂರ್ತದ ಸಮಯ ಆಗ ಬಂದ ಎಲ್ಲರಿಗೂ ಹಾರ ಹಾಕಿ ಒಳಗೆ ಕರೆದರು. ಎಸ್ ಜಾನಕೀ ರವರಿಗೂ ಹಾರ ಹಾಕಿ ಒಳಗೆ ಕರೆದು ಪೂಜೆ ಮುಗಿಸಿ ಮೈಕ್ ಮುಂದೆ ಹೋಗಿ ಹಾಡಬೇಕಿತ್ತು ಆದರೆ ಆಗ ಜಾನಕಿಯಮ್ಮ ರವರಿಗೆ ಆ ಹಾರದಿಂದ ಉಸಿರಾಟದ ಸಮಸ್ಯೆ ಕಾಣಿಸಿತು ಯಾರಿಗೂ ತಿಳಿಯದೇ ಇದ್ದರು ಜಾನಕಿಯಮ್ಮ ರವರ ಪತಿ ಹಾಗು ಎಸ್ ಪಿ ಬಿ ರವರಿಗೆ ತಿಳಿದಿತ್ತು ಏನೆ ಮಾಡಿದರು ಉಸಿರಾಟದ ಸಮಸ್ಯೆ ಕಡಿಮೆಯಾಗಲಿಲ್ಲ ಆಗ ಎಸ್ ಪಿ ಬಿ ತಿಳಿದೋ ತಿಳಿಯದೇನೋ ಒಂದು ಮಾತ್ರೆ ಸಮಸ್ಯೆ ಸರಿಮಾಡಬಹುದು ಎಂದು ಅವರ ಬ್ಯಾಗಿನಿಂದ ಎತ್ತಿಕೊಟ್ಟರು ಅದನ್ನ ತೆಗೆದುಕೊಂಡ ನಂತರ ಸಮಸ್ಯೆ ಇನ್ನೂ ಹೆಚ್ಚಾಯಿತು ಆದರೂ ಕೂಡ ಯಾರಿಗೂ ತಿಳಿಯದಂತೆ ಜಾನಕಿಯಮ್ಮ ಹಾಡನ್ನ ಹಾಡಿ ಹೋದರು. ಆದರೆ ಎಸ್ ಪಿ ಬಿ ರವರು ನಾನು ಹೀಗೆ ಮಾಡಬಾರದಿತ್ತು ಸುಮ್ಮನೆ ಅವರಿಗೆ ಹೆಚ್ಚು ತೊಂದರೆ ಕೊಟ್ಟೆ ಅಂತ ಪ್ರತಿಸಲ ಅದನ್ನ ನೆನೆದಾಗ ಪಶ್ಚಾತಾಪ ಪಡುತ್ತಿದ್ದರು. ನಂತರ ಆ ಚಿತ್ರದ ಹಾಡಿಗೆ ರಾಷ್ಟ್ರ ಪ್ರಶಸ್ತಿಯೇ ಬಂದು ಬಿಟ್ಟಿತ್ತು. ಹೀಗೆ ಅನೇಕ ವಿಚಾರಗಳನ್ನು ಎಸ್ ಪಿ ಬಿ ನೆನೆಯುತ್ತಾರೆ.

ಎಸ್ ಪಿ ಬಿ ರವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ, ಡಾ ವಿಷ್ಣುವರ್ಧನ್ ರವರ ಮೊದಲ ನಾಗರಹಾವು ಚಿತ್ರದಿಂದ ಕೊನೆಯ ಆಪ್ತರಕ್ಷಕ ಚಿತ್ರದವರೆಗು ಎಸ್ ಪಿ ಬಿ ರವರೆ ಕಂಠ ಧಾನ ಮಾಡಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ “ಮುದ್ದಿನ ಮಾವ” ಚಿತ್ರದಲ್ಲಿ ಎಸ್ ಪಿ ಬಿ ನಟಿಸಿದ್ದಾರೆ ಅದರಲ್ಲಿ ಬರುವ ದೀಪಾವಳಿ ಎಂಬ ಹಾಡಿಗೆ ಶಶಿಕುಮಾರ್ ರವರು ಎಸ್ ಪಿ ಬಿ ರವರೆ ನನಗೆ ಕಂಠಾಧಾನ ಮಾಡಬೇಕು ಎಂದು ಹಠಮಾಡಿದರು ಅದಕ್ಕೇನೋ ಎಸ್ ಪಿ ಬಿ ಸರಿ ಎಂದರು ಆದರೆ ಎಸ್ ಪಿ ಬಿ ರವರ ಪಾತ್ರಕ್ಕೆ ಯಾರು ಕಂಠ ಧಾನ ಮಾಡುತ್ತಾರೆ ಎಂಬ ಪ್ರಶ್ನೆ ಬಂದಾಗ ಅದಕ್ಕೆ ಉತ್ತರವಾಗಿ ಕಂಡಿದ್ದು ಡಾ ರಾಜಕುಮಾರ್, ಅಣ್ಣಾವ್ರಿಗೆ ಕೇಳಿದಾಗ ಅವರು “ಗಂಗೆಯೇ ಬಂದು ಒಂದು ಬೊಗಸೆ ನೀರುಕೇಳಿದಂತಾಯಿತು, ಅವರಿಗೆ ಹಾಡುವುದೆಂದರೆ ಅದು ನನ್ನ ಭಾಗ್ಯ” ಅಂತ ಹೇಳಿ “ಮುದ್ದಿನ ಮಾವ” ಚಿತ್ರದ ದೀಪಾವಳಿ ಹಾಡಿಗೆ ಡಾ ರಾಜಕುಮಾರ್ ರವರು ಎಸ್ ಪಿ ಬಿ ರವರ ಪಾತ್ರದ ಹಾಡಿಗೆ ಕಂಠಾಧಾನ ಮಾಡಿದರು. ಇದೊಂದು ಪ್ರಸಂಗ ಕನ್ನಡ ಚಿತ್ರರಂಗದಲ್ಲೇ ದೊಡ್ಡ ಸುದ್ದಿ ಮಾಡಿತ್ತು.

ಎಸ್ ಪಿ ಬಿ ರವರು ಹೀಗೆ ಅನೇಕ ಸಾಧನೆಗಳನ್ನು ಮಾಡುತ್ತಾ ಸಾವಿರ ಸಾವಿರ ಹಾಡುಗಳು ಹಾಡುತ್ತಾ ಬಂದರು ಅವರಿಗೆ ಸಂಗೀತದ ಬಗ್ಗೆ ತಿಳಿದಿರಲಿಲ್ಲ. ಸಂಗೀತದ ಪಾಠ ಕಲಿಯಬೇಕು ಅಂತ ಅವರಿಗೆ ಬಹಳ ಆಸೆ ಇತ್ತು ಆದರೆ ಆ ಆಸೆ ಕೊನೆಯ ವರೆಗೂ ಪೂರೈಕೆ ಆಗಲಿಲ್ಲ. ಎಸ್ ಪಿ ಬಿ ರವರು ಎಷ್ಟೋ ಹಾಡುಗಳನ್ನ ಹಾಡೋಕಾಗಲ್ಲ ಅಂತ ನಿರಾಕರಿಸಿದ್ದು ಹೌದು ಏಕೆಂದರೆ ಶಾಸ್ತ್ರೀಯ ಸಂಗೀತ ಕಲಿಯದ ಅವರು ಅದರ ಮೂಲದ ಹಾಡುಗಳನ್ನು ಹಾಡಲು ಒಪ್ಪುತ್ತಿರಲಿಲ್ಲ. ಇದಕ್ಕೆ ಬೇರೆಯವರನ್ನು ಹುಡುಕಿ ಹಾಡಿಸಿ ಆದರೆ ನಾನು ಹಾಡೋದಿಲ್ಲ ಅದರಲ್ಲಿ ಒಂದು ಸಣ್ಣ ಲೋಪ ಬಂದರು ಸಂಗೀತಕ್ಕೆ ನಾನು ದ್ರೋಹ ಮಾಡಿದಂತಾಗುತ್ತದೆ ಎಂದು ಸಾಕಷ್ಟು ಹಾಡುಗಳನ್ನು ನಿರಾಕರಿಸಿದ್ದಾರೆ. ಎಸ್ ಪಿ ಬಿ ರವರು ಏನು ಕಲಿತ್ತಿದ್ದೆ ಅಂತ ಅವರಿಗೆ ಯೋಚನೆ ಇಲ್ಲ ಆದರೆ ಅವರಿಗೆ ಏನು ತಿಳಿದಿಲ್ಲ ಎನ್ನುವುದರ ಸ್ಪಷ್ಟತೆಯಿತ್ತು ” I know what I don’t know ” ಇದನ್ನ ತಿಳಿದುಕೊಂಡಿದ್ದರಿಂದ ಅವರಿಗೆ ಯಾವುದು ಬೇಕು ಯಾವುದು ಬೇಡ ಎನ್ನುವುದರ ಸ್ಪಷ್ಟತೆ ತಿಳಿದುಕೊಂಡಿದ್ದರು.

Generation Gap ಅನ್ನುವ ಒಂದು ಅಲೆ ಸಿನಿಮಾ ಸಂಗೀತಕ್ಕೂ ತಟ್ಟಿತ್ತು. ಅದರ ಬಗ್ಗೆ ಎಸ್ ಪಿ ಬಿ ರವರನ್ನು ಕೇಳಿದರೆ “ಸಿನಿಮಾ ಸಂಗೀತ ಆಗ ಇದ್ದಂತ ರೀತಿ ಬೇರೆ ಸಿದ್ಧಾಂತಗಳು ಬೇರೆ ಆದರೆ ಈಗಿನ ರೀತಿ ನೀತಿಗಳು ಬೇರೆ. ಆಗ ಒಂದು ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಅಂದರೆ ಅಲ್ಲಿ ಸಂಗೀತ ನಿರ್ದೇಶಕರು ಇರುತ್ತಿದ್ದರು. ಹಾಡುಗಾರರು ಮಿಕ್ಸಿಂಗ್ ಮಾಸ್ಟರಿಂಗ್ ಮಾಡುವವರು, ಆರ್ಕೆಸ್ಟ್ರಾ, ಕಲಾವಿದರು, ಸಹ ಕಲಾವಿದರು, ಕವಿಗಳು, ಚಿತ್ರದ ನಿರ್ದೇಶಕರು ಎಲ್ಲರೂ ಕೂಡ ಒಟ್ಟಿಗೆ ಜೊತೆಯಲ್ಲೇ ಇದ್ದು ಹಾಡಿಗೆ ಪ್ರತಿಯೊಬ್ಬರು ಕೂಡ ಕೆಲಸ ಮಾಡುತ್ತಿದ್ದರು. ಹಾಡುಗಾರರಿಗೆ ತಿದ್ದಿ ಹೇಳುವುದಕ್ಕೆ ಗುರುಗಳು ಇರುತ್ತಿದ್ದರು. ಸಾಹಿತ್ಯದಲ್ಲಿ ಬದಲಾವಣೆ ಬೇಕಾದರೆ ಕವಿಗಳು ಸಹ ಅಲ್ಲೇ ಇರುತ್ತಿದ್ದರು. ಎಲ್ಲರೂ ಒಟ್ಟಿಗೆ ಶ್ರಮಪಟ್ಟು ಬಹಳ ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದರು. ಆದರೆ ಈಗ ಹಾಡುಗಾರರು ಒಂದು ದಿನ ಬಂದರೆ, ಆರ್ಕೆಸ್ಟ್ರಾ ಇನ್ನೊಂದು ದಿನ ಇರುತ್ತದೆ ಕೆಲವೊಮ್ಮೆ ಸಂಗೀತ ವಾದ್ಯಗಳನ್ನು ನುಡಿಸುವವರನ್ನು ಕರೆಯುತ್ತಿರಲಿಲ್ಲ ಎಲ್ಲವೂ ಕಂಪ್ಯೂಟರ್ ನಲ್ಲಿ ಸಂಯೋಜನೆ ಮಾಡುವ ಕಾಲ ಬಂದಿದೆ ಇದರಿಂದ ಸಂಗೀತ ನುಡಿಸುವವರಿಗೆ ಅನ್ನ ಇಲ್ಲದಂತಾಗಿದೆ. male ಸಿಂಗರ್ ಒಂದು ದಿನ ಬಂದರೆ female ಸಿಂಗರ್ ಇನ್ನೊಂದು ಇನ್ನೊಂದು ದಿನ ಬಂದು ಹಾಡುತ್ತಾರೆ. ತಪ್ಪಾದರೆ ತಿದ್ದಿ ಹೇಳುವುದಕ್ಕೆ ಯಾವ ಗುರುಗಳು ಇಲ್ಲ ಅದಕ್ಕೆ ಈಗಿನ ಕಾಲದ ಹಾಡುಗಳಲ್ಲಿ ಜೀವ ಇರುವುದಿಲ್ಲ, ಸತ್ವ ಕಾಣುವುದಿಲ್ಲ. ಎಲ್ಲವೂ ಡಿಜಿಟಲ್ ಆಗಿರುವ ಈ ಕಾಲದಲ್ಲಿ ಅದನ್ನ ಸರಿಯಾಗಿ ಬಳಸಿಕೊಳ್ಳಬೇಕೇ ಹೊರತು ಅದೇ ಬದುಕಾಗಬಾರದು ಎಂಬುದು ಎಸ್ ಪಿ ಬಿ ರವರ ಅಭಿಪ್ರಾಯ.

ಇನ್ನೂ ಈಗಿನ ಕಾಲದ ಹಾಡುಗಾರರ ವಿಚಾರಕ್ಕೆ ಬಂದರೆ ಹೊಸ ಪ್ರತಿಭೆಗಳು ಬರುವುದು ಹೊಸ ಶೈಲಿಯಲ್ಲಿ ಹಾಡುವುದು ಇದೆಲ್ಲವೂ ಎಸ್ ಪಿ ಬಿ ರವರಿಗೆ ಇಷ್ಟ ಆದರೆ “ಎಷ್ಟೋ ಪ್ರತಿಭೆಗಳಿಗೆ ಸರಿಯಾಗಿ ತಿದ್ದಿ ಹೇಳುವ ಗುರುಗಳು ಸಿಕ್ಕಿಲ್ಲ. ಸ್ಟುಡಿಯೋದಲ್ಲಿ ಹೇಗೆ ಇರಬೇಕು ಹೇಗೆ ಹಾಡಬೇಕು ಅಂತ ಹೇಳಿಕೊಡುವವರು ಯಾರು ಇಲ್ಲ. ಇದರಿಂದ ಕೆಲವರು ತಮ್ಮದೇ ಹಾಡಿಗೆ ಹೊರಗಡೆ ಬೇಡಿಕೆ ಜಾಸ್ತಿ ಎಂದು ಬೀಗುವುದು ಅಹಂಕಾರ ತೋರಿಸುವುದು ನೋಡಿದ್ದೇನೆ, ಸಾಹಿತ್ಯದ ಹಾಳೆಯನ್ನು ಬರೆದು ಹಾಡಿದ ಮೇಲೆ ಅಲ್ಲಲ್ಲೇ ಬಿಸಾಕಿ ಹೋಗೋದು ನೋಡಿದ್ದೇನೆ, ನನ್ನ ಸ್ಟುಡಿಯೋದಲ್ಲಿ ಹಾಗಾದರೆ ನಾನೇ ಎಷ್ಟೋ ಬಾರಿ ಆ ಪ್ರತಿಗಳನ್ನು ಎತ್ತಿಟ್ಟಿರುವುದು ಉಂಟು” ಎಂದು ಎಸ್ ಪಿ ಬಿ ವಿಷಾದ ವ್ಯಕ್ತಪಡಿಸುತ್ತಾರೆ.

ಕೊನೆಯದಾಗಿ ಎಸ್ ಪಿ ಬಿ ರವರಿಗೆ ಕಾಡಿದ ಯಕ್ಷ ಪ್ರಶ್ನೆ ಎಂದರೆ ಗಾಯಕ, ಗಾಯಕಿಯರಿಗೆ ಸಿಗಬೇಕಾದ royalty (ಗೌರವಧನ) ವಿಚಾರ. ಇದು ಸಂಗೀತ ಪ್ರಪಂಚಕ್ಕೆ ಒಂದು ದೊಡ್ಡ ಸವಾಲು. ಏಕೆಂದರೆ ಒಂದು ಹಾಡು ಒಂದು ಚಿತ್ರಕ್ಕೆ ಎಂದು ಮೀಸಲು ಹಾಗು ಆ ಚಿತ್ರ ಒಬ್ಬ ನಿರ್ಮಾಪಕನಿಗೆ ಮೀಸಲು. ಹೀಗೆ ಆ ಚಿತ್ರಕ್ಕೆ ಯಾರು ಹಾಡುತ್ತಾರೋ ಅವರಿಗೆ ಏನು ಸಂಬಳ ಕೊಡಬೇಕೋ ಅದನ್ನ ನಿರ್ಮಾಪಕರು ನಿರ್ಧಾರ ಮಾಡಿ ಕೊಡುತ್ತಾರೆ ಮತ್ತು ಆ ಹಾಡಿನ ಸಂಪೂರ್ಣ  ಹಕ್ಕು ನಿರ್ಮಾಪಕರ ಮೇಲೆ ಇರುತ್ತದೆ. ಆದರೆ ಆ ಹಾಡುಗಳನ್ನ ಬರಿ ಚಲನಚಿತ್ರದಲ್ಲಿ ಮಾತ್ರ ಜನ ಕೇಳುವುದಿಲ್ಲ ಮತ್ತು ಆ ಹಾಡನ್ನ ಹಾಡಿರುವ ಗಾಯಕ/ ಗಾಯಕಿಯರಿಗೆ ಅದರ ಸಂಪೂರ್ಣ ಹಕ್ಕು ಸಿಗಬೇಕು ಮತ್ತು ಅದಕ್ಕೆ ತನ್ನದೇ ಆದ ಒಂದು ಪ್ರತ್ಯೇಕ ಬೆಲೆ ಸಿಗಬೇಕು ಎಂಬುದು ಎಸ್ ಪಿ ಬಿ ರವರ ವಾದ. ಆದರೆ ಒಂದು ಕಡೆ ಹಾಡುಗಾರರಿಗೆ ಅವರಿಗೆ ಆದ ಗೌರವ ಸಲ್ಲಬೇಕು ಇನ್ನೊಂದು ಕಡೆ ನಿರ್ಮಾಪಕರಿಗೂ ಕೂಡ ಮೋಸ ಆಗಬಾರದು ಇವೆರಡರ ವಾದ ಎಂದಿಗೂ ಮುಗಿಯುವುದಿಲ್ಲ ಮತ್ತು ಎಸ್ ಪಿ ಬಿ ರವರು ಕೂಡ ಈ ವಿಚಾರದಲ್ಲಿ ಬಹಳ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರಬೇಕೆಂದು ಬಹಳ ಕಷ್ಟ ಪಟ್ಟರು ಆದರೆ ಅದು ಅವರ ಎಷ್ಟೋ ಆಸೆ ಕನಸುಗಳಂತೆಯೇ ಉಳಿದಿಬಿಟ್ಟಿತ್ತು.

ಹೀಗೆ ಎಸ್ ಪಿ ಬಿ ರವರು ತಮ್ಮ ಬದುಕಿನ ಶುರುವಿನಿಂದ ಕೊನೆಯವರೆಗು ಪ್ರತಿಯೊಂದು ಹೆಜ್ಜೆಯನ್ನು ಇಡುತ್ತಾ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ ಸಾವಿರಾರು ಪ್ರತಿಭೆಗಳಿಗೆ ಗುರುವಾಗಿ, ದಾರಿ ದೀಪವಾಗಿ, ಸಾಧನೆಯ ಸ್ಪೂರ್ತಿಯಾಗಿ ಕೊನೆಯ ದಿನದವರೆಗೂ ಎಲ್ಲರಿಗೂ ಪ್ರಿಯವಾದ ಮನುಷ್ಯನಾಗಿ ಎಲ್ಲೂ ಒಂದು ಕಪ್ಪು ಚುಕ್ಕೆ ಇರದಂತೆ ಬದುಕಿ ಬೆಳೆದು ಮಾದರಿಯಾಗಿ, ಅಗಾಧ್ಯ ಪ್ರತಿಭೆಯಾಗಿ ಅವರ ಹೆತ್ತವರ ಹೆಸರು, ನಾಡಿನ ಹೆಸರು ಭಾಷೆಯ ತಾಕತ್ತನ್ನ ಅಂತರಾಷ್ಟ್ರೀಯ ಮಟ್ಟಕ್ಕೆ ಯಾರ ಸಹಾಯವು ಇಲ್ಲದೆ ಒಬ್ಬರೇ ಹೊತ್ತಿಕೊಂಡು ಹೋಗಿ ಭಾರತದ ಕಲಾವಿದರ ಆಸೆ, ಗುರಿ, ಶ್ರಮವನ್ನು ಉತ್ತುಂಗಕ್ಕೆ ಏರಿಸಿ ನಾವು ಯಾರಿಗೂ ಕೂಡ ಕಡಿಮೆ ಇಲ್ಲ ಎಂದು ಬಹಳಷ್ಟು ಬಾರಿ ಸಾರಿ ಸಾರಿ ಹೇಳಿದ್ದಾರೆ. ಯಾವುದೇ ಒಬ್ಬ ಶತ್ರುವನ್ನು ಹೊಂದಿರದ ಮನುಷ್ಯ ಎಂದರೆ ಅದು ಎಸ್ ಪಿ ಬಿ ಮಾತ್ರ. ಅವರ ಹಾಡುಗಳು ಬರಿ ಹಾಡಾಗಿರಲಿಲ್ಲ ಎಷ್ಟೋ ನೊಂದ ಮನಸ್ಸುಗಳಿಗೆ ಸ್ಫೂರ್ತಿಯಾಯಿತು, ಪ್ರೀತಿಪಾತ್ರರಾದವರನ್ನು ಕಳೆದುಕೊಂಡವರಿಗೆ ಆ ಧ್ವನಿ ಆಸರೆಯಾಗಿತ್ತು. ತಮ್ಮದೇ ಚೌಕಟ್ಟಿನಲ್ಲಿ ಬೆಳೆದವರಿಗೆ ಹೊರಗಿನ ಪ್ರಪಂಚ ಏನೆಂದು ಹೇಳಿತ್ತು. ಆದರೆ ಸೆಪ್ಟೆಂಬರ್ 25 2020 ಒಂದು ಕರಾಳ ದಿನ, ಅಜಾತ ಶತ್ರುವಾಗಿ ಬದುಕಿದ ಈ ಪ್ರತಿಭೆಯ ಅಗಲಿಕೆ ಬರಿ ಅವರ ದೈಹಿಕ ಅಗಲಿಕೆ ಅಷ್ಟೇ ಹೊರತು ಅವರು ಎಂದಿಗು ನಮ್ಮ ನಡುವಲ್ಲೇ ಇದ್ದಾರೆ ಎಂಬ ಭಾವನೆ ಸದಾ ಇರುತ್ತದೆ. ಪ್ರತಿಯೊಂದು ಪದಗಳಲ್ಲೂ ಸಾಲು ಸಾಲುಗಳಲ್ಲೂ ಸ್ವರಗಳಲ್ಲೂ ಅವರು ಇಂದಿಗೂ ನಮ್ಮೊಂದಿಗೆ ಜೀವಂತವಾಗಿಯೇ ಜೊತೆಯಲ್ಲಿ ಇದ್ದಾರೆ. ಸಾವಿರ ಸಾವಿರ ಹಾಡುಗಳನ್ನ ಹಾಡಿ, ಲೇಕಕ್ಕೆ ಸಿಗದಷ್ಟು ಸಾಧನೆ ಮಾಡಿ, ಬದುಕಿನ ಉದ್ದಕ್ಕೂ ಮುಗ್ದತೆಯನ್ನು ಕಾಪಾಡಿಕೊಂಡು ಆ ಒಂದು ಪುಟ್ಟ ನಗೆಯನ್ನು ಸದಾ ಹೊತ್ತಿಕೊಂಡು ಮೌನದಲ್ಲೇ ಸಾವಿರ ಸಂದೇಶಗಳನ್ನು ಹೇಳಿ, ಬದುಕು ಎಂದರೆ ಬರಿ ಬದುಕುವುದಲ್ಲ ಪ್ರತಿ ಕ್ಷಣವೂ ಕೂಡ ಜೀವಿಸಬೇಕು ಇನ್ನೊಬ್ಬರಿಗೆ ಸ್ಪೂರ್ತಿಯಾಗಬೇಕು ಎಂದು ತೋರಿಸಿ ಕೊಟ್ಟು ಸಾಮಾನ್ಯ ವ್ಯಕ್ತಿಯಾಗಿ ಕಂಡರೂ ಅಸಮಾನ್ಯ ಸಾಧನೆ ಮಾಡಿದ ಈ ಪ್ರತಿಭೆಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು ಸಾಲದು.

ಎಸ್ ಪಿ ಬಿ ರವರ ಬಗ್ಗೆ ಪ್ರತಿ ಸಲ ನಾನು ಕೇಳಿದಾಗಲು ಅವರ ಮುಗ್ಧ ನಗು ಕಣ್ಮುಂದೆ ಬರುತ್ತದೆ. ಅವರನ್ನು ಅಗಲಿದ ದಿನವಂತು ಭಾಷೆಗಳಿಂದ, ರಾಜ್ಯಗಳಿಂದ, ಭಾವನೆಗಳಿಂದ ಭಿನ್ನ ಭಿನ್ನವಾಗಿರುವ ಸಾಕಷ್ಟು ವ್ಯಕ್ತಿಗಳಿಂದ ಇವರ ಬಗ್ಗೆ ಹೇಳಿದ ನೂರಾರು ಮಾತುಗಳು ಕೇಳಿ, ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದದ್ದು ಈ ವ್ಯಕ್ತಿಯ ಬಗ್ಗೆ ಒಂದು ಲೋಪವು ತಿಳಿದುಬರಲಿಲ್ಲ. ಏಕೆಂದರೆ ಭಾಷೆ, ರಾಜ್ಯ ದೇಶಗಳನ್ನು ದಾಟಿ ಎಲರಲ್ಲೂ ಒಂದೇ ವ್ಯಕ್ತಿಯಂತೆ ಕಾಣುವುದೆಂದರೆ ಅದು ಶ್ರೀಪತಿ ಪಂಡಿತಾರಾದ್ಯುಲ ಬಾಲಸುಬ್ರಮಣ್ಯಂ ಮಾತ್ರ.

ಈ ಪ್ರತಿಭೆಯ ಬಗ್ಗೆ ತಿಳಿದುಕೊಳ್ಳುತ್ತಾ ನಿಮಗೆ ತಿಳಿಯದ ವಿಷಯವನ್ನು ನನಗೆ ಗೊತ್ತಿರುವಷ್ಟು ವಿಚಾರಗಳನ್ನು ನಿಮಗೆ ತಿಳಿಸಬೇಕೆಂಬುದೇ ನನ್ನ ಒಂದು ಪುಟ್ಟ ಆಸೆ.

-ಕೃಷ್ಣಮೂರ್ತಿ. ಕೆ

12 thoughts on “ಎದೆತುಂಬಿ ಬರೆಯುವೆನು…

 1. ನಿಮ್ಮ ಬರವಣಿಗೆ ಬಹಳ ಸರಳ ಮತ್ತು ಸೊಗಸಾಗಿದೆ. ನಮಗೆ ಗೊತ್ತಿರದ ಎಷ್ಟೋ ವಿಷಯಗಳನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದ.

  Like

  1. ಧನ್ಯವಾದಗಳು ಅಕ್ಕ

   Like

 2. ಗುರುಪ್ರೀತ್ June 7, 2021 — 15:08

  ಬಹಳ ಸೊಗಸಾಗಿದೆ ಮತ್ತು ಎಸ್.ಪಿ.ಬಿ ಸರ್ ಬಗ್ಗೆ ಎಷ್ಟೋ ಗೊತ್ತಿಲ್ಲದ ವಿಚಾರಗಳನ್ನು ನಿಮ್ಮ ಈ ಲೇಖನದಿಂದ ತಿಳಿದಿದ್ದೇನೆ ಹೀಗೆ ಮುಂದುವರಿಸಿ ಯಶಸ್ಸು ನಿಮ್ಮದಾಗಲಿ

  Like

  1. ಧನ್ಯವಾದಗಳು ಗುರುಪ್ರೀತ್. ನಿಮ್ಮಂತಹ ಓದುಗರ ಸಹಾಯ ಬಹಳ ಮುಖ್ಯ

   Like

 3. ಬಹು ಚೆಂದವಾಗಿ ಎಸ್.ಪಿ.ಬಿ ಸರ್ ಅವರ ಜೀವನದ ಎಲ್ಲಾ ಮುಖ್ಯ ಕ್ಷಣಗಳನ್ನು ವಿವರಿಸಿರುವಿರಿ. ಬರವಣಿಗೆ ತುಂಬಾ ಅದ್ಭುತವಾಗಿದೆ..

  Like

  1. ಧನ್ಯವಾದಗಳು ದೀಕ್ಷಿತ್

   Like

 4. ಪಾರ್ವತಿ June 4, 2021 — 20:40

  ಮೊದಲು ಜಸ್ಟ್ ಗ್ಲಾನ್ಸ್ ಮಾಡಿದೆ.ಆದರೆ ಕುತೂಹಲದಿಂದ ಓದಲು ಪ್ರಾರಂಭಿಸಿದೆ.ಅತ್ಯುತ್ತಮ ನಿರೂಪಣೆ ಅರಿವಿಲ್ಲದಂತೆ ಓದಿಸಿಕೊಂಡು ಹೋಯಿತು.ವಿಷಯ ಸಂಗ್ರಹಣೆ, ಸರಳ ನಿರೂಪಣೆ, ಬರವಣಿಗೆಯ ಶೈಲಿ ತುಂಬಾ ಉತ್ತಮವಾಗಿದೆ.ಓದುಗರನ್ನು ಆಕರ್ಷಿಸುವ ಶಕ್ತಿ ನಿಮ್ಮ ಬರವಣಿಗೆಗೆ ಇದೆ. ನಿಮ್ಮ ಸಾಹಿತ್ಯ ಕೃಷಿ ಹೀಗೆಯೆ ಮುಂದುವರಿಯಲಿ. ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಹೊರಬರಲಿ ಎಂಬ ಭರವಸೆಯೊಡನೆ, ಶುಭಹಾರೈಕೆಳು.

  Like

  1. ನಿಮ್ಮ ಈ ಹಾರೈಕೆಗೆ ನಾ ಸದಾ ಚಿರಋಣಿ. ಖಂಡಿತ ಹೀಗೆ ಹಲವಾರು ಕೃತಿಗಳನ್ನು ರಚಿಸುವುದರ ಮೂಲಕ ಎಲ್ಲರನ್ನು ಪ್ರೇರೇಪಿಸು ನನ್ನ ಶ್ರಮ ಇದ್ದೆ ಇರುತ್ತದೆ

   Like

 5. ನಿಮ್ಮ ಬರವಣಿಗೆ ಅತ್ಯುತ್ತಮವಾಗಿದ,
  ನಾನು ನಿಮ್ಮ ಬರವಣಿಗೆಯನ್ನು ಎದುರು ನೋಡುತ್ತಿದ್ದೇನೆ.
  ನಿಮ್ಮ ಬರವಣಿಗೆ ಸ್ಫೂರ್ತಿ ನೀಡುತ್ತದೆ..

  Like

  1. ಧನ್ಯವಾದಗಳು ನೀಲೆಶ್.
   ಖಂಡಿತ ಇನ್ನಷ್ಟು ಹೊಸ ರೀತಿಯಲ್ಲಿ ನಿಮ್ಮಂತಹ ಓದುಗರಿಗೆ ಸ್ಪೂರ್ತಿ ತುಂಬಲು ಪ್ರಯತ್ನಿಸುತ್ತೇನೆ

   Like

 6. Nice research , I dint know many things thanks

  Liked by 1 person

  1. You welcome. This person has so many inspiring stories. I just got really few.

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close