ಅಕ್ಕನ ಮದುವೆ

-ನಾ ಕಂಡು ಕಳೆದ ಘಳಿಗೆ

ಮದುವೆ ಎಂದಾಕ್ಷಣ ನಮ್ಮ ಲೈಫ್ ನ ಇನ್ನೊಂದು ಅಧ್ಯಾಯ ಅಂತ ಕೆಲವರಿಗೆ ಖುಷಿಯಾಗುತ್ತೆ ಮತ್ತೆ ಕೆಲವರಿಗೆ ಭಯ ಆಗುತ್ತೆ, ಹುಟ್ಟಿದಾಗಿನಿಂದ ಎಲ್ಲರ ಜೀವನದಲ್ಲಿ ಅವರದ್ದೇ ಆದ ರೀತಿಯಲ್ಲಿ ನನ್ನ ಮದುವೆ ಅಂದರೆ ಹೀಗಿರಬೇಕು, ನನ್ನ ಹುಡುಗ/ ಹುಡುಗಿ ಈ ಗುಣಗಳನ್ನು ಹೊಂದಿರಬೇಕು. ನಾನು ಅವತ್ತು ಒಳ್ಳೆ ಡ್ರೆಸ್ ಹಾಕಿಕೊಂಡಿರಬೇಕು. ನನ್ನ ಫ್ರೆಂಡ್ಸ್ ಲಿಸ್ಟ್ ನಲ್ಲಿ ಇರುವ ಎಲ್ಲರೂ ಬಂದು ಕ್ಯೂ ನಲ್ಲಿ ನಿಂತು ನನಗೆ ಗಿಫ್ಟ್ ಕೊಟ್ಟು ವಿಶ್ ಮಾಡ್ಬೇಕು, ಹೀಗೆ ಸಾಕಷ್ಟು ರೀತಿಯ ಕನಸುಗಳು, ಭಾವನೆಗಳು ಇರುವುದು ಸಹಜ. ಆದರೆ ನನ್ನ ಮದುವೆ ಅನ್ನುವುದಕ್ಕಿಂತ ಅಕ್ಕನ ಮದುವೆ ಹೀಗಿರಬೇಕು ಅಂತ ಒಬ್ಬ ತಮ್ಮನಾಗಿ ಕನಸು ಕಟ್ಟಿಕೊಳ್ಳುವುದು ಬಹುಷಃ ಎಲ್ಲ ಹೆಣ್ಣು ಮಕ್ಕಳ ಅಣ್ಣ ತಮ್ಮಂದಿರ ಒಂದು ದೊಡ್ಡ ಪ್ಲಾನ್ ಮತ್ತು ಖುಷಿ ತರಿಸೋ ವಿಚಾರ.

ಕೆಲವೊಂದಷ್ಟು ಜನ ಈ ಮದುವೆ ಅಂದ್ರೇನೆ ಭಯ ಬೀಳ್ತಾರೆ, ಯಾಕಪ್ಪ ಅಂದ್ರೆ ಅದಕ್ಕೆ ಸಾವಿರ ಕಾರಣಗಳು ಇವೆ, ಒಂದು ಹೆಣ್ಣಿನ ದೃಷ್ಟಿಯಿಂದ ನೋಡಿದರೆ “ಈಗ್ಲೇ ಆರಾಮಗಿದಿನಿ ಅದನ್ನ ಬಿಟ್ಟು ಪ್ರಾಬ್ಲಮ್ ಗೆ ಸಿಗಾಕೋಳೋದೂ ಬೇಕಾ?” ಅಂತಾರೆ. ಅದೇ ನಮ್ಮ ಹುಡುಗರನ್ನ ಕೇಳಿದ್ರೆ “ಚಿಲ್ ಆಗ್ ಇರೋ ಈ ಲೈಫ್ ಅಲ್ಲಿ ಅದೆಂಥಾ ಹುಡುಗಿ ಸಿಕ್ತಾಳೋ ಎಷ್ಟು ಗೋಳು ಕೊಡ್ತಾಳೋ, ಅಪ್ಪ ಅಮ್ಮನ ಚೆನ್ನಾಗಿ ನೋಡ್ಕೋತಾಳೋ” ಅನ್ನೋದೇ ಒಂದು ಯಕ್ಷ ಪ್ರಶ್ನೆ. ಇಂತಹ ಈ ಕನ್ಫ್ಯೂಷನ್ನಲ್ಲಿ ಒಬ್ಬ ತಮನಾಗಿ ಅಕ್ಕನ ಮದುವೆ ಮಾಡಬೇಕು ಅಂದರೆ ಸಂತೋಷ ಹಾಗು ಜವಾಬ್ಧಾರಿ ಎರಡು ಕೂಡ ನನಗೆ ಒಂದು ದೊಡ್ಡ ಟಾಸ್ಕ್.

ಚಿಕ್ಕ ವಯಸ್ಸಿನಿಂದ ಜೊತೆಯಲ್ಲೇ ಸ್ಕೂಲ್ ಗೆ ಹೋಗಿ ಜೊತೆಯಲ್ಲೇ ಆಟ ಆಡಿ, ಒಂದೊಂದು ಸಲ ಅವಳ ಲಂಚ್ ಬಾಕ್ಸ್ ನಾನು ಕದ್ದು ತಿಂದು ಅಪ್ಪ ಅಮ್ಮ ಕೈಯಲ್ಲಿ ಬೈಸಿಕೊಂಡಿದ್ದು ಉಂಟು. ಕೋಪ ಬಂದಾಗ ಜುಟ್ಟು ಹಿಡಿದು ಜಗಳ ಆಡಿ ಇಬ್ರು ವೈರಿಗಳಂತೆ ಇದ್ರು ರಾತ್ರಿ ಊಟದ ಟೈಮ್ ಗೆ ಮನೆ ಮಂದಿಯೆಲ್ಲಾ ಒಟ್ಟಿಗೆ ಊಟ ಮಾಡುವಾಗ ಎಲ್ಲ ಕೋಪ ಊಟದ ಜೊತೆ ಹೊಟ್ಟೆಗೆ ಸೇರಿ ಮರೆತುಬಿಡುತ್ತಿದೆವು. ಹೀಗೆ ಸಾವಿರ ಸಾವಿರ ನೆನಪುಗಳನ್ನು ಹೊತ್ತುಕೊಂಡು ಚಿಕ್ಕಂದಿನಿಂದ ಇಲ್ಲಿಯವರೆಗು ಬೆಳೆದು ಬಂದು ಈಗ ಧಿಡೀರ್ ಅಂತ ಅಕ್ಕನ ಮದುವೆ ಮಾಡ್ಬೇಕು ಅಂತ ಅಪ್ಪ ಬಂದು ಹೇಳಿದ್ರೆ ಶಾಕ್ ಆಗಲ್ವಾ?. ಅಮ್ಮನಿಗೆ ಎಲ್ಲ ಗೋತಿದ್ರು ಸೈಲೆಂಟ್ ಆಗಿ ಅಡುಗೆಮನೆಯಲ್ಲಿ ಅವಳ ಕೆಲಸ ಮಾಡ್ತಿದ್ಲು. ಅವರಿಬ್ಬರಿಗೂ ಅಕ್ಕ ಹುಟ್ಟಿದಾಗಿನಿಂದ ಹುಟ್ಟಿದ ಕನಸು ಅವಳ ಮದುವೆ; ಆದರೆ ಅವಳ ಜೊತೆಯಲ್ಲಿ ಬೆಳದ ನನಗೆ ಈ ಮದುವೆ ಅನ್ನೋ ವಿಚಾರನೆ ಹೊಸದಾಗಿತ್ತು.

ಹಾಗೂ ಹೀಗೋ ಏನೋ ಮನಸ್ಸಿಗೆ ಸಮಾಧಾನ ಹೇಳ್ತಾ ಸಿಚುಯೇಷನ್ ಅರ್ಥ ಮಾಡ್ಕೊಂಡು ಸುಮ್ಮನಾದೆ. ಅಷ್ಟರಲ್ಲಿ ಅಪ್ಪ ಗಂಡು ಹುಡುಕೋಕೆ ಶುರು ಮಾಡಿದ್ರು, ಈ ಗಂಡು ಹುಡುಕೋ ಕೆಲಸ ಅಂದ್ರೆ ಅದರ ಕಷ್ಟ ಹೆಣ್ಣು ಹೆತ್ತವರಿಗೆ ಮಾತ್ರ ಗೊತ್ತು. ಹುಡುಗ ನೋಡೋಕೆ ಹೇಗಿದ್ದಾನೆ, ಬಣ್ಣ ಕಪ್ಪೋ ಕೆಂಪೋ, ಮೈಕಟ್ಟು ಪರ್ವಾಗಿಲ್ಲ ಅಲ್ವ, ಏನ್ ಓದ್ಕೊಂಡಿರೋದು?, ನಮ್ಮ ಹುಡುಗಿಗಿಂತ ಒಂದು ಚೂರು ಜಾಸ್ತಿ ಆದ್ರೂ ಓದಿರ್ಲಿ, ಮನೆ ಕಡೆ ಎಲ್ಲಾ ಹೇಗಿದ್ದಾರೆ ನಮ್ಮ ಹುಡುಗಿನ ಕೊಟ್ರೆ ಚೆನ್ನಾಗಿ ನೋಡ್ಕೋತಾರ?  ಮನೆಯಲ್ಲಿ ಬೇರೆ ಯಾರಾದ್ರೂ ಹೆಣ್ಣು ಮಕ್ಕಳು ಇದ್ದಾರಾ? ಇದ್ರೆ ಕಷ್ಟ ಅರ್ಥ ಮಾಡ್ಕೋತಾರೆ, ಹುಡುಗ ಎಲ್ಲಿ ಕೆಲಸ ಮಾಡೋದು? ಸರ್ಕಾರೀ ಕೆಲಸ ಅಂದ್ರೆ ಒಳ್ಳೇದು, ಸ್ವಂತ ಮನೆ ಇದ್ಯಾ, ವಯಸ್ಸು ತುಂಬಾ ಡಿಫರೆನ್ಸ್ ಬರೋದು ಬೇಡ ಚೂರು ಹಿಂದೂ ಮುಂದು ಆದ್ರೂ ಪರ್ವಾಗಿಲ್ಲ. ನಮ್ಮ ಜಾತಿಯವನೇ ಆಗಬೇಕು ಕುಲ ಗೋತ್ರ ಎಲ್ಲ ಹೊಂದಬೇಕು ಆದ್ರೆ ವರದಕ್ಷಿಣೆ ಎಲ್ಲ ಒಪ್ಪೋಲ್ಲ. ಯಪ್ಪಾ ಯಪ್ಪಾ ಒಂದ ಎರಡಾ ನನಪ್ಪ ಒಬ್ಬ ಬ್ರೋಕರ್ ಮುಂದೆ ಇಟ್ಟ ಬೇಡಿಕೆಗಳು ಇದು. ಇದನ್ನ ನೋಡಿದ ನಾನು ಒಂದು ಕ್ಷಣ ನಾನು ಮದುವೆ ಆಗೋ ಟೈಮ್ ಬಂದಾಗ್ಲೂ ಹೆಣ್ಣಿನ ಮನೆಯವರು ನನ್ನಲ್ಲಿ ಇಷ್ಟೆಲ್ಲ ಬೇಡಿಕೆ ಇಡ್ತಾರ ಅಂತ ಒಮ್ಮೆ ನೆನೆದು ಮೈ ಜುಮ್ಮ್ ಎನಿಸಿತು. ಒಬ್ಬ ಹೆಣ್ಣು ಹೆತ್ತ ತಂದೆಯಾಗಿ ಈ ರೀತಿಯ ಯೋಚನೆಗಳು ಸಹಜ ಅದಕ್ಕೆ ವಿರೋಧಿ ನಾನಲ್ಲ ಯಾಕೆಂದ್ರೆ ಚಿಕ್ಕ ವಯಸ್ಸಿನಿಂದ ಮುದ್ದು ಮಾಡಿ ಸಾಕಿ ಸಲುವಿ ಈಗ ಅವಳ ಜೀವನದ ಇನ್ನೊಂದು ಭಾಗ, ಇನ್ನೊಬ್ಬರ ಮನೆಯಲ್ಲಿ ಬದುಕಬೇಕು ಎಂದಾಗ ಅದಕ್ಕೆ ಸಾವಿರ ಯೋಚನೆಗಳು ಬರುವುದು ಸಹಜ ಆದರೆ ಒಬ್ಬ ಹುಡುಗನನ್ನ ನೋಡುವ ರೀತಿ ನೋಡಿದರೆ ನನಗೆ ನಿಜವಾಗಲೂ ಗಾಬರಿ ತರುತ್ತದೆ.

ಅಂತೂ ಇಂತು ಬ್ರೋಕರ್ ಗಂಡು ಹುಡುಕೋಕೆ ಶುರು ಮಾಡಿದ್ರು. ಅವರು ಕೊಟ್ಟಿರುವ ಈ ಟರ್ಮ್ಸ್ ಅಂಡ್ ಕಂಡಿಷನ್ಸ್ ಮೇಲೆ ಅದ್ಯಾವ ಗಂಡನ್ನ ಎಲ್ಲಿಂದ ತರ್ತಾರೋ ಇಲ್ಲ ಹುಡುಕ್ತಿದೀನಿ ಅಂತ ಸುಮ್ಮನೆ ನಂಬಿಸಿ ದುಡ್ಡು ತಗೋತಿದ್ದರೋ ಗೊತ್ತಿರಲಿಲ್ಲ. ಸುಮಾರು ಒಂದು ಒಂದೂವರೆ ತಿಂಗಳಾದ ಮೇಲೆ ಬ್ರೋಕರ್ ಒಂದು ಗಂಡು ಸಿಕ್ಕಿದ್ದಾರೆ ಮನೆಗೆ ಕರ್ಕೊಂಡ್ ಬರ್ತೀನಿ ನೀವು ನೋಡಿ ಒಪ್ಪಿಗೆ ಆದ್ರೆ ಮುಂದೆ ಮಾತುಕಥೆ ಮಾಡೋಣ ಅಂತ ನಮಪ್ಪನಿಗೆ ಫೋನ್ ಮಾಡಿ ಹೇಳಿದ್ರು, ಮೊದಲ ಗಂಡು ಮನೆಗೆ ಮಗಳನ್ನ ನೋಡೋಕೆ ಬರ್ತಿದ್ದಾರೆ ಅಂತ ಅಪ್ಪ ಫುಲ್ ಖುಷಿಯಿಂದ ಸ್ವೀಟ್ಸ್, ಹೂ, ಹಣ್ಣು, ತಿಂಡಿ, ಜ್ಯೂಸು, ಬಿಸ್ಕತ್ ಎಲ್ಲ ತಂದು ಮನೆಯಲ್ಲಾ ಕ್ಲೀನ್ ಮಾಡಿ ರೆಡಿಯಾಗಿ ಕುಳಿತರು. ಗಂಡು ಕೂಡ ಬಂದ. ಇನ್ನು ಗೋತಲ್ಲ ಗಂಡನ್ನ ಎಲ್ಲರೂ ಮೇಲಿಂದ ಕೆಳಗಿನ ವರೆಗೂ ಪೂರ್ತಿ ಸ್ಕ್ಯಾನ್ ಮಾಡಿ ನೋಡೋಕೆ ಚೆನ್ನಾಗಿದ್ದಾನಾ ಇಲ್ವ ಅಂತ ಹುಡುಕೋದೇ ಒಂದು ದೊಡ್ಡ ಸವಾಲು. ಅದು ಅಷ್ಟೇ ಅಲ್ಲದೆ ಹುಡುಗನ ಎತ್ತರ ಎಷ್ಟು, ಎಲ್ಲಿ ಕೆಲಸ ಮಾಡ್ತಿದ್ದಾನೆ, ಕೆಲಸ ಪರ್ಮನೆಂಟ್ ಆಗಿದ್ಯಾ, ಹೋಗಿ ಬರೋದ್ ಎಲ್ಲ ಕ್ಯಾಬ್ ಇದ್ಯಾ ಇಲ್ಲ ಬೈಕ್ ನಲ್ಲೆ ಹೋಗೋದ ಎಪ್ಪ ಎಪ್ಪ ಎಷ್ಟು ಪ್ರಶ್ನೆಗಳು. ಒಂದು ಕ್ಷಣ ಆ ಹುಡುಗನ ಸ್ಥಾನದಲ್ಲಿ ನಿಂತು ಯೋಚನೆ ಮಾಡಿ ಪಾಪ ಎಷ್ಟು ಜನರ ಕಣ್ಣಲ್ಲಿ ಎಷ್ಟು ಪ್ರಶ್ನೆಗಳಿಗೆ ತನಗೆ ಗೊತಿಲ್ಲದೆ ಉತ್ತರ ಕೊಡ್ತಿದ್ದಾನೆ ಅಂತ.  ಹೀಗೆ ಬಂದವರು ಹೋದಮೇಲೆ ಮನೆಯಲ್ಲೇ ಒಂದು ರೌಂಡ್ ಟೇಬಲ್ ಕಾನ್ಫರೆನ್ಸ್ ಶುರು, ನನ್ನ ಅಕ್ಕಳಿಗೆ ಅಪ್ಪ ಅಮ್ಮ ಇಬ್ರು ಕೂರಿಸಿಕೊಂಡು ಹೇಗಿದ್ದಾನೆ? ಒಪ್ಪಿಗೆನಾ ನಿನಗೆ?

ಅಕ್ಕ: ಇಲ್ಲ

ಅಪ್ಪ: ಯಾಕಮ್ಮ, ಏನಾಯ್ತು ಚೆನ್ನಾಗೆ ಇದ್ದಾನಲ್ಲ

ಅಕ್ಕ: ಅಪ್ಪಾ, ಅವನು ನೋಡೋಕೆ ಸ್ವಲ್ಪ ದಪ್ಪ ಇದ್ದಾನೆ ನನಗೆ ಸೆಟ್ ಆಗಲ್ಲ

ಅಮ್ಮ: ಇನ್ನು ಏನ್ ಏನ್ ಸೆಟ್ ಆಗಲ್ಲ ತಾಯಿ ನಿನಗೆ

ಅಕ್ಕ: ನಿಂಗ್ ಗೊತಾಗಲ್ಲ ಸುಮ್ನೆ ಇರಮ್ಮಾ ನನ್ನ ಗಂಡ ಆಗ್ಬೇಕು ಅಂತ ಇರೋನಿಗೆ ಇಂತಿಂತ ಕ್ವಾಲಿಫಿಕೇಷನ್ ಇರ್ಬೇಕು ಅಂತ ಆಸೆ ಇದೆ ನಂಗೆ, ಅದು ಮ್ಯಾಚ್ ಆಗಲಿಲ್ಲ ಈ ಹುಡುಗನ ಹತ್ರ

ಇನ್ನೇನು ಯಾರು ಏನು ಮಾತಾಡೋ ಹಾಗಿಲ್ಲ ಈಗ. ನನಪ್ಪ ಬ್ರೋಕರ್ ಗೆ ಕಾಲ್ ಮಾಡಿ “ನಮ್ಮ ಹುಡುಗಿಗೆ ಈ ಹುಡುಗ ಇಷ್ಟ ಆಗಿಲ್ಲ ಸ್ವಲ್ಪ ದಪ್ಪ ಇದ್ದಾನೆ ಸರ್, ಬೇರೆ ಯಾರ್ ಆದ್ರೂ ಇದ್ರೆ ನೋಡಿ” ಅಂತ ಹೇಳಿ ಬ್ರೋಕರ್ ನ ಒಪ್ಪಿಸಿ ಫೋನ್ ಕಟ್ ಮಾಡಿದ್ರು. ಇದು ಒಂದು ತರದ ಸನ್ನಿವೇಶ ಆದ್ರೆ ಮತ್ತೊಂದು ಗಂಡು ಬರುವಷ್ಟರಲ್ಲಿ ನನ್ನಕ್ಕನ ಹುಡುಗನ ಕ್ವಾಲಿಟಿ ಲಿಸ್ಟ್ ನಲ್ಲಿ ಬದಲಾವಣೆ ಆಗ್ತಾನೆ ಹೋಯ್ತು. ಹೀಗೆ ಇನ್ನೊಂದು ಮತ್ತೊಂದು ಮಗದೊಂದು ಅಂತ ಸುಮಾರು 10-15 ಗಂಡುಗಳು ಬಂದು ಹೋದ್ರು. ಪ್ರತಿಸಲ ಒಂದೊಂದು ಗಂಡು ಬರುವಾಗಲು ನನಪ್ಪ ಅದೇ ಜ್ಯೂಸು, ಅದೇ ಬಿಸ್ಕತ್, ಅದೇ ಹೂ ಹಣ್ಣು ತಂದು ತಂದು ಬೇಜಾರಾಗಿದ್ರು. ಬಂದ ಗಂಡೆಲ್ಲಾ ಬಂದ ದಾರಿಗೆ ಸುಂಕ ಇಲ್ಲ ಅಂತ ವಾಪಾಸ್ ಹೋದ್ರು.

ಅದೊಂದು ಭಾನುವಾರದ ದಿನ ಎಲ್ಲವು ಸಹಜವಾಗಿಯೇ ನಡೆಯುತ್ತಿತ್ತು. ಅವತ್ತು ಎಂದಿನಂತೆ ಇನ್ನೊಂದು ಗಂಡು ಬರಬೇಕಿತ್ತು ಅದಕ್ಕೆ ಅಕ್ಕ ರೆಡಿಯಾಗಿ ಕಾಯುತ್ತಿದ್ದಳು ಅಪ್ಪನಿಗೆ ಬ್ರೋಕರ್ ನಿಂದ ಒಂದು ಕಾಲ್ ಬಂತು

ಬ್ರೋಕರ್: ಸರ್ ತುಂಬಾ ಟ್ರಾಫಿಕ್ ಜಾಮ್ ಆಗಿದೆ ಬರೋದು ಸ್ವಲ್ಪ ಲೇಟ್ ಆಗುತ್ತೆ

ಅಪ್ಪ: ಪರವಾಗಿಲ್ಲ ಬನ್ನಿ ಸರ್ ಇವತ್ತು ಬೇರೆ ಏನು ಪ್ಲಾನ್ಸ್ ಇಲ್ಲ ಅಂತ ಹೇಳಿ ಕಾಲ್ ಕಟ್ ಮಾಡಿದ್ರು

ಸ್ವಲ್ಪ ಹೊತ್ತು ಮನೆಯಲ್ಲೇ ಹರಟೆ ಹೊಡೆಯುತ್ತಾ ಕುಳಿತಿರಬೇಕಾದ್ರೆ ಧಿಡೀರ್ ಅಂತ ಬಂದೇ ಬಿಟ್ರು, ಸಹಜ ಸ್ಥಿತಿಯಲ್ಲಿ ಕುಳಿತ್ತಿದ್ದ ನಾವು ಅವರು ಬಂದ ತಕ್ಷಣ ಏನೋ ಭಾರಿ ಬದಲಾವಣೆಯಾದಂತೆ ಎಲ್ಲರು ಅವರವರ ಕೆಲಸಕ್ಕೆ ಇಳಿದರು.

ನನ್ನ ಕೆಲಸ ಗೋತಲ್ಲ… ಒಳಗೆ ಬಂದವರನ್ನ ಸ್ಯಾನಿಟೈಝೆರ್ ಕೊಟ್ಟು ವೆಲ್ಕಮ್ ಮಾಡಿ ಚೇರ್ ಹಾಕಿ ಕೂರಿಸಿ ಬಂದ ಪ್ರಯಾಣ ಸುಖವಾಗಿತ್ತಾ? ಮನೆ ಹುಡುಕೋದು ಕಷ್ಟ ಆಗಿಲ್ಲ ತಾನೆ? ಅಂತ ಒಂದೆರಡು ಪ್ರಶ್ನೆ ಕೇಳೋದು ಅಷ್ಟೆ. ಅದಾದಮೇಲೆ ಎಲ್ಲಾ ಅಪ್ಪನಿಗೆ ಬಿಟ್ಟಿದ್ದು ಅವರ ಮಾತುಗಳು ಶುರುವಾಯಿತು. ಮತ್ತೆ ಅದೇ ಹಳೇ ಪ್ರಶ್ನೆಗಳು ಆದರೆ ಕೇಳಿ ಕೇಳಿ ಅಭ್ಯಾಸ ಆಗಿ ಯಾವ ಪ್ರಶ್ನೆ ಯಾವಾಗ ಕೇಳ್ಬೇಕು ಯಾವ ಆರ್ಡರ್ನಲ್ಲಿ ಇರ್ಬೇಕು ಎಲ್ಲ ಚೆನ್ನಾಗಿ ಕಲ್ತಿದ್ರು. ಅಕ್ಕ ಅಡಿಗೆ ಮನೆಯಿಂದ ಜ್ಯೂಸು ತಂದು ಎಲ್ಲರಿಗು ಕೊಟ್ಟು ಗಂಡನ್ನು ನೋಡಿಕೊಂಡು ಹೋದಳು. ಆ ಜ್ಯೂಸು ಕೊಟ್ಟು ನೋಡುವ ಆ ಗ್ಯಾಪ್ ನಲ್ಲಿ ಏನ್ ನಡೀತೋ ಗೊತ್ತಿಲ್ಲ ಆದ್ರೆ ನನ್ನ ಅಕ್ಕ ಗಂಡನ್ನ ಒಪ್ಪಿಕೊಂಡಿದ್ಲು. ಎಂದಿನಂತೆ ಮಾತೆಲ್ಲ ಮುಗಿಸಿ ಕಳಿಸಿಕೊಟ್ಟು ಅಕ್ಕನ ಹತ್ರ ಬಂದು ಕೇಳಿದ್ರೆ ಗ್ರೀನ್ ಸಿಗ್ನಲ್ ಸಿಕ್ತು. ಇನ್ನೇನು ಅವರ ಹತ್ರ ಒಂದು ಮಾತು ಕೇಳಿ ಬಿಡೋಣ ಅಂದ್ರೆ ಅಂತ ಮತ್ತೆ ಬ್ರೋಕರ್ ಗೆ ಕಾಲ್ ಮಾಡಿದ್ರು.

ಅಪ್ಪ: ಎಲ್ಲಿ ಇದ್ದೀರಾ ಸರ್, ಮನೆ ತಲುಪಿದ್ರಾ

ಬ್ರೋಕರ್: ಈಗಷ್ಟೇ ಬಂದೆ ಸರ್.

ಅಪ್ಪ: ಸರಿ ಸರಿ, ಏನಿಲ್ಲ ಸುಮ್ನೆ ಫೋನ್ ಮಾಡ್ದೆ. ಗಂಡಿನ ಕಡೆ ಅವ್ರು ಏನಾದ್ರು ಹೇಳಿದ್ರಾ?

ಬ್ರೋಕರ್: ಅವ್ರು ನಿಮ್ಮ ಮನೆಯಿಂದ ಬರ್ತಿದಂಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ನಿಮ್ಮ ಕಡೆ ಇಂದ ಅಷ್ಟೆ ಬಾಕಿ.

ಅಪ್ಪ: ನನ್ನ ಮಗಳು ಕೂಡ ಒಪ್ಪಿಕೊಂಡಿದ್ದಾಳೆ ಸರ್, ಜಾತಕ ಕೂಡ ಸರಿ ಬಂದಿದೆ ಮುಂದೆ ಆಗೋ ಕೆಲಸ ಶುರು ಮಾಡೋಣ ಅಂತ ಕೇಳಿ ಅವರ ಹತ್ರ.

ಬ್ರೋಕರ್: ಸರಿ ಸರ್, ಒಳ್ಳೆದಾಯ್ತು. ಎಲ್ಲ ದೇವರ ದಯೆ. ನಾನ್ ಅವರ ಹತ್ರ ಮಾತಾಡಿ ಮುಂದೆ ಏನು ಅಂತ ಹೇಳ್ತಿನಿ; ಅಂತ ಹೇಳಿ ಮಾತು ಮುಗಿಸಿದರು.

ಅದರ ಹಿಂದೆಯೇ ಬ್ರೋಕರ್ ಗಂಡಿನ ಕಡೆಯವರಿಗೆ ಒಂದು ಫೋನ್ ಮಾಡಿ ವಿಷಯ ತಿಳಿಸಿದ್ರು. ಅವರು ಕೂಡ ಖುಷಿಯಿಂದ ಒಪ್ಪಿಕೊಂಡು ಮಾತುಕತೆ, ವೀಳ್ಯಶಾಸ್ತ್ರ ಮಾಡಿ ಹೆಣ್ಣು ನಮ್ಮದು ಅಂತ ಒಪ್ಪಿಕೊಂಡು ಮುಂದಿನ ಕಾರ್ಯ ಶುರು ಮಾಡೋಣ ಅಂತ ಹೇಳಿದರು. ಈ ವಿಷಯ ಅಪ್ಪನಿಗೆ ತಿಳಿಯುತ್ತಿದ್ದಂತೆ ಎಲ್ಲಿಲ್ಲದ ಆನಂದ ಸಂತೋಷ ಮನೆಮಾಡಿತ್ತು. ಅದಾದ ನಂತರ ತಡ ಮಾಡದೆ ಮುಂದಿನ ಭಾನುವಾರ ಮಾತುಕತೆ ಕಾರ್ಯಕ್ರಮ ಏರ್ಪಾಡಾಯಿತು. ಗಂಡಿನ ಕಡೆಯವರು ಬಂದರು ಎಲ್ಲಾ ಊಟದ ವ್ಯವಸ್ಥೆ ಅರೇಂಜ್ ಆಗಿತ್ತು.

ಮಾತುಕಥೆಯಲ್ಲಿ ಶಾಸ್ತ್ರೋತ್ತವಾಗಿ ಕೂತು ಕೊಳುಕೊಡುಗೆ ವ್ಯವಹಾರ ಮದುವೆಯ ವ್ಯಸ್ಥೆಯ ಎಲ್ಲದರ ವಿಷಯವಾಗಿ ಚರ್ಚೆ ನಡೆಯಿತು ಅದಕ್ಕೆ ಬಂದಿದ್ದ ಎಲ್ಲಾ ಬಂಧು-ಬಳಗದವರ ಸಮ್ಮತಿ ಸಿಕ್ಕಿದ ಮೇಲೆ ಎಲ್ಲರು ಊಟ ಮುಗಿಸಿಕೊಂಡು ಹೊರಟರು. ಅದರ ನಂತರ ನಾವು ಕೂಡ ಅವರ ಮನೆಗೆ ಹೋಗಿ ಒಮ್ಮೆ ಊಟ ಮಾಡಿ ಬರುವ ಪದ್ದತಿ ಕೂಡ ಶಾಸ್ತ್ರೋತ್ತವಾಗಿ ಮುಗಿಯಿತು. ಇದರ ನಂತರವೇ ಹೆಣ್ಣಿನ ಅಣ್ಣ ತಮ್ಮಂದಿರಾದ ನಮ್ಮಂತವರಿಗೆ ನಿಜವಾದ ಸವಾಲು ಶುರು. ಇದೇನು ಸುಲಭದ ಮಾತಲ್ಲ ಬಿಡಿ, ಅನುಭವಸ್ತರಿಗೆ ಒಂದು ಅಧ್ಯಾಯ ಇನ್ನು ಅನುಭವ ಆಗುವವರಿಗೆ ಒಂದು ದೊಡ್ಡ ಜವಾಬ್ದಾರಿ. ಗಂಡು ಮಕ್ಕಳಿಗೆ ಜವಾಬ್ದಾರಿ ಅನ್ನೋದು ಹುಟ್ಟಿದಾಗಿನಿಂದ ಬೆನ್ನಿಗೆ ಅಂಟಿಕೊಂಡು ಬಂದಿರುವ ಒಂದು ಬೇತಾಳ ಅಲ್ಲವೇ.

ಇಲ್ಲಿಂದ ನಿಜವಾದ ಕೆಲಸ ಶುರು “ನಿಶ್ಚಿತಾರ್ಥ” ಮಾಡಬೇಕು. ಹೆಣ್ಣು ಹೆತ್ತ ಮನೆಯವರಿಗೆ ಮುಖ್ಯವಾಗಿ ಹೆಣ್ಣಿನ ತಂದೆಗೆ ಇದೊಂದು ದೊಡ್ಡ ಜವಾಬ್ದಾರಿ ಪೂರ್ಣಗೊಳಿಸುವ ಒಂದು ಮಹಾನ್ ಕಾರ್ಯ. ಜೇಬಿನಲ್ಲಿ ಮದುವೆಗೆ, ಎಂಗೇಜ್ಮೆಂಟ್ ಗೆ ಅಂತ ಕಾಸು ಇರಲಿಲ್ಲ, ಎಲ್ಲ ಕಡೆ ಇಂದ ಒಂದಲ್ಲ ಒಂದು ಕಾರಣಕ್ಕೆ ದುಡ್ಡು ಲಾಕ್ ಆಗಿತ್ತು. ಆಗ ತಾನೆ ಲಾಕ್ ಡೌನ್ ಮುಗಿದು ಇಡೀ ದೇಶ ಒಂದು ಸ್ವಲ್ಪ ಮಟ್ಟಕ್ಕೆ ಸುಧಾರಿಸಿಕೊಳ್ಳುತ್ತಿತ್ತು. ಆದರೆ ಅಂತಹ ಕಷ್ಟದ ಸಮಯದಲ್ಲಿ ಕ್ಯಾಶ್ ಫ್ಲೋ ಆಗೋದು ಸುಲಭದ ಮಾತಾಗಿರಲಿಲ್ಲ. ಅಂತಹ ಸಂದರ್ಭದಲ್ಲೂ ಕೂಡ ಧೈರ್ಯ ಮಾಡಿ ಎಲ್ಲೊ ಏನೋ ವ್ಯವಸ್ಥೆ ಮಾಡಿ ಅಪ್ಪ ದುಡ್ಡು ತಂದರು. ಆದರೆ ಅದು ಸದ್ಯಕ್ಕೆ ಎಂಗೇಜ್ಮೆಂಟ್ ಮಟ್ಟಕ್ಕೆ ಮಾತ್ರ ಲಿಮಿಟ್ ಆಗಿತ್ತು ಮದುವೆಗೆ ಆಮೇಲೆ ನೋಡಿಕೊಳ್ಳೋಣ ಅಂತ ಅಪ್ಪ ಹೇಳಿ ಸ್ವಲ್ಪ ಗಾಬರಿ ಜೊತೆ ಧೈರ್ಯ ತುಂಬಿದರು. ಹೇಗೋ ದುಡ್ಡು ಬಂತು ಆದ್ರೆ ನಮ್ಮ ಜನ ಹೇಳ್ತಾರೆ “ದುಡ್ಡು ಒಂದ್ ಇದ್ರೆ ಎಲ್ಲ ಆಗುತ್ತೆ ಬಿಡಿ ಸರ್” ಅಂತ ಆದ್ರೆ ಅದು ಖಂಡಿತ ಸತ್ಯ ಅಲ್ಲ. ದುಡ್ಡು ಒಂದ್ ಇದ್ರೆ ಎಲ್ಲ ಆಗುತ್ತೆ ಅನ್ನೋ ಹಾಗೆ ಇದ್ದಿದ್ರೆ ಹೆಣ್ಣು ಹೆತ್ತವರು ಕಷ್ಟ ಪಡುವ ಅಗತ್ಯ ಇರ್ತನೆ ಇರ್ಲಿಲ್ಲ. ಇಲ್ಲಿಂದ ಒಂದು ರೀತಿಯ ಬಿಗ್ಬಾಸ್ ಟಾಸ್ಕ್ ಆದಂಗಾಯ್ತು. ಎಂಗೇಜ್ಮೆಂಟ್ ಗೆ ಮೊದಲು ಒಂದು ಪಾರ್ಟಿ ಹಾಲ್ ಹುಡುಕಬೇಕು. ಬೆಂಗಳೂರು ಅನ್ನೋ ಊರಲ್ಲಿ ಅದೇನು ದೊಡ್ಡ ವಿಷಯ ಅಲ್ಲ ಆದರೆ ನಮ್ಮ ಬಜೆಟ್ ಗೆ ತಕ್ಕಂತೆ ಊಟದ ವ್ಯವಸ್ಥೆ, ಬರುವ ಜನರಿಗೆ ಸುಲಭವಾಗಿ ಸಿಗುವಂತಹ ಜಾಗ, ಪಾರ್ಕಿಂಗ್ ವ್ಯವಸ್ಥೆ, ಫಸ್ಟ್ ಇಲ್ಲ ಸೆಕೆಂಡ್ ಫ್ಲೋರ್ ಅಂದ್ರೆ ಲಿಫ್ಟ್ ಇರ್ಲೇಬೇಕು. ಯಪ್ಪಾ ಒಂದ ಎರಡಾ? ಇದೆಲ್ಲಾ ಒಪ್ಪಿಗೆ ಆಗುವಂತಹ ಒಂದು ಪಾರ್ಟಿ  ಹಾಲ್ ಸಿಗೋದು ವಾರ ಗಟ್ಟಲೆ ಅಲೆದ ಮೇಲೆ ವಿಜಯನಗರದ ಶಾಂತಿ ಸಾಗರ್ ಪಾರ್ಟಿ ಹಾಲ್ ಫಿಕ್ಸ್ ಆಯ್ತು. ಅವರಲ್ಲು ಒಂದು ಪ್ಯಾಕೇಜ್, ಊಟಕ್ಕೆ ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಬಫೆಟ್, ಐಸ್ಕ್ರೀಂ ಅದೇನೇನೋ ಮಣ್ಣು ಮಸಿ ಒಂದಷ್ಟು ಲಿಸ್ಟ್ ಇತ್ತು. ಓದುತ್ತ ಹೋದ್ರೆ ತಲೆ ಕೆಟ್ಟು “ಸರ್, ಹೊಟ್ಟೆ ತುಂಬ ಊಟ ಮಾಡೋ ತರ ಪ್ಯಾಕೇಜ್ ನೀವೇ ನೋಡಿ ಫಿಕ್ಸ್ ಮಾಡಿ ಅಂತ ಹೇಳಿದ್ರೆ ಮ್ಯಾನೇಜರ್ ಒಮ್ಮೆ ಜೋರಾಗಿ ನಕ್ಕಿ “ಸರಿ ಸರ್ ಸೌತ್ ಇಂಡಿಯನ್ ಊಟ ಬುಕ್ ಮಾಡಿ ಒಳ್ಳೆ ಕ್ವಾಲಿಟಿ ಅಂಡ್ ಕ್ವಾಂಟಿಟಿ ಕೊಡ್ತಿವಿ” ಅಂದ್ರು ಸರಿ ಅದೇ ಇರಲಿ ಬಿಡಿ ಅಂತ ಫಿಕ್ಸ್ ಆದೆ.

ಅಷ್ಟಕ್ಕೇ ಮುಗಿಲಿಲ್ಲ, ಎಂಗೇಜ್ಮೆಂಟ್ ಗೆ ಫ್ಲವರ್ ಡೆಕೋರೇಷನ್ ಬೇಕಲ್ಲ. ಮರೆತು ಬಿಟ್ರಾ? ಇದೆಲ್ಲ ಕಷ್ಟನೋ ಸುಖಾನೋ ಮಾಡ್ಲೇಬೇಕು. ಈ ಫ್ಲವರ್ ಡೆಕೋರೇಟರ್ ನ ಹೊರಗಡೆ ಇಂದ ಕರೆಸುವ ಹಾಗಿಲ್ಲ ಅದು ಹೋಟೆಲ್ ನ ರೂಲ್ಸ್. ಹಾಗಾದ್ರೆ ಏನ್ ಮಾಡೋದು ಅದಕ್ಕೂ ಹೋಟೆಲ್ ನವರೇ ದಾರಿ ತೋರಿಸ್ತಾರೆ. ತಗೋಳಿ ಸರ್ ನಂಬರ್ ಅವರಿಗೆ ಫೋನ್ ಮಾಡಿ ಡೆಕೋರೇಷನ್ ಪ್ಯಾಕೇಜ್ ಹೇಳ್ತಾರೆ. ಒಂದೊಮ್ಮೆ ರಾಮಕೃಷ್ಣ ಪರಮಹಂಸ ನೆನಪಾದ್ರು ಪ್ರಾಬ್ಲಮ್ ಹೇಳೋರು ಇವರೆ ಸೊಲ್ಯೂಷನ್ ಕೊಡೋರು ಇವರೆ. ಅದಕ್ಕೂ ಒಂದು ದಿನ ಎಲ್ಲಾ ಅಲೆದು ಆ ಡೆಕೋರೇಟರ್ ಮೀಟ್ ಆಗಿ ಯಾವುದಕ್ಕೆ ಎಷ್ಟು ದುಡ್ಡು ಅಂತ ಕೇಳ್ತಿದ್ರೆ ತಲೆ ತಿರುಗುತ್ತಿತ್ತು. “ಏನ್ ಸ್ವಾಮಿ ಒಳ್ಳೆ ಬಟ್ಟೆ ಹಾಕ್ಕೊಂಡು ಶುದ್ಧವಾಗಿ ಮಾತಾಡಿದ್ರೆ ರೇಟ್ ಜಾಸ್ತಿ. ಸ್ವಲ್ಪ ಲೋಕಲ್ ಆಗಿ ಇಳಿದು ಮಾತಾಡಿದ್ರೆ ರೇಟ್ ಕಮ್ಮಿ” ಈ ಲಾಜಿಕ್ ಅವತ್ತು ತಿಳ್ಕೊಂಡೆ ಅಂತೂ ಇಂತೂ ಅದು ಫಿಕ್ಸ್ ಆಯ್ತು. ಇನ್ನು ಎಂಗೇಜ್ಮೆಂಟ್ ಗೆ  ಬಟ್ಟೆ ತಗೋಬೇಕು ಅಂತ ನಮಪ್ಪ ಮತ್ತೆ ಬೀಗರು ಒಂದು ಡೇಟ್ ಫಿಕ್ಸ್ ಮಾಡಿ ಯಾವ ಅಂಗಡಿ ಅಂತ ಕೇಳೋ ಅಷ್ಟರಲ್ಲೇ ಮಲ್ಲೇಶ್ವರಂ ನ ಸುದರ್ಶನ್ ಸಿಲ್ಕ್ಸ್ ಚಂದ ಅಲ್ವ ಅಂದ್ರು ನಮ್ಮ ಬೀಗರು, ಎರಡು ಸೆಕೆಂಡ್ ನಮಪ್ಪ ಸುಮ್ಮನಾಗಿ ಇನ್ನೇನು ಮಾಡೋದು ಬೇರೆ ಮಾತಿಲ್ಲ ಅಂತ ಆಯ್ತು ಬನ್ನಿ ಅಂತ ಒಪ್ಪಿಕೊಂಡರು. ಒಂದು ಭಾನುವಾರ ಎರಡು ಕುಟುಂಬ ಬಿಡುವು ಮಾಡಿಕೊಂಡು ಸುದರ್ಶನ್ ಸಿಲ್ಕ್ಸ್ ಗೆ ಹೋದೆವು. ಈಗ ತಾನೆ ಹೇಳಿದಂತೆ ಸ್ವಲ್ಪ ಲೋಕಲ್ ಕನ್ನಡ ಎಲ್ಲ ಇಲ್ಲಿ ವರ್ಕ್ ಆಗಲ್ಲ. ಅಲ್ಲಿ ತೋರ್ಸಿದ್ದೇ ಬಟ್ಟೆ, ಹೇಳಿದ್ದೆ ರೇಟ್ ಅನ್ನೋ ಕಾನ್ಸೆಪ್ಟ್ ಮೇಲೆ ವರ್ಕ್ ಆಗುತ್ತೆ. ಆ ದಿನ ಎಲ್ಲಾ ಬಟ್ಟೆ ಸೇರಿಸಿ ಬಿಲ್ ಮಾಡಿಸಿ ಅದನ್ನ ಕಾರ್ ಗೆ ತಂದು ಇಡೊದು ನಮ್ಮಂತ ಗಂಡು ಮಕ್ಕಳ ಜವಾಬ್ದಾರಿ ಅಂತ ಹೇಳಿ ಎಲ್ಲ ಹೋಗಿ ಕ್ಯಾಂಟೀನ್ ನಲ್ಲಿ ಊಟಕ್ಕೆ ಕೂತ್ರು. ಇನ್ನೇನು ಮಾಡೋದು ಒಬ್ಬನೇ ಹೋಗಿ ಎಲ್ಲ ಪ್ಯಾಕ್ ಮಾಡಿಸಿ ಕಾರ್ ಗೆ ಇಟ್ಟು ಬರೋ ಅಷ್ಟರಲ್ಲಿ ಒಂದು ಲೋಕನೇ ಸುತ್ತಿದಂಗಾಯಿತು.

ನೋಡ್ತಾ ನೋಡ್ತಿದಂಗೆ ಎಂಗೇಜ್ಮೆಂಟ್ ದಿನ ಹತ್ರ ಬಂದೆ ಬಿಡ್ತು. ಕೋವಿಡ್ ಟೈಮ್ ಆಗಿರೋದ್ರಿಂದ ಜಾಸ್ತಿ ಜನ ಕರೆಯೋ ಹಾಗಿಲ್ಲ. ಹಾಗಾಗಿ ಹತ್ತಿರದ ಸಂಬಂಧಿಕರನ್ನ ಮಾತ್ರ ಕರೆಯೋ ಹಾಗಾಯ್ತು. ಫೋಟೋಗ್ರಾಫರ್, ವಿಡಿಯೋಗ್ರಾಫರ್ ಕೂಡ ಒಪ್ಪಿಸಿ ಅಡ್ವಾನ್ಸ್ ಕೊಟ್ಟು ಫಿಕ್ಸ್ ಮಾಡಿ ಕೂಡ ಆಯ್ತು. ” ಆಲ್ ಸೆಟ್ ಟು ಹಿಟ್ ದಿ ಸ್ಟೇಜ್” ಅನ್ನೋ ತರ ಎಲ್ಲ ತಯಾರಿ ಆಯ್ತು. ಆ ದಿನ ನವೆಂಬರ್ 19 2020 ಎಂಗೇಜ್ಮೆಂಟ್ ದಿನ ಅಂದುಕೊಂಡಂತೆ ಎಲ್ಲಾ ರೆಡಿ. ಶಾಸ್ತ್ರಕ್ಕೆ ಬೇಕಾದ ಸಾಮಾನು ಸರಕು ಎಲ್ಲ ಅಪ್ಪ ಮತ್ತೆ ನಮ್ಮ ಮಾವ ಹೋಗಿ ಬೆಳಗ್ಗೆ ತಂದರು. ಎಲ್ಲರೂ ರೆಡಿಯಾಗಿ ಪಾರ್ಟಿ ಹಾಲ್ ಗೆ ಹೋಗಿ ಹೆಣ್ಣನ್ನು ರೆಡಿಮಾಡಿ ಬೀಗಿರು ಬರೋದಕ್ಕೆ ಕಾಯ್ತ ಇದ್ರು. ಕಾಲ ಘಳಿಗೆ ನೋಡಿಕೊಂಡು ಸಮಯಕ್ಕೆ ಸರಿಯಾಗಿ ಬೀಗರು ಬಂದರು. ಒಳಗೆ ಬರಮಾಡಿಕೊಂಡು ಸ್ಟೇಜ್ ಮೇಲೆ ನಿಲ್ಲಿಸಿದರು. ಜನ ಎಲ್ಲಾ ಬರೋದಕ್ಕೆ ಶುರು ಮಾಡಿದರು ಎಲ್ಲರನ್ನು ಒಳಗೆ ಬರಮಾಡಿಕೊಳ್ತ ಮರೆತಿರೋ ಒಂದಷ್ಟು ಐಟಂ ತರಬೇಕು. ಊಟದ ವ್ಯವಸ್ಥೆ ರುಚಿ ಕರೆಕ್ಟ್ ಆಗಿ ಇದ್ಯಾ ನೋಡ್ಬೇಕು ಇದೆಲ್ಲ ಟೆನ್ಶನ್ ಮಧ್ಯದಲ್ಲಿ ನನ್ನ ಅಕ್ಕ ವುಡ್-ಬಿ ಭಾವ ಗೆ ರಿಂಗ್ ಹಾಕೋದನ್ನ ನೋಡಬೇಕು ಅಂತ ಅನ್ಕೊಂಡಿದ್ದ ಕನಸು ಈಡೇರಲೇ ಇಲ್ಲ. ಹೌದು ಅವತ್ತು ಆ ಬ್ಯುಸಿ ಟೈಮ್ ನಲ್ಲಿ ಆ ಒಂದು ಅದ್ಬುತ ದೃಶ್ಯ ನನಗೆ ಸಿಕ್ಕಿಲ್ಲ ಅಷ್ಟೆ. ಬೇಜಾರಾಯ್ತು ಆದ್ರೆ ಹಾಗಂತ ಕೂರೋಕೆ ಆಗುತ್ತಾ. ಎಲ್ಲ ಕೆಲಸ ಮಾಡಬೇಕು ಹಾಗೆ ಶಾಸ್ತ್ರೋತ್ತವಾಗಿ ಎಲ್ಲ ನಡೆದುಹೋಯ್ತು ಸಮಯ ಹೋಗಿದ್ದ ಗೊತ್ತಾಗಲಿಲ್ಲ ಸಂಜೆ ಆಗೇ ಹೋಯ್ತು ಈಗ ಪಾರ್ಟಿ ಹಾಲ್ ಖಾಲಿ ಮಾಡಬೇಕು. ಎಲ್ಲಾ ಗಿಫ್ಟ್ ಸಾಮಾನ್ ಮನೆಗೆ ಸಾಗಿಸಿ ನೆಂಟರು ಫ್ರೆಂಡ್ಸ್ ಗಳನ್ನ ಕಳಿಸೋ ಅಷ್ಟರಲ್ಲಿ ಒಂದು ಯುದ್ಧ ಮಾಡಿದಂಗಾಯ್ತು. ಹಾಗೂ ಹೀಗೋ ಎಂಗೇಜ್ಮೆಂಟ್ ಮುಗಿತು.

ಇನ್ನು ಮನೆ ಎಲ್ಲಾ ಪೈಂಟ್ ಮಾಡಿಸಿ ರಿನೋವೇಟ್ ಮಾಡ್ಬೇಕು. ಅದಕ್ಕೆ ನನ್ನ ಫ್ರೆಂಡ್ ಇಂಜಿನಿಯರ್ ನೀಲೇಶ್ ಗೆ ಕಾಂಟ್ರಾಕ್ಟ್ ಕೊಟ್ಟು ಅವನು ಕೂಡ ಕಮ್ಮಿ ರೇಟ್ ನಲ್ಲಿ ಆಗ್ಬೇಕು ಅಂತ ಪರಿಚಯ ಇದ್ದ ಕೆಲಸಗಾರರನ್ನೇ ಕರೆಸಿ ಒಳ್ಳೆ ರೇಟ್ ಫಿಕ್ಸ್ ಮಾಡಿ ಕೆಲಸ ಶುರು ಮಾಡಿದ್ರು. ಇರೋ ಮನೆಯ ಎಲ್ಲಾ ಸಾಮಾನು ಪ್ಯಾಕ್ ಮಾಡಿ ಮನೆ ಕೆಲಸ ಮಾಡಿಸ್ಬೇಕು ಅಂದ್ರೆ ಅದು ತಮಾಷೆ ವಿಷಯ ಅಲ್ಲ. ಎಲ್ಲದನ್ನು ನೋಡ್ಕೋಬೇಕು. ಬೇಕಾದನ್ನ ತಕ್ಷಣ ತಂದು ಕೊಡ್ಬೇಕು, ದಿನ ಸಂಜೆ ಎಲ್ಲರೂ ಹೋದ ಮೇಲೆ ಕ್ಲೀನ್ ಮಾಡ್ಬೇಕು ಇದರ ಜೊತೆ ಇಡೀ ದಿನ ನನ್ನ ವರ್ಕ್ ಫ್ರಮ್ ಹೋಂ ಕೆಲಸ ಎಪ್ಪಾ ಅಷ್ಟಿಷ್ಟಲ್ಲ ಕೆಲಸಗಳು. ಒಂದು ವಾರದಲ್ಲಿ ಮುಗಿಯಬೇಕಾದ ಕೆಲಸ ಎರಡು ವಾರದ ವರೆಗು ಬಂದು ನಿಂತಿತು. ಇಷ್ಟು ಮುಗಿಸೋ ಹೊತ್ತಲ್ಲಿ ನನಗೆ, ನನ್ನ ಜೊತೆ ಇದ್ದವರಿಗೆ ಎಷ್ಟು ಟೈಮ್ ಕೊಟ್ಟೆ ಅನ್ನೋದನ್ನ ನೆನೆಸಿಕೊಂಡ್ರೆ ಬೇಜಾರಾಗುತ್ತೆ ಅಷ್ಟು ಬ್ಯುಸಿ ಟೈಮ್ ಆಗಿತ್ತು. ಮನೆ ಕೆಲಸ ಮುಗಿತು ಅಷ್ಟರಲ್ಲಿ ವರ್ಷದ ಕೊನೆ ಕೂಡ ಬಂದು ಬಿಡ್ತು. ಈ ಎಲ್ಲ ಟೆನ್ಶನ್ ಮಧ್ಯದಲ್ಲಿ ಒಂದು ಬ್ರೇಕ್ ಬೇಕು ಅಂತ ಚಿಕ್ಕಮಗಳೂರು ಆಗುಂಬೆ ಕಡೆ ಒಂದು ಟ್ರಿಪ್ ಕೂಡ ಹೋಗಿ ಬಂದೆ ಅಷ್ಟರಲ್ಲಿ ಹೊಸ ವರ್ಷ ಆರಂಭ ಅಕ್ಕನ ಮದುವೆಗೆ ಒಂದೇ ತಿಂಗಳು ಬಾಕಿ. ಫೆಬ್ರವರಿ 3-4 2021 ಕ್ಕೆ ಮದುವೆ ದಿನ ಫಿಕ್ಸ್ ಆಗಿತ್ತು. ಅದಕ್ಕೆ ಮತ್ತೆ ಓಡಾಟ ಶುರು. ಬೀಗರ ಮನೆಯ ಹತ್ತಿರದಲ್ಲೇ ಛತ್ರ ಇರಬೇಕು ಅಂತ ಒತ್ತಾಯ ನಮ್ಮ ಊರು ಶಿವಗಂಗೆ ಇಂದ ಬರುವ ಜನರಿಗೆ ಅನುಕೂಲ ಆಗುತ್ತೆ ಅಂತ ಅಪ್ಪ ಕೂಡ ಹೂ ಅಂದ್ರು. ಈ ಒಪ್ಪಿಗೆ ಮೇಲೆ ಒಂದು ದಿನವೆಲ್ಲಾ ಅಲೆದು 5-6 ಛತ್ರ ನೋಡಿ ಅದರಲ್ಲಿ “ಪುಷ್ಪ ಬೈರೇಗೌಡ ಕನ್ವೆನ್ಷನ್ ಸೆಂಟರ್” ಫಿಕ್ಸ್ ಆಯ್ತು ಅವರಿಗು ಕೂಡ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿದ್ದು ಆಯ್ತು. ಇದೆಲ್ಲಾ ಆಗೋ ಹೊತ್ತಿಗೆ ಮತ್ತೆ ದುಡ್ಡು ಖಾಲಿ. ಮದುವೆಗೆ ಅಂತ ದುಡ್ಡು ಅರೇಂಜ್ ಆಗಿಲ್ಲ. ಅಪ್ಪನಿಗೆ ಪ್ರತಿದಿನ ಟೆನ್ಶನ್, ಅದೃಷ್ಟ ಏನಪ್ಪಾ ಅಂದ್ರೆ ಆಗ ಶೂನ್ಯ ಮಾಸ ನಡೆಯುತ್ತಿದಂತ ಸಮಯ ಹಾಗಾಗಿ ಶೂನ್ಯ ಮಾಸ ಮುಗಿಯುವವರೆಗೂ ಏನೂ ಶುಭ ಕಾರ್ಯ ಮಾಡೋದಿಲ್ಲ ಅನ್ನೋದು ಪ್ಲಸ್ ಪಾಯಿಂಟ್ ಆಯ್ತು. ಅದೇ ಸಮಯದಲ್ಲಿ ಅಪ್ಪನಿಗೆ, ನನಗೆ, ನನ್ನ ಅಮ್ಮನಿಗೆ ದುಡ್ಡು ಹೇಗೆ ಹೊಂದಿಸೋದು ಅಂತ ಯೋಚಿಸೋದಕ್ಕೆ ಸ್ವಲ್ಪ ಟೈಮ್ ಸಿಕ್ತು. ಏನೆ ಮಾಡಿದ್ರು ಕ್ಯಾಶ್ ಫ್ಲೋ ಅಗ್ತಿಲ್ಲ. ಸಾಲ ಮಾಡುವ ಪರಿಸ್ಥಿತಿ ಬಂದು ಬಿಡ್ತು ಆದ್ರೆ ಆ ಕಮ್ಮಿ ಸಮಯದಲ್ಲಿ ಅಷ್ಟು ದೊಡ್ಡ ಸಾಲ ಯಾರು ಕೊಡ್ತಾರೆ? ಅದು ತುಂಬಾ ರಿಸ್ಕ್ ಅದಕ್ಕೆ ಕೈ ಹಾಕುದ್ರೆ ಮುಂದೆ ದೊಡ್ಡ ಪ್ರಾಬ್ಲಮ್ ಆಗುತ್ತೆ ಸ್ವಲ್ಪ ತಾಳ್ಮೆಯಿಂದ ಬೇರೆ ಯೋಚನೆ ಮಾಡೋಣ ಅಂತ ನಾನು ಹೇಳಿದೆ. ಅದಕ್ಕೆ ಅಪ್ಪ ಒಪ್ಪಿಕೊಂಡು ತಾಳ್ಮೆಯಿಂದ ಯೋಚನೆ ಮಾಡಿದಾಗ ಒಂದು ದಾರಿ ಸಿಕ್ತು, ಅದರಲ್ಲೂ ರಿಸ್ಕ್ ಇದೆ ಆದ್ರೆ ಬೇರೆ ದಾರಿ ಇಲ್ಲ ಅಂತ ಹೇಳಿ ದುಡ್ಡು ಹೊಂದಿಸೋಕೆ ನಿಂತ್ರು ಮತ್ತು ದುಡ್ಡು ಬಂತು. ಅಷ್ಟರಲ್ಲಿ ಶೂನ್ಯ ಮಾಸ ಕೂಡ ಮುಗಿಯಿತು. ಎಲ್ಲಾ ದೇವರ ದಯೆ ಅಂದುಕೊಂಡಂತೆ ಎಲ್ಲಾ ಆಯ್ತು ಇನ್ನು ಏನಿದ್ರು ಮದುವೆಯ ಓಡಾಟ ಅಷ್ಟೇ ಅಂತ ಆಯ್ತು.

ಶೂನ್ಯ ಮಾಸ ಮುಗಿಯುತ್ತಿದಂತೆಯೇ ಎಲ್ಲಾ ಶುಭಕಾರ್ಯಗಳಿಗೆ ನಾಂದಿ ಹಾಡುವ ಸಮಯ. ಒಂದಾದರೊಂದು ಎಂಬಂದೆ ಸಿಕಾಪಟ್ಟೆ ಕೆಲಸ ಬಂತು. ಬಟ್ಟೆ ತೆಗೆಯಬೇಕು ಲಗ್ನಪತ್ರಿಕೆ ಪ್ರಿಂಟ್ ಹಾಕಿಸಬೇಕು. ಛತ್ರದ ಮ್ಯಾನೇಜರ್ ನಿಂದ ಒಂದೇ ಸಮನೆ ಕಾಲ್ ಗಳು ” ಸರ್ ಮಿಕ್ಕಿರೋ ದುಡ್ಡು ಕಟ್ಟಿ ಬಿಟ್ರೆ ನಮ್ಮ ಕೆಲಸ ನಾವು ಮಾಡ್ತಿವಿ ಅಂತ”, ಇನ್ನೊಂದು ಕಡೆ ಫ್ಲವರ್ ಡೆಕೋರೇಟರ್ ಇಂದ “ಸರ್ ಯಾವ ಡಿಸೈನ್ ಬೇಕು ಅಂತ ಹೇಳಿ ಪ್ಯಾಕೇಜ್ ನಲ್ಲಿ ಎಲ್ಲಾ ಮಾಡಿಕೊಡ್ತಿವಿ”. ಇನ್ನೊಂದು ಕಡೆ ಫೋಟೋಗ್ರಾಫರ್ ಕಾಲ್ ಮಾಡಿ “ಸರ್ ಮದುವೆಗೆ ಯಾವ ಥೀಮ್ ಬೇಕು ಯಾವ ತರ ಫೋಟೋಸ್ ಬೇಕು ಹೇಳಿ ಪ್ಯಾಕೇಜ್ ನಲ್ಲಿ ಮಾಡಿ ಕೊಡ್ತಿವಿ” ಈ ಪ್ಯಾಕೇಜ್ ಕಥೆ ಒಂದಾ ಎರಡಾ? ಎಲ್ಲ ಕೆಲಸ ಒಂದೇ ಸಲ ಬಂದು ಯಾವುದು ಕೇಳೋದು ಯಾವುದು ಮಾಡೋದು ಅರ್ಥ ಆಗದೆ ಹೋಯ್ತು.

ಈ ಜಂಜಾಟದ ಮಧ್ಯದಲ್ಲಿ ಬೀಗರ ಮನೆಯವರು “ಬಟ್ಟೆ ತೆಗೆಯೋಕೆ ಮತ್ತೆ ಸುದರ್ಶನ್ ಸಿಲ್ಕ್ಸ್” ಗೆ ಯಾವಾಗ ಹೋಗೋಣ ಅಂತ ಅಪ್ಪನಿಗೆ ಕಾಲ್ ಮಾಡಿ ಕೇಳಿದರು. ನಮ್ಮ ಅಪ್ಪ “ಚಿಕ್ಕಪೇಟೆಗೆ ಕರ್ಕೊಂಡ್ ಹೋಗಿ ಕೆಲಸ ಮುಗಿಸೋಣ ಅಂದ್ರೆ ಮತ್ತೆ ಸುದರ್ಶನ್ ಸಿಲ್ಕ್ಸ್ ಗೆ ಬಂತಲ್ಲ ಯಾಕೋ ಆ ಅಂಗಡಿ ನಮನ್ನ ಬಿಡೋ ಹಾಗೆ ಕಾಣ್ತಿಲ್ಲ ಅನ್ಸುತ್ತೆ” ಅಂತ ಮನಸಲ್ಲೇ ಒಂದು ಲೆಕ್ಕಾಚಾರ ಹಾಕಿ “ಸರಿ ಸರ್ ಈ ಭಾನುವಾರ ಬಿಡುವು ಮಾಡ್ಕೊಂಡು ಬನ್ನಿ” ಅಂತ ಹೇಳಿದರು, ಅದನ್ನ ಅಪ್ಪ ಬಂದು ನನಗೆ ಹೇಳಿದಾಗ ಎಂಗೇಜ್ಮೆಂಟ್ ಟೈಮ್ ನಲ್ಲಿ ನಾ ಪಟ್ಟ ಅವಸ್ಥೆ ಒಂದು ಕ್ಷಣ ಕಣ್ಣ ಮುಂದೆ ಬಂದು ಹೋಯ್ತು.

ಮೂರು ದಿನ ಆದಮೇಲೆ ಈ ಬಟ್ಟೆ ತಗೋಳೋ ಕಾರ್ಯಕ್ರಮ ಮುಗಿತು. ಪ್ರತಿ ದಿನ ಹೋಗೋದು ಬಟ್ಟೆ ತರೋದು ಇದು ಒಂದು ರೀತಿ ಅಭ್ಯಾಸ ಆಯ್ತು. ಆದ್ರೆ ನನ್ನ ವುಡ್-ಬಿ ಭಾವ, ಅವರಿಗಂತೂ ಒಂದು ಸೂಟ್ ಸೆಲೆಕ್ಟ್ ಮಾಡೋಕೆ ಆಗ್ಲಿಲ್ಲ ನಮ್ಮ ಕೈಲಿ, ಮೂರು ಅಂಗಡಿ ತಿರುಗಿ ಕೊನೆಗೆ ಪಿ.ಎನ್. ರಾವ್ ನಲ್ಲೆ ಸೂಟ್ ಬೇಕು ಅಂತ ಹೇಳಿದಕ್ಕೆ ಏ.ಸಿ ರೂಮ್ ನಲ್ಲಿ ಬೆವರು ಬರೋ ಅಷ್ಟು ಬಿಲ್ ಆಯ್ತು. ಕೊನೆಗೆ ಈ ಬಟ್ಟೆ ಕಥೆ ಹೇಗೋ ಮುಗಿತಲ್ಲಾ ಅಂತ ಅನ್ನುತ್ತಿದಂತೆ ಶುರುವಾಯ್ತು ಲಗ್ನಪತ್ರಿಕೆ ವಿಚಾರ.

ಲಗ್ನಪತ್ರಿಕೆ ಪ್ರಿಂಟ್ ಹಾಕಿಸೋಕೆ ಅಂತ ನಾನು ಮತ್ತೆ ನನ್ನ ವುಡ್-ಬಿ ಭಾವ ರವರ ಅಣ್ಣ ಬಾಲಾಜಿ ರವರು ಬಂದರು ಇಬ್ಬರು ಚಿಕ್ಕಪೇಟೆಗೆ ಸುಮಾರು 2 ಗಂಟೆಗೆ ಹೋಗಿ ಬಂದು ಮೂರ್ನಾಲ್ಕು ಅಂಗಡಿ ಸುತ್ತಿ ಪತ್ರಿಕೆ ಡಿಸೈನ್ ಸೆಲೆಕ್ಟ್ ಮಾಡಿ ಅಲ್ಲಿಂದ ಪತ್ರಿಕೆನಲ್ಲಿ ಏನ್ ಇರ್ಬೇಕು, ನೆಂಟರ ಹೆಸರೆಲ್ಲಾ ಹಾಕ್ಬೇಕಾ, ಡಿಸೈನ್ ಏನ್ ಬೇಕು, ಕಲರ್ ಏನ್ ಇರ್ಬೇಕು ಅಂತ ನೂರೆಂಟು ಪ್ರಶ್ನೆಗಳಿಗೆ ಉತ್ತರ ಹುಡುಕಿ ಸ್ಯಾಂಪಲ್ ಕಾಪಿ ಪ್ರಿಂಟ್ ಮಾಡೋ ಅಷ್ಟರಲ್ಲಿ ರಾತ್ರಿ 10 ಗಂಟೆ. ಹೇಗೋ ಮುಗಿತಲ್ಲ ಅಂತ ಬಂದ್ರೆ ಮತ್ತೆ ಅದು ಇದು ತಿದ್ದುಪಡಿ ಅಂತ ಬೀಗರು ಮತ್ತೆ ನನಪ್ಪ ಮರುದಿನ ಅದೇ ಅಂಗಡಿಗೆ ಹೋಗಿ ಮ್ಯಾಟರ್ ಚೇಂಜ್ ಮಾಡಿ ಫೈನಲ್ ಮಾಡಿಸಿ ಬಂದ್ರು ಕೊನೆಗೂ ಪತ್ರಿಕೆ ಮನೆಗೆ ಬಂತು.

ಇಲ್ಲಿಂದ ನಿಜವಾದ ಆಟ ಶುರು ನೋಡಿ. ಶುಭಕಾರ್ಯದ ಶುಭಾರಂಭ. ಪತ್ರಿಕೆಗೆ ಶಾಸ್ತ್ರದ ಪ್ರಕಾರ ಹರಿಶಿನ ಕುಂಕುಮ ಇಟ್ಟು ಅಕ್ಷತೆ ಕಾಳು ಹಾಕಿ ಹಂಚೋದಕ್ಕೆ ರೆಡಿ ಆಯ್ತು. ಅದಕ್ಕೆ ಸುಮಾರು 3 ಗಂಟೆ ಸಮಯ ಹಿಡಿಯಿತು. ಸುಮ್ಮನೆ ಹಾಗೆ ಪತ್ರಿಕೆ ಕೈಯಲ್ಲಿ ಹಿಡಿದು ನೋಡಿದೆ. “ನಿವೇದಿತ ವೆಡ್ಸ್ ಗಿರೀಶ್” ಇದನ್ನ ನೋಡುತ್ತಿದಂತೆ ಒಂದು ಕಡೆ ಖುಷಿ ಮತ್ತೊಂದು ಕಡೆ ಮನಸ್ಸಿಗೆ ಭಾರ. ನನ್ನ ಅಕ್ಕಳ ಮುಂದಿನ ಜೀವನದ ಬಹು ದೊಡ್ಡ ಅಧ್ಯಾಯದ ಟೈಟಲ್ ಕಾರ್ಡ್ ತರ ಕಾಣಿಸ್ತು. ಅಕ್ಕ ಮತ್ತೊಂದು ಹೊಸ ಜೀವನಕ್ಕೆ ಕಾಲಿಡ್ತಿದ್ದಾಳೆ, ಬಾಳಿ ಬದುಕಿದ ಮನೆಯ ಕೈ ಬಿಟ್ಟು ಹೋಗ್ತಿದಾಳೆ ಅಂತ ನೆನೆಸಿಕೊಂಡ್ರೆ ಬಹಳ ಬೇಸರ ಆಯ್ತು. ಆದ್ರು ಅದು ಕೂಡ ಒಂದು ಆಗ್ಲೇ ಬೇಕು ಅಲ್ವ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ.

ಪತ್ರಿಕೆ ಹಂಚುವ ಕೆಲಸ ಶುರುವಾಯಿತು. ಅಪ್ಪ ಅಮ್ಮ ಇಬ್ಬರು ಮೊದಲ ಮಗಳ ಮದುವೆ, ಮನೆಯ ಮೊದಲ ಶುಭಕಾರ್ಯ ಅಂತ ಸಂಬಂಧಿಕರಿಗೆಲ್ಲಾ ಸೀರೆ, ಪಂಚೆ, ಶರ್ಟ್ ಪೀಸ್ ಕೊಡಬೇಕು ಅಂತ ನಿರ್ಧಾರ ಮಾಡಿ ಹತ್ತಿರದಿಂದ ದೂರದ ಸಂಬಂಧದವರೆಗು ಕೂಡ ಪತ್ರಿಕೆಯ ಜೊತೆ ಬಟ್ಟೆ ಕೊಟ್ಟು ಮದುವೆಗೆ ಆಹ್ವಾನ ನೀಡಿದರು. ಇನ್ನೊಂದು ಕಡೆ ನಾನು ನನ್ನ ಫ್ರೆಂಡ್ ನಿತಿನ್ ಜೊತೆ ಎರಡು ದಿನ ಪತ್ರಿಕೆ ಕೊಟ್ಟರೆ, ಇನ್ನೆರಡು ದಿನ ಸುಜಿತ್, ನಿಶ್ಚಲ್ ಜೊತೆ ಹೋದೆ ಮತ್ತೆ ಕೆಲವೊಂದಷ್ಟು ದಿನ ನೀಲೇಶ್ ಜೊತೆ ಹೋದರೆ ಮತ್ತೊಂದಷ್ಟು ದಿನ ಒಬ್ಬನೆ ಹೋದೆ. ಹೀಗೆ ಸುಮಾರು ಎರಡು ವಾರಗಳ ಕಾಲ ಪತ್ರಿಕೆ ಹಂಚುವ ಕೆಲಸ ಮುಂದುವರೆಯಿತು. ಮದುವೆ ಮಾಡಿಸಿದವರಿಗೆ ಗೊತ್ತು ಪತ್ರಿಕೆ ಹಂಚುವ ಕೆಲಸ ಎಷ್ಟು ಕಷ್ಟ ಅಂತ. ಒಂದೊಂದು ಮನೆಯಲ್ಲೂ ನೀರು, ಟೀ, ಕಾಫಿ, ಜ್ಯೂಸು, ಸ್ವೀಟ್ಸ್, ಊಟ, ತಿಂಡಿ ಅಂತ ಹೋದ್ರೆ ಅರೋಗ್ಯ ಏನ್ ಆಗ್ಬೇಕು. ಇಡೀ ಜೀವನದ ಫ್ರೆಂಡ್ಸ್ ಮತ್ತು ಸಂಬಂಧಿಕರನ್ನ ಒಂದೇ ಭಾರಿ ಭೇಟಿ ಮಾಡಿ ಅಕ್ಕನ ಮದುವೆ ಇದೆ ಬನ್ನಿ ಅಂತ ಕರೆಯೋದು ಅಂದ್ರೆ ತಮಾಷೆ ವಿಷಯ ಅಲ್ಲ. ಅದರಲ್ಲು ನನ್ನ ಅಕ್ಕ ಅವಳ ಸ್ಕೂಲ್ ಮತ್ತು ಕಾಲೇಜು ಟೀಚರ್ಸ್ ನನ್ನ ಮದುವೆಗೆ ಬರಬೇಕು ಅಂತ ತುಂಬ ಆಸೆ ಇಟ್ಟುಕೊಂಡಿದ್ಲು ಅದರಂತೆ ಹುಡುಕಿ ಹುಡುಕಿ ಎಲ್ಲಾ ಟೀಚರ್ಸ್ ನಂಬರ್ ತೆಗೆದುಕೊಂಡಿ ಕರೆದದ್ದು ಆಯ್ತು.

ಮದುವೆಯ ದಿನ ಹತ್ತಿರ ಬಂದೆ ಬಿಡ್ತು. ಚಪ್ಪರ ಹಾಕೋರು ಯಾರು, ದಿನಸಿ ಸಾಮಾನು ಎಲ್ಲಿಂದ ತರಿಸೋದು, ಪೂಜೆ ಸಾಮಾನುಗಳನ್ನ ತರೋಕೆ ಯಾರಿಗೆ ಒಪ್ಪಿಸೋದು, ಬಾಳೆಎಲೆ, ಬಾಳೆಗೊನೆ, ತೆಂಗಿನಕಾಯಿ, ತೆಂಗಿನಗರಿ ಇದನೆಲ್ಲಾ ಊರಿಂದ ತರಬೇಕು ಅಂತ ನಮ್ಮ ಊರಿನಲ್ಲಿದ್ದ ನಮ್ಮ ಮಾವನಿಗೆ ಒಪ್ಪಿಸಿದ್ದಾಯಿತು. ಎಲ್ಲಾ ಅಂದುಕೊಂಡಂತೆ ನಡೆಯುತ್ತಿತ್ತು. ದಿನಸಿಗೆ ನನ್ನ ಫ್ರೆಂಡ್ ಸಾಗರ್ ಗೆ ಒಪ್ಪಿಸಿದೆ. ಅವನು “ಮಗ ನೀನೇನು ತಲೆ ಕೆಡಿಸಿಕೋಬೇಡ, ಭಟ್ಟರು ಕೊಟ್ಟಿರೋ ಐಟಂ ಲಿಸ್ಟ್ ಕಳಿಸು ಮಿಕ್ಕಿದ್ದು ನಾನು ನೋಡ್ಕೋತೀನಿ ನೀನು ಬೇರೆ ಕೆಲಸದ ಮೇಲೆ ಗಮನ ಕೊಡು” ಅಂದ. ಈ ರೀತಿಯ ಸಣ್ಣ ಪುಟ್ಟ ಜವಾಬ್ದಾರಿ ಮತ್ತು ಭರವಸೆಗಳು ಎಷ್ಟು ನೆಮ್ಮದಿ ತರುತ್ತಿತ್ತು ಮತ್ತು ಅದರಂತೆ ಮದುವೆಯ ಹಿಂದಿನ ದಿನ ಎಲ್ಲಾ ದಿನಸಿ ಐಟಂಗಳು ಬಂದೆ ಬಿಡ್ತು. ಹೀಗೆ ಒಂದಕ್ಕೊಂದರಂತೆ ಕೆಲಸಗಳು ಬೆಳೆಯುತ್ತಿತ್ತು ಇನ್ನೊಂದು ಕಡೆ ಮುಗಿಯುತ್ತಿತ್ತು. ಚಪ್ಪರ ಮದುವೆಯ ಹಿಂದಿನ ದಿನ ಹಾಕೋಣ ಅಂತ ಹೇಳಿ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಕಂಭಗಳು ನಿಲ್ಲಿಸಿದರೆ ಅಕ್ಕ ಮದುಮಗಳಾಗಿ ಸೀರೆ ಉಟ್ಟು ಹರಿಶಿನ ಕುಂಕುಮ ಇಟ್ಟು ಕೆಳಗಿಳಿದು ಬರುತ್ತಿದ್ದಳು. ಆ ಒಂದು ನೋಟ ಅದ್ಭುತವೇ ಸರಿ. ಅವಳು ಮದುಮಗಳಾಗಿ ಮಾಡಿದ ಮೊದಲ ಪೂಜೆ ಏನೋ ಒಂದು ರೀತಿಯ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಎಲ್ಲವೂ ಅದ್ದೂರಿಯಿಂದ ಶಾಸ್ತ್ರೋತ್ತವಾಗಿ ನಡೆಯುತ್ತಿತ್ತು ಆದರೆ ಅಲ್ಲೊಂದು ವಿಧಿಯ ಆಟ ನಡೆದೇ ಹೋಯ್ತು. ನಮ್ಮ ಎದುರು ಮನೆಯ, ತುಂಬಾ ಒಳ್ಳೆ ಮನಸ್ಸಿನ, ಯಾವಾಗಲು ಕೃಷ್ಣ ಕೃಷ್ಣ ಅಂತ ಬಾಯಿತುಂಬ ಕರೆಯುತ್ತಿದ್ದ ನನ್ನ ಆಂಟಿ ಆ ದಿನ ಹಾರ್ಟ್ ಅಟ್ಟ್ಯಾಕ್ ಆಗಿ ತೀರಿ ಹೋದರು. ಮದುವೆ ಮನೆಯ ಸಂಭ್ರಮ ಕೆಲವು ಕ್ಷಣಗಳ ಕಾಲ ಸ್ತಬ್ಧವಾಯಿತು, ಇಡೀ ನಮ್ಮ ರಸ್ತೆಯಲ್ಲಿ ಮೌನ ಆವರಿಸಿತು. ಆದ್ರೆ ಅವರ ಕುಟುಂಬದವರು ನಮ್ಮ ಪರಿಸ್ಥಿತಿ ಅರ್ಥಮಾಡಿಕೊಂಡು ಶವವನ್ನು ಅವರ ತಾಯಿಯ ಮನೆಯ ಬಳಿ ಕೊಂಡೊಯ್ದರು. ಸಾವಿನ ಸುದ್ದಿಯಲ್ಲಿ ಸಂಭ್ರಮ ಎಲ್ಲೊ ಹಾರಿ ಹೋಗಿತ್ತು. ಆದರು ಈ ವಿಧಿಯ ಆಟದ ನಡುವೆ ಬಂಡಿಗಳು ಸಾಗಬೇಕಲ್ಲಾ. ಮದುವೆಯ ಕೆಲಸಗಳು ಮುಂದುವರೆಯಿತು.

ಇದನೆಲ್ಲಾ ಕಂಡು ಕೆಲಸದಲ್ಲಿ ದಣಿದು, ಬಿದ್ದು, ಎದ್ದು ಸುಸ್ತಾಗಿ ಮನೆಗೆ ಬಂದು ಸಂಬಂಧಿಕರು ಫ್ರೆಂಡ್ಸ್ ಎಲ್ಲರ ಜೊತೆ ಕೂತು ಊಟ ಮಾಡಿ ಮಲಗಿದ್ದೆ. ಬೆಳಗಿನ ಜಾವ ಸುಮಾರು 6:30, ಧಿಡೀರನೆ “ಓ ಅಕ್ಕಳ ಮದುವೆ ಇವತ್ತು” ಅಂತ ಎದ್ದು ಕೂತೆ. ಪಕ್ಕದಲ್ಲೇ ಬಟ್ಟೆಯೆಲ್ಲಾ ಪ್ಯಾಕ್ ಮಾಡುತ್ತಿದ್ದ ನನ್ನಕ್ಕ ನನ್ನನ್ನ ನೋಡಿ ನಕ್ಕಿ ಹೋದಳು. ಬೆಳ್ಳಂಬೆಳಗ್ಗೆ ಈ ರೀತಿ ಶುರುವಾಯಿತು ನನ್ನ ದಿನ. ಎದ್ದು ರೆಡಿ ಆಗಿ ಕೆಳಗೆ ಬಂದರೆ ಅಪ್ಪ, ನನ್ನ ಫ್ರೆಂಡ್ ನೀಲೇಶ್ ಮತ್ತೆ ನನ್ನ ಅಣ್ಣ ಎಲ್ಲರೂ ಸೇರಿ ಚಪ್ಪರ ಕಟ್ಟುತ್ತಿದ್ದರು. ಅದಕ್ಕೆ ಸ್ವಲ್ಪ ಹೊತ್ತು ನಾನು ಕೈ ಜೋಡಿಸಿ ನಿಂತೆ. ನಂತರ ಕಾರ್ ವಾಷಿಂಗ್ ಗೆ ಕೊಡಬೇಕು ಅಂತ ಅಲ್ಲಿಂದ ಹೊರಟು ಕಾರ್ ತೊಳಸಿ ಡೆಕೋರೇಷನ್ ಮಾಡಿಸಿ ಬರುವಷ್ಟರಲ್ಲಿ ಮನೆಯಲ್ಲಿ ಎಲ್ಲಾ ಶಾಸ್ತ್ರಗಳು ಶುರುವಾಗಿತ್ತು. ಫೋಟೋಗ್ರಾಫರ್ ಅವರ ಕೆಲಸ ಶುರುಮಾಡಿದ್ದರು, ಸಂಬಂಧಿಕರೆಲ್ಲಾ ಒಟ್ಟಿಗೆ ಬಂದು ಕೂತು ಒಬ್ಬರನೊಬ್ಬರು ರೇಗಿಸಿಕೊಂಡು ಹರಟೆ ಹೊಡೆಯುತ್ತಾ ಕೆಲಸ ಮಾಡುತ್ತಿದ್ದನ್ನ ಕಂಡು ಒಂದು ಕಡೆ ಖುಷಿ ಮತ್ತೊಂದು ಕಡೆ ಅಕ್ಕ ಈ ದಿನ ಕನ್ಯೆಯಾಗಿ ಮನೆಬಿಟ್ಟು ಹೋಗುತ್ತಿದ್ದಾಳೆ. ಈ ಮನೆಯ ಮಗಳಾಗಿ, ನನ್ನ ಅಕ್ಕನಾಗಿ ಅದು ಕೊನೆಯ ದಿನ, ಅವಳ ಕೊನೆಯ ಹೆಜ್ಜೆ ಹೊರಗೇ ಇಟ್ಟರೆ ಮತ್ತೆ ಬರುವುದು ಇನ್ನೊಂದು ಮನೆಯ ಸೊಸೆಯಾಗಿ, ಒಬ್ಬ ವ್ಯಕ್ತಿಯ ಬಾಳ ಸಂಗಾತಿಯಾಗಿ. ಇದು ಬಹಳ ನೋವು ತರುವಂತಹ ವಿಚಾರ ಆದ್ರೆ ಏನ್ ಮಾಡೋದು ನಾವು ಗಂಡು ಮಕ್ಕಳು ಅದನೆಲ್ಲಾ ಹೇಳಿಕೊಂಡು ಕಣ್ಣೀರು ಹಾಕಬಾರದೆಂಬುದುದು ಈ ಸಮಾಜದ ಕಟ್ಟುಪಾಡು. ಅಪ್ಪನನ್ನ ಆ ಘಳಿಗೆಯಲ್ಲಿ ಸಮಾಧಾನ ಮಾಡಲು ಯಾರಿಗೂ ಸಾಧ್ಯವಾಗಲಿಲ್ಲ. ಅಪ್ಪನ ಕಣ್ಣಲ್ಲಿ ಅಕ್ಕ ಹುಟ್ಟಿದಾಗಿನಿಂದ ಹೊತ್ತ ಕನಸು ಈ ದಿನ ಮುತ್ತಾಗಿ ಹರಿಯುತ್ತಿತ್ತು, ಅಕ್ಕನ ಕಣ್ಣು ಕೂಡ ತುಂಬಿತ್ತು, ಮತ್ತೆ ಅಮ್ಮ ಎಲ್ಲಿ ಅಂತ ನೋಡಿದ್ರೆ ಅವರು ಅಡಿಗೆ ಮನೆಯಲ್ಲಿ ಮಗಳನ್ನ ನೆನೆಯುತ್ತಾ ಅಳುತ್ತಿದ್ದಾರೆ. ಆದರೆ ನಾನೊಬ್ಬ ಮಾತ್ರ ನಗುತ್ತಿದ್ದೆ; ಕಣ್ಣ ಹನಿಯ ನೀರು ತಡೆದು ನಗುತ್ತಿದ್ದೆ.

ನನ್ನ ಕಾರ್ ನಲ್ಲಿ ಅಕ್ಕಳನ್ನ ಕೂರಿಸಿಕೊಂಡು ಮಂಟಪಕ್ಕೆ ಹೊರಟೆ, ನನ್ನ ಹಿಂದೆ ನಿಶ್ಚಲ್ ಮತ್ತೆ ಸುಜಿತ್ ಕಾರ್ ಎರಡರಲ್ಲೂ ಸಂಬಂಧಿಕರನೆಲ್ಲಾ ತುಂಬಿಸಿಕೊಂಡು ಮಂಟಪಕ್ಕೆ ಬಂದರು. ಮಂಟಪಕ್ಕೆ ಬರುತ್ತಿದ್ದಂತೆ ಎಲ್ಲಾ ಕೆಲಸಗಳು ಸರಿಯಾಗಿ ಮಾಡಿದ್ದಾರ ಅಂತ ನೋಡೋದೇ ಒಂದು ದೊಡ್ಡ ಟಾಸ್ಕ್, ಒಂದು ಕಡೆಯಿಂದ ಬಂದವರಿಗೆ ರೂಮ್ ಅರೇಂಜೇ ಮಾಡಿ, ಊಟದ ವ್ಯವಸ್ಥೆಯನ್ನ ನನ್ನ ಮಾವಂದಿರಾದ ಮುನಿರಾಜು ಮತ್ತು ಮೂರ್ತಿ ಮತ್ತು ನನ್ನ ದೊಡಪ್ಪ ಹನುಮಂತಯ್ಯ ಹೀಗೆ ಎಲ್ಲರೂ ಜೊತೆಯಲ್ಲಿ ನೋಡಿಕೊಳ್ಳುತ್ತಿದ್ದರು, ಅವರನ್ನು ಮಾತಾಡಿಸಿಕೊಂಡು ರಿಸೆಪ್ಶನ್ ಹಾಲ್ ಗೆ ಬಂದರೆ ಅಲ್ಲಿ ಫ್ಲವರ್ ಡೆಕೋರೇಷನ್ ಅವರದ್ದು ಎಲ್ಲಾ ಅರ್ಧ ಕೆಲಸ, ಇನ್ನೊಂದು ಕಡೆ ಮಂಟಪದ ಮ್ಯಾನೇಜರ್ ನ ಕರೆಸಿ ಲೈಟ್, ನೀರು, ಚೇರ್, ಟೇಬಲ್, ಎಲ್ಲಾ ವ್ಯವಸ್ಥೆ ಮಾಡಿಸಿ ಬರೋ ಅಷ್ಟರಲ್ಲಿ ತಿಳಿಸಂಜೆ. ಅಷ್ಟರಲ್ಲಿ ನಾನು ಸುಜಿತ್, ನಿಶ್ಚಲ್, ನೀಲೇಶ್, ಹೃತಿಕ್ ಮತ್ತು ಆಂಟೋನಿ ಇವರಷ್ಟೇ ಈ ಇಡೀ ಮದುವೆಯ ಮ್ಯಾನೇಜ್ಮೆಂಟ್, ಎಲ್ಲರಿಗೂ ವಾಕಿ-ಟಾಕಿ ಕೊಟ್ಟು ಒಂದೊಂದು ಕೆಲಸ ನಿರ್ಧಾರ ಮಾಡಿ ಆಯ್ತು. ನಮ್ಮ ಬಂಧು-ಬಳಗದವರು ಶಾಸ್ತ್ರ-ಸಂಪ್ರದಾಯಗಳು, ಊಟದ ವ್ಯವಸ್ಥೆ ಇದನೆಲ್ಲಾ 8-10 ಜನ ನಮ್ಮ ಹತ್ತಿರದ ಸಂಬಂಧಿಕರೇ ಖುದ್ದಾಗಿ ನಿಂತು ನೋಡಿಕೊಂಡರು. ಇವರೆಲ್ಲರ ಸಹಾಯದಿಂದ ಇಡೀ ವ್ಯವಸ್ಥೆಯಲ್ಲಿ ಒಂದು ಸಣ್ಣ ಲೋಪವು ಬರದಂತೆ ಎಲ್ಲವೂ ಸುಸೂತ್ರವಾಗಿ ನಡೆಯಿತು.

ಅತ್ತ ಇತ್ತ ಅಲೆಯುತ್ತಾ ಎಲ್ಲಾ ಕೆಲಸ ನೋಡಿಕೊಳ್ಳುತ್ತಿದಂತೆಯೆ ಸಮಯ ಸಾಗಿತ್ತು. ತಕ್ಷಣ ಹೋಗಿ ಹೆಣ್ಣಿನ ತಮ್ಮ ಅನ್ನುವಂತೆ ಒಂದೊಳ್ಳೆ ಬಟ್ಟೆ ಹಾಕಿಕೊಂಡು ಹೊರಗೆ ಬಂದೆ. ಬಟ್ಟೆ ಬದಲಾದಂತೆ ಕೆಲಸವೂ ಬದಲಾಯಿತು. ಮದುವೆಗೆ ಜನ ಬರಲಾರಂಭಿಸಿದರು, ಹೆಣ್ಣು ಗಂಡು ಮಾತ್ರ ಮೇಕ್ಅಪ್ ನಲ್ಲೇ ಬ್ಯುಸಿ. ನಾನಂತೂ ಖುಷಿಯಿಂದ ಎಲ್ಲಾ ಕಡೆ ಒಂದು ರೌಂಡ್ ಹೊಡೆದು ಬಂದೆ. ಸಮಯ ಸಂಜೆ 7:30 ಎಲ್ಲವೂ ಒಂದೇ ಸಲ ಆರಂಭವಾಯಿತು, ಹೆಣ್ಣು ಗಂಡು ಬಂದು ಸ್ಟೇಜ್ ಮೇಲೆ ನಿಂತರು, ಚೀಫ್ ಗೆಸ್ಟ್ ಅಂತ ಬಂದಿದ್ದ ಎಂ.ಎಲ್.ಎ, ಕಾರ್ಪೊರೇಟರ್ ಎಲ್ಲರೂ ಬಂದು ಹೂ ಗುಚ್ಚ ಕೊಟ್ಟು ಶುಭಕೋರಿ ಹೊರಟರು. ಬೆಂಗಳೂರಿನಿಂದ ಮತ್ತು ನಮ್ಮ ಊರು ಶಿವಗಂಗೆಯಿಂದ ಮಾಡಿದ್ದ ಬಸ್ಸುಗಳು ಒಮ್ಮೆಲೆ ಮಂಟಪಕ್ಕೆ ಬಂದಿತ್ತು ಅದರಂತೆಯೆ ಏಕಾಏಕಿ ಜನರು ಕೂಡ ದೌಡಾಯಿಸಿದರು ಸ್ಟೇಜ್ ಮೇಲೆ ಗಂಡು ಹೆಣ್ಣಿಗೆ ಜಾಗವಿಲ್ಲದಂತೆ ಜನರು ಬಂದು ನಿಂತರು, ಫೋಟೋಗ್ರಾಫರ್ ಅಂತೂ ಜನರನ್ನು ಸುಧಾರಿಸುವಲ್ಲಿ ಸುಸ್ತಾದರು. ತಕ್ಷಣ ವಿಷಯ ತಿಳಿದು ನಾನು ನೀಲೇಶ್ ಸುಜಿತ್ ಸ್ಟೇಜ್ ಮೇಲೆ ಬಂದು ಜನರನ್ನು ತಡೆದು ನಿಲ್ಲಿಸಬೇಕಾಯಿತು ಅವರನ್ನು ಸುಧಾರಿಸುವಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗು ಒಂದು ಶಾಂತ ಸ್ವರೂಪಕ್ಕೆ ತಿರುಗಿತು. ಬಂದವರನ್ನು ಮಾತಾಡಿಸಿ ವಿಚಾರಿಸಿಕೊಂಡು ಕರೆದು ಫೋಟೋ ತೆಗೆಸಿಕೊಂಡು ಖುಷಿ ಖುಷಿಯಿಂದ ಕಳಿಸಬೇಕಾಯಿತು. ನನ್ನಪ್ಪ ಹೇಳಿದಂತೆ ಯಾರ್ ಯಾರು ಎಲ್ಲಿಂದ ಬಂದಿರ್ತಾರೋ ಎಷ್ಟು ಕಷ್ಟ ಖರ್ಚುಗಳು ಮಾಡಿಕೊಂಡು ಬಂದಿರ್ತಾರೋ ಗೊತ್ತಿಲ್ಲ ಹಾಗಾಗಿ ಯಾರನ್ನು ಕೂಡ ಬಿಡದೆ ಪ್ರತಿಯೊಬ್ಬರನ್ನು ಮಾತಾಡಿಸಿ ವಿಚಾರಿಸಿ ಊಟ ಮಾಡಿಸಿ ಕಳಿಸಬೇಕು, ಅದಷ್ಟೇ ಅವರಿಗೆ ಖುಷಿ ಕೊಡೋದು” ಅಂದಿದ್ದರು. ಆದರಂತೆಯೇ ಪ್ರತಿಯೊಬ್ಬರನ್ನು ಮಾತಾಡಿಸಿ ಊಟಕ್ಕೆ ಕಳಿಸಿ ಆಗಾಗ ಊಟದ ಹಾಲ್ ಗೂ ಭೇಟಿ ಕೊಟ್ಟು ಎಲ್ಲರನ್ನು ಮಾತಾಡಿಸಿ ಬರುತ್ತಿದ್ದೆ.

ಇದು ನನ್ನ ಕೆಲಸ ಮಾತ್ರ ಅಲ್ಲ. ಅಪ್ಪ ಅಮ್ಮ ನನ್ನ ಜೊತೆಯಲ್ಲಿದ್ದ ಫ್ರೆಂಡ್ಸ್ ಎಲ್ಲರದ್ದೂ ಕೂಡ ಅದೇ ರೀತಿಯ ಶಿಸ್ತುಪಾಲನೆ. ಹೀಗೆ ಸಂಭ್ರಮ ಸಡಗರದಲ್ಲಿ ನಡೆಯುತ್ತಿದ್ದ ಹಬ್ಬದ ವಾತಾವರಣ ಮನೆ ಮಾಡಿ. ಇಡೀ ನಮ್ಮ ವಂಶಸ್ಥರು ಮತ್ತು ನಮ್ಮ ಬೀಗರು ಮನೆಯ ವಂಶಸ್ಥರನ್ನು ಸಹ ಒಂದು ಗೂಡಿಸಿ ಸ್ನೇಹ ಸಂಬಂಧಗಳನ್ನ ಮತ್ತಷ್ಟು ಬಲ ಪಡಿಸಿದ ಒಂದು ಶ್ರೇಷ್ಠ ಮಂಟಪ ಕಲ್ಯಾಣ ಮಂಟಪ. ಎಂದೆಂದಿಗೂ ಆ ಮಂಟಪಗಳು ಮಾಡುವ ಬೃಹತ್ ಕಾರ್ಯಕ್ಕೆ ನಾವು ಎಷ್ಟು ಋಣಿಯಾಗಿದ್ದರು ಸಾಲದು. ಹೀಗೆ ಸಂಭ್ರಮ ನಡೆದು ಎಲ್ಲರನ್ನು ಬೀಳ್ಕೊಡುವ ಸಮಯ ಬರುತ್ತಿದ್ದಂತೆ ಗಂಡು ಹೆಣ್ಣು ಸಹ ಸ್ವಲ್ಪ ನಿರಾಳರಾದರು. ಅಷ್ಟರಲ್ಲಿ ಬೀಗರು ಮತ್ತು ನಾವು ಎಲ್ಲರೂ ಕೂಡ ಸಾಂಗ್ ಹಾಕಿ ಡಾನ್ಸ್ ಕೂಡ ಮಾಡಿದೆವು. ಹಾಡಿದ್ದೇನು ಕುಣಿದದ್ದೇನು ಆಹಾ ಎಂಥಾ ಸಮಯ ಸ್ವಾಮಿ ಅದು, ಊಹಿಸಲು ಸಾಧ್ಯವಾಗದ ಖುಷಿಯ ಸಂಕೇತದ ಸಂಭ್ರಮ ಅದು. ನನ್ನಕ್ಕ ವುಡ್-ಬಿ ಭವನ ಕೈ ಹಿಡಿದು ಡಾನ್ಸ್ ಮಾಡಿ ಇಡೀ ರಿಸೆಪ್ಶನ್ ನೈಟ್ ಒಂದು ಅದ್ಬುತ ಸಮಯವನ್ನಾಗಿ ಒಂದು ಅತ್ಯುನ್ನತ ನೆನಪಾಗಿ ಮಾಡಿಬಿಟ್ಟಳು. ಇದಾದ ಬಳಿಕ ಊಟಕ್ಕೆ ಅಂತ ನಾನು ಸುಜಿತ್, ನಿಶ್ಚಲ್, ನೀಲೇಶ್, ಆಂಟೋನಿ, ಹೃತಿಕ್ ಮತ್ತು ಮಂಜಣ್ಣ ಎಲ್ಲಾ ಒಟ್ಟಿಗೆ ಹೋದ್ವಿ ಆದರೆ ಆಗ ಮ್ಯಾನೇಜ್ ಮಾಡೋಕೆ ಯಾರು ಇಲ್ಲ ಅಷ್ಟರಲ್ಲಿ ರೂಂ ಇಲ್ಲದ ಸಂಬಂಧಿಕರಿಂದ ಕಾಲ್ ಮೇಲೆ ಕಾಲ್ “ನಮ್ಮ ರೂಂ ಗೆ ಬೆಡ್ ಇಲ್ಲ” ಅಂತ, ಈಗ ಅದೊಂದು ದೊಡ್ಡ ಟಾಸ್ಕ್ ಕುಡಿದು ಮಲಗಿದ್ದ ಮ್ಯಾನೇಜರ್ ನ ಎಬ್ಬಿಸಿ ಎಲ್ಲಾ ರೂಂ ಗು ಬೆಡ್ ಅರೇಂಜ್ ಮಾಡಿಸುವಷ್ಟರಲ್ಲಿ ರಾತ್ರಿ 12 ಗಂಟೆ. ಇನ್ನೇನು ಆಯ್ತು ಅಂತ ತಿರುಗಿ ನೋಡಿದರೆ ಊರಿಂದ ಬಂದಿದ್ದ ನನ್ನ ಅಕ್ಕ ಒಬ್ಬರು ಬ್ಯಾಗ್ ಎತ್ಕೊಂಡು “ನಮಗೆ ಅಂತ ಒಂದ್ ರೂಂ ಇಲ್ಲ ಬೆಡ್ ಇಲ್ಲ, ನಾನ್ ಇಲ್ಲಿ ಇರೋಲ್ಲ ಅಂತ ಹೊರಟು ನಿಂತಿದ್ದಾರೆ. ಎಪ್ಪಾ ಈ ಪರಿಸ್ಥಿತಿ ಹೇಗೆ ನಿಭಾಯಿಸೋದು ನನಗಂತು ಹುಚ್ಚು ಹಿಡಿದು ಓಡಿ ಹೋಗೋದು ಒಂದು ಬಾಕಿ ಹೇಗೋ ಅವರನ್ನು ಸಮಾಧಾನ ಮಾಡಿ ಒಂದು ರೂಂ ನಲ್ಲಿ ಬೆಡ್ ಕೊಟ್ಟು ಬಂದೆ. ಆದ್ರೆ ರೂಂ ಸಿಗದೇ ಇತ್ತ ನನ್ನ ಫ್ರೆಂಡ್ ಶ್ರುತಿ, ಭವ್ಯ, ಮಮತ ಮೂರು ಜನ ನನಗಂತ ಕಾದು ಕುಳಿತ್ತಿದ್ದರು, ಇವರಿಗೆ ಎಲ್ಲಿಂದ ತರೋದು ರೂಂ ನ ಹಾಗೂ ಹೀಗೋ ಏನೋ ಮಾಡಿ ಅಡ್ಜಸ್ಟ್ ಆಯ್ತು. ಕೊನೆಗೆ ನನಗೆ ನೀಲೇಶ್ ಗೆ ರೂಂ ಇಲ್ಲ. “ನಮ್ಮ ಗತಿ ಇಷ್ಟೇ ಬಾ ಮಗ” ಅಂತ ಹೇಳಿ ಹೋಗಿ ಕಾರ್ ನಲ್ಲಿ ಮಲಗಿದ್ವಿ. ಸುಜಿತ್, ನಿಶ್ಚಲ್, ಆಂಟೋನಿ, ಹೃತಿಕ್ ಎಲ್ಲಾ ವಾಪಸ್ ಮನೆಗೆ ಬಂದು ಮಲಗಿ ಬೆಳಗ್ಗೆ ಬಂದರು. “ನಾನು ನೀಲೇಶ್ ಮಲಗಿದ್ದು ಬೆಳಗಿನ ಜಾವ ಸುಮಾರು 2:30 ಆಗಿತ್ತು ಅದೇನೋ ಅಷ್ಟು ಸುಸ್ತಾದರು ಕೂಡ ಒಂದು ರೀತಿಯ ನಿರಾಳ ಮತ್ತು ನೆಮ್ಮದಿ; ಮರೆಯಲಾಗುವುದಿಲ್ಲ.

ಬೆಳಗ್ಗೆ ಸಮಯ 4:30 ಅಪ್ಪನಿಂದ ಕಾಲ್ ಬಂತು “ಭಟ್ಟರು ಹಾಲು ಬಂದಿಲ್ಲ ಅಂತ ಹೇಳ್ತಿದ್ದಾರೆ ನೋಡೋ” ಅಂತ, ಮತ್ತೆ ಕೆಲಸ ಶುರು. ನೀಲೇಶ್ ನ ಎಬ್ಬಿಸಿ ಬಾ ಮಗ ಇವತ್ತು ಇಡೀ ದಿನ ನಿದ್ದೆ ಇರೋಲ್ಲ ಫಿಕ್ಸ್ ಆಗು ಅಂತ ಹೇಳಿ ಮಂಟಪಕ್ಕೆ ಬಂದೆವು. ಬೆಳಗಿನ ಜಾವದಲ್ಲಿ ನಮ್ಮ ಕೆಲಸ ಅಷ್ಟೇನು ಇಲ್ಲ. ಎಲ್ಲಾ ಶಾಸ್ತ್ರ ಸಂಪ್ರದಾಯಗಳು ಮಾತ್ರ. ಮನೆಗೆ ಹೋಗಿ ಮಲಗಿದ್ದ ನನ್ನ ಫ್ರೆಂಡ್ಸ್ ಎಲ್ಲ ಬಂದ್ರು ಎಲ್ಲರೂ ರೆಡಿ ಆಗಿ ನಿಂತೆವು. ಮುಹೂರ್ತದ ಮಂಟಪ ಕೂಡ ರೆಡಿಯಾಗಿತ್ತು. ಮಂಟಪದ ಒಳಗೆ ಬರುವವರು ಕೂಡ ರೆಡಿಯಾಗುತ್ತಿದ್ದರು. ಅದೊಂದು ಅವರ ಜೀವನದ ಅತಿ ದೊಡ್ಡ ಅಧ್ಯಾಯ. ಅವರಿಗೆಷ್ಟು ಮುಖ್ಯವೋ ಹೆಣ್ಣಿನ ತಮ್ಮ ಹಾಗು ತಂದೆ ತಾಯಿಯ ದೃಷ್ಟಿಯಲ್ಲಿ ಅದಕ್ಕಿಂತ ಒಂದು ಪಟ್ಟು ಹೆಚ್ಚು ನಮಗೆ ಶ್ರೇಷ್ಠ ಸಮಯ. ಅಕ್ಕ ಬಂದಳು…

ಮುಹೂರ್ತದ ಮಂಟಪದ ಒಳಗೆ ಕರೆಸಿದರು. ನನ್ನ ವುಡ್-ಬಿ ಭಾವ ಇಂದ “ಭಾವ” ಆಗುವವರು ದೇವಸ್ಥಾನದಿಂದ ನಡೆದು ಬಂದರು. ಸುತ್ತಲೂ ಸದ್ದು ಗದ್ದಲ ಆದರೆ ನನಗೆ ಮಾತ್ರ ಪೂರ್ಣ ಮೌನ ಎಲ್ಲವೂ ನಿಶ್ಯಬ್ದ. ಎಲ್ಲರೂ ಒಂದೊಂದು ಕೆಲಸದಲ್ಲಿ ಭಾಗಿಯಾಗಿದ್ದಾರೆ. ನಾನು ಎಲ್ಲವನ್ನು ನಿಭಾಯಿಸುತ್ತಿದ್ದೆ ಆದರೆ ಮನಸ್ಸು ಪೂರ್ತಿ ಶಾಂತತೆಯಲ್ಲಿತ್ತು, ಅಕ್ಕನ ಮುಖ ನೋಡಿದೆ ಸುಂದರ ಮೊಗದಲ್ಲೊಂದು ಲೋಪ.

ಏನದು? ಅಕ್ಕನ ಮುಖದಲ್ಲಿ ಏನೋ ಒಂದು ಮೌನ ಇದೆ,

ಇಲ್ಲ ಅವಳು ಖುಷಿಯಾಗಿದ್ದಾಳೆ

ಇಲ್ಲ ಇಲ್ಲ ಅಪ್ಪ ಅಮ್ಮನನ್ನ ನೋಡಿ ಬೇಜಾರಾಗಿದ್ದಾಳೆ

ಅವಳ ಕಣ್ಣನ್ನೇ ದಿಟ್ಟಿಸಿ ನೋಡಿದೆ ಹೊಳೆಯುತ್ತಿದ್ದವು ಕಣ್ಣುಗಳು, ಹೊಳಪಿನಿಂದಲ್ಲ ಕಣ್ಣೀರಿನಿಂದ. ಕಣ್ಣುಗಳು ಕೆಂಪಾಗಿದ್ದವು. ಎಂಗೇಜ್ಮೆಂಟ್ ದಿನ ಅವಳ ಕೈಗೆ ಉಂಗುರ ಹಾಕಿದ್ದು ನೋಡಿರಲಿಲ್ಲ ಆದರೆ ಈಗ ಆ ರೀತಿ ಆಗಬಾರದು ಅಂದುಕೊಂಡೆ ಅಷ್ಟೆ

ಅಕ್ಕಳಿಗೆ ಆ ಮಾತು ಕೇಳಿಸಿತೇನೋ ಗೊತ್ತಿಲ್ಲ

ತಕ್ಷಣ ಕೈ ಹಿಡಿದಳು, ಆ ಹಿಡಿತದಲ್ಲಿ ಒಂದು ಒಲವಿತ್ತು, ಒಂದು ಧೈರ್ಯ ಅವಳಿಗೆ ಬೇಕಿತ್ತು. ತಮ್ಮ ಎಂಬ ಭಾವನೆ ತುಂಬಿತ್ತು, ಅವಳ ಹಿಡಿತದ ಬಿಸಿಯಲ್ಲಿ ಪ್ರೀತಿ ಮಮತೆ ಕರುಣೆ ಕಾಣುತ್ತಿತ್ತು.

ನನ್ನ ಅವಳ ಆ ಘಳಿಗೆ ಪುರೋಹಿತರಿಗೆ ಇಷ್ಟ ಆಗಲಿಲ್ಲ.

ಕೂಗಿದರು ಪೂಜಾರಿ

“ಏನಮ್ಮ ನೀನು ಒಪ್ಪಿಗೆಯಿಂದ ಈ ಮದುವೆಗೆ ಹೂ ಅಂದಿದ್ದೀಯ, ನಿನಗೆ ಯಾವುದೇ ಅಭಯಾಂತರ ಇಲ್ಲ ಅಲ್ವ ಈ ಗಂಡು ನಿನಗೆ ಓಕೆ ನಾ?? ಅಂದರು

“ಅಕ್ಕ ಹೂ ಅಂದಳು”

ಅದೇ ಮಾತು ಭಾವನಿಗೆ ಕೇಳಿದರು “ಏನಪ್ಪಾ ನಿನಗೆ ಹುಡುಗಿ ಒಪ್ಪಿಗೆನಾ?”

ಹೂ ಅಂದರು ಭಾವ

ಈ ಮಾತಿನ ಒಪ್ಪಿಗೆಯ ಮೇಲೆ ಮಾಂಗಲ್ಯ ಧಾರಣೆಯ ಶಾಸ್ತ್ರಗಳು ಮುಂದುವರೆಯುವುದು ಸಂಪ್ರದಾಯ. ನೋಡ ನೋಡುತ್ತಿದಂತೆ ಮಾಂಗಲ್ಯ ಧಾರಣೆಯ ಸಮಯ ಬಂದೆ ಬಿಡ್ತು. ಅಕ್ಷತೆ ತಂದು ಕೊಟ್ಟರು ನನ್ನ ಅತ್ತಿಗೆ. ಅಕ್ಷತೆ ಕೈಯಲ್ಲಿ ಹಿಡಿದೆ ನನ್ನ ಕೈ ನಡುಗುತ್ತಿತ್ತು.

ಮನದ ಮಾತುಗಳಿಗೆ ಸ್ಪಂದಿಸಲು ಆಗಲಿಲ್ಲ ಮೌನಿಯಾಗಿ ನಿಂತಿದ್ದೆ. ಅಪ್ಪ ಅಮ್ಮ ಕಣ್ಣಲ್ಲಿ ಕರುಣೆಯ, ಮಮತೆಯ ಕಟ್ಟೆ ಒಡೆಯಿತು ಆದರೆ ನಾನು ಧೃಡವಾಗಿ ನಿಂತಿರಬೇಕು, ಧೃತಿಗೆಡಬಾರದು. ನೋವು ಉಕ್ಕಿ ಹರಿದರು ಮನಸಲ್ಲೇ ಹರಿಯಬೇಕು ಆದರೆ ಹೊರಗಿನ ಪ್ರಪಂಚಕ್ಕೆ ನಾನೊಬ್ಬ ಕಿಟ್ಟಿ ಅಷ್ಟೆ

ಪುರೋಹಿತರು ಗಟ್ಟಿಮೇಳ ಗಟ್ಟಿಮೇಳ ಅಂದೇ ಬಿಟ್ಟರು. ಕೈಯಲ್ಲಿದ್ದ ಅಕ್ಷತೆ ಕಾಳು ಹಾಕಿದೆ ಏನು ಹೇಳಬೇಕೋ ತಿಳಿಯಲಿಲ್ಲ. ಅವಳು ಅತ್ತೇ ಬಿಟ್ಟಳು.

ಅಪ್ಪನಾಗಿ ಅಮ್ಮನಾಗಿ ಒಬ್ಬ ತಮ್ಮನಾಗಿ ಮೂರು ಜನರ ಅತಿದೊಡ್ಡ ಕನಸು ಅತಿದೊಡ್ಡ ಜವಾಬ್ದಾರಿ ಈಡೇರಿದ ಸಮಯ ಅದು. ಅವಳ ಜೊತೆ ಜಗಳ ಆಡಿ, ಆಟ ಆಡಿ, ಕೋಪಗೊಂಡು ಮುನಿಸಿಕೊಂಡು ಪುಟ್ಟ ಮನಸ್ಸಿನಿಂದ ದೊಡ್ಡ ಜವಾಬ್ದಾರಿಯ ವರೆಗೂ ನಾನು ಅಕ್ಕ ಜೊತೆಯಲ್ಲೇ ನಡೆದು ಬಂದ ಒಂದು ದಿವ್ಯ ನೋಟ ಎರಡು ಮೂರು ಸೆಕೆಂಡ್ಗಳಲ್ಲಿ ಕಣ್ಣ ಮುಂದೆ ರಾಚಿ ಹೋಯಿತು. ಅಕ್ಕ ಸೊಸೆಯಾದಳು, ಸಂಸಾರಸ್ಥೆಯಾದಳು ಈಗ ಎರಡೂ ಮನೆಯ ಜವಾಬ್ದಾರಿಯುತ ಮಗಳಾದಳು. ಇನ್ನೊಂದು ಮನೆಯ ದೀಪ ಬೆಳಗಿ ಹೊಸ ಜೀವನದ ಅಧ್ಯಾಯಕ್ಕೆ ನಾಂದಿ ಹಾಡಿದಳು. ವುಡ್-ಬಿ ಭಾವ ಅಫೀಷಿಯಲ್ ಆಗಿ ಭಾವ ಆದರು. ಇಷ್ಟು ದಿನದ ಶ್ರಮ ಎಲ್ಲವೂ ಈಡೇರಿತ್ತು. ಸುಸೂತ್ರವಾಗಿ ನಡೆಯಿತು ಎಂಬ ಖುಷಿ ಆದರೆ ಎಲ್ಲದರ ನಡುವೆ ಅಕ್ಕಳನ್ನ ಕಳೆದುಕೊಂಡೆವು, ಎಲ್ಲವೂ ಮುಗಿಯಿತು. ಮಂಟಪದಲ್ಲಿ ನಡೆದ ಸುಂದರ ಕ್ಷಣಗಳಿಗೆ ತೆರೆ ಎಳೆಯುವ ಸಮಯ ಬಂದಿತ್ತು. ಕಾರ್ ಹತ್ತಿ ಅಕ್ಕ ಅವಳ ಹೊಸ ಮನೆಗೆ ಹೋಗುತ್ತಿದ್ದಳು. ಅಪ್ಪಾ ಅಂತ ಕೂಗಿ ಕರೆದಳು, ಕಾಲು ನೋವು, ಬೆನ್ನು ನೋವು, ಸೊರಗಿ ಹೋಗಿದ್ದರು ಕೂಡ ಓಡಿ ಬಂದರು ನಮಪ್ಪ. ಮನಸ್ಸಿನಲ್ಲಿ ಶಕ್ತಿಯಿಲ್ಲದೆ; ಕುಸಿದಿದ್ದರು ಆದರು ಅವಳ ಕೂಗಿಗೆ ರಭಸದಿಂದ ಎದ್ದು ಬಂದರು ಎಲ್ಲಿತೋ ಆ ಶಕ್ತಿ ಗೊತ್ತಾಗಲಿಲ್ಲ ಬಹುಷಃ ಅಪ್ಪಾ ಎನ್ನುವ ಕೂಗಿನಲ್ಲಿರಬಹುದು ಆ ಶಕ್ತಿ; ಉತ್ಸಾಹದಿಂದ ಬಂದು ನಿಂತರು “ಏನಮ್ಮಾ” ಎನುತ್ತಾ.

ಅವಳು ಏನು ಹೇಳಲಿಲ್ಲ, ಇಬ್ಬರು ಮಾತಾಡಿದರು ಆದರೆ ಮಾತಿನಲಲ್ಲ ಕಣ್ಣಿನ ನೋಟದಲ್ಲಿ. ಅಪ್ಪ ಬೀಳ್ಕೊಟ್ಟರು ಮಗಳು ಅತ್ತಳು ಆದರೆ ಅಪ್ಪ ಅಳಲಿಕ್ಕೂ ಶಕ್ತಿಯಿಲ್ಲದೆ ನಿಂತಿದ್ದರು. ಇದನ್ನ ನೋಡುತ್ತಿದ್ದ ನಾನು ಒಳಗೊಳಗೇ ನೊಂದೆ ಕುಸಿದೆ ಆದರೆ ಹೊರಗಿನ ಪ್ರಪಂಚಕ್ಕೆ ನಾನು ಬರಿ ಕಿಟ್ಟಿ ಅಷ್ಟೆ.

ಕಣ್ಣೀರು ಹಾಕುತ್ತಾ ಅಕ್ಕ ಹೊರಟಳು… ಹೊರಟಳು…

ಅಂದಿಗೆ ಹೋದವಳು ಇನ್ನೊಂದು ಮನೆಯ ಬೆಳಕು ಬೆಳಗಿದಳು, ಆ ಮನೆಯ ಹೆಣ್ಣು ಮಗು ಎಂಬಂತೆ ಖುಷಿಯ ಕ್ಷಣಗಳು ಅಲ್ಲಿ ಮನೆ ಮಾಡಿದ್ದಳು. ಸಂತೋಷ, ಸಂಭ್ರಮ, ಖುಷಿ, ತುಂಟಾಟ, ನಗೆ, ಉತ್ಸಾಹ, ತಾಳ್ಮೆ, ನೆಮ್ಮದಿ ಎಲ್ಲವನ್ನು ಆ ಮನೆಯಲ್ಲಿ ಬೆಳಗಿದಳು. ಆದರೆ ನಮ್ಮ ಮನೆಯಲ್ಲಿ ಮೌನ, ಅಪ್ಪನ ಚಿತ್ತವೆಲ್ಲಾ ಅವಳ ಬಳಿ ಆದರೆ ಅಸ್ತಿತ್ವ ಮಾತ್ರ ಇಲ್ಲಿ. ಮನೆಯಲ್ಲಿ ಅವಳು ಓಡಿ ಬರುತ್ತಿದ್ದ ಗೆಜ್ಜೆ ಸದ್ದು ಮಾಯವಾಯಿತು, ಡ್ರೆಸ್ಸಿಂಗ್ ಟೇಬಲ್ ಮೇಲಿದ್ದ, ಐ ಲೈನರ್, ಫೇಸ್ ಕ್ರೀಮ್, ಪೌಡರ್ ಅವಳಿಲ್ಲದೆ ಮಂಕಾಗಿದ್ದವು, ಕನ್ನಡಿ ಮೇಲಿನ ಸ್ಟಿಕರ್ ಅವಳ ಮುಖಕ್ಕಾಗಿ ಕಾಯುತ್ತಿತ್ತು. ಕಬೋರ್ಡ್ ನಲ್ಲಿದ್ದ ಬಟ್ಟೆಗಳು ಅವಳ ಸ್ಪರ್ಶ ಇಲ್ಲದೆ ಉಸಿರು ನಿಂತಂತೆ ಬಿದ್ದಿತ್ತು. ಮನೆಯ ಪ್ರತಿಯೊಂದು ಗೋಡೆ ಅವಳ ಸದ್ದಿಗಾಗಿ, ಅವಳ ಕೂಗಿಗಾಗಿ ಕಿವಿಯೊಡ್ಡಿ ಕಾಯುತ್ತಿದ್ದವು, ಆದರೆ ಅವರಿಗೆಲ್ಲ ಏನು ಗೊತ್ತು ಅಕ್ಕ ಬರುವುದು ಇನ್ನು ಹಬ್ಬ ಹರಿದಿನಗಳಲ್ಲಿ ಮಾತ್ರ ಎಂದು. ಅವಳ ಉಸಿರು ಇಡೀ ಮನೆಯ ಸೊಬಗನ್ನೇ ಬದಲಿಸಿತು. ಎಲ್ಲೆಡೆ ಅವಳಿಲ್ಲದ ಪ್ರತಿಕ್ಷಣ ನೆನಪುಗಳು ಕಾಡುತ್ತಿದ್ದವು. ಹೆಣ್ಣಂದರೆ ಬರಿ ಹೆಣ್ಣಲ್ಲ ಅದೊಂದು ಬಚ್ಚಿಟ್ಟು ಕುಳಿತಿರುವ ಅಪಾರ ಶಕ್ತಿ. ಇದ್ದಾಗ ಏನು ಕೇಳಲಿಲ್ಲ, ಹೋದಾಗ ಏನು ಹೇಳಲಿಲ್ಲ ಅವಳಿಟ್ಟ ಪ್ರತಿ ಹೆಜ್ಜೆಯ ಗುರುತು ಅವಳ ನೆನಪುಗಳನ್ನ ಮರುಕಳಿಸುತ್ತಿತ್ತು. ಅಕ್ಕ ಅಂದಿಗೆ ಹೋದಳು ಆದರೆ ನಮ್ಮ ಮನೆಯಲ್ಲಿ ಬರಿ ನೆನಪಾದಳು…

-ಕೃಷ್ಣ ಮೂರ್ತಿ. ಕೆ

17 thoughts on “ಅಕ್ಕನ ಮದುವೆ

 1. As wonderful story

  Like

 2. ತುಂಬಾ ಚೆನ್ನಾಗಿ ವಿವರಿಸಿದ್ದೀರ.. ಅದ್ಭುತ 💐💐

  Like

  1. ಧನ್ಯವಾದಗಳು ದೀಕ್ಷಿತ್

   Liked by 1 person

 3. Super writing👌👌👌

  Like

 4. ಆಕಾಶ್ July 19, 2021 — 23:11

  Nice ನನ್ನ ಅಕ್ಕ ಮದುವೆ ನೆನಪಾಯಿತು ಜೊತೆಗೆ ಅವಳ ಮದುವೆ ಆಗಿ 15 ವರ್ಷವೇ ಆಗಿದ್ದರೂ ಕಣ್ಣಂಚಿನಲ್ಲಿ ಹನಿಗಳು ಮೂಡಿತು…. ನನ್ನ 2ನೇ ಅಕ್ಕನ ಮದುವೆಯಲ್ಲಿ ಭಾಗವಹಿಸಿದಷ್ಟು ಖುಷಿಯಾಯಿತು….😊

  Like

  1. ಧನ್ಯವಾದಗಳು ಆಕಾಶ್. ನನ್ನ ಕಥೆ ನಿನ್ನ ಜೀವನದ ಅಮೂಲ್ಯ ಕ್ಷಣ ನೆನಪಿಸಿತು ಎಂದರೆ ನನ್ನ ಪುಟ್ಟ ಪ್ರಯತ್ನಕ್ಕೆ ಒಂದು ಅರ್ಥ ಸಿಕ್ಕಂತಾಯಿತು.

   Like

 5. ಗುರುಪ್ರೀತ್ July 19, 2021 — 10:43

  ನನಗೆ ಈ ಲೇಖನವನ್ನು ಓದುವಾಗ ನನ್ನ ನೆನಪುಗಳು ಮರುಕಳಿಸಿತು ತುಂಬ ಅದ್ಬುತವಾಗಿ ಎಲ್ಲವನ್ನೂ ವಿವರಿಸಿದ್ದೀರಿ ಮತ್ತೆ ಮದುವೆ ಮನೆಗೆ ಹೋಗಿ ಬಂದ ಅನುಭವ ಆಯಿತು ಬಹಳ ಸೊಗಸಾಗಿದೆ

  Like

  1. ಧನ್ಯವಾದಗಳು ಗುರುಪ್ರೀತ್. ನಿಮ್ಮ ಪ್ರತಿಕ್ರಿಯೆ ನನಗೆ ಬಹಳ ಇಷ್ಟ ಆಯ್ತು

   Like

 6. While reading this it took me to those beautiful priceless moments, recalling the memories that we’ve experienced infront which we never gonna forget…I feel very happy because I’m also part of this journey…& then I feel blessed that I got a Elder sister(ಅಕ್ಕ)…

  Like

  1. Thank you so much for being a part of it neelesh. The story went strong because the event was strong. Exactly its a priceless moments

   Like

 7. ಕಿಟ್ಟಿ ನೀನೊಬ್ಬ ಅದ್ಭುತ ಬರಹಗಾರ ನಿನ್ನೊಳಗೆ ಏನೋ ಒಂದು ಶಕ್ತಿ ಇದೆ . ನಿಜಕ್ಕೂ ನಿನ್ನ ಬರಹ ಓದುಗರನ್ನ ಹಿಡಿದಿಟುತ್ತೆ ನಾನು ಬಿಡುವಿಲ್ಲದ ಸಮಯದಲ್ಲಿಯೂ ಬಿಡುವು ಮಾಡಿಕೊಂಡು ಓದಿದೆ ಆದರೆ ಮನಮುಟ್ಟುವಂತಿತ್ತು. ಖಂಡಿತ ನೀನು ನಿಮ್ಮಕ್ಕನಿಗೆ ಒಳ್ಳೆಯ ಮತ್ತು ಉತ್ತಮ ತಮ್ಮ. ನಿನ್ನ ಅಕ್ಕ ನಿಮ್ಮ ಮನೆಯಿಂದ ಹೋದ ಮೇಲೆ ನಿನಗೆ ಆದ ನೋವು. ನೀ ಬರೆದ ಸಾಲುಗಳ ಬರಹಗಳನ್ನು ನಾನು ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ನಿನ್ನದೊಂದು ಅದ್ಭುತ ಬರಹ . ನಿನ್ನ ಅಕ್ಕನ ಮದುವೆ.

  Like

  1. ಧನ್ಯವಾದಗಳು ಸರ್. ಬಿಡುವಿಲ್ಲದಿದ್ದರು ಬಿಡುವು ಮಾಡಿಕೊಂಡು ಓದಿದ ನಿಮಗೆ ನನ್ನ ಕೃತಜ್ಞತೆಗಳು. ನಿಮ್ಮ ಈ ಒಂದು ಪ್ರತಿಕ್ರಿಯೆಗೆ ನಾ ಏನ್ ಹೇಳ್ಬೇಕು ಗೂತ್ತಾಗ್ತಿಲ್ಲ. ನಿಮ್ಮ ಆಶೀರ್ವಾದ ಇದ್ದರೆ ಹೀಗೆ ಸಾವಿರ ಕಥೆಗಳು ಬಂದರು ಆಶ್ಚರ್ಯ ಇಲ್ಲ. ತುಂಬು ಹೃದಯದ ಧನ್ಯವಾದಗಳು ಸರ್

   Like

 8. While reading this it took back me to those beautiful priceless moments, recalling the memories that we’ve experienced infront which we never gonna forget…I feel very happy because I’m also part of this journey.. then I’m blessed that I’ve got a Elder sister(ಅಕ್ಕ)…

  Like

 9. sachinlingadhal July 18, 2021 — 20:25

  Such a wonderful moments you have described here as a story or Experience of a Father, mother, brother and whole family. Ultimately what we all needed is a happy life of our Sister. Now the responsibilities are more after the marriage….. Hope we would see more Stories in coming days kitty 👌👍

  Like

  1. Thank you so much for your beautiful response sir. Will definitely come up with more exciting stories in coming days ☺️

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close